ಹದಿನಾಲ್ಕು ವರ್ಷದ ಹಿಂದೆ ಜರ್ಮನ್ ಸ್ನೇಹಿತರಿಂದ ತಾವು ಕಲಿತ ಜಂಬೆ ವಾದ್ಯದ ನಾದದಲೆಯನ್ನು ಅಶೋಕ್ ಇಲ್ಲೂ ಹರಡುತ್ತಾ ಬಂದಿದ್ದಾರೆ.
ಕೇಳುವ ಕಿವಿ, ನೋಡುವ ಕಣ್ಣು ಇದ್ದರೆ ಸುರಿಯುವ ಮಳೆಯಲ್ಲಿ, ಬೀಸುವ ಗಾಳಿಯಲ್ಲಿ, ರೈಲಿನ ಚುಕುಬುಕು ಸದ್ದಿನಲ್ಲಿ, ಮಗುವಿನ ಅಳುವಿನಲ್ಲಿ, ಕಿಲಕಿಲ ಮಾತಿನ ಲಹರಿಯಲ್ಲಿ, ಕಾಡುವ ಮೌನದಲ್ಲಿ ಅಡಗಿ ಕೂತ ಸಂಗೀತ ಕಾಣಿಸುತ್ತದೆ. ಇದು ಜಂಬೆ ಅಶೋಕ್ ಮನಸ್ಸಿನಾಳದ ಮಾತು.
`ಜಂಬೆ~ ಎಂಬುದು ಆಫ್ರಿಕಾ ಖಂಡದ ಆದಿವಾಸಿಗಳ ಒಂದು ವಾದ್ಯ. 14 ವರ್ಷಗಳ ಹಿಂದೆ ನನಗೆ ಜರ್ಮನ್ ಸ್ನೇಹಿತನ ಮೂಲಕ ಈ ವಾದ್ಯದ ಪರಿಚಯವಾಯಿತು. ಮೊದಲ ನೋಟದಲ್ಲಿಯೇ ಇದು ನನ್ನ ಮನಸ್ಸಿನಲ್ಲಿ ಅಚ್ಚೊತ್ತಿಬಿಟ್ಟಿತು.
ಅದನ್ನು ಕಲಿಯಬೇಕು ಎಂಬ ಉತ್ಸಾಹ ಹೆಚ್ಚಾಗತೊಡಗಿ ಓಶೋ ಆಶ್ರಮಕ್ಕೆ ತೆರಳಿ ಅಲ್ಲಿ ಬರುವ ವಿದೇಶಿ ಪ್ರವಾಸಿಗರಿಂದ ಈ ವಾದ್ಯ ಕೊಂಡುಕೊಂಡೆ. ಅದೇ ವಾದ್ಯ ನನ್ನ ಹೆಸರಿನೊಂದಿಗೆ ನಂಟು ಬೆಸೆದುಕೊಂಡು ಜಂಬೆ ಅಶೋಕ್ ಎಂದು ಪ್ರಸಿದ್ಧಿ ಪಡೆದೆ ಎಂದು ಖುಷಿಯಿಂದ ಹೇಳುತ್ತಾರೆ.
`ಶೂನ್ಯ~ ಎಂಬ ಒಂದು ಸಂಗೀತ ತಂಡ ಕಟ್ಟಿಕೊಂಡಿದ್ದೇನೆ. ಶೂನ್ಯ ಅಂದರೆ ಖಾಲಿ. ಅದು ನಮ್ಮ ಮನಸ್ಸಿನ ಸ್ಥಿತಿಯನ್ನು ಸೂಚಿಸುತ್ತದೆ. ಶೂನ್ಯಕ್ಕೆ ಕೊನೆ ಮೊದಲು ಎಂಬುವುದಿಲ್ಲ. ಸಂಗೀತವೂ ಕೂಡ... ಕೇಳುತ್ತಾ ಹೋದಂತೆ ಮನುಷ್ಯ ದುಃಖ ಮರೆಯುತ್ತಾನೆ. ಅದರೊಳಗೆ ಒಂದಾಗುತ್ತಾನೆ. ಕೊನೆಗೆ ಅದೇ ಬದುಕಾಗುತ್ತದೆ ಎಂದು ಭಾವುಕದಿಂದ ನುಡಿಯುತ್ತಾರೆ ಅಶೋಕ್.
ಬೆಂಗಳೂರಿನ ಜನರು ಹೊಸತನ್ನು ಸದಾ ಸ್ವೀಕರಿಸುತ್ತಾರೆ. ಹೇಗೆ ಇದನ್ನು ಬಾರಿಸುವುದು, ಎಲ್ಲಿ ಸಿಗುತ್ತದೆ ಎಂಬಿತ್ಯಾದಿ ಕುತೂಹಲದ ಪ್ರಶ್ನೆ ಈ ವಾದ್ಯದೆಡೆಗೆ ತೂರಿಬಂದಿತ್ತು. ಜನರಲ್ಲಿ ಆಸಕ್ತಿ ಇದೆ ಅದನ್ನು ಸಂಗೀತಗಾರರು ಗುರುತಿಸಿ ಒಳ್ಳೆಯ ಸಂಗೀತ ನೀಡಬೇಕು ಆಗ ಮಾತ್ರ ಸಂಗೀತ ಬೆಳೆಯಲು ಸಾಧ್ಯ.
ಈಗಿನ ಮಕ್ಕಳಿಗೆ ಸಿತಾರ್, ವೀಣೆ ಇದೆಲ್ಲ ತಮ್ಮಿಂದ ಕಲಿಯೋಕೆ ಆಗಲ್ಲ ಎಂಬ ಭಾವವಿದೆ. ಹೀಗಾಗಿ ನಾನು ನನ್ನ ಸ್ನೇಹಿತರು ಶಾಲಾ ಕಾಲೇಜುಗಳಿಗೆ ಹೋಗಿ ಇದರ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುತ್ತಿದ್ದೇವೆ. ಮಕ್ಕಳಲ್ಲಿ ಕಲ್ಪನಾ ಶಕ್ತಿ ಹೆಚ್ಚಿಸಬೇಕು. ಯಾವುದೇ ಒಂದು ಸಾಧನವಾಗಲಿ ಅದನ್ನು ಮುಟ್ಟಿ ಅನುಭವಿಸಬೇಕು ಆಗ ಮಾತ್ರ ಅದರ ಬಗ್ಗೆ ನಮ್ಮಲ್ಲಿ ಒಂದು ಆಸಕ್ತಿ ಬೆಳೆಯಲು ಸಾಧ್ಯ ಎನ್ನುತ್ತಾರೆ ಅಶೋಕ್.
ನಮ್ಮ ದೇಶದಲ್ಲಿ ಇರುವಷ್ಟು ಸಂಗೀತ ಪ್ರಕಾರಗಳು ಬೇರೆಲ್ಲಿಯೂ ಇಲ್ಲ. ಪಾಶ್ಚಿಮಾತ್ಯ ಸಂಗೀತ ಎತ್ತರಕ್ಕೆ ಬೆಳೆದಿರಬಹುದು. ಆದರೆ ನಮ್ಮ ಸಂಗೀತದಷ್ಟು ಆಳಕ್ಕೆ ಹೋಗಿಲ್ಲ. ಸಂಗೀತದ ಕಂಪನಗಳಿಂದ ರೋಗಗ್ರಸ್ಥ ಮನಸ್ಸು ಶುಚಿಗೊಳ್ಳುತ್ತದೆ.
ಇಂದಿನ ಯುವ ಜನಾಂಗಕ್ಕೆ ಸಂಗೀತದ ಬಗ್ಗೆ ಹಿರಿಯ ಸಂಗೀತಗಾರರು ಹೇಳಿಕೊಡಬೇಕು. ಕೇವಲ ವೇದಿಕೆಯ ಮೇಲೆ ಹಾರ-ತುರಾಯಿ ಹಾಕಿಸಿಕೊಂಡು ಸುಮ್ಮನಾಗೋದಕ್ಕಿಂತ ವೇದಿಕೆ ಬಿಟ್ಟು ಹೊರಬಂದು ನಮ್ಮ ಮುಂದಿನ ಪೀಳಿಗೆಗೆ ಒಂದಿಷ್ಟು ಸಂಗೀತದ ಸವಿ ಜೇನನ್ನು ತಿನ್ನಿಸಬೇಕು.
ಇಂದು ಸಂಗೀತ ಕೇಳುವ ಕಿವಿಗಳಿವೆ, ಆದರೆ ಒಳ್ಳೆಯ ಸಂಗೀತ ಕೇಳುವವರು ಕಡಿಮೆಯಾಗಿದ್ದಾರೆ. ಅವರಿಗೆ ಆಯ್ಕೆಗಳನ್ನು ಕೊಡುವ ಜವಾಬ್ದಾರಿ ಸಂಗೀತಗಾರರ ಮೇಲಿದೆ ಆಗ ಮಾತ್ರ ಯುವಜನಾಂಗವನ್ನು ಸಂಗೀತದತ್ತ ಸೆಳೆಯಲು ಸಾಧ್ಯ.
ಸಂಗೀತ ಮನಸ್ಸಿನ ರೋಗಕ್ಕೆ ಮದ್ದಿದಂತೆ. ಡಿಪ್ಲೋಮಾ ಇನ್ ಆರ್ಟ್ ಥೆರಪಿ ಅಂಡ್ ಕೌನ್ಸಿಲಿಂಗ್ ಕೋರ್ಸ್ ಮಾಡುತ್ತಿದ್ದೇನೆ. ಕೇವಲ ವೇದಿಕೆ ಹಾಡುವುದು ವಾದ್ಯ ಬಾರಿಸುವುದರ ಜತೆಗೆ ನಾನು ಈ ಜಗತ್ತಿಗೆ ಏನೋ ನೀಡಬೇಕಾಗಿದೆ.
ಕಲಿಯುವ ಮನಸ್ಸುಗಳಿಗೆ ಕಲಿಸಬೇಕಾಗಿದೆ. ಈ ನಿಟ್ಟಿನಲ್ಲಿ ಅನೇಕ ಕಾರ್ಯಾಗಾರಗಳನ್ನು ಮಾಡುತ್ತಿದ್ದೇನೆ, ರಂಗಭೂಮಿಯಲ್ಲೂ ನನ್ನನ್ನು ನಾನು ಹೆಚ್ಚಾಗಿ ತೊಡಗಿಸಿಕೊಂಡಿದ್ದೇನೆ ಎಂದು ಹೆಮ್ಮೆಯಿಂದ ಹೇಳುತ್ತಾರೆ.
ರಂಗದ ಅಂಟು ಸಂಗೀತ ನಂಟು
ಮೂಲತಃ ಬೆಂಗಳೂರಿನವರಾದ ಜಂಬೆ ಅಶೋಕ್ ರಂಗಭೂಮಿ ಮತ್ತು ಸಂಗೀತದ ನಂಟು ಬೆಸೆದುಕೊಂಡಿದ್ದು ಥಿಯೇಟರ್ ಕಂಪನಿಯಿಂದ. ನಾಲ್ಕು ವರ್ಷ ಥಿಯೇಟರ್ ಕಂಪನಿಯಲ್ಲಿದ್ದ ಅಶೋಕ್ ಅವರಿಗೆ ತಮ್ಮಲ್ಲಿದ್ದ ನಟನಾ ಸಾಮರ್ಥ್ಯದ ಅರಿವಿತ್ತು. ಜೀಸಸ್ ಕ್ರೈಸ್ಟ್‌ನಿಂದ ಹಿಡಿದು ಮಹಾಭಾರತದ ಕರ್ಣನ ಪಾತ್ರ ಮಾಡುವವರೆಗೂ ನಿಪುಣತೆ ಪಡೆದುಕೊಂಡರು.
ವೇದಿಕೆಯಲ್ಲಿ ಅಭಿನಯಿಸುವುದಲ್ಲದೆ ಸೆಟ್ ವಿನ್ಯಾಸ ಮಾಡತೊಡಗಿದ ಅವರು ಮುಂದೆ ರಂಗ ನಿರ್ದೇಶಕರೂ ಆದರು. ಮಹಿಳೆ ಮತ್ತು ಮಕ್ಕಳ ಸಬಲೀಕರಣಕ್ಕೆ ಸ್ವಯಂ ಸೇವಾ ಸಂಸ್ಥೆಗಳೊಂದಿಗೆ ಜೊತೆಗೂಡಿ ಅವರು ಅನೇಕ ಕಾರ್ಯಕ್ರಮಗಳನ್ನು ಕೈಗೊಂಡಿದ್ದರು.
ಮಹಿಳಾ ಸಬಲೀಕರಣಕ್ಕಾಗಿ ಕರ್ನಾಟಕದ ಹಲವೆಡೆ ಕಾರ್ಯಾಗಾರವನ್ನೂ ಹಮ್ಮಿಕೊಂಡಿದ್ದಾರೆ. ನಾಟಕದ ಮೂಲಕ ಸಾಮಾಜಿಕ ಸಮಸ್ಯೆಗಳನ್ನು ಅಭಿವ್ಯಕ್ತಪಡಿಸಲು ಹೊರಟ ಇವರು `ಅಕ್ಷರ ಶಕ್ತಿ~ ಎಂಬ ಬೀದಿ ನಾಟಕವನ್ನೂ ಪ್ರದರ್ಶಿಸಿದ್ದರು. ಇದು ಸತತ 100 ಬಾರಿ ಪ್ರದರ್ಶನಗೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.