ಈ ಊರಿನ ವಿಶೇಷವೆಂದರೆ, ಎಲ್ಲರೂ ಸರಳವಾಗಿರುತ್ತಾರೆ. ಮೇಲ್ನೋಟಕ್ಕೆ ಯಾರು ಯಾವುದನ್ನು ಕೊಳ್ಳಬಲ್ಲರು ಎಂಬುದು ಹೇಳುವುದು ಸಾಧ್ಯವೇ ಇಲ್ಲ. ಕೊಳ್ಳುವ ಸಾಮರ್ಥ್ಯ ಇದ್ದರೂ ತೋರ್ಪಡಿಸದ ಸರಳ ಜನ ಬೆಂಗಳೂರಿಗರು...ಹೀಗೆ ಮೆಚ್ಚುಗೆಯ ಮಾತನಾಡಿದ್ದು ಜೈಪುರ ಮೂಲದ `ಆಮ್ರಪಾಲಿ~ ಆಭರಣದ ಮುಖ್ಯ ವಿನ್ಯಾಸಗಾರ ಅನೀಲ್ ಅಜ್ಮೇರಾ.
ಉತ್ತರ ಭಾರತಕ್ಕೆ ಹೋಲಿಸಿ ಈ ಮಾತನ್ನು ಹೇಳುತ್ತಿದ್ದರು. ಯಾರೂ ತಮ್ಮ ಸಿರಿವಂತಿಕೆಯನ್ನು ತೋರ್ಪಡಿಸುವುದಿಲ್ಲ. ಕೊಳ್ಳಲು ಬಂದಿದ್ದೇವೆ. ಗ್ರಾಹಕರೇ ದೇವರು ಎಂಬಂತೆ ನಡೆದುಕೊಳ್ಳಿ ಎಂಬಂಥ ಮನೋಭಾವವೂ ಇಲ್ಲ. ಮೆಲು ಮಾತಿನಲ್ಲಿಯೇ ತಮಗೆ ಬೇಕಿರುವ ಎಲ್ಲ ಮಾಹಿತಿಯನ್ನೂ ಪಡೆಯುತ್ತಾರೆ. ಮಾಹಿತಿ ಕೇಳುವಲ್ಲಿ ಮೊದಲಿಗರು. ಇದಕ್ಕೆ ಇಲ್ಲಿಯ ಶಿಕ್ಷಣ ಪದ್ಧತಿಯೂ ಕಾರಣವಾಗಿರಬಹುದು ಎಂದು ಅವರು ವಿಶ್ಲೇಷಿಸುತ್ತಿದ್ದರು.
ನಮ್ಮಲ್ಲಿ ಹಲವು ಸಾವಿರ ರೂಪಾಯಿಗಳ ಮೌಲ್ಯದ ಬೆಳ್ಳಿ ಆಭರಣಗಳಿಂದ ಸಂಗ್ರಹ ಆರಂಭವಾಗುತ್ತದೆ. ಕೋಟಿ ರೂಪಾಯಿ ಬೆಲೆ ಬಾಳುವ ವಜ್ರ, ಚಿನ್ನದ ಆಭರಣಗಳೂ ಇಲ್ಲಿ ದೊರೆಯುತ್ತವೆ. ಉತ್ತರದಲ್ಲಿ ಒಂದೇ ವ್ಯಾಪಾರಕ್ಕೂ ಬಹಳಷ್ಟು ಜನರು ಬರುತ್ತಾರೆ.
ಕೊಳ್ಳುವುದು ಸಾವಿರ ರೂಪಾಯಿಗಳ ಲೆಕ್ಕದಲ್ಲಿದ್ದರೂ ಲಕ್ಷಾನುಗಟ್ಟಲೆ ಮೌಲ್ಯದ ಸಂಗ್ರಹವನ್ನು ನೋಡುತ್ತಾರೆ. ಪರಿಶೀಲಿಸುತ್ತಾರೆ. ತಲೆ ಬುಡವಿಲ್ಲದ ಹಲವಾರು ಪ್ರಶ್ನೆಗಳನ್ನು ಕೇಳುತ್ತಾರೆ. ದಕ್ಷಿಣದಲ್ಲಿ ಹಾಗಲ್ಲ. ಮೊದಲೇ ತಾವು ಯಾವ ಶ್ರೇಣಿಯಲ್ಲಿ ನೋಡುತ್ತಿದ್ದೇವೆ ಎಂಬುದನ್ನು ಸ್ಪಷ್ಟಪಡಿಸುತ್ತಾರೆ.
ಇಲ್ಲಿ ಮಾತುಗಳನ್ನು ಖರ್ಚು ಮಾಡಬೇಕಿಲ್ಲ. ನಮ್ಮ ಅಭಿಪ್ರಾಯಗಳಿಗೂ ಮನ್ನಣೆ ನೀಡುತ್ತಾರೆ. ಸ್ನೇಹಪರ ಗ್ರಾಹಕರು ಇವರು ಎಂಬ ಮೆಚ್ಚುಗೆಯ ನುಡಿ ಅನಿಲ್ ಅಜ್ಮೀರಾ ಅವರದ್ದು.
ಇನ್ನು ಆಭರಣಗಳ ವಿಷಯಕ್ಕೆ ಬರುವುದಾದರೆ ಬೆಂಗಳೂರಿಗರು ಎಲ್ಲ ಬಗೆಯ ಪ್ರಯೋಗಕ್ಕೂ ತೆರೆದುಕೊಳ್ಳುತ್ತಾರೆ. ವಿಶೇಷವಾಗಿ ಮಹಿಳೆಯರು. ಸಮಕಾಲೀನ ವಿನ್ಯಾಸಗಳಿಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ಜೊತೆಗೆ ಆಭರಣಗಳಲ್ಲಿ ಎಥ್ನಿಕ್ ಲುಕ್ ಸಹ ಬಯಸುತ್ತಾರೆ. ಇಲ್ಲಿಯ ಜನರ ವಿಶೇಷ ಇದು. ಕೊಲಾಜ್ ಬಗೆಯ ಆಭರಣಗಳು ಇವರಿಗಿಷ್ಟ.
ಆಮ್ರಪಾಲಿಯಲ್ಲಿ ಬುಡುಕಟ್ಟು ಜನಾಂಗದ ವಿನ್ಯಾಸವನ್ನು ಮೂಲವಾಗಿರಿಸಿಕೊಂಡು ಅದರ ಮೇಲೆ ವಜ್ರಗಳನ್ನು ಅಂಟಿಸಿ ಮಾಡಿರುವ ವಿನ್ಯಾಸಕ್ಕೆ ಹೆಚ್ಚಿನ ಬೇಡಿಕೆ ಇದೆ.
ಜೇಡರ ಬಲೆಯ ಓಲೆಗೂ ಇನ್ನಿಲ್ಲದ ಬೇಡಿಕೆ. ಬೆಂಗಳೂರಿನಲ್ಲಿ ಎಲ್ಲ ಬಗೆಯ, ಎಲ್ಲ ದೇಶಗಳ, ಮಿಶ್ರ ಸಂಸ್ಕೃತಿಯ ಜನರಿದ್ದಾರೆ.
ಅವರ ಅಭಿರುಚಿ ಹೇಗೆ ಎಂದು ಅಳೆಯುವುದು ಕಷ್ಟ ಎಂಬ ಮಾತನ್ನು ಇಲ್ಲಿ ಸಾರಾಸಗಟಾಗಿ ಅಲ್ಲಗಳೆಯಬಹುದು. ಪ್ರಾಣಿ ಪಕ್ಷಿಗಳನ್ನು ಅಳವಡಿಸಿರುವ ಆಭರಣಗಳನ್ನು ಬಹಳಷ್ಟು ಇಷ್ಟ ಪಡುತ್ತಾರೆ. ಬೆಂಗಳೂರಿನಲ್ಲಿ ನಮ್ಮ ಮಳಿಗೆ ಆರಂಭವಾಗಿ ಒಂದುವರೆ ವರ್ಷಗಳಾಗಿವೆ ಅಷ್ಟೆ! ಆದರೆ ಇಲ್ಲಿ ಸಿಕ್ಕಿರುವ ಪ್ರತಿಕ್ರಿಯೆ ಮಾತ್ರ ಅಮೋಘವಾಗಿದೆ ಎನ್ನುತ್ತಾರೆ ಅವರು.
ಬಾಲಿವುಡ್‌ನ ಐಶ್ವರ್ಯ ರೈಯಿಂದ ಕೊಂಕಣಾ ಸೇನ್‌ವರೆಗೂ ಎಲ್ಲರೂ ಇವರ ಆಭರಣಗಳ ಸಂಗ್ರಹವನ್ನು ಹೊಂದಿದ್ದಾರೆ. ಬಹುತೇಕ ಬಾಲಿವುಡ್ ಸುಂದರಿಯರು ಆಮ್ರಪಾಲಿ ಸಂಗ್ರಹ ಪ್ರದರ್ಶನಕ್ಕೆ ರ‌್ಯಾಂಪ್ ಮೇಲೂ ಹೆಜ್ಜೆ ಹಾಕಿದ್ದಾರೆ.
ಲಂಡನ್‌ನಲ್ಲಿರುವ ಆಮ್ರಪಾಲಿ ಮಳಿಗೆಯಿಂದ ಹಾಲಿವುಡ್‌ನ ನಟಿಯರೂ ಈ ಆಭರಣಗಳನ್ನು ಧರಿಸಿ, ರೆಡ್ ಕಾರ್ಪೆಟ್ ಮೇಲೆ ಮಿನುಗಿದ್ದಾರೆ. ಅಂಜಲಿನಾ ಜ್ಯೂಲಿ, ಜೆನ್ನಿಫರ್ ಲೋಪೆಜ್ ಮುಂತಾದವರೆಲ್ಲ ಆಮ್ರಪಾಲಿಯ ಅಭಿಮಾನಿಗಳು.
ವೈಶಾಲಿ ರಾಜ್ಯದ ರಾಜನರ್ತಕಿಯಾಗಿದ್ದ ಆಮ್ರಪಾಲಿಯ ಹೆಸರನ್ನು ಆಭರಣಗಳ ಬ್ರ್ಯಾಂಡ್ ಆಗಿ ಆಯ್ಕೆ ಮಾಡಿದ್ದು ಯಾಕೆ ಎಂಬ ಪ್ರಶ್ನೆಗೆ, `ಆಮ್ರಪಾಲಿ ಸೌಂದರ್ಯಕ್ಕೆ ಹೆಸರಾದ ನರ್ತಕಿ.
ಪರಿಶುದ್ಧ ಪ್ರೀತಿಗೆ ಹೆಸರುವಾಸಿಯಾದ ವ್ಯಕ್ತಿ. ನಮ್ಮ ಆಭರಣಗಳಲ್ಲಿ ಸೌಂದರ್ಯವೂ ಇದೆ. ಪರಿಶುದ್ಧತನವೂ ಇದೆ. ಇವೆರಡೂ ಆಮ್ರಪಾಲಿಯಲ್ಲಿ ಜೀವತಳೆಯುವಂತೆ ಮಾಡಿದ್ದೇವೆ ಎನ್ನುತ್ತಾರೆ~ ಅನಿಲ್ ಅಜ್ಮೇರಾ.
ಹೆಚ್ಚಿನ ಮಾಹಿತಿಗೆ: 2222 1622
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.