ADVERTISEMENT

ಆರ್ಕಿಡ್‌ ಲೋಕ ದರ್ಶನ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 19:59 IST
Last Updated 20 ಸೆಪ್ಟೆಂಬರ್ 2013, 19:59 IST
ಆರ್ಕಿಡ್‌ ಲೋಕ ದರ್ಶನ
ಆರ್ಕಿಡ್‌ ಲೋಕ ದರ್ಶನ   

ಹೂಗಳೆಂದರೆ ಹಾಗೆ, ಎಂಥವರನ್ನಾದರೂ ತಮ್ಮತ್ತ ಸೆಳೆಯುವ ಗುಣ ಹೊಂದಿರುತ್ತವೆ. ನಗರದಲ್ಲಿ ಪ್ರತಿವರ್ಷ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಲಾಲ್‌ಬಾಗ್‌ ಪುಷ್ಪ ಪ್ರದರ್ಶನಕ್ಕೆ ಜನ ಮುಗಿಬಿದ್ದು ಸೇರುವುದನ್ನು ನೋಡಿದ್ದೇವೆ. ಈಗ ಆರ್ಕಿಡ್‌ ಹೂವುಗಳ ಪ್ರದರ್ಶನದ ಸರದಿ. ಅಂದಹಾಗೆ, ದಿ ಆರ್ಕಿಡ್ ಸೊಸೈಟಿ ಆಫ್ ಕರ್ನಾಟಕ ಶನಿವಾರ ಮತ್ತು ಭಾನುವಾರ (ಸೆ.21, 22) ಆರ್ಕಿಡ್‌ಗಳ ಪ್ರದರ್ಶನ ಆಯೋಜಿಸಿದೆ. ಹಳದಿ, ಕೆಂಪು, ನೀಲಿ ಹೀಗೆ ವಿವಿಧ ಬಣ್ಣಗಳ ಆರ್ಕಿಡ್‌ ಇಲ್ಲಿರುತ್ತವೆ.

‘ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆರ್ಕಿಡ್‌ ಹೂವುಗಳಿಗೆ ಎಲ್ಲಿಲ್ಲದ ಬೇಡಿಕೆ. ಬಣ್ಣ, ಆಕಾರದಲ್ಲೂ ಆಕರ್ಷಣೀಯವಾಗಿರುವ ಇವು ಗಿಡಗಳಲ್ಲಿ ಎರಡು ತಿಂಗಳವರೆಗೂ ಇರುತ್ತವೆ. ಅಪರೂಪದ ಆರ್ಕಿಡ್‌ಗಳ ಪ್ರಭೇದವನ್ನು ಉಳಿಸಿ ಬೆಳೆಸುವ ಹಾಗೂ ಇವುಗಳ ಬಗ್ಗೆ ನಗರದ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ 2005ರಲ್ಲಿ ಆರ್ಕಿಡ್ ಸೊಸೈಟಿಯನ್ನು ಸ್ಥಾಪಿಸಲಾಯಿತು. ಇಲ್ಲಿಯವರೆಗೆ 320 ಜನರು ಈ ಸೊಸೈಟಿಯ ಸದಸ್ಯರಾಗಿದ್ದಾರೆ. ಕಾರ್ಯಾಗಾರ/ಪ್ರಾತ್ಯಕ್ಷಿಕೆ ಮೂಲಕ ಆರ್ಕಿಡ್ ಬೆಳೆಯುವ ಕುರಿತು ಮಾಹಿತಿ ನೀಡಲಾಗುವುದು’ ಎನ್ನುತ್ತಾರೆ ಸೊಸೈಟಿ ಅಧ್ಯಕ್ಷ ಡಾ.ಕೆ.ಎಸ್‌. ಶಶಿಧರ್‌.
ಇಲ್ಲಿ ಶಿರಸಿ, ಮಡಿಕೇರಿ, ದೊಡ್ಡಬಳ್ಳಾಪುರ ರೈತರು ಹಾಗೂ ಸೊಸೈಟಿ ಸದಸ್ಯರು ಬೆಳೆದ ಹೂವಿನ ಗಿಡಗಳ ಪ್ರದರ್ಶನವಿರುತ್ತದೆ. ನೆಲದ ಮೇಲೆ ಕಾಣಸಿಗುವ ಹಾಗೂ ಮರಗಳ ಮೇಲೆ ಸ್ವಾಭಾವಿಕವಾಗಿ ಬೆಳೆಯುವ ಹೂವುಗಳನ್ನು ಕಣ್ತುಂಬಿಕೊಳ್ಳಬಹುದು.  ‘ಫ್ಲಾರೆನ್ಸ್‌ ಫ್ಲೋರಾ’, ‘ಡೆಂಡ್ರೋಬಿಯಮ್‌’, ‘ಕ್ಯಾಟ್ಲಿಯಾ’,  ‘ಲೇಡಿ ಸ್ಲಿಪ್ಪರ್‌’ ಸೇರಿದಂತೆ 30ಕ್ಕೂ ಹೆಚ್ಚಿನ ಪ್ರಭೇದದ ಆರ್ಕಿಡ್‌ಗಳನ್ನು ನೋಡಬಹುದು. ಎರಡು ದಿನ ಬೆಳಿಗ್ಗೆ10ರಿಂದ ಸಂಜೆ 5ರವರೆಗೆ ಪ್ರದರ್ಶನವಿರುತ್ತದೆ. ಪ್ರವೇಶ ಶುಲ್ಕ ₨50.

ಇಂದು ಉದ್ಘಾಟನೆ
ಪ್ರದರ್ಶನದ ಉದ್ಘಾಟನೆ: ತೋಟಗಾರಿಕೆ ಇಲಾಖೆ ನಿರ್ದೇಶಕ ಡಾ.ಡಿ.ಎಲ್‌. ಮಹೇಶ್ವರ್‌. ಸ್ಮರಣ ಸಂಚಿಕೆ ಬಿಡುಗಡೆ: ಇನ್‌ಸ್ಟಿಟ್ಯೂಟ್‌ ಆಫ್‌ ವುಡ್‌ ಸೈನ್ಸ್‌ ಅಂಡ್‌ ಟೆಕ್ನಾಲಜಿ ನಿರ್ದೇಶಕ ಡಾ.ವಿ. ರಮಾಕಾಂತ. ಸ್ಥಳ: ಡಾ.ಎಂ.ಎಚ್.ಮರೀಗೌಡ ಸಭಾಂಗಣ, ಲಾಲ್‌ಬಾಗ್‌. ಬೆಳಿಗ್ಗೆ 9.30.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.