ADVERTISEMENT

ಆಸ್ಕರ್ ಸಂಚಾರ!

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2012, 19:30 IST
Last Updated 17 ಫೆಬ್ರುವರಿ 2012, 19:30 IST
ಆಸ್ಕರ್ ಸಂಚಾರ!
ಆಸ್ಕರ್ ಸಂಚಾರ!   

ಆಸ್ಕರ್ ಪ್ರಶಸ್ತಿ ಎಂದಾಗ ಒಂದು ಸಲ ಎಲ್ಲರ ಕಣ್ಣರಳುವುದು ಸಹಜ. ಕೆಲವರು ಆಸ್ಕರ್ ಪ್ರಶಸ್ತಿಯ ಪ್ರತಿಕೃತಿಗಳನ್ನು ವಿದೇಶಗಳಿಂದ ಕೊಂಡುತಂದು ಮನೆಯ ಶೋಕೇಸಿನಲ್ಲಿ ಇಟ್ಟುಕೊಂಡಿರುವುದೂ ಉಂಟು. ಅಂಥ ಆಸ್ಕರ್ ಈಗ ಬೆಂಗಳೂರಿನಲ್ಲಿ ಉತ್ಸವಮೂರ್ತಿಯಂತೆ ಅಡ್ಡಾಡತೊಡಗಿದೆ.

ಆಸ್ಕರ್ ಪ್ರಶಸ್ತಿಯ ಬಗಲಲ್ಲಿ ನಿಂತು ಫೋಟೋ ತೆಗೆಸಿಕೊಳ್ಳುವ ಅವಕಾಶ ನಿಮ್ಮದೂ ಆಗಬಹುದು. ಆದರೆ, ನಿಜಕ್ಕೂ ಆಸ್ಕರ್ ಪ್ರಶಸ್ತಿ ಸಂದಿರುವುದು ಭಾನು ಅತಾಯಾ ಅವರಿಗೆ. 1983ರಲ್ಲಿ ತೆರೆಕಂಡ `ಗಾಂಧಿ~ ಚಿತ್ರಕ್ಕೆ ಅವರು ವಸ್ತ್ರವಿನ್ಯಾಸ ಮಾಡಿದ್ದರು. ಅದಕ್ಕೆ ಆಸ್ಕರ್ ಪ್ರಶಸ್ತಿ ಸಂದಿತ್ತು. ನಿಜವಾದ ಆಸ್ಕರ್ ಪ್ರಶಸ್ತಿಯ ಪುತ್ಥಳಿಯನ್ನು ಭಾರತೀಯರೆಲ್ಲಾ ನೋಡಲಿ ಎಂಬ ಉಮೇದಿನಿಂದ `ಸ್ಟಾರ್ ಮೂವೀಸ್~ ವಾಹಿನಿಯವರು ಅವರ ಜೊತೆ ಒಡಂಬಡಿಕೆ ಮಾಡಿಕೊಂಡಿದ್ದಾರೆ. ನಗರಕ್ಕೆ ಆಸ್ಕರ್ ಪ್ರಶಸ್ತಿ ಬರಲು ಇದೇ ಕಾರಣ.

ಕೋರಮಂಗಲದ ಫೋರಂಮಾಲ್‌ನಲ್ಲಿ ಇಂದು (ಶನಿವಾರ) ಬೆಳಿಗ್ಗೆ 10ರಿಂದ 1. ಸಂಜೆ 3ರಿಂದ 5ರವರೆಗೆ ಭಾನು ಅತಾಯಾ ಅವರಿಗೆ ಸಂದಿರುವ ಆಸ್ಕರ್ ಪ್ರಶಸ್ತಿಯ ಪ್ರದರ್ಶನವಿದೆ.

ವಸ್ತ್ರ ವಿನ್ಯಾಸಕ್ಕೆ ಆಸ್ಕರ್ ಪ್ರಶಸ್ತಿ ಪಡೆದ ದೇಶದ ಮೊದಲ ಮಹಿಳೆ ಎಂಬ ಅಗ್ಗಳಿಕೆ ಅವರದ್ದು. ಕಲಾ ಶಿಕ್ಷಕಿಯಾಗಿ ವೃತ್ತಿ ಆರಂಭಿಸಿದ್ದ ಭಾನು, ಅನೇಕ ಮಹಿಳಾ ನಿಯತಕಾಲಿಕೆಗಳಲ್ಲಿ ಹವ್ಯಾಸಿ ಫ್ಯಾಷನ್ ಇಲ್ಲಸ್ಟ್ರೇಟರ್ ಆಗಿಯೂ ಕೆಲಸ ಮಾಡಿದರು. 1956ರಲ್ಲಿ ಗುರುದತ್ ನಿರ್ದೇಶನದ `ಸಿಐಡಿ~ ಹಿಂದಿ ಚಿತ್ರದಲ್ಲಿ ಮೊದಲು ಅವರು ವಸ್ತ್ರವಿನ್ಯಾಸಕಿಯಾಗಿ ಕೆಲಸ ಮಾಡಿದರು.

ದೆಹಲಿ, ಕೋಲ್ಕತ್ತಾ, ಮುಂಬಯಿ, ಬೆಂಗಳೂರು ನಗರಗಳಲ್ಲಿ ಆಸ್ಕರ್ ಪ್ರಶಸ್ತಿಯ ಪ್ರದರ್ಶನ ಕಾರ್ಯಕ್ರಮ ನಡೆಯುತ್ತಿದೆ. ಇದೇ 27ರಂದು ಸ್ಟಾರ್ ಸಿನಿಮಾದಲ್ಲಿ ಬೆಳಿಗ್ಗೆ 6.30ಕ್ಕೆ ಭಾನು ಅವರಿಗೆ ಪ್ರಶಸ್ತಿ ಸಂದದ್ದು ಹಾಗೂ ಅವರ ಪ್ರಶಸ್ತಿ ಸಂಚಾರದ ಕುರಿತು ಕಾರ್ಯಕ್ರಮ ಪ್ರಸಾರವಾಗಲಿದೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.