ADVERTISEMENT

ಆ ಆಪದ್ಬಾಂಧವ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2012, 19:30 IST
Last Updated 28 ಫೆಬ್ರುವರಿ 2012, 19:30 IST
ಆ ಆಪದ್ಬಾಂಧವ
ಆ ಆಪದ್ಬಾಂಧವ   

ಆ  ಬೇಸಿಗಯ ್ಲಆವತ್ತು ಎಲ್ಲರೂ ಮಲಗಿದ್ದೆವು. ಗಾಢನಿದ್ದೆ.     ಯಾವತ್ತೂ ಬೇಗ ಎದ್ದು ತನ್ನ ಮನೆಗೆಲಸವನ್ನು ಮುಗಿಸುತ್ತಿದ್ದ ಅಮ್ಮ ಕೂಡ ಆವತ್ತು ಅಪ್ಪನನ್ನು ಹೋಟೆಲಿಗೆ ಕಳುಹಿಸಿ, ನಮ್ಮ ಜೊತೆ ಮಲಗಿಬಿಟ್ಟಿದ್ದಳು. ಬೇಗನೆ ಪೂಜೆ-ಪುನಸ್ಕಾರವಾಗುತ್ತಿದ್ದ ಮನೆಯಲ್ಲಿ ಆವತ್ತು ಯಾವೊಂದು ಕೆಲಸವೂ ಆಗಿರಲಿಲ್ಲ.

ಇದ್ದಕ್ಕಿದ್ದ ಹಾಗೆ ಬಾಗಿಲನ್ನು ಜೋರಾಗಿ ಬಡಿದ ಶಬ್ದವಾಯಿತು. ಅಮ್ಮ ಎದ್ದು ಹೋದರು. ಸ್ವಲ್ಪ ಹೊತ್ತಿನ ನಂತರ ಜೋರಾಗಿ ಅಳಲು ಶುರುಮಾಡಿದ ಅಮ್ಮನ ಧ್ವನಿ ಕೇಳಿ, ನಾನು-ಅಕ್ಕ ಇಬ್ಬರೂ ಚಕ್ಕನೆ ಎದ್ದು ಓಡಿಬಂದೆವು. ನೋಡಿದರೆ ಅಪ್ಪನಿಗೆ ಆಕ್ಸಿಡೆಂಟ್ ಆಗಿದೆ ಎನ್ನುವ ಸುದ್ದಿಯನ್ನು ಒಬ್ಬ ಆಟೊ ಚಾಲಕ ಹೊತ್ತು ತಂದಿದ್ದ. ಚೆನ್ನಾಗಿ ಓಡಾಡಿಕೊಂಡಿದ್ದ ಅಪ್ಪನ ಕಾಲಿನ ಮೂಳೆ ಮುರಿದಿತ್ತು.

ಆಗಿದ್ದು ಇಷ್ಟು: ಆಗತಾನೆ ಮನೆಯಿಂದ ಹೊರಟ ಅಪ್ಪ, ಸಾಮಾನನ್ನು ಟಿ.ವಿ.ಎಸ್ ಗಾಡಿಯಲ್ಲಿ ಹೊತ್ತು ಹೊಟೇಲಿಗೆ ಹೋಗುತ್ತಿದ್ದರು. ಮುಖ್ಯರಸ್ತೆಯನ್ನು ದಾಟುತ್ತಿದ್ದಾಗ, ಆಗತಾನೆ ನೈಟ್ ಶಿಫ್ಟ್ ಮುಗಿಸಿ ಬೈಕ್‌ನಲ್ಲಿ ಬರುತ್ತಿದ್ದ ಒಬ್ಬ ಹುಡುಗ, ಅಪ್ಪನ ಗಾಡಿಗೆ ಜೋರಾಗಿ ಗುದ್ದಿಬಿಟ್ಟಿದ್ದ.  ತಕ್ಷಣ ಅಲ್ಲೇ ಇದ್ದ ಆಟೊ ಚಾಲಕರು ಅಪ್ಪನನ್ನು ಆಸ್ಪತ್ರೆಗೆ ಸೇರಿಸಿ, ವಿಷಯ ತಿಳಿಸಲು ಹೇಗೋ ನಮ್ಮ ಮನೆ ಹುಡುಕಿಕೊಂಡು ಬಂದಿದ್ದರು. 

ಅಪ್ಪನನ್ನು ಆಸ್ಪತ್ರೆಗೆ ಸೇರಿಸಿದ ನಂತರ ನಮ್ಮನ್ನು ಅಲ್ಲಿಗೆ ಕರೆದೊಯ್ದರು. ಆ ಆಸ್ಪತ್ರೆಯಲ್ಲಿ ಬೆಡ್ ಖಾಲಿಯಿಲ್ಲ ಮತ್ತು ಇದು ಪೊಲೀಸ್ ಕಂಪ್ಲೇಟ್ ಬೇರೆ ಅಂಥ ಹೇಳಿ, ಅಪ್ಪನನ್ನು ಬೇರೆ ಆಸ್ಪತ್ರೆಗೆ ಸೇರಿಸಿಕೊಳ್ಳಿ ಎಂದು ಅಲ್ಲಿನ ವೈದ್ಯರು ಜಾರಿಕೊಂಡರು.

ನನ್ನಕ್ಕನ ಸ್ನೇಹಿತನ ಕಾರಿನಲ್ಲಿ ಅಪ್ಪನನ್ನು ಬೇರೆ ಆಸ್ಪತ್ರೆಗೆ ಕರೆದೊಯ್ದರು. ಆಗ ಆ ಆಟೊ ಚಾಲಕ ಅಮ್ಮ ಬರುವತನಕ ಇದ್ದು, ಅಮ್ಮ ಬಂದಮೇಲೆ ಅವರನ್ನ ಪೊಲೀಸ್ ಸ್ಟೇಷನ್ನಿಗೆ ಕರೆದೊಯ್ದು, ಆ ಹುಡುಗನ ವಿರುದ್ಧ ದೂರು ದಾಖಲಿಸಿ ಬರುವಷ್ಟರಲ್ಲಿ ರಾತ್ರಿಯಾಗಿತ್ತು. ಅಲ್ಲಿಯವರೆಗೂ ಆತ ನಮ್ಮಂದಿಗಿದ್ದರು.

ಆ ಆಟೊ ಚಾಲಕ ನಮ್ಮ ತಂದೆಯ ಸ್ನೇಹಿತನಂತೆ. ಅಪ್ಪನನ್ನು ಗುರುತು ಹಿಡಿದು ಆಸ್ಪತ್ರೆಗೆ ಸೇರಿಸಿದರಂತೆ. ಆದರೆ ಯಾವತ್ತೂ ಆತನನ್ನು ನಾವು ನೋಡಿರಲಿಲ್ಲ. ಆ ದಿನ ಆತ ಆಟೊ ಮೀಟರ್ ಹಾಕಿರಲಿಲ್ಲ. ನಾವು ಆತನಿಗೆ ಹಣ ಕೊಡಲು ಮತ್ತು ಆತನ ಬಗ್ಗೆ ವಿಚಾರಿಸಲು ಮರೆತುಹೋದೆವು. ಆತ ನಮ್ಮಪ್ಪನ ಸ್ನೇಹಿತನೇ ಆಗಿರಬಹುದು. ಆದರೆ ಆಪತ್ಕಾಲದಲ್ಲಿ, ಆಪ್ತ ಬಾಂಧವನಾಗಿ ಬಂದಿದ್ದರು. ಇಂದೂ ರಸ್ತೆಯಲ್ಲಿ ಆಟೊ ಚಾಲಕರನ್ನು ಕಂಡರೆ ಆ ವ್ಯಕ್ತಿಯ ನೆನಪಾಗುತ್ತದೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.