ADVERTISEMENT

ಇಂದು ಪೋಪ್ ಪುತ್ಥಳಿ ಅನಾವರಣ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2011, 19:30 IST
Last Updated 24 ಅಕ್ಟೋಬರ್ 2011, 19:30 IST

ಇಪ್ಪತ್ತಾರು ವರ್ಷಗಳ ಕಾಲ ಪೋಪ್ ಸ್ಥಾನದಲ್ಲಿದ್ದ ಪೋಪ್ ಜಾನ್ ಪಾಲ್-2 ಇಪ್ಪತ್ತನೇ  ಶತಮಾನದ ಅತ್ಯಂತ ಪ್ರಭಾವಿ ಧಾರ್ಮಿಕ ನಾಯಕರೆಂದು ಖ್ಯಾತಿಗೆ ಒಳಗಾದವರು.

ತಮ್ಮ ಅವಧಿಯಲ್ಲಿ ಇತರ ಧರ್ಮಗಳ ಜತೆ ಕ್ಯಾಥೊಲಿಕ್ ಚರ್ಚನ್ನು ಹತ್ತಿರ ತಂದ ಕೀರ್ತಿ, 129 ದೇಶಗಳಿಗೆ ಭೇಟಿ ಅತಿ ಹೆಚ್ಚು ಪ್ರವಾಸ ಕೈಗೊಂಡ ಪೋಪ್ ಎಂಬ ಹೆಗ್ಗಳಿಕೆಗೂ ಅವರು ಪಾತ್ರರು. ಭಾರತಕ್ಕೂ ಎರಡು ಭಾರಿ ಭೇಟಿ ನೀಡಿದ್ದರು. 1978ರಲ್ಲಿ ಪೋಪ್ ಸ್ಥಾನಕ್ಕೆ ಏರಿದ್ದ ಅವರು 2005ರ ಏಪ್ರಿಲ್ 2ರಂದು ವಿಧಿವಶರಾದರು.

`ಪೋಪ್~ ಅಂದರೆ ನಿಜ ಅರ್ಥದಲ್ಲಿ ಕ್ಯಾಥೊಲಿಕ್ ಕ್ರೈಸ್ತರ ಜಗದ್ಗುರು. ಈ ವರ್ಷದ ಮೇ 1ರಂದು ಈಗಿನ ಪೋಪ್ ಬೆನೆಡಿಕ್ಟ್-16 ವರು ಜಾನ್ ಪಾಲ್ ಅವರನ್ನು ಪುನೀತರೆಂದು (ಬ್ಲೆಸ್ಡ್) ಘೋಷಿಸಿದರು. ಅದರ ಸ್ಮರಣಾರ್ಥ ಹೊರಮಾವಿನ ಕೆ. ಚನ್ನಸಂದ್ರದಲ್ಲಿ ಪುನೀತ ಜಾನ್ ಪಾಲ್ ಅವರಿಗೆ ನೂತನ ದೇವಾಲಯ ನಿರ್ಮಿಸಿ ಆಗಸ್ಟ್ 20ರಂದು ಲೋಕಾರ್ಪಣೆ ಮಾಡಲಾಗಿತ್ತು.

ಈಗ ಈ ಚರ್ಚ್ ಆವರಣದಲ್ಲಿ ಜಾನ್ ಪಾಲ್ ಅವರ ಆಳೆತ್ತರದ ಕಂಚಿನ ಪ್ರತಿಮೆ ಸ್ಥಾಪಿಸಲಾಗಿದೆ. ಸುಮಾರು 375 ಕೆ.ಜಿ. ತೂಕದ 2.06 ಮೀ ಎತ್ತರದ ಈ ಪುತ್ಥಳಿ ನಿರ್ಮಾಣಗೊಂಡದ್ದು ಬ್ಯಾಂಕಾಕ್‌ನಲ್ಲಿ. ಪೂಜಾವಸ್ತ್ರ ಧರಿಸಿರುವ ಜಾನ್ ಪಾಲ್‌ರ ಈ ಮೂರ್ತಿಯ ಪೀಠದಲ್ಲಿ ನಮ್ಮ ರಾಷ್ಟ್ರ ಪಕ್ಷಿ ನವಿಲು ಹಾಗೂ ರಾಷ್ಟ್ರೀಯ ಹೂ ಕಮಲವನ್ನು ಚಿತ್ರಿಸಲಾಗಿದೆ.

ಮಂಗಳವಾರ ಚರ್ಚ್ ಆವರಣದಲ್ಲಿ ಪೋಪ್ ಅವರ ಭಾರತದ ರಾಯಭಾರಿ ಸಾಲ್ವಡೋರ್ ಪೆನಾಚಿಯೋ ಹಾಗೂ ಆರ್ಚ್ ಬಿಷಪ್ ಡಾ. ಬರ್ನಾಡ್ ಮೊರೆಸ್  ಪ್ರತಿಮೆ ಅನಾವರಣಗೊಳಿಸುವರು. ಕರ್ನಾಟಕದ ಇತರ ಎಲ್ಲ ಧರ್ಮಾಧ್ಯಕ್ಷರು ಪಾಲ್ಗೊಳ್ಳುವರು.
ಸ್ಥಳ: ದ್ವಿತೀಯ ಜಾನ್ ಪಾಲ್‌ರ ದೇವಾಲಯ, ಕೆ. ಚನ್ನಸಂದ್ರ, ಹೊರಮಾವು. ಮಧ್ಯಾಹ್ನ 3.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.