ADVERTISEMENT

ಇಲ್ಲಿಗೂ ಬರಲಿದೆ ಯುಎಸ್ ಶಾಲೆ

​ಪ್ರಜಾವಾಣಿ ವಾರ್ತೆ
Published 22 ಮೇ 2012, 19:30 IST
Last Updated 22 ಮೇ 2012, 19:30 IST
ಇಲ್ಲಿಗೂ ಬರಲಿದೆ ಯುಎಸ್ ಶಾಲೆ
ಇಲ್ಲಿಗೂ ಬರಲಿದೆ ಯುಎಸ್ ಶಾಲೆ   

ಪುಟಾಣಿ ಮಕ್ಕಳು 12ನೇ ವಯಸ್ಸಿಗೆ ಕಾಲಿಡುವ ವೇಳೆಗೆ ನಾಲ್ಕು ಭಾಷೆಗಳನ್ನು ಕಲಿಯುವ, ಗ್ರಹಿಸುವ ಶಕ್ತಿ ಹೊಂದಿರುತ್ತವೆ ಎನ್ನುತ್ತಾರೆ ಮನಶಾಸ್ತ್ರಜ್ಞರು.

ಚಿಕ್ಕಂದಿನಿಂದಲೇ ಮಕ್ಕಳಿಗೆ ಉತ್ತಮ ಶೈಕ್ಷಣಿಕ ಅಡಿಪಾಯ ದೊರೆತರೆ ಅವರು ಸರ್ವಾಂಗೀಣವಾಗಿ ತೆರೆದುಕೊಳ್ಳುತ್ತಾರೆ. ಹಾಗಾಗಿ ಇಂದು ಎಲ್ಲೆಡೆ ಗುಣಮಟ್ಟದ ಶಾಲಾಪೂರ್ವ ಶಿಕ್ಷಣಕ್ಕೆ ಬೇಡಿಕೆ ಹೆಚ್ಚುತ್ತಿದೆ. ಪುಟಾಣಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಸಲುವಾಗಿ ಇನ್ನೇನು ನಗರಕ್ಕೆ ಕಾಲಿರಿಸಲಿದೆ ಅಮೆರಿಕದ ಕಿಂಡರ್‌ಪಿಲ್ಲರ್ ಐವಿ ಲೀಗ್ ಕಿಡ್ಸ್.

ಯುಎಸ್‌ನಲ್ಲಿ ಪುಟಾಣಿಗಳಿಗೆ ಶಾಲಾಪೂರ್ವ ಶಿಕ್ಷಣ ನೀಡುವಲ್ಲಿ ಖ್ಯಾತಿಗಳಿಸಿರುವ ಪ್ರಮುಖ ಸಂಸ್ಥೆ ಕಿಂಡೆರ್‌ಪಿಲ್ಲರ್ ಐವಿ ಲೀಗ್ ಕಿಡ್ಸ್. ಈ ಶಾಲೆ ಈ ವರ್ಷಾಂತ್ಯದಲ್ಲಿ ಇಲ್ಲೂ ಪ್ರಾರಂಭಗೊಳ್ಳಲಿದೆ. ಆಧುನಿಕ ಮತ್ತು ವೃತ್ತಿಪರ ಬೋಧನೆಯ ಮಾರ್ಗ ಹೊಂದಿರುವ ಈ ಮಾದರಿ, ಮಕ್ಕಳಿಗೆ ಸ್ವಯಂ ಆವಿಷ್ಕಾರ ಮತ್ತು ಜ್ಞಾನದ ಮಾರ್ಗ ಸೂಚಿಸುತ್ತದೆ ಎಂಬುದು ಶಾಲೆ ಸಂಸ್ಥಾಪಕರ ಮಾತು.

ಕಿಂಡೆರ್‌ಪಿಲ್ಲರ್ -ಐವಿ ಲೀಗ್ ಕಿಡ್ಸನ್ನು ಐಎನ್‌ಐಎಫ್‌ಡಿನ ನಿರ್ದೇಶಕರು ಮತ್ತು ಲ್ಯಾಕ್ಮಿ ಫ್ಯಾಷನ್ ವೀಕ್‌ನ ಪಾಲುದಾರರಾದ ಪ್ರಿಯಾಂಕಾ ಕೋಸ್ಲಾ, ಕ್ಯಾನೆನ್ ಗ್ರೂಪ್‌ನ ರೂಪಾ ಗ್ರೇವಾಲ್ ಅವರು ಅಮೆರಿಕಾದ ಅಗ್ರಮಾನ್ಯ ಶಾಲಾಪೂರ್ವ ತಜ್ಞರಾದ ಎಲೆನ್‌ಬೂತ್ ಚರ್ಚ್ ಅವರ ಸಹಭಾಗಿತ್ವದಲ್ಲಿ ಆರಂಭಿಸಿದ್ದಾರೆ. ಕಿಂಡೆರ್‌ಪಿಲ್ಲರ್ ಅಮೆರಿಕದಲ್ಲಿ ಮಕ್ಕಳಿಗಾಗಿ ಬಳಸುವ ತಂತ್ರ, ಆಟಿಕೆಗಳು ಮತ್ತು ಶಿಕ್ಷಣ ಸಹಾಯದ ವಸ್ತುಗಳನ್ನು ಬಳಸಲಿದೆ.

ಎಲೆನ್ ಅವರು ಪಠ್ಯಕ್ರಮ ವಿನ್ಯಾಸ ತಜ್ಞೆ ಹಾಗೂ ಅಮೆರಿಕದಲ್ಲಿ ಶೈಕ್ಷಣಿಕ ಸಲಹೆಗಾರರಾಗಿ ಮತ್ತು ಲೇಖಕಿಯಾಗಿ ಜನಪ್ರಿಯರು. ಇವರು ಶಾಲೆ ಬಗ್ಗೆ ಹೇಳುವುದು ಹೀಗೆ: `ಕಿಂಡೆರ್‌ಪಿಲ್ಲರ್- ಐವಿ ಲೀಗ್ ಕಿಡ್ಸ್‌ಗಾಗಿ ಪಠ್ಯಕ್ರಮವನ್ನು ವಿನ್ಯಾಸಗೊಳಿಸುವಾಗ ನನ್ನ ಎಲ್ಲಾ ಅನುಭವ ಬಳಸಿದ್ದೇನೆ. ಮಗುವಿನ ಮಾನಸಿಕ, ದೈಹಿಕ, ಸಾಮಾಜಿಕ, ಭಾವನಾತ್ಮಕ ಅಭಿವೃದ್ಧಿ ಸಾಧ್ಯ. ಮಗುವು ಒತ್ತಡರಹಿತ ರೀತಿಯಲ್ಲಿ ಅರಳಲು ಇದು ಪೂರಕ. ನಮ್ಮ ಉದ್ದೇಶ ಸರಳ. ಕೇವಲ ಬುದ್ಧಿವಂತ ಮಕ್ಕಳನ್ನು ನಾವು ಸೃಷ್ಟಿಸುತ್ತಿಲ್ಲ.

ಸ್ವತಂತ್ರ ಚಿಂತನೆಯಿಂದ ಸಮಸ್ಯೆಗಳನ್ನು ಪರಿಹರಿಸುವ ಹಾಗೂ ಜೀವನದುದ್ದಕ್ಕೂ ಕಲಿಕೆಯನ್ನು ಪ್ರೀತಿಸುವ ಮಕ್ಕಳನ್ನು ಸೃಷ್ಟಿಸುವುದು ನಮ್ಮ ಗುರಿ~.
ಎಲೆನ್‌ಬೂತ್ ಚರ್ಚ್ ಆರಿಸಿರುವ ಶಿಕ್ಷಕರೇ ಮಕ್ಕಳಿಗೆ ತರಬೇತಿ ನೀಡಲಿದ್ದಾರೆ. 

 ಕಿಂಡೆರ್‌ಪಿಲ್ಲರ್‌ನ ನಿರ್ದೇಶಕರಾದ ರೂಪಾ ಗ್ರೇವಾಲ್ ಪ್ರಕಾರ `ಮನೆ ಮತ್ತು ಶಾಲೆಯ ಸಮಗ್ರ ವಾತಾವರಣವನ್ನು ಮಕ್ಕಳಿಗೆ ಒದಗಿಸುವ ಉದ್ದೇಶ ನಮ್ಮದು. ಈ ವರ್ಷದ ಅಂತ್ಯಕ್ಕೆ ಈ ರೀತಿಯ 32 ಶಾಲೆಗಳನ್ನು ದೇಶದ ವಿವಿಧ ಭಾಗಗಳಲ್ಲಿ ಆರಂಭಿಸುವ ಯೋಜನೆ ಹೊಂದಿದ್ದೇವೆ. 2015ರ ಅಂತ್ಯಕ್ಕೆ ಈ ಸಂಖ್ಯೆಯನ್ನು 300ಕ್ಕೆ ಹೆಚ್ಚಿಸುವ ಉದ್ದೇಶವಿದೆ~.

ನವೆಂಬರ್ 2012ರ ಹೊತ್ತಿಗೆ ಚಂಡೀಗಢದಲ್ಲಿ ಮೊದಲ ಪ್ರೀಸ್ಕೂಲ್ ಆರಂಭವಾಗಲಿದ್ದು ಲೂದಿಯಾನ, ಬೆಂಗಳೂರು, ಅಮೃತ್‌ಸರ, ಪಂಚ್‌ಕುಲ, ಮೊಹಾಲಿ, ಅಹಮದಾಬಾದ್, ಅಮೃತ್‌ಸರ, ಬರೋಡಾ, ಇಂದೋರ್, ಲಖನೌ ಮತ್ತು ಕಾನ್ಫುರ್, ಮುಂಬೈ, ದೆಹಲಿ, ಗುಡಗಾಂವ್, ಚೆನ್ನೈ, ಕೊಲ್ಕತ್ತಾ, ಹೈದರಾಬಾದ್ ಮುಂತಾದ ಕಡೆ ಈ ಶಾಲೆಗಳು ಆರಂಭವಾಗಲಿವೆ.     
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.