ADVERTISEMENT

ಇಳಿ ವಯಸ್ಸಲ್ಲೂ ಬತ್ತದ ಉತ್ಸಾಹ

ನವೀನ ಕುಮಾರ್ ಜಿ.
Published 9 ಮಾರ್ಚ್ 2018, 19:30 IST
Last Updated 9 ಮಾರ್ಚ್ 2018, 19:30 IST
ಜಯಲಕ್ಷ್ಮಿ ಗೋವಿಂದರಾಜನ್
ಜಯಲಕ್ಷ್ಮಿ ಗೋವಿಂದರಾಜನ್   

ಕಲೆಗೆ ವಯಸ್ಸಿನ ಹಂಗಿಲ್ಲ ಎಂಬುದನ್ನು ಸಾಧಿಸಿ ತೋರಿಸಿದವರು ನಗರದ ಜಯಲಕ್ಷ್ಮಿ ಗೋವಿಂದರಾಜನ್. 75ರ ಇಳಿ ವಯಸ್ಸಿನಲ್ಲೂ ಗಾಯನವನ್ನು ಅಭಿರುಚಿಯಾಗಿಸಿಕೊಂಡಿರುವ ಅವರು ಕರ್ನಾಟಕ ಸಂಗೀತ, ಜನಪದ ಹಾಡು, ಗಮಕ ವಾಚನ, ಭಾವಗೀತೆ, ವಚನ ಗಾಯನದ ಮೂಲಕ ಗಮನ ಸೆಳೆಯುತ್ತಿದ್ದಾರೆ.

500ಕ್ಕೂ ಹೆಚ್ಚು ಸಂಗೀತ ಸ್ಪರ್ಧೆಗಳಲ್ಲಿ ಪಾಲ್ಗೊಂಡಿರುವ ಅವರು ನೂರಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಶ್ರೀಶಂಕರ ಟಿ.ವಿ. ವಾಹಿನಿ ಹಾಗೂ ರಂಜಿನಿ ಕಲಾ ಕೇಂದ್ರವು 2015ರಲ್ಲಿ ಗಿನ್ನೆಸ್ ವಿಶ್ವ ದಾಖಲೆಗಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸತತ 100 ಗಂಟೆಗಳ ಕಾಲ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲೂ ಇವರು ಹಾಡಿದ್ದಾರೆ. ‘ನಾನು ಕೇಂದ್ರ ಸರ್ಕಾರದ ಉದ್ಯೋಗದಲ್ಲಿದ್ದೆ. ಆಗ ಬಿಡುವಿನ ಸಮಯದಲ್ಲಿ ಸಂಗೀತ ಸ್ಪರ್ಧೆಗಳಲ್ಲಿ  ಭಾಗವಹಿಸುತ್ತಿದ್ದೆ. ನಿವೃತ್ತಿ ಬಳಿಕ ಈ ಕ್ಷೇತ್ರದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದೇನೆ’ ಎನ್ನುತ್ತಾರೆ ಜಯಲಕ್ಷ್ಮಿ.

ADVERTISEMENT

‘ನನ್ನ ಗುರು ದಿವಂಗತ ಮೈಸೂರು ಎಸ್. ಮಹಾದೇವಪ್ಪ. ಅವರ ಬಳಿ ಕರ್ನಾಟಕ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದೆ. 1958ರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಜೂನಿಯರ್ ತೇರ್ಗಡೆಯಾದೆ. ಮುಂದೆ ಸರ್ಕಾರಿ ಕೆಲಸ ಸಿಕ್ಕಿದ ಮೇಲೆ ಸಂಗೀತ ಅಭ್ಯಾಸವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಆದರೆ ನನ್ನಲ್ಲಿನ ಸಂಗೀತಾಸಕ್ತಿ ಕಡಿಮೆಯಾಗಿರಲಿಲ್ಲ’ ಎನ್ನುತ್ತಾರೆ ಅವರು.

‘ನನ್ನ ತಾತ, ತಂದೆ, ತಾಯಿ ಎಲ್ಲರೂ ಹಾಡುತ್ತಿದ್ದರು. ಇದುವೇ ನನಗೆ ಸಂಗೀತ ಕಲಿಯಲು ಪ್ರೇರಣೆಯಾಯಿತು. ತಮಿಳಿನ ತಿರುಪ್ಪಾವಯ್ ಮತ್ತು ತಿರುಪ್ಪುಗಲ್ ಕೂಡ ಹಾಡುತ್ತೇನೆ’ ಎಂದು ತಮ್ಮ ಸಂಗೀತಾಸಕ್ತಿಯ ಕುರಿತು ವಿವರಿಸುತ್ತಾರೆ. ಈಗ ಬಿಡುವಿನ ವೇಳೆಯಲ್ಲಿ ಮಕ್ಕಳಿಗೆ ಭಜನೆ, ಶಾಸ್ತ್ರೀಯ ಸಂಗೀತವನ್ನು ಕಲಿಸುತ್ತಾರೆ.

ಜಯಲಕ್ಷ್ಮಿ ಅವರು ನಗರದ ವೈಯಾಲಿಕಾವಲ್‌ನಲ್ಲಿ ‘ಮನೆಯಂಗಳ’ ವೃದ್ಧಾಶ್ರಮ ನಡೆಸುವ ಹಿತೈಷಿ ಮಹಿಳಾ ಮಂಡಳಿಯ ಸಕ್ರಿಯ ಸದಸ್ಯೆ. ಆ ಮೂಲಕ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.