ADVERTISEMENT

ಈಜು ಕೋಚ್ ಆಗುವ ಕನಸು

ಹಿತೇಶ ವೈ.
Published 29 ಮಾರ್ಚ್ 2018, 19:30 IST
Last Updated 29 ಮಾರ್ಚ್ 2018, 19:30 IST
ಚೇತನ್ ಬಿ. ಆರಾಧ್ಯ
ಚೇತನ್ ಬಿ. ಆರಾಧ್ಯ   

ಕ್ಲಬ್‌ಮಟ್ಟದಿಂದ ಅಂತರರಾಷ್ಟ್ರೀಯಮಟ್ಟಕ್ಕೆ ತಲುಪಿದ ಅನುಭವ ತಿಳಿಸಿ?
ಸಾಧನೆಗಳ ಬಗ್ಗೆ ತುಂಬಾ ಖುಷಿ ಇದೆ. 2016ರಲ್ಲಿ ಕೆಂಪೇಗೌಡ ಪ್ರಶಸ್ತಿ ಪಡೆದ ಅತ್ಯಂತ ಕಿರಿಯ ಈಜುಪಟು ನಾನಾಗಿದ್ದೆ. ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಈಜು ಕೂಟಗಳಲ್ಲಿ ಸ್ಪರ್ಧಿಸಿ ಗಳಿಸಿದ ಪದಕಗಳಿಗಿಂತ ಈ ಪ್ರಶಸ್ತಿ ಹೆಚ್ಚು ಖುಷಿ ನೀಡಿತ್ತು.

ರಾಜ್ಯದಲ್ಲಿ ಈಜುಪಟುಗಳಿಗೆ ಪ್ರೋತ್ಸಾಹ ಹೇಗಿದೆ?
ಹೇಳಿಕೊಳ್ಳುವಂಥ, ಪ್ರೋತ್ಸಾಹವಾಗಲೀ, ಸಹಕಾರವಾಗಲೀ ಸಿಗುತ್ತಿಲ್ಲ. ತರಬೇತುದಾರರು ಹಾಗೂ ನ್ಯೂಟ್ರೀಷಿಯನಿಸ್ಟ್‌ ಖರ್ಚನ್ನು ನಾವೇ ಭರಿಸಬೇಕು. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರಾಯೋಜಕರು ಸಿಗುತ್ತಿಲ್ಲ. ವಸತಿ, ಪ್ರಯಾಣದ ಖರ್ಚು ದುಬಾರಿ ಎನಿಸುತ್ತದೆ. ಬಹುತೇಕ ಅಥ್ಲೀಟ್‌ಗಳು ಕ್ರೀಡೆಯಿಂದ ವಿಮುಖರಾಗಲು ಇದೇ ಮುಖ್ಯ ಕಾರಣ.

ಯಾವ ವಿಭಾಗದಲ್ಲಿ ಈಜಲು ನೀವು ಹೆಚ್ಚು ಇಷ್ಟಪಡುತ್ತೀರಾ?
ನಾನು ಬ್ರೆಸ್ಟ್‌ಸ್ಟ್ರೋಕ್‍ನೊಂದಿಗೆ ಈಜು ಆರಂಭಿಸಿದೆ. ಬಟರ್‌ಫ್ಲೈ ಮತ್ತು ಫ್ರೀಸ್ಟೈಲ್‌ ಅಭ್ಯಾಸ ಮಾಡಿದ್ದೇನೆ. ಎಲ್ಲವೂ ಖುಷಿ ನೀಡಿವೆ.

ADVERTISEMENT

ರಾಜ್ಯದ ಈಜು ಕ್ಷೇತ್ರದಲ್ಲಿ ಆಗಬೇಕಿರುವ ಬದಲಾವಣೆ ಏನು?
ಕೋಚ್‍ಗಳನ್ನು ನೇಮಿಸಬೇಕು. ರಾಜ್ಯದ ಪರವಾಗಿ ಹೊರ ರಾಜ್ಯ ಮತ್ತು ಹೊರ ದೇಶಗಳಲ್ಲಿ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಿದಾಗ ಅಥ್ಲೀಟ್‌ಗಳ ಪ್ರಯಾಣವೆಚ್ಚ ಮತ್ತು ವಸತಿ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ಹಣ ಇಲ್ಲದಿರುವುದರಿಂದ ಬಹಳಷ್ಟು ಬಾರಿ ಅವಕಾಶಗಳಿದ್ದರೂ ಭಾಗವಹಿಸಲು ಸಾಧ್ಯವಾಗುವುದಿಲ್ಲ.

ರಾಜ್ಯದಲ್ಲಿ ಉತ್ತಮ ಕೋಚ್‍ಗಳಿಲ್ಲವೇ?
ಖಂಡಿತವಾಗಿಯೂ ಇದ್ದಾರೆ. ಆದರೆ ಎಲ್ಲರಿಗೂ ಕೋಚ್‍ಗಳ ಮೂಲಕ ಕಲಿಯಲು ಹಣ ಇರಬೇಕಲ್ಲ.

ಈ ಕ್ಷೇತ್ರದಲ್ಲಿ ಅತಿ ಖುಷಿ ನೀಡಿದ ಕ್ಷಣ?
ಮೊದಲ ಅಂತರರಾಷ್ಟ್ರೀಯ ಪದಕ ಪಡೆದ ಘಳಿಗೆ.

ಅತಿ ಬೇಸರವಾಗಿದ್ದು?
ಕೈಗೆ ಪೆಟ್ಟಾಗಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗದಿರುವುದು ಬೇಸರ ತರಿಸಿದೆ. ಅರ್ಹತೆಗೆ 22 ಸೆಕೆಂಡ್‌ಗಳಲ್ಲಿ ಗುರಿ ತಲುಪಬೇಕಿತ್ತು. ಆದರೆ ಗುರಿ ತಲುಪುವಲ್ಲಿ ಎರಡು ಸೆಕೆಂಡ್‌ಗಳಷ್ಟು ವ್ಯತ್ಯಾಸವಾಯಿತು.

ಈ ಕ್ಷೇತ್ರಕ್ಕೆ ಬರುವವರಿಗೆ ನಿಮ್ಮ ಸಲಹೆ?
ಯಾವುದೂ ಸುಲಭವಾಗಿ ಬರುವುದಿಲ್ಲ. ನಿಮ್ಮ ಪ್ರಯತ್ನ ಮತ್ತು ಪರಿಶ್ರಮ ಮಾತ್ರ ನಿಮ್ಮನ್ನು ಗೆಲ್ಲಿಸಬಲ್ಲುದು. ಇದು ಎಲ್ಲಾ ಕ್ಷೇತ್ರಗಳಿಗೂ ಅನ್ವಯಿಸುವ ಸೂತ್ರ.


ಈಜಿ ಗೆದ್ದ ಪದಕಗಳೊಂದಿಗೆ ಚೇತನ್ ಬಿ. ಆರಾಧ್ಯ

ಬಿಡುವಿದ್ದಾಗ ಏನು ಮಾಡುತ್ತೀರಾ?
ಕ್ರಿಕೆಟ್, ಟೆನಿಸ್‌ ಆಡುತ್ತೇನೆ.

ನಿಮ್ಮ ತಂದೆ–ತಾಯಿ ಬಗ್ಗೆ ಹೇಳಿ?
ತಂದೆ ಬಸವರಾಜು, ತಾಯಿ ಸುವರ್ಣ. ನನ್ನ ಸಾಧನೆಗೆ ನನ್ನ ತಂದೆ–ತಾಯಿಯೇ ಕಾರಣ.
***
8ನೇ ವಯಸ್ಸಿನಲ್ಲಿ ಜಯನಗರದ ಕ್ಲಬ್‌ನಲ್ಲಿ ಈಜು ಕಲಿಯಲು ಪ್ರಾರಂಭಿಸಿದೆ. ಈಜುಕೂಟಗಳ ಬಗ್ಗೆ ತಿಳಿದದ್ದು 3 ವರ್ಷಗಳ ನಂತರ. ಮೊದಲ ಬಾರಿಗೆ ಕ್ಲಬ್‌ ಮಟ್ಟದಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ನಾನು ಭಾಗವಹಿಸಿದ್ದೆ. ಆ ಕೂಟದಲ್ಲಿ ನಾನೇ ಕೊನೆಯ (8ನೇ) ಸ್ಥಾನ ಗಳಿಸಿದೆ. ಸೋಲನ್ನು ಮೀರಿ ನಿಲ್ಲಲು ಮಾಡಿದ ಸತತ ಪ್ರಯತ್ನಗಳು ಇಂದು ನನ್ನನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ತಂದು ನಿಲ್ಲಿಸಿವೆ.
– ಚೇತನ್ ಆರಾಧ್ಯ, ಈಜುಪಟು
**

ಪರಿಚಯ

ಕಾಲೇಜು: ಕೊಲಂಬಿಯಾ ಕಾಲೇಜು ಬೆಂಗಳೂರು.
ವಿದ್ಯಾಭ್ಯಾಸ: ಬಿ.ಕಾಂ
ಪ್ರಶಸ್ತಿಗಳು: 2014: ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಸ್ಪರ್ಧೆಗಳೂ ಸೇರಿದಂತೆ 180ಕ್ಕೂ ಹೆಚ್ಚು ಪದಕಗಳು.
2014–2015: ಬೆಂಗಳೂರು ಅಂತರ ಕಾಲೇಜು ಈಜುಕೂಟ 6 ಚಿನ್ನ, 4 ಬೆಳ್ಳಿ
2016: ‘ಕೆಂಪೇಗೌಡ ಪ್ರಶಸ್ತಿ’ ಪಡೆದ ಅತ್ಯಂತ ಕಿರಿಯ ಎಂಬ ಹೆಗ್ಗಳಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.