ADVERTISEMENT

ಈಸಬೇಕು.. ಈಸಿ ಜೈಸಬೇಕು!

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2012, 19:30 IST
Last Updated 26 ಏಪ್ರಿಲ್ 2012, 19:30 IST

ನಟಿ ಸಮೀರಾ ರೆಡ್ಡಿಯ ಸೌಂದರ್ಯ ಕಂಡು ಅಭಿಮಾನಿಗಳೆಲ್ಲ ಅವರನ್ನು `ಅರೇಬಿಯನ್ ಹಾರ್ಸ್ ಬ್ಯೂಟಿ~ ಎಂದು ಕರೆದರು. ಆದರೆ, ಸಮೀರಾ ಮಾತ್ರ ಇದುವರೆಗೂ ತಮ್ಮ ಸೌಂದರ್ಯದ ಗುಟ್ಟನ್ನು ಹೊರಕ್ಕೆ ಬಿಟ್ಟುಕೊಟ್ಟಿರಲಿಲ್ಲ.
 
ಮೊನ್ನೆ ಮೊನ್ನೆ ಒಳ್ಳೆ ಮೂಡ್‌ನಲ್ಲಿದ್ದರು ಅಂತ ಕಾಣುತ್ತೆ. ಅಭಿಮಾನಿಯೊಬ್ಬ ನಿಮ್ಮ ಸೌಂದರ್ಯದ ಗುಟ್ಟೇನು? ಎಂದು ಕೇಳಿದ್ದೇ ತಡ, `ಸ್ವಿಮ್ಮಿಂಗ್~ ಅಂತ ಥಟ್ಟನೆ ಹೇಳಿ ಬಿಟ್ಟರು. ಆನಂತರ ತಾವು ಸೌಂದರ್ಯ ಕಾಪಾಡಿಕೊಳ್ಳುತ್ತಿರುವ ಬಗೆಯನ್ನು ಲಹರಿಗೆ ಬಿದ್ದವರಂತೆ ಹೇಳುತ್ತಾ ಹೋದರು...

ನಾನು ಕೂಡ ಮೊದಮೊದಲು ಜಿಮ್‌ನಲ್ಲಿ ಬೆವರು ಸುರಿಸಿ ದೇಹವನ್ನು ಒಂದು ಹದಕ್ಕೆ ತಂದುಕೊಂಡೆ. ಇದರ ಜತೆಗೆ ಧ್ಯಾನ, ಯೋಗ ಅಂತೆಲ್ಲಾ ಓಡಾಡುತ್ತಿದ್ದೆ. ರುಟೀನ್ ಆಗುತ್ತಿದ್ದ ಈ ದಿನಚರಿ ಕೊನೆಗೊಂದು ದಿನ ನನಗೆ ಬೋರ್ ಹೊಡೆಸತೊಡಗಿತು. ಆಗ ಸುಮ್ಮನೆ ಸ್ವಿಮ್ ಸೂಟ್ ತೊಟ್ಟು ಫೂಲ್‌ಗೆ ಜಿಗಿದೆ.
 
ಮನಸ್ಸಿಗಂಟಿದ ಬೇಜಾರು ಎಲ್ಲ ತೊಳೆದು ಹೋಗುವವರೆಗೂ ನನ್ನ ಕೈ ಕಾಲುಗಳಿಗೆ ವಿಶ್ರಾಂತಿ ನೀಡಲಿಲ್ಲ. ಸತತ ಒಂದು ಗಂಟೆ ಈಜಾಡಿದ ಮೇಲೆ ನನ್ನ ಇಡೀ ದೇಹಕ್ಕೆ ಒಂದು ದಿವಿನಾದ ಆನಂದ ದೊರಕಿತು. ಆವತ್ತಿನಿಂದ ನಾನು ಜಿಮ್‌ಗೆ ಹೋಗುವುದನ್ನು ಬಿಟ್ಟು ಬಿಟ್ಟೆ. ದೇಹವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಲು ಸ್ವಿಮ್ಮಿಂಗ್‌ಗಿಂತ ನ್ಯಾಚುರಲ್ ವರ್ಕೌಟ್ ಬೇರೊಂದಿಲ್ಲ. ಈಜಾಟವೇ ನನ್ನ ಸೌಂದರ್ಯದ ಗುಟ್ಟು.

ಇಡೀ ದೇಹಕ್ಕೆ ಲವಲವಿಕೆ, ಹುರುಪು ತಂದು ಕೊಡುವ ಸ್ವಿಮ್ಮಿಂಗ್ ಅಂದ್ರೆ ನನಗೆ ತುಂಬಾ ಇಷ್ಟ. ಇದು ದೇಹಕ್ಕೆ ಸಹಜ ವ್ಯಾಯಾಮವಿದ್ದಂತೆ. ನಿತ್ಯ ಜಿಮ್‌ಗೆ ಹೋಗಿ ಅಲ್ಲಿ ಬೆವರಿಳಿಸುವುದರಿಂದ ದೇಹದ ಎಲ್ಲ ಭಾಗಕ್ಕೂ ವ್ಯಾಯಾಮ ಸಿಕ್ಕುವುದಿಲ್ಲ. ಜಿಮ್ ಮಾಡುವುದರಿಂದ ದೇಹದ ಒಂದು ಭಾಗಕ್ಕೆ ನಾವು ಸುಂದರ ಆಕಾರ ನೀಡಬಹುದು.

ಅದೇ, ನೀರಿಗೆ ಜಿಗಿದರೆ ಇಡೀ ದೇಹಕ್ಕೆ ಅದ್ಭುತ ವ್ಯಾಯಾಮ ಸಿಗುತ್ತದೆ. ಜತೆಗೆ ದಿನೇದಿನೇ ನಮ್ಮ ದೇಹ ಶಿಲ್ಪದಂತೆ ಆಗುತ್ತಾ ಹೋಗುತ್ತದೆ. ದೇಹದ ಸಮತೂಕ ಕಾಯ್ದುಕೊಳ್ಳಲು ಸ್ವಿಮ್ಮಿಂಗ್ ಒಂದು ಸಕ್ಸಸ್ ಫಾರ್ಮುಲಾ. ಸ್ವಿಮ್ಮಿಂಗ್ ಫೂಲ್ ಈಸ್ ದಿ ಬೆಸ್ಟ್ ಆಫ್ಶನ್. ನನ್ನಾಣೆ ಇದು ನಿಜ.

ಇತ್ತೀಚೆಗೆ ನಾನು ಗ್ರೀಸ್‌ಗೆ ಹೋಗಿದ್ದೆ. ಅಲ್ಲೂ ಒಂದು ದಿನವೂ ಸ್ವಿಮ್ ಮಾಡುವುದನ್ನು ತಪ್ಪಿಸಲಿಲ್ಲ. ಇನ್ನೊಂದು ಮಜಾ ಗೊತ್ತಾ, ನಾನು ಗ್ರೀಸ್‌ನಲ್ಲಿದ್ದಾಗ ಸ್ವಿಮ್ ಮಾಡಲು ಫೂಲ್‌ಗಿಳಿಯುತ್ತಿರಲಿಲ್ಲ. ಬದಲಾಗಿ ಸಮುದ್ರಕ್ಕೆ ಜಿಗಿಯುತ್ತಿದ್ದೆ. ನಿಮ್ಗೆ ಗೊತ್ತಾ? ಸಮುದ್ರದಲ್ಲಿ ಸ್ವಿಮ್ ಮಾಡುವುದರ ಮಜಾನೇ ಬೇರೆ. ಉಪ್ಪು ನೀರು ಮೈತಾಕಿದಾಗ ಆಗುವ ರೋಮಾಂಚನ ದೇಹ ಮತ್ತು ಮನಸ್ಸಿಗೆ ಬೆಚ್ಚನೆ ಭಾವ ನೀಡುತ್ತದೆ.
 
ನಮ್ಮಲ್ಲಿ ಸ್ವರ್ಗದ ಪರಿಕಲ್ಪನೆ ಎಂದರೇ ಹೇಗಿರುತ್ತದೆಯೋ; ಆ ಅನುಭವ ಸಮುದ್ರದಲ್ಲಿ ಈಜಾಡುವಾಗ ನನಗೆ ಸಿಕ್ಕಿತು. ಸಮುದ್ರದಲ್ಲಿ ಈಜಾಡುವುದೆಂದರೆ ದೇಹಕ್ಕೆ ಅದ್ಭುತ ರಿಲೀಫ್ ಸಿಕ್ಕಂತೆ. ತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರು ಹಾಗೂ ದೇಹದ ಕಾಂತಿ ಮತ್ತು ಸೌಂದರ್ಯವನ್ನು ಇಮ್ಮಡಿಗೊಳಿಸಿಕೊಳ್ಳಲು ಇಚ್ಛಿಸುವರೆಲ್ಲಾ ಸ್ವಿಮ್ಮಿಂಗ್ ಮಾಡಿ. ಅಂದಹಾಗೆ, ರೆಡ್ಡಿಗಾರು ಪ್ರತಿದಿನ ಒಂದು ಗಂಟೆ ಮನಸೋಇಚ್ಛೆ ಈಜಾಡುತ್ತಾರಂತೆ.   
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.