ADVERTISEMENT

‘ಉಕ್ಕಿನ ಮಹಿಳೆ’ ಜತೆ ಒಂದು ಸಂಜೆ...

ಮಂಜುಶ್ರೀ ಎಂ.ಕಡಕೋಳ
Published 4 ಅಕ್ಟೋಬರ್ 2017, 19:30 IST
Last Updated 4 ಅಕ್ಟೋಬರ್ 2017, 19:30 IST
ಬೆಂಗಳೂರಿನಲ್ಲಿ (22–09–2017) ನಡೆದ ಕಾರ್ಯಕ್ರಮವೊಂದರಲ್ಲಿ ಮಣಿಪುರದ ಮಾನವಹಕ್ಕುಗಳ ಹೋರಾಟಗಾರ್ತಿ ಇರೋಮ್ ಶರ್ಮಿಳಾ –ಪ್ರಜಾವಾಣಿ ಚಿತ್ರ/ಆನಂದ್ ಬಕ್ಷಿ
ಬೆಂಗಳೂರಿನಲ್ಲಿ (22–09–2017) ನಡೆದ ಕಾರ್ಯಕ್ರಮವೊಂದರಲ್ಲಿ ಮಣಿಪುರದ ಮಾನವಹಕ್ಕುಗಳ ಹೋರಾಟಗಾರ್ತಿ ಇರೋಮ್ ಶರ್ಮಿಳಾ –ಪ್ರಜಾವಾಣಿ ಚಿತ್ರ/ಆನಂದ್ ಬಕ್ಷಿ   

ಲುಂಗಿಯಂತಿದ್ದ ಉದ್ದನೆಯ ಕೆಂಪು ಸ್ಕರ್ಟ್‌, ಮೇಲೊಂದು ಹಾಲು ಬಿಳುಪಿನ ಟಾಪ್, ಅದರ ಮೇಲೊಂದು ಚಿತ್ತಾರದ ಹತ್ತಿಯ ಟವೆಲ್ ಧರಿಸಿ ಎಂದಿನಂತೆ ಚದುರಿದ ಗುಂಗುರು ಕೂದಲಿನಲ್ಲೇ ಇರೋಮ್ ಚಾನ್ ಶರ್ಮಿಳಾ ಎದುರಾದರು. ಮಗುವಿನ ಮುಗ್ಧತೆ, ತುಟಿಯಂಚಿನಲ್ಲಿ ಹುಸಿ ಮುನಿಸು ತೋರುತ್ತಿದ್ದ ಮಣಿಪುರದ ‘ಉಕ್ಕಿನ ಮಹಿಳೆ’ ತುಂಬಾ ಮಿದುವಾಗಿಯೇ ಮಾತನಾಡಿದರು.

ವಕೀಲರ ಸಂಘದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೆಂದು ನಗರಕ್ಕೆ ಬಂದಿದ್ದ ಶರ್ಮಿಳಾ ಅವರ ಮಾತಿನಲ್ಲಿ ಹೋರಾಟದ ಕಾವಿತ್ತು. ಕಣ್ಣುಗಳಲ್ಲಿ ಆಕ್ರೋಶವಿತ್ತು. ಅಭಿಮಾನಿಗಳ ಸೆಲ್ಫಿ ಕ್ರೇಜಿಗೆ ಸಿಟ್ಟಾಗುತ್ತಲೇ ‘ಮೆಟ್ರೊ’ದೊಂದಿಗೆ ಮಾತಿಗೆ ತೆರೆದುಕೊಂಡರು.

ಭಾರತದ ಇತರ ಪ್ರದೇಶಕ್ಕೂ ಈಶಾನ್ಯ ರಾಜ್ಯಗಳಿಗೂ ಇರುವ ವ್ಯತ್ಯಾಸವನ್ನು ಹೇಗೆ ಗುರುತಿಸುತ್ತೀರಿ? ಎನ್ನುವ ಪ್ರಶ್ನೆಗೆ ಸಿಟ್ಟಿನಿಂದ ನೋಡಿ ‘ನನಗೆ ಗೊತ್ತಿಲ್ಲ. ಅದನ್ನು ನೀವೇ ಕಂಡುಕೊಳ್ಳಬೇಕು’ ಎಂದರು.

ADVERTISEMENT

ನಿಜಕ್ಕೂ ಈಶಾನ್ಯ ಭಾರತದಲ್ಲಿ ಸೇನೆಯ ಅಗತ್ಯವಿದೆಯೇ ಎಂದು ಮರುಪ್ರಶ್ನಿಸಿದಾಗ, ’ಬರ್ಮಾ, ಮಣಿಪುರದ ನಡುವೆ ಅಂತರರಾಷ್ಟ್ರೀಯ ಗಡಿ ಇದೆ. ಹಾಗಾಗಿ, ಸೇನೆ ಅಗತ್ಯವಿದೆ. ಮುಂಬೈನಲ್ಲಿ ಆದಂತೆ ಮಣಿಪುರದಲ್ಲಿ ಯಾವುದೇ ಭಯೋತ್ಪಾದಕ ದಾಳಿಗಳು ನಡೆದಿಲ್ಲ. ಆದರೂ ಅಲ್ಲಿ ಸೇನೆ ಬೇಕೇ? ಸಶಸ್ತ್ರ ಪಡೆಯ ಮೂಲಕ ನಿರಂತರವಾಗಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಈ ಬಗ್ಗೆ ಹಿಂದೆಯೂ ಸಾಕಷ್ಟು ಹೇಳಿದ್ದೇನೆ. ಮತ್ತೆ ಮತ್ತೆ ಅದನ್ನೇ ಹೇಳಲಾರೆ’ ಎಂದರು ಬಿರುನುಡಿಯಲ್ಲಿ.

ಮಾತು ದಾಂಪತ್ಯದತ್ತ ಹೊರಳಿದಾಗ ಗೆಲುವಾದ ಶರ್ಮಿಳಾ, ಪಕ್ಕದಲ್ಲೇ ಕುಳಿತಿದ್ದ ಪತಿ ಡೆಸ್ಮಂಡ್ ಅವರ ಕೈಗಳನ್ನು ಹಿಡಿದುಕೊಂಡು ಹರ್ಷಿತರಾಗಿ, 'ನಾವಿಬ್ಬರೂ ತುಂಬಾ ಅನ್ಯೋನ್ಯವಾಗಿದ್ದೇವೆ. ಅವರ ಮತ್ತು ನನ್ನ ನಡುವೆ ಕೆಲ ವಿಚಾರಗಳಲ್ಲಿ ಭಿನ್ನತೆ ಇರಬಹುದು. ಆದರೆ, ಅವರಿಲ್ಲದೇ ನಾನಿಲ್ಲ. ನಾವಿಬ್ಬರೂ ಉತ್ತಮ ಸ್ನೇಹಿತರು' ಎಂದು ತುಸು ನಾಚಿಕೊಂಡೇ ನಗೆ ತುಳುಕಿಸಿದರು.

‘ಮೇಡಂ ವ್ಯಾನಿಟಿ ಬ್ಯಾಗ್‌ನಲ್ಲಿ ಏನಿರುತ್ತೆ?' ಎಂದು ಕೀಟಲೆಯ ಪ್ರಶ್ನೆ ಎಸೆದಾಗ ಪತ್ನಿಯ ಬೆಂಬಲಕ್ಕೆ ನಿಂತ ಡೆಸ್ಮಂಡ್, ‘ಹೋ ನನ್ನ ಹೆಂಡ್ತಿ ಬ್ಯಾಗ್‌ನಲ್ಲಿ ನೀವೆಣಿಸಿದ ವಸ್ತುಗಳು ಇರೋದಿಲ್ಲ ಬಿಡಿ’ ಅಂದ್ರು. ಪತಿಯ ಮಾತಿಗೆ ತಮ್ಮ ಮಾತನ್ನೂ ಸೇರಿಸಿದ ಶರ್ಮಿಳಾ, ‘ಹೌದು. ನನ್ನ ಬ್ಯಾಗಿನಲ್ಲಿ ಯಾವುದೇ ಸೌಂದರ್ಯ ಸಾಮಗ್ರಿಗಳು ಇರೋದಿಲ್ಲ. ಕನಿಷ್ಠ ಬಾಚಣಿಕೆಯನ್ನೂ ಇಟ್ಟುಕೊಳ್ಳೋದಿಲ್ಲ. ಒಂದೆರಡು ಪುಸ್ತಕಗಳಿರಬಹುದಷ್ಟೇ’ ಎಂದರು.

ಮಾತು ಪುಸ್ತಕಗಳ ಕಡೆಗೆ ಹೊರಟಾಗ, 'ನನಗೆ ಇಂಥ ಲೇಖಕನೇ ಇಷ್ಟ ಅಂತೇನಿಲ್ಲ. ಕೆಲವೊಮ್ಮೆ ಅಧ್ಯಾತ್ಮದ ಪುಸ್ತಕಗಳನ್ನು ಓದುತ್ತೇನೆ. ಪುಸ್ತಕದ ಶೀರ್ಷಿಕೆ ನೋಡಿ ಓದುತ್ತೇನೆಯೋ ಹೊರತು ಲೇಖಕರ ಹೆಸರಲ್ಲ' ಎಂದರು ಶರ್ಮಿಳಾ.

ಶರ್ಮಿಳಾ ಊಟ ಹೀಗಿತ್ತು...

ದೀರ್ಘಕಾಲದ ಸಂಗಾತಿ ಬ್ರಿಟನ್‌ನ ಡೆಸ್ಮಂಡ್ ಕುಟಿನ್ಹೊ ಜತೆಗೆ ಫ್ರೆಜರ್ ಟೌನ್‌ನ ಹೋಟೆಲೊಂದರಲ್ಲಿ ಶರ್ಮಿಳಾ ಊಟ ಮಾಡಿದರು. ಪತಿ ಡೆಸ್ಮಂಡ್‌ ಬಾಯಿ ಚಪ್ಪರಿಸುತ್ತಾ ತಂದೂರಿ ಚಿಕನ್ ಸವಿದರೆ, ಪಕ್ಕದಲ್ಲೇ ಇದ್ದ ಶರ್ಮಿಳಾ ವೆಜ್ ಫಲಫೇಸ್ (ರೋಟಿ ಮಧ್ಯೆ ತರಕಾರಿ ರೋಲ್) ಸವಿದರು. 16 ವರ್ಷಗಳಷ್ಟು ದೀರ್ಘ ಉಪವಾಸವಿದ್ದ ಅವರು ಅಂದು ತಿಂದದ್ದು ಮುಷ್ಟಿಯಷ್ಟು ಆಹಾರ ಮಾತ್ರ. ಪತಿಯ ಒತ್ತಾಸೆಯ ಮೇರೆಗೆ ಅರೇಬಿಯಾದ ಸಿಹಿ ತಿನಿಸು ಬತ್ಲಾವಾದ ರುಚಿ ನೋಡಿದರು.

ಅಪ್ಪಟ ಸಸ್ಯಾಹಾರಿಯಾಗಿರುವ ಶರ್ಮಿಳಾಗೆ ಈಶಾನ್ಯ ಭಾರತದ ಜನಪ್ರಿಯ ಖಾದ್ಯ ಮೊಮೊ ಅಂದರೆ ಇಷ್ಟವಿಲ್ಲವಂತೆ. ಅದನ್ನು ತಯಾರಿಸಲೂ ಬರೋದಿಲ್ಲ ಎಂದರು. ಹಾಲು ಮತ್ತು ಹಾಲಿನ ಉತ್ಪನ್ನಗಳನ್ನೂ ಶರ್ಮಿಳಾ ಸೇವಿಸೋದಿಲ್ಲವಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.