ADVERTISEMENT

ಎಗ್‌ ಅಡುಗೆ ಸ್ಪೆಷಲಿಸ್ಟ್‌

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2018, 5:12 IST
Last Updated 5 ಏಪ್ರಿಲ್ 2018, 5:12 IST
ತೇಜಸ್ವಿನಿ ಶರ್ಮ
ತೇಜಸ್ವಿನಿ ಶರ್ಮ   

ನಂಗೆ ಜೋರು ಹಸಿವಾದಾಗ ಅಡುಗೆಮನೆಗೆ ಹೋಗುತ್ತೇನೆ. ಆಗ ನನ್ನ ಕೈಗೆ ಸಿಗುವುದೇ ಮೊಟ್ಟೆ. ಅದರಿಂದ ಆಮ್ಲೆಟ್‌, ಬುರ್ಜಿ, ಎಗ್‌ ಚಿಲ್ಲಿ ಮಾಡಿಕೊಂಡು ತಿನ್ನುತ್ತೇನೆ. ಅದು ಬಿಟ್ಟರೆ ನಾನು ಮಾಡುವುದು ಮ್ಯಾಗಿ ಅಷ್ಟೇ. ಆದರೆ ನನಗೆ ಅಡುಗೆ ಮಾಡುವುದು ಗೊತ್ತು. ಬಿಡುವು ಸಿಕ್ಕಾಗ ಅಮ್ಮನೊಂದಿಗೆ ಸೇರಿಕೊಂಡು ಕೆಲ ಹೊಸ ರುಚಿಗಳನ್ನು ಪ್ರಯೋಗ ಮಾಡುತ್ತೇನೆ.

ನಾನು ಮೊದಲ ಬಾರಿ ಅಡುಗೆ ಮಾಡಿದ್ದು 10ನೇ ವಯಸ್ಸಿನಲ್ಲಿ ಆಗಿರಬಹುದು. ಕಡ್ಲೆಕಾಯಿ ಮಿಠಾಯಿ ಮಾಡಿದ್ದೆ. ಎಲ್ಲರೂ ಬಾಯಿ ಚಪ್ಪರಿಸಿಕೊಂಡು ತಿಂದಿದ್ದರು. ನನಗೆ ಭಾರಿ ಖುಷಿಯಾಗಿತ್ತು. ಮತ್ತೊಂದು ಬಾರಿ ನಾನು ಗೋಧಿ ಹಿಟ್ಟು ಕಲಸಿಕೊಂಡು ಪಾನಿಪೂರಿ ಮಾಡುತ್ತಿದ್ದೆ. ಹಿಟ್ಟನ್ನು ಉಂಡೆ ಕಟ್ಟಿ, ಎಣ್ಣೆಗೆ ಬಿಡುತ್ತಿದ್ದೆ. ಎಣ್ಣೆಯೆಲ್ಲಾ ನನ್ನ ಮುಖಕ್ಕೆ ಸಿಡಿದಿತ್ತು. ಆಮೇಲೆ ಎಣ್ಣೆಯಿಂದ ಕರಿಯುವ ತಿಂಡಿಗಳ ಉಸಾಬರಿಗೆ ಹೋಗುವುದನ್ನೇ ನಿಲ್ಲಿಸಿದೆ.

ಮೊಟ್ಟೆಯಿಂದ ನನಗೆ ಹಲವು ಬಗೆಯ ಅಡುಗೆ ಮಾಡೋಕೆ ಬರುತ್ತೆ. ಆಗಾಗ ಚಿಕನ್‌ ಗ್ರೇವಿ, ಘೀ ರೈಸ್‌ ಮಾಡಿ ಮನೆಯವರ ಜೊತೆ ಕೂತು ಊಟ ಮಾಡುತ್ತೇನೆ. ಹೊರಗೆ ತಿನ್ನಲು ನನಗೆ ಇಷ್ಟ ಆಗಲ್ಲ. ಅಮ್ಮ ಕೈಅಡುಗೆಯೇ ಇಷ್ಟ. ಅಮ್ಮ ಮಾಡುವ ಫಿಶ್‌ ಕರಿ, ಫಿಶ್‌ ಫ್ರೈ ಇಷ್ಟ. ನಾವು ಮೈಸೂರಿನವರು. ಈ ಭಾಗದ ಎಲ್ಲಾ ಅಡುಗೆ ನನಗಿಷ್ಟ. ಅಮ್ಮನಿಂದ ಆಗಾಗ ಮಾಡಿಸಿಕೊಂಡು ತಿನ್ತೀನಿ.

ADVERTISEMENT

ಘೀ ರೈಸ್‌ ಮತ್ತು ಚಿಕನ್‌ ಗ್ರೇವಿ
ಸಾಮಗ್ರಿಗಳು:
ಎರಡು ಈರುಳ್ಳಿ, ಐದಾರು ಎಸಳು ಬೆಳ್ಳುಳ್ಳಿ, ಲವಂಗ, ಚಕ್ಕೆ, ಲವಂಗದ ಎಲೆ. 1/2 ಕೆ.ಜಿ ಅಕ್ಕಿ, ಸ್ವಲ್ಪ ತುಪ್ಪ

ವಿಧಾನ: ಕುಕ್ಕರ್‌ಗೆ ತುಪ್ಪ ಹಾಕಿಕೊಂಡು ಅದು ಸ್ವಲ್ಪ ಬಿಸಿಯಾದಾಗ ಉದ್ದಕ್ಕೆ ಕತ್ತರಿಸಿಕೊಂಡ ಈರುಳ್ಳಿ, ಬೆಳ್ಳುಳ್ಳಿ, ಲವಂಗ, ಚಕ್ಕೆ, ಲವಂಗದ ಎಲೆ ಹಾಕಿ ಬಾಡಿಸಿಕೊಳ್ಳಬೇಕು. ಬಳಿಕ ತೊಳೆದಿಟ್ಟ ಅಕ್ಕಿಯನ್ನು ಹಾಕಿ ಅದರ ಎರಡರಷ್ಟು ನೀರು ಕುಕ್ಕರ್‌ ಮುಚ್ಚಿ. ಬಳಿಕ ವಿಷಲ್‌ ಬಂದ ಮೇಲೆ ಕುಕ್ಕರ್ ಮುಚ್ಚಳ ತೆಗೆದು ಬಿಸಿ ಅನ್ನಕ್ಕೆ ಸ್ವಲ್ಪ ತುಪ್ಪ ಹಾಕಿ.

*
ಚಿಕನ್‌ ಗ್ರೇವಿ
ಸಾಮಗ್ರಿಗಳು:
1/2 ಕೆ.ಜಿ ಚಿಕನ್‌,  3 ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ ಎಸಳು, ಶುಂಠಿ, ಲವಂಗ, ತೆಂಗಿನ ಕಾಯಿ ತುರಿದಿದ್ದು, ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು, ಒಣಮೆಣಸು.

ವಿಧಾನ: ಚಿಕನ್ ಬಿಟ್ಟು ಉಳಿದ  ಎಲ್ಲಾ ಪದಾರ್ಥಗಳನ್ನು ರುಬ್ಬಿಕೊಳ್ಳಬೇಕು. ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ, ಅದಕ್ಕೆ ಉದ್ದಕ್ಕೆ ಹೆಚ್ಚಿಟ್ಟುಕೊಂಡ ಈರುಳ್ಳಿ, ಎಣ್ಣೆ ಹಾಕಿ ಬಾಡಿಸಿ. ಅದಕ್ಕೆ ಸ್ವಲ್ಪ ಉಪ್ಪು, ಅರಿಶಿನ ಹಾಕಿ, ತೊಳೆದಿಟ್ಟ ಚಿಕನ್‌ ತುಂಡುಗಳನ್ನು ಸೇರಿಸಿ ಬೇಯಿಸಬೇಕು. ಕುದಿದ ಮೇಲೆ ಕೆಳಗಿಳಿಸಿ, ಘೀ ರೈಸ್‌ ಜೊತೆ ತಿಂದಾಗ ರುಚಿಯಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.