ADVERTISEMENT

ಒಂದು ಸೂರು ಸೊಗಡು ನೂರು

ಸವಿತಾ ಎಸ್.
Published 28 ಮೇ 2012, 19:30 IST
Last Updated 28 ಮೇ 2012, 19:30 IST
ಒಂದು ಸೂರು ಸೊಗಡು ನೂರು
ಒಂದು ಸೂರು ಸೊಗಡು ನೂರು   

ಒಟ್ಟು 24 ರಾಜ್ಯಗಳ ಬರೋಬ್ಬರಿ 240 ಮಳಿಗೆಗಳು, ಅಷ್ಟಕ್ಕೂ ಒಂದೇ ಸೂರು. ಸಂಸ್ಕೃತಿಯಲ್ಲಿ ಮಾತ್ರ ವೈವಿಧ್ಯ. ಉತ್ಪನ್ನಗಳೂ ಅಷ್ಟೇ, ಒಂದಕ್ಕಿಂತ ಒಂದು ವಿಭಿನ್ನ. ಕೊಳ್ಳುವವರಿಗೆ ಗೊಂದಲ ಮೂಡಿಸುವಷ್ಟು ಆಯ್ಕೆಗಳು... ಇವೆಲ್ಲದರ ಸವಿ ಉಣಬೇಕಾದರೆ ಒಮ್ಮೆ ಚಿತ್ರಕಲಾ ಪರಿಷತ್‌ಗೆ ಭೇಟಿ ನೀಡಬೇಕು.

ಹೀಗೆ ಭಾರತದ ಎಲ್ಲಾ ರಾಜ್ಯಗಳ ವೈಶಿಷ್ಟ್ಯಗಳನ್ನು ಇಲ್ಲಿಗೆ ಕರೆತಂದಿದ್ದು ಕಲಾಮಾಧ್ಯಮ ಸಂಸ್ಥೆ. ವರ್ಷಕ್ಕೆರಡು ಕರಕುಶಲ ಸಂತೆ ಏರ್ಪಡಿಸುವ ಇವರು ಈ ಬಾರಿಯ ಮೇಳವನ್ನು ಭಿನ್ನವಾಗಿ ಆಯೋಜಿಸಬೇಕೆಂದು ರೂಪಿಸಿದ ಬಗೆಯಿದು. `ಪ್ರತಿಬಾರಿಯೂ ಮಹಿಳೆಯರನ್ನೇ ಕೇಂದ್ರೀಕರಿಸಿಕೊಂಡು ಮೇಳ ಹಮ್ಮಿಕೊಳ್ಳುತ್ತಿದ್ದೆವು.

ಈ ಬಾರಿ ಪುರುಷರಿಗೂ ಸಾಕಷ್ಟು ಆಯ್ಕೆಗಳಿವೆ. ಆಯಾ ರಾಜ್ಯಗಳ ಪರಂಪರೆ ಬಿಂಬಿಸುವ ಉತ್ಪನ್ನಗಳು ಒಂದೇ ಕಡೆ ಸಿಗುತ್ತಿವೆ~ ಎನ್ನುತ್ತಾರೆ ಇದರ ರೂವಾರಿ ಗಂಗಾಧರ ರಾವ್.

ಒಳ ಪ್ರವೇಶಿಸುತ್ತಿದ್ದಂತೆ ಮಹಾರಾಷ್ಟ್ರದ ವರ್ಲಿ, ಬಿಹಾರದ ಮದುಬನಿ, ಕೇರಳದ ಮ್ಯೂರಲ್ಸ್, ಮಧ್ಯಪ್ರದೇಶದ ಗೋಂದು, ಪಶ್ಚಿಮಬಂಗಾಳದ ಪಟ, ರಾಜಸ್ತಾನದ ಮೀನಿಯೇಚರ್ ಹಾಗೂ ನಮ್ಮ ಚಿತ್ತಾರ ಚಿತ್ರಕಲೆಗಳು ಸ್ವಾಗತಿಸುತ್ತವೆ. ಆಯಾ ರಾಜ್ಯದ ವೈವಿಧ್ಯ ಪ್ರದರ್ಶಿಸುವ, ಪುರಾಣದ ಕತೆ ಹೇಳುವ, ವಾಸ್ತವ ಹಾಗೂ ಕಲ್ಪನಾಲೋಕದ ಪಟಗಳು ಮೇಳದ ಸೊಬಗನ್ನು ಮತ್ತಷ್ಟು ಹೆಚ್ಚಿಸಿವೆ.
 
ಆಳೆತ್ತರ ಮರದ ಮೂರ್ತಿಗಳು ಅವುಗಳ ವಿಶಿಷ್ಟ ಬಣ್ಣದಿಂದಲೇ ಗಮನ ಸೆಳೆಯುತ್ತಿವೆ. ಸಿಲ್ವರ್ ಪಿಲಗರಿ, ಕುಂದನ್, ಮೀನಾಕಾರಿ, ದೋಕ್ರ್, ಟೆರಾಕೋಟಾ, ಬಂಜಾರ, ವೈಟ್‌ಮೆಟಲ್, ಬೆಳ್ಳಿ ಆಭರಣಗಳೂ ಆಕರ್ಷಕ ಬೆಲೆಯಲ್ಲಿ ದೊರೆಯುತ್ತಿವೆ.

ಕೈಮಗ್ಗದ ಉಡುಪುಗಳಿಗಾಗಿ ಪ್ರತ್ಯೇಕ ವಿಭಾಗವಿದ್ದು ಅಲ್ಲಿ ಕಸೂತಿ, ಖಾದಿ, ಬನಾರಸ್, ಇಕತ್(ಒಡಿಶಾ), ಕಾಂತ, ಬಾಂದನಿ, ಲಖನೌ ಚಿಕನ್, ಮಹೇಶ್ವರಿ, ಕಾಶ್ಮೀರಿ ಶಾಲು, ಕುರ್ತಾ, ಕಾಟನ್ ಸೀರೆಗಳು ಇಲ್ಲಿ ಲಭ್ಯ. ಸ್ಪರ್ಧೆಯಲ್ಲಿ ಒಂದನ್ನೊಂದು ಮೀರಿಸುವ ಸೀರೆಗಳಿಗೆ ಗ್ರಾಹಕರೂ ಮುಗಿಬೀಳುತ್ತಿದ್ದಾರೆ.
 
`ಎಲ್ಲಾ ರಾಜ್ಯಗಳ ವಿನ್ಯಾಸಗಳೂ ಇಲ್ಲಿ ಒಂದೆಡೆ ಸಿಗುವುದರಿಂದ ಮಹಿಳೆಯರು ಹೆಚ್ಚು ಒಲವು ತೋರುತ್ತಾರೆ. ಅವರಿಷ್ಟದ ಉಡುಪುಗಳ ಆಯ್ಕೆಗೆ ಇದು ಒಳ್ಳೆಯ ಅವಕಾಶ. ಗ್ರಾಹಕರಿಂದ ಇಲ್ಲಿ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಬೆಂಗಳೂರಿಗರು ಅಲಂಕಾರಪ್ರಿಯರು ಎಂಬುದು ಮತ್ತೆ ಮತ್ತೆ ರುಜುವಾಗುತ್ತಿದೆ~ ಎಂದು ನಗೆ ಚೆಲ್ಲುತ್ತಾರೆ ಬೀದರ್‌ಮೂಲದ ವ್ಯಾಪಾರಿ ನರೇಂದ್ರ ಮಜ್ಜಿಗೆ.

`ಇತ್ತೀಚಿನ ದಿನಗಳಲ್ಲಿ ಫ್ಯಾಶನ್ ದುನಿಯಾದಲ್ಲಿ ಬದಲಾವಣೆ ಕಾಣಿಸುತ್ತಿದೆ. ಹಿಂದೆಲ್ಲಾ ಮಹಿಳೆಯರ ಅಲಂಕಾರಿಕ ವಸ್ತುಗಳು ಇಲ್ಲವೇ ಗಿಫ್ಟ್ ಐಟಂಗಳು ಮಾತ್ರ ಹೆಚ್ಚು ಮಾರಾಟವಾಗುತ್ತಿದ್ದವು. ಈಗ ಮನೆಯ ಒಳಾಂಗಣ ವಿನ್ಯಾಸಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಮಣ್ಣಿನ ಇಲ್ಲವೇ ಮರದ ಮೂರ್ತಿಗಳು, ಭಿತ್ತಿ ಅಲಂಕರಿಸುವ ಫ್ರೇಂಗಳಿಗೇ ಹೆಚ್ಚು ಬೇಡಿಕೆ. `ಆ್ಯಂಟಿಕ್ ಪೀಸ್~ ಹೆಸರಿನಲ್ಲಿ ಹಳೆ ಕಾಲದ ಹಿತ್ತಾಳೆ ತಟ್ಟೆ, ದೀಪ, ಚೊಂಬು ಮನೆಗೆ ಕೊಂಡೊಯ್ದು ಶೋಕೇಸ್‌ನಲ್ಲಿ ಇಟ್ಟು ಬೀಗುತ್ತಾರೆ.
 
ಪಟ್ಟಣದ ಮನೆಯಲ್ಲಿ ಹಳ್ಳಿಯ ಸೊಗಡನ್ನು ಬಿಂಬಿಸಬೇಕು ಎಂದು ಬಯಸುವವರೇ ಹೆಚ್ಚು~ ಎಂದು ವಿಶ್ಲೇಷಿಸುತ್ತಾರೆ ದೆಹಲಿ ಮೂಲದ ಟೆರ‌್ರಾಕೋಟಾ ವ್ಯಾಪಾರಿ ತೇನ್‌ಸಿಂಗ್.

ಸೀರೆಗಳಲ್ಲೂ ಅಷ್ಟೇ, ಮೈಮಾಟ ಕಾಣುವ ತೆಳು ಸಿಲ್ಕ್‌ಸೀರೆಗಳಿಗೆ ಇಲ್ಲಿ ಬೇಡಿಕೆ ಇಲ್ಲ. `ಹೆಚ್ಚಿನ ಮಂದಿ ಕಾಟನ್ ಸೀರೆಗಳನ್ನು ಕೇಳಿ ಬರುತ್ತಾರೆ. ಬೆಲೆ ಹೆಚ್ಚಿದ್ದರೂ ಉತ್ತಮ ಗುಣಮಟ್ಟದ್ದನ್ನೇ ಕೊಳ್ಳುತ್ತಾರೆ. ರಾಜಸ್ತಾನಿ ಕಾಟನ್, ಜೈಪುರ್ ಕಾಟನ್, ಬ್ಲಾಕ್‌ಪ್ರಿಂಟ್, ಸೂಜಿ ಮಲ್ಲಿಗೆ, ಕಸೂತಿ ಸೀರೆಗಳನ್ನೇ ಕೇಳುತ್ತಾರೆ. ಬಣ್ಣಗಳಲ್ಲೂ ಆಯ್ಕೆ ಹೆಚ್ಚಿರುವುದರಿಂದ ಗ್ರಾಹಕರು ಬರುವುದು ಸಹಜವೇ~ ಎನ್ನುತ್ತಾರೆ ರಾಜಸ್ತಾನಿ ಮೂಲದ ವ್ಯಾಪಾರಿ ಲೀಲಾ.

ಗ್ರಾಮೀಣ ಹಾಗೂ ನಗರದ ಕರಕುಶಲಗಾರರಿಗೆ ನೇರ ಮಾರುಕಟ್ಟೆ ಒದಗಿಸುವುದು, ಹೊಸ ವಿನ್ಯಾಸಗಳಿಗೆ ಪ್ರೋತ್ಸಾಹ ನೀಡುವುದು, ದೇಸಿ ಉತ್ಪನ್ನಗಳಿಗೆ ಉತ್ತೇಜನ ನೀಡುವುದು, ಮಧ್ಯವರ್ತಿಗಳ ನೆರವಿಲ್ಲದೆ ಲಾಭಾಂಶ ನೇರವಾಗಿ ಕರಕುಶಲಗಾರರಿಗೆ ದೊರೆಯುವಂತೆ ಮಾಡುವುದು ಈ ಮೇಳದ ಉದ್ದೇಶ.

ಅಷ್ಟೂ ಮಳಿಗೆಗಳ ವೈವಿಧ್ಯ ಕಂಡು ಸುಸ್ತಾದರೆ, ಹೆಬ್ಬಾಳದ ರಾಜೇಶ್ವರಿ ಅಕ್ಕ ಮನೆಯಲ್ಲೇ ತಯಾರಿಸಿದ ಮೆತ್ತನೆಯ ಜೋಳದ ರೊಟ್ಟಿ, ಬದನೆಕಾಯಿ ಎಣ್ಣೆಗಾಯಿ, ಖಾರದ ಚಟ್ನಿ, ಹೆಸರುಕಾಳು ಪಲ್ಯ ನೆಂಚಿಕೊಂಡು ಬಾಯಿ ಚಪ್ಪರಿಸುತ್ತಾ ಹೊರಬಹುದು.
ಮೇಳ ಜೂನ್ 3ರವರೆಗೆ ಬೆಳಿಗ್ಗೆ 10ರಿಂದ ರಾತ್ರಿ 8ರವರೆಗೆ ಸಾರ್ವಜನಿಕರಿಗೆ ತೆರೆದಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.