ADVERTISEMENT

ಒತ್ತಡಕ್ಕೆ ಝೆನ್‌ಟ್ಯಾಂಗಲ್‌ ಮದ್ದು

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2017, 19:30 IST
Last Updated 20 ಅಕ್ಟೋಬರ್ 2017, 19:30 IST
ಒತ್ತಡಕ್ಕೆ ಝೆನ್‌ಟ್ಯಾಂಗಲ್‌ ಮದ್ದು
ಒತ್ತಡಕ್ಕೆ ಝೆನ್‌ಟ್ಯಾಂಗಲ್‌ ಮದ್ದು   

ಯಾವುದೇ ಕೆಲಸವನ್ನು ಒತ್ತಡ ಎಂದುಕೊಂಡು ಮಾಡಲು ಆರಂಭಿಸಿದರೆ ಅದು ಒತ್ತಡವಾಗಿಯೇ ಪರಿಣಮಿಸುತ್ತದೆ. ಅದೇ ಖುಷಿಖುಷಿಯಾಗಿ ಪ್ರತಿಫಲವನ್ನು ನಿರೀಕ್ಷಿಸದಿದ್ದರೆ ಮನಸ್ಸು ಹಗುರಾಗುತ್ತದೆ. ಇಂತಹದ್ದೊಂದು ಆಲೋಚನೆಯ ಮೂಲಕ ಪ್ರಾರಂಭವಾಗಿರುವುದು ಝೆನ್‌ ಟ್ಯಾಂಗಲ್‌ ಥೆರಪಿ.

ನಗರದಲ್ಲಿ ಹಲವರು ಝೆನ್‌ ಟ್ಯಾಂಗಲ್‌ ಥೆರಪಿಯ ಮೊರೆ ಹೋಗಿದ್ದಾರೆ. ಒತ್ತಡದಿಂದ ಹೊರಬರಲು ಇದು ಸಿದ್ಧೌಷಧ ಎನ್ನುವುದು ಅವರ ನಂಬಿಕೆ. ದಿಲೀಪ್‌ ಪಟೇಲ್‌ ಬೆಂಗಳೂರಿನ ಹಲವೆಡೆ ಝೆನ್‌ ಟ್ಯಾಂಗಲ್‌ ಕಾರ್ಯಾಗಾರ ನಡೆಸಿಕೊಟ್ಟಿದ್ದಾರೆ.

ಮನಸ್ಸಿನ ಮೇಲೆ ಒತ್ತಡ ಹೇರಿಕೊಂಡರೆ ಏನನ್ನೂ ಮಾಡಲು ಸಾಧ್ಯವಾಗುವುದಿಲ್ಲ. ನಾವು ಯಾವುದೇ ಕೆಲಸ ಮಾಡುವಾಗಲೂ ಸಕಾರಾತ್ಮಕ ಆಲೋಚನೆಗಳೇ ಇರಬೇಕು. ಮನಸ್ಸಿಗೆ ತೋಚಿದ್ದನ್ನು ಮಾಡಬೇಕು. ಅದರ ಫಲಿತಾಂಶದ ಕುರಿತು ಚಿಂತೆ ಮಾಡಬಾರದು. ಒಳ್ಳೆಯ ಫಲಿತಾಂಶ ದೊರಕಿದರೆ ಅದುವೇ ಬೋನಸ್‌ ಎನ್ನುವುದು ಝೆನ್ ಟ್ಯಾಂಗಲ್‌ ಥೆರಪಿಯ ಪರಿಕಲ್ಪನೆ. ಅಮೆರಿಕದ ರಿಕ್‌ ರಾಬರ್ಟ್‌ ಮತ್ತು ಮರಿಯಾ ಥಾಮಸ್‌ ಈ ಚಿಕಿತ್ಸೆಯ ರೂವಾರಿಗಳು.

ADVERTISEMENT

‘ಶಿಕ್ಷಕರು ಪಾಠ ಮಾಡುವಾಗ ಅದನ್ನು ಕೇಳಲು ಮನಸ್ಸಿಲ್ಲದ ಮಕ್ಕಳು ಹಾಳೆಯಲ್ಲಿ ಏನನ್ನೋ ಗೀಚುತ್ತಿರುತ್ತಾರೆ. ಇದು ಅಪ್ರಜ್ಞಾಪೂರ್ವಕ ಪ್ರಕ್ರಿಯೆ. ಆದರೆ ಈ ಥೆರಪಿಯಲ್ಲಿ ಗೀಚುವುದನ್ನು ಪ್ರಜ್ಞಾಪೂರ್ವಕವಾಗಿ ಮಾಡಬೇಕಾಗುತ್ತದೆ. ಇದನ್ನು ಯಾರು ಬೇಕಾದರೂ ಕಲಿಯಬಹುದು. ಚೆನ್ನಾಗಿ ಚಿತ್ರ ಬರೆಯಲು ಬರಬೇಕು ಎಂಬುದೇನೂ ಇಲ್ಲ. ಚಿತ್ರವನ್ನು ಚೆನ್ನಾಗಿ ಮೂಡಿಸಬೇಕು ಎನ್ನುವ ಆಸಕ್ತಿ, ಪ್ರಯತ್ನ ಮಾಡಬೇಕು. ಒಟ್ಟಿನಲ್ಲಿ ಖುಷಿ ಸಿಗಬೇಕು ಎನ್ನುವುದು ಉದ್ದೇಶ. ಕೆಲವೊಮ್ಮೆ ಮೂಡಿಸುವ ಚಿತ್ರಗಳು ಚೆಂದವಾಗಬಹುದು. ಅದನ್ನು ಬೋನಸ್‌ ಎಂದುಕೊಳ್ಳುತ್ತೇವೆ. ರೇಖೆಗಳ ಮೂಲಕ ಬದುಕಿನ ಪಾಠ ಹೇಳಿಕೊಡುವ ಕೆಲಸ ನಮ್ಮದು. ಹೀಗೆ ಮಾಡುವುದರಿಂದ ಏಕಾಗ್ರತೆ ಹೆಚ್ಚುತ್ತದೆ’ ಎನ್ನುತ್ತಾರೆ ದಿಲೀಪ್.

‘ಮರದಲ್ಲಿ ಹಲವು ಎಲೆಗಳಿರುತ್ತವೆ. ಅವುಗಳ ಗಾತ್ರ ಒಂದೇ ರೀತಿ ಇರುವುದಿಲ್ಲ. ಪ್ರಕೃತಿಯಲ್ಲಿಯೇ ಯಾವುದು ಪರಿಪೂರ್ಣ ಇಲ್ಲ. ಮತ್ತೆ ನಾವ್ಯಾಕೆ ಪರಿಪೂರ್ಣತೆಯ ಹಿಂದೆ ಹೋಗಬೇಕು ಎಂಬುದನ್ನು ತಿಳಿಸುತ್ತದೆ. ಜೀವನದಲ್ಲಿ ಪರಿಪೂರ್ಣತೆಯೇ ಮುಖ್ಯವಲ್ಲ, ಜೀವನದಲ್ಲಿ ಖುಷಿ ಮುಖ್ಯ. ಯಾವುದೇ ವ್ಯಾಕುಲತೆ ಇಲ್ಲದೆ ಮನಸ್ಸನ್ನು ನಿರ್ವಹಿಸುವುದು ಹೇಗೆ ಎಂಬುದನ್ನು ಕಲಿಸುವುದು ನಮ್ಮ ಉದ್ದೇಶ’ ಎಂದು ಝೆನ್‌ ಟ್ಯಾಂಗಲ್‌ ಮಹತ್ವದ ಬಗ್ಗೆ ತಿಳಿಸುತ್ತಾರೆ ಅವರು.

’ಕೆಲವೊಮ್ಮೆ ಮನಸ್ಸಿಗೆ ತುಂಬಾ ಒತ್ತಡ ಎನಿಸುತ್ತಿತ್ತು. ಸ್ನೇಹಿತರೊಬ್ಬರು ಝೆನ್‌ ಟ್ಯಾಂಗಲ್‌ ಥೆರಪಿ ಬಗ್ಗೆ ತಿಳಿಸಿದರು. ಈ ವಿಧಾನದಲ್ಲಿ ಕೆಲವು ಆಕಾರಗಳನ್ನು ಹೇಳಿಕೊಡುತ್ತಾರೆ. ಕೆಟ್ಟ ಆಲೋಚನೆಗಳು ಮನಸಿಗೆ ಬರುವಾಗ ಹಾಳೆಯ ಮೇಲೆ ಚಿತ್ರಗಳನ್ನು ಮೂಡಿಸಲು ಕೂರುತ್ತೇನೆ. ಮನಸ್ಸು ಪ್ರಶಾಂತವಾಗುತ್ತದೆ’ ಎಂದು ಚಿಕಿತ್ಸೆಯಿಂದ ಉಪಯೋಗ ಪಡೆದ ಐಟಿ ಉದ್ಯೋಗಿ ಕಿರಣ್‌ ಪ್ರತಿಕ್ರಿಯಿಸಿದರು.

ಸಂಪರ್ಕಕ್ಕೆ: 98450 25812

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.