ADVERTISEMENT

ಓಂಕಾರ ಬೆಟ್ಟದಲ್ಲಿ ದ್ವಾದಶ ಜ್ಯೋತಿರ್ಲಿಂಗ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2011, 18:30 IST
Last Updated 11 ಫೆಬ್ರುವರಿ 2011, 18:30 IST

ರಾಜರಾಜೇಶ್ವರಿ ನಗರ ಸಮೀಪದ ಶ್ರೀನಿವಾಸಪುರದಲ್ಲಿರುವ ಓಂಕಾರ ಬೆಟ್ಟ ತನ್ನ ಆಶ್ರಮ, ದೊಡ್ಡ ಘಂಟೆಗಳ ಮೂಲಕ ಈಗಾಗಲೇ ಖ್ಯಾತವಾಗಿದೆ. ರಮಣೀಯ ದೃಶ್ಯವನ್ನು ಕಣ್ಮನಗಳಿಗೆ ಉಣಬಡಿಸುವ ಮತ್ತು ಮನಸ್ಸಿಗೆ ಶಾಂತಿ ಕೊಡುವ ಈ ಸ್ಥಳದ ಹಿರಿಮೆಗೆ ಇದೀಗ ಮತ್ತೊಂದು ಗರಿ ಮೂಡಿದೆ.

ಅದುವೇ ದ್ವಾದಶ ಜ್ಯೋತಿರ್ಲಿಂಗ ದೇವಸ್ಥಾನ. ಹನ್ನೆರಡು ಜ್ಯೋತಿರ್ಲಿಂಗಗಳನ್ನೂ ಒಂದೇ ಕಡೆ ನೋಡುವ ಅವಕಾಶ ಇಲ್ಲಿ ಇದೀಗ ಲಭ್ಯ. ಈ ಲಿಂಗಗಳ ಪ್ರತಿಷ್ಠಾಪನೆ, ಹೋಮ, ಕುಂಭಾಭಿಷೇಕ ಮಹೋತ್ಸವ ಶನಿವಾರದಿಂದ ಫೆ.16ರ ತನಕ ನಡೆಯುತ್ತಿದೆ.

ಪ್ರತಿಯೊಂದು ಜ್ಯೋತಿರ್ಲಿಂಗಕ್ಕೂ ಪ್ರತ್ಯೇಕ ಗರ್ಭ ಗೃಹ ಮತ್ತು ಗೋಪುರ ನಿರ್ಮಿಸಿರುವುದು ಇಲ್ಲಿನ ವಿಶೇಷ. ದೇವಸ್ಥಾನದ ಮಧ್ಯಭಾಗದಲ್ಲಿ 5 ಅಡಿ ಎತ್ತರದ ಓಂಕಾರೇಶ್ವರ ಲಿಂಗ ಇದೆ. ದೇವಸ್ಥಾನದ ಮುಖ್ಯ ಗೋಪುರದ ಎತ್ತರ 100 ಅಡಿಗಳಿಗೂ ಜಾಸ್ತಿ.

ಈ ದೇವಸ್ಥಾನದಲ್ಲಿ ಶಕ್ತಿ (ಯಂತ್ರ), ಗಣಪತಿ, ಸುಬ್ರಹ್ಮಣ್ಯ, ಕಾಲಭೈರವ ಮತ್ತು ಚಂಡಿಕೇಶ್ವರ ಮೂರ್ತಿಗಳಿವೆ. ಇಲ್ಲಿ ಸ್ಥಾಪಿಸಲಾಗಿರುವ ನಟರಾಜನ ಬೃಹತ್ ಕಂಚಿನ ವಿಗ್ರಹದ ತೂಕವೇ 1.7 ಟನ್. ಜತೆಗೆ 11 ರುದ್ರರ ವಿಗ್ರಹಗಳನ್ನೂ ಸ್ಥಾಪಿಸಲಾಗಿದೆ. ಜ್ಯೋತಿರ್ಲಿಂಗಗಳನ್ನು ಒಂದೇ ಕಡೆ ಸ್ಥಾಪಿಸಿರುವ ನಿದರ್ಶನ ಬಹಳ ಅಪರೂಪ. ಅದಕ್ಕಾಗಿಯೇ ಓಂಕಾರ ಬೆಟ್ಟ ಇದೀಗ ವಿಶೇಷವಾಗಿ ಗಮನ ಸೆಳೆದಿದೆ.

ಇದು ಇಂದು ಪ್ರವಾಸಿ ತಾಣ ಮಾತ್ರವಲ್ಲದೆ ಭಕ್ತಿಯ ತಾಣವಾಗಿಯೂ ಬದಲಾಗಿದೆ. ಭಕ್ತರು, ಆಸಕ್ತರು ಈ ಕ್ಷೇತ್ರದ ಪರಿಚಯ ಮಾಡಿಕೊಳ್ಳಬೇಕು ಎಂದು ಓಂಕಾರ ಆಶ್ರಮ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ಸ್ವಾಮಿ ಮಧುಸೂದನಾನಂದ ಪುರಿ ಹೇಳುತ್ತಾರೆ. ನಗರದ ಜಂಜಡದಲ್ಲಿ ನಲುಗಿ ಹೋಗಿರುವವರಿಗೆ ನೆಮ್ಮದಿ ನೀಡುವ ತಾಣವಾಗಿ ಓಂಕಾರ ಬೆಟ್ಟ ಬದಲಾಗಿದೆ.
                                         

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.