ADVERTISEMENT

ಓಣಕ್ಕೂಟ್ಟಂ ಉತ್ಸವದ ಬಣ್ಣಬಣ್ಣ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2012, 19:30 IST
Last Updated 1 ಅಕ್ಟೋಬರ್ 2012, 19:30 IST
ಓಣಕ್ಕೂಟ್ಟಂ ಉತ್ಸವದ ಬಣ್ಣಬಣ್ಣ
ಓಣಕ್ಕೂಟ್ಟಂ ಉತ್ಸವದ ಬಣ್ಣಬಣ್ಣ   

ರಸ್ತೆಯ ಎರಡೂ ಬದಿಗಳಲ್ಲಿ ತೆಂಗಿನ ಗರಿಗಳ ತೋರಣ. ದೂರದಲ್ಲೆಲ್ಲೋ ಕೇಳುತ್ತಿದ್ದ ಚಂಡೆಯ ಝೇಂಕಾರ. ಬೃಹತ್ತಾದ ಸುಂದರ ಮನೆ ಹಾಗೂ ಸ್ವಚ್ಛ ಬೀದಿಯ ತುಂಬೆಲ್ಲಾ  ಸಂಭ್ರಮ. ಕಾರಣ ಅಲ್ಲಿ ನಡೆಯುತ್ತಿದ್ದ `ಫರ್ನ್ಸ್ ಓಣಕ್ಕೂಟ್ಟಂ~ ಉತ್ಸವ.

ಫರ್ನ್ಸ್ ಹ್ಯಾಬಿಟೇಟ್, ಫರ್ನ್ಸ್ ಸಿಟಿ ಹಾಗೂ ಫರ್ನ್ಸ್ ಪ್ಯಾರಡೈಸ್ ಕಾಲೊನಿಯವರೆಲ್ಲಾ ಸೇರಿ ಇತ್ತೀಚೆಗೆ ಓಣಂ ಹಬ್ಬವನ್ನು ಅದ್ದೂರಿಯಾಗಿ ಏರ್ಪಡಿಸಿದ್ದರು. ಹೆಚ್ಚಾಗಿ ಮಲಯಾಳಿಗಳೇ ವಾಸವಾಗಿರುವ ಇಲ್ಲಿ ಕೇರಳದ ಸಂಸ್ಕೃತಿ ಮೇಳೈಸಿತ್ತು.

ಆಟದ ಮೈದಾನ, ಗಾರ್ಡನ್, ಈಜುಕೊಳವಿದ್ದ ಸುಂದರ ಪರಿಸರದಲ್ಲಿ ಮಕ್ಕಳು ಖುಷಿಯಿಂದ ಕುಣಿದಾಡುತ್ತಿದ್ದರು. ಅಲ್ಲೇ ಪಕ್ಕದಲ್ಲಿ ಇಟ್ಟಿದ್ದ ಖಾದ್ಯಗಳ ಪರಿಮಳ ಮೂಗಿಗೆ ಬಂದು ತಾಕುತ್ತಿತ್ತು. ಎಲ್ಲವೂ ಕೇರಳ ಸ್ಪೆಶಲ್.

ಕೇರಳದ ಜನಪ್ರಿಯ ಹಬ್ಬ ಓಣಂ ಉತ್ಸವವನ್ನು ಹೆಚ್ಚು ಆಸ್ಥೆ ವಹಿಸಿ ಏರ್ಪಾಟು ಮಾಡಲಾಗಿತ್ತು. ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ, ಪೂಕ್ಕಳಂ ಸ್ಪರ್ಧೆ, ಪಾಟ್ ಪೇಂಟಿಂಗ್ ಮುಂತಾದ ಸ್ಪರ್ಧೆಗಳನ್ನು ನಡೆಸಲಾಗಿತ್ತು. ರಂಗೋಲಿ ಸ್ಪರ್ಧೆಗಳಲ್ಲಿ ಗಂಡು ಮಕ್ಕಳೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು ಎನ್ನುವುದು ವಿಶೇಷ.

`ಒಂದು ಪೂಕ್ಕಳಂ ರಂಗೋಲಿಯನ್ನು ಐದು ಜನ ಸೇರಿಸಿ ಮಾಡಿದ್ವಿ. ಹೂವಿನ ಎಸಳಿನಿಂದ ಹೇಗೆ ರಂಗೋಲಿ ಬಿಡಿಸಬೇಕು ಎಂದು ಮೊದಲೇ ಅಭ್ಯಾಸ ಮಾಡಿದ್ದೆವು. ಹೊಸ ಅವಕಾಶ. ಹೊಸತನ್ನು ಮಾಡೋಕೆ ಖುಷಿ ಆಗತ್ತೆ. ಪ್ರತಿ ಬಾರಿ ಓಣಂ ಹಬ್ಬ ಬಂತು ಎಂದರೆ ಸಂಭ್ರಮಿಸುತ್ತೇವೆ~ ಎಂದು ಪುಟಾಣಿಗಳಾದ ದೀಪ್ತಿ, ಶಿವಾನಿ, ಅತೀವಾ, ಕ್ರಿಸ್ಟಿ ಹಾಗೂ ತುಳಸಿ ಸಂತೋಷ ಹಂಚಿಕೊಂಡರು.

ಮಕ್ಕಳು ರಚಿಸಿದ ಪೂಕ್ಕಳಂ ವೀಕ್ಷಿಸಿ ಖುಷಿ ಪಡುತ್ತಿದ್ದವರನ್ನು ದೊಡ್ಡವರು ತಾವು ರಚಿಸಿದ ಪೂಕ್ಕಳಂ ನೋಡಬನ್ನಿ ಎಂದು ಕರೆದರು. ಮಲ್ಲಿಗೆ, ಗರಿಕೆ, ಸೇವಂತಿಗೆ, ತೆಂಗಿನಗರಿ, ಗುಲಾಬಿ ಎಸಳು, ದಾಸವಾಳ, ಸೊಪ್ಪುಗಳನ್ನು ಚಿಕ್ಕದಾಗಿ ಕತ್ತರಿಸಿ ರಂಗೋಲಿಯನ್ನು ಅದರಿಂದಲೇ ಸಿಂಗರಿಸಲಾಗಿತ್ತು.

ವಿಶಾಲವಾದ ಆ ರಂಗೋಲಿಗಳಲ್ಲಿ ಕೇರಳದ ಪ್ರಸಿದ್ಧ ಬೋಟ್ ರೇಸ್, ಸೂರ್ಯೋದಯ, ಅಲ್ಲಿಯ ಸಂಸ್ಕೃತಿಯನ್ನು ಬಿಂಬಿಸಲಾಗಿತ್ತು. ದೀಪ, ನಿರಪರ, ಓಣತ್ತಪ್ಪನ್‌ಗಳಿಂದ ರಂಗೋಲಿಯನ್ನು ಸಿಂಗರಿಸಲಾಗಿತ್ತು. ಹೂವುಗಳನ್ನು ಸಿಂಗರಿಸುವುದರಲ್ಲಿ ಜಾಣ್ಮೆ ಮೆರೆದಿದ್ದ ಆ ಕಲಾವಿದರ ರಂಗೋಲಿ ನೋಡುಗರ ಮೆಚ್ಚುಗೆ ಗಳಿಸಿತ್ತು.

`ನಾವು ಐದು ಜನ ಪ್ರತಿ ವರ್ಷವೂ ಭಾಗವಹಿಸಿದ್ದೇವೆ. ಕೇರಳದ ಪೂಕ್ಕಳಂ ರಂಗೋಲಿ ತುಂಬ ಜನಪ್ರಿಯ. ಕೇವಲ ಹೂವಿನ ಎಸಳುಗಳಿಂದಲೇ ಚಿತ್ರದ ಮೂಲಕ ನಮ್ಮ ಸಂಸ್ಕೃತಿ ಬಿಂಬಿಸುವ ಅವಕಾಶ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ.

ನಮ್ಮ ಪ್ರತಿಭೆ ಅನಾವರಣ ಮಾಡಲು ಇದೊಂದು ಉತ್ತಮ ಅವಕಾಶ~ ಎಂದು ನಕ್ಕರು ಹಿರಿಯರ ಪೂಕ್ಕಳಂ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಯಾಸ್ಮಿನ್, ಲಕ್ಷ್ಮಿ, ಮರಿಯಾ, ದೀಪ್ತಿ, ಶೆಹನಾಸ್.

ಇಲ್ಲಿನ ನಿವಾಸಿಗಳಿಗಾಗಿ ಸಂಗೀತ, ನೃತ್ಯ ಮುಂತಾದ ಕಾರ್ಯಕ್ರಮಗಳನ್ನೂ ಏರ್ಪಡಿಸಲಾಗಿತ್ತು. ಹಿನ್ನೆಲೆ ಗಾಯಕ ಅನೂಪ್ ಶಂಕರ್ ಪುರಂದರ ದಾಸರ `ಚಂದ್ರಚೂಡ ಶಿವಶಂಕರ ಪಾರ್ವತಿ ರಮಣ ನಿನಗೆ ನಮೋ~ ಗೀತೆಯಿಂದ ಪ್ರಾರಂಭಿಸಿ ಬೇರೆ ಬೇರೆ ಭಾಷೆಯ ಹಾಡುಗಳನ್ನು ಹಾಡಿ ಪ್ರೇಕ್ಷಕರ ಮನಗೆದ್ದರು.

ADVERTISEMENT

ಅದೂ ಅಲ್ಲದೆ ಕಾಲೊನಿ ನಿವಾಸಿಗಳೇ ನಡೆಸಿಕೊಟ್ಟ ಮೋಹಿನಿ ಆಟ್ಟಂ ಕಣ್ಮನ ಸೆಳೆಯಿತು.  `ಇದು ಐದನೇ ವರ್ಷದ ಆಚರಣೆ. ಎಲ್ಲರೂ ಇದೇ ಸಮಯದಲ್ಲಿ ಸೇರುವುದರಿಂದ ತಿಂಗಳು ಕಳೆದರೂ ಓಣಂ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತೇವೆ. ಎಲ್ಲರೂ ಒಟ್ಟಾಗಿ ಸೇರಿ ಸಂಭ್ರಮಿಸಲು ಇದೊಂದು ಉತ್ತಮ ಅವಕಾಶ.

ಕಾಲೊನಿಯಲ್ಲಿ ಇರುವವರಿಗೆ ತಮ್ಮ ಪ್ರತಿಭೆ ಪ್ರದರ್ಶನಕ್ಕೆ ಉತ್ತಮ ಅವಕಾಶ. ಎರಡು ದಿನ ನಡೆಯುವ ಈ ಉತ್ಸವದಲ್ಲಿ ಎಲ್ಲವೂ ನಮ್ಮ ಸಂಸ್ಕೃತಿ ಬಿಂಬಿಸುವಂತಿರುತ್ತದೆ~ ಎಂದು ತಾವು ಆಚರಿಸುವ ಓಣಂ ಹಬ್ಬದ ಬಗ್ಗೆ ವಿವರಿಸಿದರು ಕಾರ್ಯಕ್ರಮದ ಆಯೋಜನಾ ತಂಡದ ಸದಸ್ಯ ಜೇಕಪ್ ಜಾನ್.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.