ADVERTISEMENT

ಓಲಾ ಆಟೊದ ಮಹಿಳಾ ಸಾರಥಿ

ಅಭಿಲಾಷ ಬಿ.ಸಿ.
Published 30 ಮೇ 2018, 19:30 IST
Last Updated 30 ಮೇ 2018, 19:30 IST
ನೂರ್ ಜಹಾನ್‌
ನೂರ್ ಜಹಾನ್‌   

ನನ್ನ ಹೆಸರು ನೂರ್‌ ಜಹಾನ್. ಒಬ್ಬರ ದುಡಿಮೆಯಿಂದ ಕುಟುಂಬ ನಿರ್ವಹಣೆ ಕಷ್ಟವಾದಾಗ ನಾನು ಯಾವುದಾದರೂ ಕೆಲಸಕ್ಕೆ ಸೇರುವುದು ಅನಿವಾರ್ಯವಾಯಿತು. ಆಗ ಆದಾಯದ ಮೂಲ ಮುಖ್ಯವಾಯಿತೇ ಹೊರತು, ಲಿಂಗ, ಧರ್ಮಾಧಾರಿತ ಕಟ್ಟುಪಾಡುಗಳಲ್ಲ. ಮಕ್ಕಳ ಭವಿಷ್ಯ ರೂಪಿಸುವಿಕೆಯ ಸವಾಲು ಎದುರಾದಾಗ ನನ್ನ ನೆರವಿಗೆ ಬಂದಿದ್ದು ಚಾಲನಾ ಕೌಶಲ.

ಚಿಕ್ಕಂದಿನಿಂದಲೇ ದ್ವಿಚಕ್ರವಾಹನದಿಂದ ಹಿಡಿದು ಎಲ್ಲ ವಾಹನಗಳನ್ನು ಓಡಿಸುತ್ತಿದ್ದೆ. ನನ್ನ ಅತ್ತೆ ಮಗನೇ ನನ್ನ ಪತಿ. ಹಾಗಾಗಿಯೇ ಬಹುತೇಕ ಎಲ್ಲ ವಾಹನಗಳ ಚಾಲನೆಯನ್ನು ಅವರೇ ಕಲಿಸಿದರು. ಅವರೂ ಖಾಸಗಿ ಕಂಪನಿಯಲ್ಲಿ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮೊದಲು ನಾನೂ ಟ್ರಾವೆಲ್‌ ಏಜೆನ್ಸಿಯೊಂದರಲ್ಲಿ ಚಾಲಕಿಯಾಗಿದ್ದೆ. 2 ವರ್ಷಗಳ ಹಿಂದೆ ಸ್ವಂತ ಆಟೊ ಖರೀದಿಸಿ ಓಲಾ ಕಂಪನಿಯೊಂದಿಗೆ ಸೇರಿಕೊಂಡೆ. ಸದ್ಯ ಓಲಾ ಆಟೊದ ಏಕೈಕ ಚಾಲಕಿ ಎನ್ನುವ ಹೆಮ್ಮೆ ನನ್ನದು. ಓಲಾ ಕಂಪನಿಯಲ್ಲಿಯೂ ನನಗೆ ವಿಶೇಷ ಮನ್ನಣೆ ನೀಡುತ್ತಾರೆ. ಓಲಾ ಕಚೇರಿಗಳಲ್ಲಿ ವಿಶೇಷ ಆದರಾತಿಥ್ಯ ಸದಾ ನನ್ನ ಪಾಲಿಗಿದೆ.

ADVERTISEMENT

ಬೆಳಿಗ್ಗೆ 6 ಗಂಟೆಗೆ ನನ್ನ ಉದ್ಯೋಗ ಆರಂಭವಾದರೆ, ಮತ್ತೆ ಮನೆ ತಲುಪುವುದು ರಾತ್ರಿ 10ಕ್ಕೆ. ಪತಿ ಮತ್ತು ಹಿರಿಯ ಮಗಳು ಕುಟುಂಬದ ನಿರ್ವಹಣೆಯಲ್ಲಿ ನನಗೆ ಸಹಕಾರಿಯಾಗಿದ್ದಾರೆ. ಪತಿ ಬೆಳಿಗ್ಗೆ 10ಕ್ಕೆ ಕೆಲಸಕ್ಕೆ ಹೋಗುತ್ತಾರೆ. ಅದುವರೆಗೂ ನನ್ನ ನಾಲ್ಕು ಮಕ್ಕಳ ಜವಾಬ್ದಾರಿಯನ್ನು ಅವರೇ ನಿರ್ವಹಿಸುತ್ತಾರೆ. ಮಕ್ಕಳನ್ನು ತಯಾರು ಮಾಡಿ ಶಾಲೆಗೆ ಬಿಟ್ಟು ಅವರ ಕೆಲಸಕ್ಕೆ ತೆರಳುತ್ತಾರೆ. ಹಿರಿಯ ಮಗಳು ಸರ್ಕಾರಿ ಶಾಲೆಯಲ್ಲಿ ಪಿಯುಸಿ ಓದುತ್ತಿದ್ದಾಳೆ. ಮಧ್ಯಾಹ್ನ 12 ಗಂಟೆಗೆ ಮನೆಗೆ ಬರುವ ಅವಳು ಅಡುಗೆ ಹಾಗೂ ಕಿರಿಯ ಮಕ್ಕಳ ಜವಾಬ್ದಾರಿ ನಿಭಾಯಿಸುತ್ತಾಳೆ. ಪತಿ ಹಾಗೂ ಮಗಳ ಸಹಾಯದಿಂದಲೇ ನಾನು ಮನೆಯ ಕುರಿತು ಯೋಚಿಸದೇ ಸಂಪೂರ್ಣವಾಗಿ ನನ್ನ ಉದ್ಯೋಗದಲ್ಲಿ ಮಗ್ನವಾಗಲು ಸಾಧ್ಯವಾಗುತ್ತಿದೆ.

ಬೆಳಿಗ್ಗೆ ಮತ್ತು ಮಧ್ಯಾಹ್ನ ಹೋಟೆಲ್‌ಗಳಲ್ಲಿಯೇ ಊಟ. ರಾತ್ರಿ ಮಾತ್ರ ಕುಟುಂಬದೊಂದಿಗೆ ಕುಳಿತು ಊಟಮಾಡುತ್ತೇನೆ. ದಿನಕ್ಕೆ ಕನಿಷ್ಟ ₹ 1,000 ಲಾಭ ದೊರೆಯುತ್ತದೆ. ವೃತ್ತಿಯಲ್ಲಿ ಏಕತಾನತೆ ಕಾಡುವುದಿಲ್ಲ. ಪ್ರತಿ ದಿನವೂ ನನ್ನ ಪಾಲಿಗೆ ಹೊಸದಿನ. ಏಕೆಂದರೆ ನಿತ್ಯ ಬೇರೆ ಬೇರೆ ವ್ಯಕ್ತಿಗಳವರೊಂದಿಗೆ ವ್ಯವಹಾರ ಸಾಧ್ಯ.

ಸಾರ್ವಜನಿಕರೊಂದಿಗಿನ ವ್ಯವಹಾರವಾದ ಕಾರಣ ವಿವಿಧ ವ್ಯಕ್ತಿಗಳು ಎದುರಾಗುತ್ತಾರೆ. ಈ ಬಗೆಯ ಉದ್ಯೋಗ ಎಂದರೆ ಎಲ್ಲವೂ ನಕಾರಾತ್ಮವಾಗಿಯೇ ಇರುತ್ತದೆ ಎಂದು ಅನೇಕರು ಭಾವಿಸುತ್ತಾರೆ. ಆದರೆ ಅನೇಕ ಒಳ್ಳೆಯ ಅನುಭವಗಳ ಬುತ್ತಿಯನ್ನು ಕಟ್ಟಿಕೊಡುತ್ತದೆ. ನಮ್ಮಲ್ಲಿನ ವಿವಿಧತೆ, ಸೌಹಾರ್ದವೂ ಅನುಭವಕ್ಕೆ ಬರುತ್ತದೆ. ಮಹಿಳಾ ಉದ್ಯೋಗಿಗಳನ್ನು ಪ್ರೋತ್ಸಾಹಿಸುವ ಅನೇಕರು ನಮ್ಮ ನಡುವೆ ಇದ್ದಾರೆ. ಎಷ್ಟೊ ಜನರು ಮಹಿಳಾ ಉದ್ಯೋಗಿ ಅಂತ ಟಿಪ್ಸ್‌ ನೀಡುತ್ತಾರೆ. ನಿಮ್ಮಂತೆ ಅನೇಕರು ಈ ಉದ್ಯೋಗಗಳಿಗೆ ಬರಬೇಕು ಎಂದು ಪ್ರೋತ್ಸಾಹದ ನುಡಿಗಳನ್ನಾಡುತ್ತಾರೆ. ಕೆಲವರು ಮನೆಗೆ ಕರೆದು ಊಟ, ತಿಂಡಿ ಕೊಟ್ಟಿದ್ದಾರೆ. ಇನ್ನೂ ಕೆಲವರು ಹಣ್ಣನ್ನು ಕೊಟ್ಟು ಹಾರೈಕೆಯ ಮಾತುಗಳನ್ನಾಡುತ್ತಾರೆ ಆಗೆಲ್ಲಾ ಬಹಳ ಖುಷಿಯಾಗುತ್ತದೆ.

ಕೆಲ ಗರ್ಭಿಣಿಯರು, ರೋಗಿಗಳ ಸೇವೆಗೂ ಈ ವೃತ್ತಿ ಪರೋಕ್ಷವಾಗಿ ಅವಕಾಶ ನೀಡಿದೆ. ಎಷ್ಟೋ ರೋಗಿಗಳು ಆಟೊದಿಂದ ಇಳಿಯದೆ ನನ್ನ ಪತಿ ಅಥವಾ ಆಪ್ತರು ಬರುವವರೆಗೂ ನೀವೇ ಇರಬೇಕು ಎಂದು ದುಂಬಾಲು ಬೀಳುತ್ತಾರೆ. ಆಗ ಇಲ್ಲ ಎನ್ನಲಾಗದೇ ನಾಲ್ಕಾರು ಮಹಿಳೆಯರಿಗೆ ನಾನೇ ಅಕ್ಕನೆಂದು ಆಸ್ಪತ್ರೆಗಳಲ್ಲಿ ಸುಳ್ಳು ಹೇಳಿ ಸಹಿ ಮಾಡಿ ಹೆರಿಗೆ ಮಾಡಿಸಿ ಅವರ ಆಪ್ತರು ಬರುವವರೆಗೂ ಇದ್ದು ಬಂದಿದ್ದೇನೆ. ಇಂತಹ ಕೆಲವು ಸಮಾಧಾನಗಳು ಈ ವೃತ್ತಿಯ ಬೋನಸ್‌ನಂತೆ ಭಾಸವಾಗುತ್ತವೆ.

ಒಳ್ಳೆಯದು ಇದ್ದಲ್ಲಿ ಸಹಜವಾಗಿಯೇ ಕೆಟ್ಟದ್ದು ಇರುತ್ತದೆ. ಕೆಲವರು ಆಶ್ಚರ್ಯಭರಿತರಾಗಿ ನೋಡುತ್ತಾರೆ ‘ಓಲಾ ಆಟೋದಲ್ಲಿ ಲೇಡಿನಾ?’ ಎನ್ನುವ ಕುಹಕದ ಮಾತಾಡುತ್ತಾರೆ. ‘ನೀವೂ ಚಾಲನೆ ಮಾಡಿದರೆ ನಾವೇನು ಬಳೆ ತೊಡಬೇಕಾ’ ಎಂದು ರೇಗಿಸುವವರೂ ಇದ್ದಾರೆ. ಆಗೆಲ್ಲಾ ‘ನಾನು ನಾವು ದುಡಿದರೆ ನಿಮಗೂ ಸಹಾಯವಾಗುತ್ತಲ್ಲ’ ಎಂದು ಆ ಕ್ಷಣಕ್ಕೆ ಸಮಜಾಯಿಸಿ ಹೇಳುತ್ತೇನೆ. ನನ್ನ ತಪ್ಪಿಲ್ಲದೆ ಅವರೇ ಬೈದರೂ ನಾನೇ ಅಪಾರ ತಾಳ್ಮೆಯಿಂದ ವ್ಯವಹರಿಸುತ್ತೇನೆ.

ಕಂಪನಿಯಾಗಿರುವುದರಿಂದ ಉದ್ಯೋಗ ಭದ್ರತೆ, ಸುರಕ್ಷತೆ ಇದೆ. ನನಗೆ ಹಿಂದಿ ಮತ್ತು ಕನ್ನಡ ಸ್ಪಷ್ಟವಾಗಿ ಮಾತಾಡಲು ಬರುವ ಕಾರಣ ಗ್ರಾಹಕರೊಂದಿಗೆ ಸುಲಭವಾಗಿ ವ್ಯವಹರಿಸುತ್ತೇನೆ. ಬೆಳಿಗ್ಗೆಯಿಂದ ರಾತ್ರಿಯವರೆಗೆ ವಿವಿಧ ಪ್ರದೇಶ, ಜನರೊಂದಿಗೆ ವ್ಯವಹಾರದಲ್ಲಿ ಹೊತ್ತು ಕಳೆದಿದ್ದು ಅರಿವಿಗೆ ಬಾರದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.