ADVERTISEMENT

ಕಟ್ಟುಮಸ್ತು ಕೃಷ್ಣ

ಎಚ್.ಎಸ್.ರೋಹಿಣಿ
Published 7 ಏಪ್ರಿಲ್ 2013, 19:59 IST
Last Updated 7 ಏಪ್ರಿಲ್ 2013, 19:59 IST
ಕಟ್ಟುಮಸ್ತು ಕೃಷ್ಣ
ಕಟ್ಟುಮಸ್ತು ಕೃಷ್ಣ   

`ವ್ಯಾಯಾಮ ಮಾಡದಿದ್ದರೆ ಊಟ ಸೇರಲ್ಲ. ನಿದ್ದೆ ಬರಲ್ಲ' ಎಂದು ತಮ್ಮ ವ್ಯಾಯಾಮದ ಮೇಲಿನ ವ್ಯಾಮೋಹವನ್ನು ವ್ಯಕ್ತಪಡಿಸಿದರು ನಟ ಕೃಷ್ಣ. ಆರು ಅಡಿ, ಎರಡು ಅಂಗುಲ ಎತ್ತರ ಇರುವ ಸದೃಢ ಮೈಕಟ್ಟಿನ ಈ ಹುಡುಗ `ಮದರಂಗಿ'ಯ ನಾಯಕ.

ಐದಾರು ವರ್ಷಗಳಿಂದ ಪ್ರತಿದಿನ ಜಿಮ್‌ಗೆ ಹೋಗಿ ಬೆವರು ಸುರಿಸುವುದು ಊಟ- ನಿದ್ರೆಯಷ್ಟೇ ಅಭ್ಯಾಸವಾಗಿ ಹೋಗಿರುವುದರಿಂದ ಅದನ್ನು ಬಿಟ್ಟರೆ ನೆಮ್ಮದಿ ಇರದು ಎನ್ನುತ್ತಿದ್ದಾರೆ.

ಬೆಳಿಗ್ಗೆ ಒಂದು ಗಂಟೆ- ಸಂಜೆ ಒಂದು ಗಂಟೆ ಜಿಮ್‌ನಲ್ಲಿ ಕಾಲ ಕಳೆಯುವ ಅವರು ಅದೆಲ್ಲವನ್ನೂ ಅಂತರ್ಜಾಲದಲ್ಲಿ ನೋಡಿ ಕಲಿತು ಮಾಡುತ್ತಿದ್ದಾರಂತೆ. ಅವರ ಡಯಟಿಶಿಯನ್ನೂ ಅಂತರ್ಜಾಲವೇ.

`ಇತ್ತೀಚೆಗೆ ಅನ್ನ, ಎಣ್ಣೆಯಲ್ಲಿ ಕರಿದ ಪದಾರ್ಥ ತಿನ್ನುವುದನ್ನು ಬಿಟ್ಟಿರುವೆ. ಮೂರು ಹೊತ್ತೂ ಚಪಾತಿ, ಜ್ಯೂಸ್, ಮೊಟ್ಟೆಯ ಬಿಳಿ ಭಾಗ ಹೆಚ್ಚಾಗಿ ತಿನ್ನುತ್ತಿರುವೆ' ಎಂದು ತಮ್ಮ ಊಟದ ಪಟ್ಟಿ ವಿವರಿಸುವ ಕೃಷ್ಣ, ಇದೆಲ್ಲದರ ನಡುವೆ ಇಷ್ಟದ ಬಿರಿಯಾನಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರಂತೆ.

ಕೃಷ್ಣ ಮೈಸೂರಿನವರು. ಅಲ್ಲಿಯೇ ಪದವಿ ಪಡೆದು ಬೆಂಗಳೂರಿನಲ್ಲಿ ಎಂಬಿಎ ಓದಿದವರು. ನಟನಾಗಬೇಕೆಂದು ಅನಿಸಿದ್ದೇ ಸ್ತೂರಿ ಕಲಾ ಕ್ಷೇತ್ರದಲ್ಲಿ ಅಭಿನಯ, ನೃತ್ಯ, ಆಕ್ಷನ್ ತರಬೇತಿ ಪಡೆದುಕೊಳ್ಳಲು ಆರಂಭಿಸಿದರು. ಚನ್ನಪ್ಪ ಮಾಸ್ಟರ್ ಬಳಿ ಮೂರ‌್ನಾಲ್ಕು ತಿಂಗಳು ಫೈಟಿಂಗ್ ತರಬೇತಿಯನ್ನೂ ಪಡೆದುಕೊಂಡರು. ಅದರಿಂದ ತಮ್ಮ ದೇಹ ಹೇಳಿದಂತೆ ಕೇಳುತ್ತದೆ, ಆಕ್ಷನ್ ಸನ್ನಿವೇಶಗಳನ್ನು ಎದುರಿಸಲು ಸಿದ್ಧವಾಗಿದೆ ಎಂದು ಅವರೇ ವ್ಯಕ್ತಪಡಿಸುವ ಅಭಿಪ್ರಾಯ.

ಕೃಷ್ಣ ಅವರ ತಂದೆ ನಾಗಪ್ಪ ನಿರ್ಮಿಸುತ್ತಿರುವ `ಮದರಂಗಿ' ಚಿತ್ರವನ್ನು ಮಲ್ಲಿಕಾರ್ಜುನ್ ನಿರ್ದೇಶಿಸಿದ್ದಾರೆ. ಸದ್ಯದಲ್ಲೇ ಪ್ರಥಮ ಪ್ರತಿ ಸಿದ್ಧವಾಗಲಿದ್ದು, ಇದೇ ತಿಂಗಳು ಬಿಡುಗಡೆಯಾಗಲಿದೆ. ಜೊತೆಗೆ ಕೃಷ್ಣ, ಪ್ರೀತಂ ಗುಬ್ಬಿ ನಿರ್ದೇಶನದ `ನಮ್ ದುನಿಯಾ ನಮ್ ಸ್ಟೈಲ್' ಚಿತ್ರದಲ್ಲೂ ನಟಿಸುತ್ತಿದ್ದಾರೆ.

`ಮದರಂಗಿ'ಯಂಥ ಪಾತ್ರ ಪ್ರತಿ ಸಿನಿಮಾದಲ್ಲೂ ಸಿಗಲಿ ಎಂಬುದು ಅವರ ಆಶಯ. ಕಾರಣ ಅದರಲ್ಲಿ ಹಾಸ್ಯ, ಸೆಂಟಿಮೆಂಟ್, ಆಕ್ಷನ್, ರೊಮ್ಯಾನ್ಸ್ ಹೀಗೆ ಎಲ್ಲಾ ಭಾವಗಳು ಬೆರೆತಿವೆಯಂತೆ. `ನಮ್ ದುನಿಯಾ ನಮ್ ಸ್ಟೈಲ್' ಚಿತ್ರದಲ್ಲಿ ಸ್ಲಂ ಹುಡುಗನ ಪಾತ್ರ ನಿರ್ವಹಿಸುತ್ತಿರುವ ಅವರಿಗೆ ಅಭಿನಯ ಖುಷಿ ನೀಡುತ್ತಿದೆ. ಆದರೆ `ಜಾಕಿ' ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ದುಡಿದದ್ದನ್ನು ಅವರು ಮರೆತಿಲ್ಲ.

ಅದರಿಂದ ಮುಂದೊಂದು ದಿನ ನಿರ್ದೇಶನದ ಆಖಾಡಕ್ಕೂ ಇಳಿಯುವ ಮನಸ್ಸಿದೆ ಅವರಿಗೆ. `ಜಾಕಿ', `ಹುಡುಗರು', `ದಂಡಂ ದಶಗುಣಂ' ಸಿನಿಮಾಗಳ ನಂತರ `ಕೃಷ್ಣ ರುಕ್ಮಿಣಿ' ಧಾರಾವಾಹಿಯಲ್ಲಿ ಒಂದೂವರೆ ವರ್ಷ ನಟಿಸಿದ್ದು ಅವರ ಅಭಿನಯ ಕೌಶಲವನ್ನು ಸುಧಾರಿಸಿಕೊಳ್ಳಲು ನೆರವಾಯಿತಂತೆ. ಕಮರ್ಷಿಯಲ್ ಸಿನಿಮಾಗಳ ಬಗ್ಗೆ ಒಲವಿರುವ ಅವರಿಗೆ ಮಾಸ್ ಪ್ರೇಕ್ಷಕರಿಗೆ ಹತ್ತಿರವಾಗುವ ಹಂಬಲ.

ಅಂದಹಾಗೆ, ಕೃಷ್ಣ ಅವರ ಮೂಲ ಹೆಸರು ಸುನೀಲ್. “ನನ್ನನ್ನು ಎಲ್ಲಿ ಹೋದರೂ ಜನ ಕೃಷ್ಣ ಎಂದೇ ಕರೆಯುತ್ತಾರೆ. `ಕೃಷ್ಣ ರುಕ್ಮಿಣಿ' ಧಾರಾವಾಹಿಯ ಕೃಷ್ಣನ ಪಾತ್ರ ನನಗೆ ಅಷ್ಟು ಜನಪ್ರಿಯತೆ ಕೊಟ್ಟಿದೆ. ಅದರಿಂದ ಅದೇ ಹೆಸರನ್ನು ಇಟ್ಟುಕೊಂಡೆ. ಅದರಲ್ಲಿ ಸಂಖ್ಯಾಶಾಸ್ತ್ರವೇನೂ ಇಲ್ಲ” ಎಂಬುದು ಅವರು ನೀಡುವ ಸ್ಪಷ್ಟನೆ.

ಕನ್ನಡ ಚಿತ್ರರಂಗದಲ್ಲಿ ಇರುವ ನಾಯಕ ನಟರ ನಡುವಿನ ಸ್ಪರ್ಧೆಯನ್ನು ಎದುರಿಸಲು ಸಿದ್ಧರಿರುವಿರಾ ಎಂದರೆ, `ನಾನು ಯಾರಿಗೂ ಪ್ರತಿಸ್ಪರ್ಧಿಯಲ್ಲ. ಒಳ್ಳೆಯ ಸಿನಿಮಾ ಮಾಡುವುದಷ್ಟೇ ನನ್ನ ಉದ್ದೇಶ. ಕೊಟ್ಟ ಪಾತ್ರಕ್ಕೆ ಸಾಧ್ಯವಾದಷ್ಟೂ ಜೀವ ತುಂಬುವ ಪ್ರಯತ್ನ ಮಾಡುವೆ' ಎಂದು ನಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT