ADVERTISEMENT

ಕಡಿಮೆ ಆಗಲಿದೆಯೇ ಹೊರೆ

ಸುರೇಖಾ ಹೆಗಡೆ
Published 4 ಡಿಸೆಂಬರ್ 2017, 19:30 IST
Last Updated 4 ಡಿಸೆಂಬರ್ 2017, 19:30 IST
ಸಾಂದರ್ಭಿಕ ಚಿತ್ರ, –ಚಿತ್ರ: ಬಿ.ಕೆ ಜನಾರ್ದನ
ಸಾಂದರ್ಭಿಕ ಚಿತ್ರ, –ಚಿತ್ರ: ಬಿ.ಕೆ ಜನಾರ್ದನ   

ಶಾಲೆಯತ್ತ ಹೆಜ್ಜೆ ಇಡುವ ಪುಟಾಣಿ ಮಕ್ಕಳ ಭಾರವಾದ ಹೆಜ್ಜೆಯನ್ನು ನೀವು ಗಮನಿಸಿರಬಹುದು. ಅವರ ಹೆಗಲಿಗೇರಿದ ಮಣ ಭಾರದ ಕೈಚೀಲಗಳನ್ನು ನೋಡಿ ಮನದೊಳಗೇ ನೊಂದುಕೊಂಡಿರಬಹುದು. ಆಡುವ ವಯಸ್ಸಿನ ಚಿಣ್ಣರು ಪೆನ್ನು, ನೋಟ್‌ಬುಕ್‌, ಪುಸ್ತಕಗಳಿಂದ ತುಂಬಿದ ಬ್ಯಾಗ್‌ ತಮ್ಮ ಹೆಗಲಿಂದ ಸರಿದರೆ ಸಾಕು ಎನ್ನುತ್ತಿರುತ್ತಾರೆ.

ನೋಯುವ ಭುಜವನ್ನು ಆಗಾಗ ಒತ್ತಿಕೊಳ್ಳುತ್ತಾ ನಿಧಾನವಾಗಿ ಹೆಜ್ಜೆ ಹಾಕುತ್ತಿರುತ್ತಾರೆ. ಮಕ್ಕಳ ಹೆಗಲಿಗೇರಿದ ಈ ಭಾರ ಇಳಿಸಬೇಕು ಎನ್ನುವ ಚಿಂತನೆ ಹಲವು ವರ್ಷಗಳಿಂದ ಚಾಲ್ತಿಯಲ್ಲಿದೆ. ಇದೀಗ ಈ ಚಿಂತನೆಗೆ ಆದೇಶದ ಸ್ವರೂಪ ಸಿಗುವ ಸಾಧ್ಯತೆಗಳು ದಟ್ಟವಾಗಿವೆ.

ವಾರದಲ್ಲಿ ಒಂದು ದಿನ ಮಕ್ಕಳು ಶಾಲೆಗೆ ಬ್ಯಾಗ್ ಇಲ್ಲದೆ ಹೋಗಬಹುದು ಎನ್ನುವ ಪರಿಕಲ್ಪನೆ ಇದು. ಮುಂದಿನ ಶೈಕ್ಷಣಿಕ ವರ್ಷದಿಂದ ‘ಬ್ಯಾಗ್‌ ರಹಿತ ದಿನ’ ಜಾರಿಯಾಗುವ ಸಾಧ್ಯತೆ ಇದೆ. ಒಂದನೇ ತರಗತಿಯಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಈ ನಿಯಮ ಅನ್ವಯವಾಗಲಿದೆ. ರಾಜ್ಯದ ಎಲ್ಲಾ ಶಾಲೆಗಳು ಒಂದೇ ದಿನವನ್ನು ಬ್ಯಾಗ್‌ ರಹಿತ ದಿನವನ್ನಾಗಿ ಆಚರಿಸಬೇಕು ಎನ್ನುವ ಅಧಿಕಾರಿಗಳ ಚಿಂತನೆಯ ಬಗ್ಗೆ ಶಾಲಾ ಅಂಗಳಗಳಲ್ಲಿ ಚರ್ಚೆ ಗರಿಗೆದರಿದೆ.

ADVERTISEMENT

‘ಇಲಾಖೆ ಇಂಥದ್ದೊಂದು ನಿಯಮ ಜಾರಿ ಮಾಡಿದರೆ ನಾವು ಪಾಲಿಸಲೇಬೇಕು. ಆದರೆ ಅದನ್ನು ಎಷ್ಟು ಸಮರ್ಪಕವಾಗಿ ಜಾರಿ ಮಾಡಲು ಸಾಧ್ಯವಿದೆ ಎಂಬುದೇ ಪ್ರಶ್ನೆ. ಒಂದಿಡೀ ದಿನ ಮಕ್ಕಳಿಗೆ ಕಲಿಸದೆ ಇರಲು ಸಾಧ್ಯವೇ? ದಿನವಿಡೀ ಚಟುವಟಿಕೆಯನ್ನೇ ಮಾಡಿಸಬೇಕೆ? ಎಲ್ಲೆಲ್ಲಿ ಈ ಯೋಜನೆ ಎಷ್ಟರ ಮಟ್ಟಿಗೆ ಸಾಕಾರವಾಗಿದೆ ಎಂಬುದರ ನಿಗಾ ಇಡುವವರು ಯಾರು?, ವಾರಕ್ಕೆ ಒಂದು ದಿನ ಎಂದರೆ ಶೈಕ್ಷಣಿಕ ವರ್ಷಕ್ಕೆ 52 ದಿನ ಪಾಠ ಮಾಡದಿದ್ದರೆ ಪಠ್ಯಕ್ರಮ ಮುಗಿಸುವುದು ಹೇಗೆ? ಸುಮ್ಮನೆ ಹೊಸ ಹೊಸ ಯೋಜನೆಗಳನ್ನು ತರುವುದರ ಬದಲು ಈಗಾಗಲೇ ಇರುವ ನಿಯಮಗಳ ಸಮರ್ಪಕ ಅನುಷ್ಠಾನಕ್ಕೆ ಕ್ರಮವಹಿಸಲಿ’ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಸರ್ಕಾರಿ ಶಿಕ್ಷಕರೊಬ್ಬರು.

ಜಾಲಹಳ್ಳಿಯಲ್ಲಿರುವ ಬಿಇಎಲ್‌ ಪ್ರೈಮರಿ ಶಾಲೆಯ ಪ್ರಾಂಶುಪಾಲೆ ಸಂಗೀತಾ ಅವರ ಅಭಿಪ್ರಾಯ ಬೇರೆ ರೀತಿಯಾಗಿದೆ. ‘ಶಾಲಾ ಮಕ್ಕಳ ಬ್ಯಾಗ್‌ ಭಾರವಾಗಿರುತ್ತದೆ ಎನ್ನುವ ದೂರು ಮೊದಲಿನಿಂದಲೂ ಇತ್ತು. ಈಗಲೂ ಇದೆ. ನಮ್ಮ ಶಾಲೆಗೆ ಬರುವ ಅರ್ಧದಷ್ಟು ಮಕ್ಕಳ ಬ್ಯಾಗ್‌ ಭಾರ ಹೆಚ್ಚಿರುತ್ತದೆ. ಮಕ್ಕಳು ದಿನವೂ ವೇಳಾಪಟ್ಟಿ ನೋಡಿ ಅವಶ್ಯಕತೆ ಇದ್ದ ಪುಸ್ತಕಗಳನ್ನು ಮಾತ್ರ ತರಬೇಕು. ಆದರೆ ಅವರು ಎಲ್ಲಾ ನೋಟ್‌ಬುಕ್‌, ಪುಸ್ತಕಗಳನ್ನು ತರುತ್ತಾರೆ. ಶನಿವಾರವನ್ನು ಬ್ಯಾಗ್‌ ರಹಿತ ದಿನ ಮಾಡಿದರೆ ಒಳ್ಳೆಯದು. ಅಂದು ಅರ್ಧ ದಿನ ಶಾಲೆ ಇರುತ್ತದೆ. ಮಕ್ಕಳಿಗೆ ಬೇರೆ ಬೇರೆ ರೀತಿಯ ಚಟುವಟಿಕೆ ಮಾಡಿಸಬಹುದು. ಆದರೆ ಪೂರ್ಣ ತರಗತಿ ನಡೆಯುವ ದಿನ ಈ ನಿಯಮ ತಂದರೆ ಕಷ್ಟ’ ಎನ್ನುತ್ತಾರೆ ಅವರು.

ಹನುಮಂತನಗರದ ಭಾರತ ಮಾತಾ ವಿದ್ಯಾಮಂದಿರದಲ್ಲಿ ಉಪನ್ಯಾಸಕರಾಗಿರುವ ಪ್ರಸಾದ್‌ ಭಟ್‌ ಹೇಳುವುದು ಹೀಗೆ. ‘ಮಕ್ಕಳು ಬೆಳೆಯುತ್ತಿರುತ್ತಾರೆ. ಬೆಳವಣಿಗೆಯ ಹಂತದಲ್ಲಿರುವ ಪುಟಾಣಿ ಮಕ್ಕಳಿಗೆ ಹೆಚ್ಚು ಭಾರ ಹೊರಿಸುವುದು ಖಂಡಿತ ಸರಿ ಅಲ್ಲ. ಪ್ರಾಥಮಿಕ ಶಾಲೆಯ ಮಕ್ಕಳಿಗೆ ಈ ನಿಯಮ ಸ್ವಾಗತಾರ್ಹ. ಆದರೆ ಪ್ರೌಢಶಾಲಾ ಮಕ್ಕಳಿಗೆ ಪಠ್ಯಕ್ರಮ ಹೆಚ್ಚಿರುತ್ತದೆ. ಎಲ್ಲವೂ ಪಠ್ಯಧಾರಿತವಾಗಿಯೇ ಕಲಿಯುವಂಥದ್ದು. ಹೀಗಾಗಿ ಅವರು ಪುಸ್ತಕಗಳನ್ನು ತರಲೇಬೇಕಾಗುತ್ತದೆ’ ಎಂದರು.

‘ವಾರ ಪೂರ್ತಿ ಪಾಠ, ಹೋಂವರ್ಕ್‌ಗಳಲ್ಲಿ ಮುಳುಗಿ ಹೋಗಿರುತ್ತೇವೆ. ವಾರಕ್ಕೆ ಒಂದು ದಿನ ಬ್ಯಾಗ್‌ ಇಲ್ಲ, ಪಾಠವೂ ಇಲ್ಲ ಎಂದರೆ ಒಳ್ಳೆಯದೇ. ಆ ದಿನ ಪೂರ್ತಿ ಮನರಂಜನೆಗೇ ಮೀಸಲಿಡಬೇಕು. ಸಂಗೀತ, ನೃತ್ಯ, ಕರಾಟೆ ಮುಂತಾದ ಪಠ್ಯೇತರ ಚಟುವಟಿಕೆಗಳಿಗೆ ಅಂದಿನ ಸಮಯವನ್ನು ಮೀಸಲಾಗಿಸಬೇಕು’ ಎನ್ನುವುದು ಇದೇ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ಪ್ರತೀಕ್ಷಾ ನಿಲುವು.

‘ನಮಗೆ ಇಬ್ಬರು ಗಂಡುಮಕ್ಕಳು. ದೀಕ್ಷಿತ್‌ ಎರಡನೇ ತರಗತಿ. ಹರ್ಷಿತ್‌ ಯುಕೆಜಿಯಲ್ಲಿ ಓದುತ್ತಿದ್ದಾನೆ. ಅವರಿಬ್ಬರೂ ಚೀಲ ಹೊತ್ತು ಹೋಗುವುದನ್ನು ನೋಡಿದರೇ ಮನಸಿಗೇ ಬೇಸರವಾಗುತ್ತದೆ. ಇನ್ನು ದೊಡ್ಡ ಮಕ್ಕಳು ಹೆಗಲಿಗೇರಿದ ಚೀಲದೊಂದಿಗೆ ನಡೆಯುವುದನ್ನು ನೋಡಿದರೇ ಪಾಪಾ ಎನ್ನಿಸುತ್ತದೆ. ಹೀಗಿರುವಾಗ ಒಂದು ದಿನ ಶಾಲಾ ಚೀಲ ಒಯ್ಯುವುದೇ ಬೇಡ ಎಂದರೆ ಒಳ್ಳೆಯದೇ. ಅದು ಮಕ್ಕಳ ಮನಸಿಗೂ ಖುಷಿ ನೀಡುತ್ತದೆ. ಆ ದಿನ ಮಕ್ಕಳಿಗೆ ಪಠ್ಯೇತರ ಚಟುವಟಿಕೆ ಇರಲಿ. ಇದು ಮಕ್ಕಳ ಮನೋವಿಕಾಸಕ್ಕೂ ಸಹಾಯ, ಖುಷಿಖುಷಿಯಾಗಿಯೂ ಇರುತ್ತಾರೆ’ ಎನ್ನುತ್ತಾರೆ ಶ್ರೀರಾಮಪುರದ ಶರಣ್‌.

ಪ್ರಸ್ತಾವಿತ ಯೋಜನೆಯು ಮಕ್ಕಳು ಹಾಗೂ ಪೋಷಕರಿಗೆ ಹೆಗಲ ಭಾರ ಇಳಿಸುವ ಖುಷಿಯನ್ನೇನೋ ತಂದಿದೆ. ಆದರೆ ಕೆಲ ಶಿಕ್ಷಕರು ಮಾತ್ರ ಮಾತುಕೇಳದ ಮಕ್ಕಳನ್ನು ಒಂದಿಡೀ ದಿನ ಸಂಭಾಳಿಸುವುದು ಹೇಗೆ, ಏನೆಲ್ಲಾ ಚಟುವಟಿಕೆ ಮಾಡಿಸಿ ಸಮಯ ದೂಡಬಹುದು ಎನ್ನುವುದರ ಚಿಂತೆಗೆ ಬಿದ್ದಿದ್ದಾರೆ.

‘ವಾರದಲ್ಲಿ ಒಂದು ದಿನ ಮಕ್ಕಳು ಬ್ಯಾಗ್‌ ಇಲ್ಲದೆ ಶಾಲೆಗೆ ಬರಬೇಕು ಎಂಬ ನಿಯಮ ಜಾರಿಯ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿರಬಹುದು. ಹಿರಿಯ ಅಧಿಕಾರಿಗಳು ಈ ಕುರಿತು ನಮಗೆ ಯಾವುದೇ ಮಾಹಿತಿ ನೀಡಿಲ್ಲ’ ಎಂದು ಶಿಕ್ಷಣ ಇಲಾಖೆಯ ಹೆಸರು ಹೇಳಲು ಇಚ್ಛಿಸದ ಜಿಲ್ಲಾಮಟ್ಟದ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು. ಶಿಕ್ಷಣ ಇಲಾಖೆ ಕಾರ್ಯದರ್ಶಿಯನ್ನು ಸಂಪರ್ಕಿಸಲು ಮಾಡಿದ ಯತ್ನ ಫಲ ನೀಡಲಿಲ್ಲ.

ಯಶಸ್ವಿಯಾಗಿದೆ ಬ್ಯಾಗ್‌ ರಹಿತ ದಿನ
ಶಾಲೆಗೆ ಬರುವ ಮಕ್ಕಳ ಬ್ಯಾಗ್‌ಭಾರವನ್ನು ಒಂದು ದಿನದ ಮಟ್ಟಿಗಾದರೂ ಕಡಿಮೆ ಮಾಡುವ ಉದ್ದೇಶದಿಂದ ಕೆಲ ಶಾಲೆಗಳಲ್ಲಿ ಬ್ಯಾಗ್‌ರಹಿತ ದಿನವನ್ನು ಈಗಾಗಲೇ ಚಾಲ್ತಿಗೆ ತಂದಿದ್ದಾರೆ. ಗದಗ ತಾಲ್ಲೂಕಿನ ನೀರಲಗಿ ಸರ್ಕಾರಿ ಶಾಲೆ ಮತ್ತು ಮೈಸೂರು ನಗರದ ವಿಜಯ ವಿಠಲ ಶಾಲೆಯಲ್ಲಿ ಈ ಪರಿಕಲ್ಪನೆ ಯಶಸ್ವಿಯಾಗಿದೆ. ನಗರದ ಬನಶಂಕರಿಯಲ್ಲಿರುವ ಲಿಟಲ್‌ ಫ್ಲವರ್‌ ಪಬ್ಲಿಕ್‌ ಶಾಲೆಯಲ್ಲಿ 2012ರಿಂದ ಪ್ರತಿ ಬುಧವಾರ ‘ಬ್ಯಾಗ್‌ ರಹಿತ ದಿನ’ ಇದೆ. ಶಾಲೆಯ ಪ್ರಾಂಶುಪಾಲೆ ಡಾ.ಬಿ.ಗಾಯತ್ರಿ ದೇವಿ ಅವರ ಕಲ್ಪನೆಯ ಕೂಸು ಇದು.

‘ಎಳೆ ವಯಸ್ಸಿನ ಮಕ್ಕಳು ಭಾರವಾದ ಬ್ಯಾಗ್‌ ಹೊರುವುದು ಸರಿಯಲ್ಲ. ಅವರ ಬೆನ್ನುಮೂಳೆ ಗಟ್ಟಿಯಾಗಿರಬೇಕು. ಇಲ್ಲವಾದರೆ ಅವರು ಜೀವನ ಪರ್ಯಂತ ಕಷ್ಟಪಡುತ್ತಾರೆ. ಈ ನಿಟ್ಟಿನಲ್ಲಿ ಏನಾದರೂ ಮಾಡಬೇಕು ಎಂದುಕೊಂಡಾಗ ಮನಸ್ಸಿಗೆ ಬಂದಿದ್ದು ಬ್ಯಾಗ್‌ ರಹಿತ ದಿನ. ಹೀಗಾಗಿ ಪ್ರತಿ ಬುಧವಾರ ಮಕ್ಕಳು ಶಾಲೆಗೆ ಬ್ಯಾಗ್‌ ತರುವಂತಿಲ್ಲ ಎಂಬ ನಿಯಮ ಮಾಡಿದ್ದೇವೆ. ಆ ದಿನ ಗಣಿತಕ್ಕೆ ಸಂಬಂಧಿಸಿದ ಚಟುವಟಿಕೆ, ವ್ಯಾಕರಣಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಮಾಡಿಸುತ್ತೇವೆ. ಬ್ಯಾಗ್‌ ಬೇಡ ಎಂದರೆ ಮಕ್ಕಳಿಗೆ ಪಾಠವೇ ಇಲ್ಲ ಎಂದು ಅನೇಕರು ಅಂದುಕೊಳ್ಳುತ್ತಾರೆ.

ಪಠ್ಯಕ್ರಮದ ವಿಷಯಗಳನ್ನು ಚಟುವಟಿಕೆಗಳ ಮೂಲಕವೂ ಕಲಿಸಬಹುದು. 2012ರಿಂದ ನಮ್ಮ ವೇಳಾಪಟ್ಟಿಯಲ್ಲಿಯೇ ಬದಲಾವಣೆ ಮಾಡಿಕೊಂಡಿದ್ದೇವೆ. ಪೋಷಕರು ಹಾಗೂ ಮಕ್ಕಳು ನಮ್ಮ ನಿರ್ಧಾರವನ್ನು ಒಪ್ಪಿಕೊಂಡಿದ್ದಾರೆ. ಶಿಕ್ಷಣ ಇಲಾಖೆ ಇಂಥ ಯೋಜನೆಯನ್ನು ಎಲ್ಲಾ ಶಾಲೆಗಳಿಗೆ ಅನ್ವಯಿಸಬೇಕು ಎಂಬ ಚಿಂತನೆಯಲ್ಲಿರುವುದು ಸಂತಸದ ಸಂಗತಿ. ಇದರಿಂದ ಮಕ್ಕಳಿಗೆ ಒಳಿತಾಗಲಿದೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.