ADVERTISEMENT

ಕಲಾವಿಶೇಷ

​ಪ್ರಜಾವಾಣಿ ವಾರ್ತೆ
Published 13 ಜೂನ್ 2011, 19:30 IST
Last Updated 13 ಜೂನ್ 2011, 19:30 IST
ಕಲಾವಿಶೇಷ
ಕಲಾವಿಶೇಷ   

ಆತ ನೋಡಬಲ್ಲ. ಆದರೆ, ನೋಟದಲ್ಲಿ ಸ್ಪಷ್ಟತೆಯಿಲ್ಲ. ಕಿವಿ ಕೇಳಿಸುವುದಿಲ್ಲ. ಆದರೂ ಅಸ್ಪಷ್ಟವಾಗಿ ಮಾತಾಡಬಲ್ಲರು.  ಇಂಥ ಗಂಭೀರ ನ್ಯೂನತೆಗಳಿದ್ದರೂ 54 ವರ್ಷದ ಕಲಾವಿದ ಮುತ್ತುಕೃಷ್ಣನ್ ರಾಮಲಿಂಗಂ ತಮ್ಮ ಅಭಿವ್ಯಕ್ತಿಯನ್ನು ಕಲೆಯಲ್ಲಿ ಸಮರ್ಥವಾಗಿ ಚಿತ್ರಿಸಬಲ್ಲರು.

ದಿ ಅಸೋಸಿಯೇಷನ್ ಆಫ್ ಬ್ರಿಟಿಷ್ ಸ್ಕಾಲರ್ಸ್‌ ಮತ್ತು ಬ್ರಿಟಿಷ್ ಕೌನ್ಸಿಲ್ ಜತೆಗೂಡಿ ಇವರ ಅಪರೂಪದ 24 ಚಿತ್ರಕಲಾಕೃತಿಗಳನ್ನು ಮಂಗಳವಾರ ಚಿತ್ರಕಲಾ ಪರಿಷತ್‌ನಲ್ಲಿ ಪ್ರದರ್ಶಿಸುತ್ತಿವೆ. ಇವು ಮಾರಾಟಕ್ಕೆ ಸಹ ಲಭ್ಯ.

ರಾಮಲಿಂಗಂ ಅವರ ಸೃಜನಶೀಲತೆಗೆ ಭಾರತ, ಬ್ರಿಟನ್, ಅಮೆರಿಕ, ಸ್ಪೇನ್, ಫ್ರಾನ್ಸ್, ಬ್ರೆಜಿಲ್ ಮತ್ತು ಜಪಾನ್ ಸರ್ಕಾರಗಳಿಂದ ಅನೇಕ ಪ್ರಶಸ್ತಿ, ಪುರಸ್ಕಾರಗಳು ಲಭಿಸಿವೆ. ಪ್ರಪಂಚದ ವಿವಿಧೆಡೆ ತಮ್ಮ ಏಕವ್ಯಕ್ತಿ ಮತ್ತು ಸಮೂಹ ಪ್ರದರ್ಶನ ಏರ್ಪಡಿಸಿ ಕಲಾ ರಸಿಕರ ಮನಸೂರೆಗೊಂಡ ಹೆಗ್ಗಳಿಕೆ ಅವರದು.

`ನ್ಯೂನತೆಗಳು ನನ್ನ ಸಾಧನೆಗೆ ಎಂದು ಅಡ್ಡಿಮಾಡಿಲ್ಲ. ನನ್ನ ಕಲಾಕೃತಿಗಳ ಬಗ್ಗೆ ಕೇಳಿ, ನನ್ನ ನ್ಯೂನತೆಗಳ ಬಗ್ಗೆ ಬೇಡ~ ಎಂದು ಆತ್ಮವಿಶ್ವಾಸದಿಂದ ನುಡಿಯುತ್ತಾರೆ `ಎ ಚಾರ್ಲ್ ವಾಲೇಸ್~ ಶಿಷ್ಯವೇತನ ವಿಜೇತ ರಾಮಲಿಂಗಂ.

`ನಿಮ್ಮ ಕಲಾಕೃತಿಗಳೆಲ್ಲದರ ವಸ್ತು ವಿಷಯ ಹೆಣ್ಣು ಯಾಕೆ~ ಎಂದು ಕೇಳಿದರೆ ಅವರು ಬಹಳ ಕಾವ್ಯಾತ್ಮಕವಾಗಿ ಉತ್ತರ ನೀಡುತ್ತಾರೆ. `ಹೆಣ್ಣು ಹೂವಿದ್ದಂತೆ. ಅವಳ ಭಾವನೆಗಳು ಆಕೆಯ ಕೋಮಲ ತ್ವಚೆಯಂತೆ ನವಿರು. ಹೂ ನೋಡಿದಾಗ ಪ್ರತಿಯೊಬ್ಬರ ಮನಸ್ಸು ಉಲ್ಲಸಿತಗೊಳ್ಳುತ್ತದೆ.
 
ಗಂಡಿಗಿಂತ ಹೆಣ್ಣಿನ ಮನೋಲಹರಿ ಕಲಾವಿದನ ವಸ್ತುವಿಷಯಕ್ಕೆ ಪ್ರೇರಣೆ. ಹೆಣ್ಣು ಧರಿಸುವ ವಸ್ತ್ರಗಳು ಆಕೆಯ ಸಂಪ್ರದಾಯಕ್ಕೆ ತೀರಾ ಹತ್ತಿರವಿರುತ್ತದೆ. ಹೀಗಾಗಿ ನಮ್ಮ ಭಾರತೀಯ ಸಂಸ್ಕೃತಿಯನ್ನು ಪಾಶ್ಚಾತ್ಯರಲ್ಲಿ ಪ್ರಚುರಪಡಿಸಲು ಹೆಣ್ಣನ್ನು ಆಯ್ಕೆ ಮಾಡಿಕೊಳ್ಳುತ್ತೇನೆ~ ಎನ್ನುತ್ತಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.