ADVERTISEMENT

ಕಲಾ ಕಿರಣ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2011, 19:30 IST
Last Updated 21 ಅಕ್ಟೋಬರ್ 2011, 19:30 IST

ಖ್ಯಾತ ಕಲಾವಿದರಾದ ಮಹಾಲಿಂಗ ಹೊಸಕೋಟೆ, ಮಹೇಶ್ ರಾವಲ್, ಎನ್.ಆರ್.ನಾಯ್ಕರ್ ಮತ್ತು ಅಜಿತ್ ಬಿ.ಹುಲಮನಿ ಅವರ ಕುಂಚದಲ್ಲಿ ಮೂಡಿಬಂದಿರುವ ಅಪರೂಪದ ಕಲಾಕೃತಿಗಳ ರೇಸ್ (ಕಿರಣ) ಪ್ರದರ್ಶನ ನಡೆಯುತ್ತಿದೆ. 

ಕಲಾವಿದ ಮಹಾಲಿಂಗ ಅವರ ಕಲಾಕೃತಿಯಲ್ಲಿ ಸಾಂಪ್ರದಾಯಿಕ ಕಲೆಗಳು ದೇಸಿ ಸೊಗಡಿನೊಂದಿಗೆ ಮೈದಳೆದಿವೆ. ಶಹನಾಯಿ ಹಾಗೂ ಡೊಳ್ಳನ್ನು ಭಾವಪರವಶರಾಗಿ ನುಡಿಸುತ್ತಿರುವ ಕಲಾವಿದರ ಭಾವ ಇವರ ಕಲಾಕೃತಿಯಲ್ಲಿ ಸುಂದರವಾಗಿ ಮೂಡಿಬಂದಿದೆ.

ಮಹೇಶ್ ರಾವಲ್ ಅವರ ಕಲಾಕೃತಿಗಳು ಓಕುಳಿ ಆಟವನ್ನು ನೆನಪಿಸುವಂತಿವೆ. ಇವರ ಅನೇಕ ಚಿತ್ರಗಳು ಗಾಢಬಣ್ಣದಲ್ಲಿ ರೂಪುಗೊಂಡಿವೆ. ಭಾವಪರವಶನಾಗಿ ಕೊಳಲು ನುಡಿಸುತ್ತಿರುವ ಕೃಷ್ಣನ ತನ್ಮಯತೆ ಗಾಢ ಬಣ್ಣಗಳ ಸಮ್ಮಿಶ್ರಣದಲ್ಲಿ ಸೊಗಸಾಗಿ ಮೈದಳೆದಿದೆ.

ಎನ್.ಆರ್.ನಾಯ್ಕರ್ ಅವರು ತಮ್ಮ ಕಲೆಯಲ್ಲಿ ಜನಪದ ಹೆಣ್ಣುಮಗಳನ್ನು ಕಟ್ಟಿಕೊಟ್ಟಿದ್ದಾರೆ. ಅವರ ವೇಷ ಭೂಷಣ, ವ್ಯಕ್ತಿತ್ವದ ಬಿಂಬ, ನಿರಾಭರಣೆಯಾಗಿ ಕಂಗೊಳಿಸುವ ಸಹಜ ಚೆಲುವು ಇವೆಲ್ಲ ಸುಂದರವಾಗಿ ಚಿತ್ರಣಗೊಂಡಿದೆ.

ಅಜಿತ್ ಬಿ ಹುಲಮನಿ ಅವರ ಕಲಾಕೃತಿಗಳು ಲ್ಯಾಂಡ್‌ಸ್ಕೇಪ್‌ಗೆ ಸಂಬಂಧಿಸಿದವು. ನಿಸರ್ಗ ಚೆಲುವು ಇವರ ಕಲಾಕೃತಿಯಲ್ಲಿ ನೋಡುಗರಿಗೆ ಆಪ್ತವೆನಿಸುತ್ತವೆ.

ಸ್ಥಳ: ಚಿತ್ರಕಲಾ ಪರಿಷತ್, ಕುಮಾರಕೃಪಾ ರಸ್ತೆ. ಪ್ರದರ್ಶನ ಭಾನುವಾರ ಮುಕ್ತಾಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.