ADVERTISEMENT

ಕಾಯಿರಾಶಿಯ ಮಧ್ಯೆ ಹಗಲುಕನಸು

ಕೆ.ಎಸ್‌.ರಾಜರಾಮ್‌
Published 17 ಸೆಪ್ಟೆಂಬರ್ 2017, 19:30 IST
Last Updated 17 ಸೆಪ್ಟೆಂಬರ್ 2017, 19:30 IST
ಕಾಯಿರಾಶಿಯ ಮಧ್ಯೆ ಹಗಲುಕನಸು
ಕಾಯಿರಾಶಿಯ ಮಧ್ಯೆ ಹಗಲುಕನಸು   

ಭಾನುವಾರ ಮುಂಜಾನೆ ಮಡಿವಾಳದ ಮಾರ್ಕೆಟ್ ರಸ್ತೆಬದಿಯಲ್ಲಿ ಕಂಡ ಮುಖ ಇದು. ಜನಜಂಗುಳಿ ಸೇರುವ ಮೊದಲೇ 'ಅಂಗಡಿ'ಗೊಂದು ಜಾಗ ಹೊಂದಿಸಿ, ತೆಂಗಿನಕಾಯಿ ರಾಶಿ ಜೋಡಿಸಿ 'ನೈಟ್ ವಾಚ್‌ಮನ್' ಆಗಿ ಮಕ್ಕಳನ್ನು ಕೂಡಿಸಿ ಹೋಗುವುದು ಇಲ್ಲಿ ಸಹಜ ದೃಶ್ಯ.

ಹಿರಿಯರ ಬರುವಿಕೆಯನ್ನೇ ಎದುರು ನೋಡುತ್ತಿದ್ದ ಈ ಹುಡುಗಿ ಹಾಗೆಯೇ ಹಗಲುಕನಸಿನಲ್ಲಿ ಮೈಮರೆತಿದ್ದಾಳೆ. ಅವಳ ಭಂಗಿಯನ್ನು ಸಹಜವಾಗಿ ಕ್ಯಾಮೆರಾ ಕಣ್ಣಿನಲ್ಲಿ ಸೆರೆಹಿಡಿದವರು ಮೊದಲ ಹಂತದ ನಿವಾಸಿ ವಿಜಯ್ ಕೃಷ್ಣ.

ಖಾಸಗಿ ಸಂಸ್ಥೆಯಲ್ಲಿ ಎಂಜಿನಿಯರ್ ಆಗಿರುವ ಅವರು ಕಳೆದೆರಡು ವರ್ಷಗಳಿಂದ ಕ್ಯಾಂಡಿಡ್,  ಜನಜೀವನ, ಪ್ರಕೃತಿ ಛಾಯಾಗ್ರಹಣದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಚಿತ್ರ ತೆಗೆಯಲು ಅವರು ಬಳಸಿದ್ದು 'ಮೊಟೊ X ಪ್ಲೈ' ಮೊಬೈಲ್.

ADVERTISEMENT

ಹಾದಿಬದಿ ದೃಶ್ಯಗಳನ್ನು ಸಹಜವಾಗಿ ಸೆರೆಹಿಡಿಯಲು ದುಬಾರಿ ಡಿ.ಎಸ್.ಎಲ್.ಆರ್ ಕ್ಯಾಮೆರಾಗಳೇ ಬೇಕು ಎಂದಿಲ್ಲ. ಇಂದಿನ ಸರಳ ಮೊಬೈಲ್ ಕ್ಯಾಮೆರಾಗಳೇ ಸಾಕು.

ಚಿತ್ರ ತೆಗೆಯುವ ಮೊದಲು ಛಾಯಾಗ್ರಾಹಕ ಮೊಬೈಲ್ ಕ್ಯಾಮೆರಾದ ಬಗ್ಗೆ ಸರಿಯಾದ ಮಾಹಿತಿ ಸಂಗ್ರಹಿಸಿರಬೇಕು. ಪೂರ್ವ ಅಭ್ಯಾಸ (ಪ್ರಾಕ್ಟೀಸ್), ಛಾಯಾಗ್ರಹಣ ಮಾಡಬೇಕಾದ ವಸ್ತುವಿನ ಹಿನ್ನೆಲೆ- ಮುನ್ನೆಲೆ, ಬೆಳಕಿನ ಮಹತ್ವ (ಲೈಟಿಂಗ್), ಮುಖ್ಯ ವಸ್ತುವನ್ನು ಚೌಕಟ್ಟಿನಲ್ಲಿ ಕೇಂದ್ರೀಕರಿಸಬೇಕಾದ ಜಾಗದ ಬಗ್ಗೆ ಪೂರ್ವ ಚಿಂತನೆ (ಸಬ್ಜೆಕ್ಟ್ ಎಂಟ್ರಿ ಪಾಯಿಂಟ್), ಅದಕ್ಕೆ ನೋಡುಗನ ಕಣ್ಣುಗಳನ್ನು ಒಯ್ಯುವ ವಿನ್ಯಾಸಗಳ ‘ಎಳೆಗಳು’ (ಲೀಡಿಂಗ್ ಲೈನ್ಸ್), ಮುಖ್ಯವಸ್ತುವಿನ ಮತ್ತು ಇತರ ಪೂರಕ ಭಾಗಗಳ ಭಾವ ಸ್ಪಂದನೆ, ಇವೆಲ್ಲವನ್ನೂ ಒಂದು ಚೌಕಟ್ಟಿನಲ್ಲಿ ಪರಿಣಾಮಕಾರಿಯಾಗಿ ಸಂಯೋಜಿಸಬಹುದಾದ ಸಾಧ್ಯತೆಗಳು. ಭಾವ ನಿರೂಪಣೆಯನ್ನು ಸೆರೆಹಿಡಿಯಬಲ್ಲ 'ಆ ಕ್ಷಣ'ದಲ್ಲಿ ತ್ವರಿತವಾಗಿ ಕ್ಯಾಮೆರಾ ಕ್ಲಿಕ್ಕಿಸುವ ಚಾಕಚಕ್ಯತೆ ಅಗತ್ಯ.

ವಿಜಯ್ ಕೃಷ್ಣ ಅವರು ಮೇಲಿನ ಅಂಶಗಳನ್ನು ಈ ಚಿತ್ರದಲ್ಲಿ ಸಮರ್ಪಕವಾಗಿ ನಿಭಾಯಿಸಿದ್ದಾರೆ. ಮಂದ ತಿಳಿ ಬೆಳಕಿನಲ್ಲಿ ಮುಖ್ಯವಸ್ತು ಹಾಗೂ ಇತರ ಭಾಗಗಳು ಉತ್ತಮವಾಗಿ ಫೋಕಸ್ ಆಗಿವೆ. ಕ್ಯಾಮೆರಾದ ಆ್ಯಂಗಲ್, ಪರ್ಸ್‌ಪೆಕ್ಟಿವ್‌ಗೆ ವರ್ಟಿಕಲ್ ಫ್ರೇಂ ಹೊಂದಿಕೊಳ್ಳುತ್ತಿದೆ. ಮುನ್ನೆಲೆ ಹಾಗೂ ಹಿನ್ನೆಲೆಯಲ್ಲಿ ಜೋಡಿಸಿಟ್ಟಿರುವ ತೆಂಗಿನಕಾಯಿಗಳ ವಿನ್ಯಾಸ ಕಣ್ಣುಗಳನ್ನು ಆಕೆಯೆಡೆಗೆ ಸೆಳೆಯುವ ಎಳೆಗಳಾಗಿವೆ.

ಹೆಣ್ಣುಮಗಳ ಭಂಗಿ- ಮುಖಭಾವ ಸಣ್ಣ ಕತೆಯೊಂದನ್ನೇ ಹೇಳುವಂತಿದೆ. ಭಾವತೀವ್ರತೆಯ ಕಾರಣಕ್ಕಾಗಿಯೇ ಇದು ಸುಂದರ ಹಾಗೂ ಉತ್ತಮ ಜೀವನ ದೃಶ್ಯವಾಗಿದೆ.

*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.