ಮುಚ್ಚಿಹೋದ ಅನೇಕ ಕೆರೆಗಳ ನೆನಪಿನಲ್ಲಿ ಬೇಸರಪಟ್ಟುಕೊಳ್ಳುವ ಹೊತ್ತಲ್ಲೇ ಇರುವ ಕೆರೆಗಳ ಹೂಳು, ಕಸಕಡ್ಡಿ, ತ್ಯಾಜ್ಯ ನೋಡಿ ಕೊರಗುವ ಪರಿಸ್ಥಿತಿ. ಏ. 14ರ ಶನಿವಾರ ನಗರದ ಜೆನ್‌ಪ್ಯಾಕ್ಟ್ ಲಿ. ಬಿಸಿನೆಸ್ ಪ್ರಾಸೆಸ್ ಮತ್ತು ಟೆಕ್ನಾಲಜಿ ಮ್ಯಾನೇಜ್‌ಮೆಂಟ್‌ನ ಸುಮಾರು 60 ನೌಕರರು ಹೀಗೆ ಸುಮ್ಮನೆ ಕೊರಗುತ್ತಾ ಕೂರಲಿಲ್ಲ, ಒಟ್ಟುಗೂಡಿದರು.
ಸಂಸ್ಥೆಯ ಜಾಗತಿಕ `ಶುಚಿತ್ವ ಅಭಿಯಾನ ವಾರ~ದ ಭಾಗವಾಗಿ ಜೆ.ಪಿ.ನಗರದ 7ನೇ ಹಂತದಲ್ಲಿನ ಪುಟ್ಟೇನಹಳ್ಳಿ ಕೆರೆ ಶುಚಿಗೊಳಿಸಲು ಅವರೆಲ್ಲಾ ಮುಂದಾದರು. ಕಂಪ್ಯೂಟರ್ ಜೊತೆಗೇ ಹೆಚ್ಚು ಒಡನಾಟ ಇಟ್ಟುಕೊಂಡಿದ್ದ ಶನಿವಾರದ ರಜಾದಿನವನ್ನು ಕೆರೆ ಶುಚಿತ್ವದ ಅರ್ಥಪೂರ್ಣ ಕೆಲಸಕ್ಕೆ ಮೀಸಲಿಟ್ಟರು.
ಬೆಳಿಗ್ಗೆ 7.30ರಿಂದ 9.30ರವರೆಗೆ ಕೆರೆಯಲ್ಲಿ ಬೆಳೆದಿದ್ದ ಕಳೆಗಳನ್ನು ಕಿತ್ತರು. ಯುವ ಉದ್ಯೋಗಿಗಳ ಹುಮ್ಮಸ್ಸು ಕಂಡು ಅವರನ್ನು ಇನ್ನಷ್ಟು ಹುರಿದುಂಬಿಸಲು ಸಂಸ್ಥೆಯ ಉಪಾಧ್ಯಕ್ಷ ಅರುಣಬ್ ಮಿತ್ರ ಹಾಗೂ ಜೆನ್‌ಪ್ಯಾಕ್ಟ್ ಎಲ್‌ಎಲ್‌ಸಿ ಉಪಾಧ್ಯಕ್ಷ ಟಾಮ್ ಮ್ಯಾಕ್‌ಗುರೆ ಸೇರಿಕೊಂಡರು. ಪುಟ್ಟೇನಹಳ್ಳಿ ನೆರೆಹೊರೆಯ ಕೆರೆ ಅಭಿವೃದ್ಧಿ ಟ್ರಸ್ಟ್ (ಪಿಎನ್‌ಎಲ್‌ಐಟಿ) ಕೂಡ ಈ ಕೈಂಕರ್ಯಕ್ಕೆ ನೆರವು ನೀಡಿಸದಾಗ ಕೆಲಸ ಇನ್ನಷ್ಟು ಹಗುರವಾಯಿತು.
ಪರಿಸರದ ಕುರಿತು ಕಾಳಜಿ ಮೂಡಿಸಲು ಆಗಾಗ್ಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಜೆನ್‌ಪ್ಯಾಕ್ಟ್ ಇತ್ತೀಚೆಗಷ್ಟೆ `ಒಂದು ಮಿಲಿಯ ಗಿಡಗಳು~ ಅಭಿಯಾನವನ್ನು ಯಶಸ್ವಿಯಾಗಿ ನಡೆಸಿತ್ತು. ಅದರಿಂದ ಪ್ರೇರಣೆ ಪಡೆದೇ `ಶುಚಿತ್ವ ಅಭಿಯಾನ ವಾರ~ವನ್ನು ನಡೆಸಿದ್ದು. ಮುಂದೆ ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶವೂ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.