ADVERTISEMENT

ಕಿರುತೆರೆ ಮೇಕಪ್ ಪ್ರಸಂಗ

ರೋಹಿಣಿ ಮುಂಡಾಜೆ
Published 11 ಡಿಸೆಂಬರ್ 2012, 19:39 IST
Last Updated 11 ಡಿಸೆಂಬರ್ 2012, 19:39 IST

ಸಿನಿಮಾಕ್ಕಿಂತ ಧಾರಾವಾಹಿಯೇ ನಮ್ಮ ಮೊದಲ ಆಯ್ಕೆ ಅಂತಾರೆ ಬಹುತೇಕ ಕಿರುತೆರೆ ಕಲಾವಿದರು.
ಧಾರಾವಾಹಿ ಮನೆ ಮನೆಯ ಕತೆಯನ್ನು ಪ್ರತಿನಿಧಿಸುವ, ಸಮಾಜದೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮ, ಸುಲಭವಾಗಿ ಜನಾನುರಾಗಿಯಾಗಬಹುದು ಎಂಬುದು ಈ ಆಯ್ಕೆಯ ಹಿಂದಿನ ಜಾಣತನ.

ಹಿರಿತೆರೆಯಂತೆಯೇ ಸಮಕಾಲೀನ ಫ್ಯಾಷನ್‌ಗೆ, ಗ್ಲಾಮರ್‌ಗೆ ಕಿರುತೆರೆಯೂ ತೆರೆದುಕೊಳ್ಳಬೇಕಾದ ಅಗತ್ಯವಿದೆ ಎಂಬ ಸಂದೇಶವನ್ನು ಏಕ್ತಾ ಕಪೂರ್ ತಮ್ಮ ಧಾರಾವಾಹಿಗಳ ಮೂಲಕ, ಅವುಗಳ ಪಾತ್ರಗಳ ಮೂಲಕ ರವಾನಿಸಿದರೆನ್ನಬೇಕು.

ಕನ್ನಡದ ಕಿರುತೆರೆ ಉದ್ಯಮಕ್ಕೂ ಅದು ಸರಿಯೆನ್ನಿಸಿದ್ದೇ ನಮ್ಮ ಧಾರಾವಾಹಿಗಳಲ್ಲೂ ನಡುರಾತ್ರಿ ಮಲಗುವ ಕೋಣೆಯಿಂದ ಹೊರಬರುವ ಮನೆಯೊಡತಿಯರು ತುರುಬಿನಲ್ಲಿ ಚಿನ್ನ/ವಜ್ರದ ಬಿಲ್ಲೆ, ಮುಂಜಾನೆ ಮುಡಿದ ಮಲ್ಲಿಗೆ ಹೂವು, ಕೆನ್ನೆ-ತುಟಿಗೆ ಬಳಿದ ರಂಗು ಕಿಂಚಿತ್ತೂ ಮಾಸದಷ್ಟು `ತಾಜಾ' ಆಗಿ, ಫ್ಯಾಷನೆಬಲ್ ಆಗಿ ಕಾಣಿಸಿಕೊಳ್ಳತೊಡಗಿದರು.

ಅಜ್ಜಿ ಪಾತ್ರವೇ ಇರಲಿ, ಮನೆಗೆಲಸದಾಕೆಯ ಪಾತ್ರವೇ ಆಗಿರಲಿ ಢಾಳಾದ ಮೇಕಪ್‌ನಿಂದ ಆಕರ್ಷಕವಾಗಿ ಕಾಣುವುದು ಮಾಮೂಲಿ. ಕಣ್ಣುಗಳು ಕಮಲಗಳು, ತಿದ್ದಿ ತೀಡಿದ ಹುಬ್ಬು, ಕೆನ್ನೆಗೊಂದಿಷ್ಟು ರಂಗು. ಸುಕ್ಕಿಲ್ಲದಂತೆ ನೀಟಾಗಿ ಬಾಚಿಕೊಂಡ (ಬಿಟ್ಟುಕೊಂಡ?) ಕೇಶರಾಶಿ...

ಮೇಕಪ್‌ನ ಈ ಟ್ರೆಂಡ್‌ಗೆ ತಾರೆಯರು ಒಗ್ಗಿಕೊಂಡ ಬಗೆಯೇ ಕುತೂಹಲಕಾರಿ. ಮೇಕಪ್ ಅಂದರೆ ಯಾವುದೋ ಫೇರ್‌ನೆಸ್ ಕ್ರೀಮ್, ಪೌಡರ್, ಬಿಂದಿ ಎಂಬ ಚೌಕಟ್ಟಿನಿಂದಾಚೆ ಬಂದು ದುಬಾರಿ, ವಿಲಾಸಿ ಪ್ರಸಾಧನಗಳನ್ನು ಖರೀದಿಸಿ, ಸ್ವಂತ ಮೇಕಪ್ ಕಿಟ್‌ಅನ್ನೇ ಇಟ್ಟುಕೊಳ್ಳುವಷ್ಟರ ಮಟ್ಟಿಗೆ `ಮಾಡರ್ನ್' ಆಗುವುದೆಂದರೆ! ಆ ಕುರಿತು ಕಿರುತೆರೆಯ ಕೆಲವು ತಾರೆಯರು ಇಲ್ಲಿ ಮಾತನಾಡಿದ್ದಾರೆ...

ವಾಣಿಶ್ರೀ
ಮನೆಯೊಂದು ಮೂರು ಬಾಗಿಲು, ರಾಧಾ, ಕನಕ ಮುಂತಾದ ಹತ್ತಾರು ಧಾರಾವಾಹಿಗಳಲ್ಲಿ  `ಘಟವಾಣಿ' ಪಾತ್ರಗಳ ಮೂಲಕವೇ ಮನೆಮಾತಾಗಿರುವ ವಾಣಿಶ್ರೀ, ಸಹಜ ಸುಂದರಿ. ಅವರ ಸೌಂದರ್ಯಪ್ರಜ್ಞೆ, ಕೆಲಸದ ಬಗೆಗಿನ ಅದಮ್ಯ ಶ್ರದ್ಧೆ, ಭಾವಾಭಿವ್ಯಕ್ತಿಯ ಮೂಲಕ ಪ್ರೇಕ್ಷಕರನ್ನು ಸೆಳೆಯುವ ಪರಿ... ಜತೆಗೆ, ಯಾವ ಧಾರಾವಾಹಿಯಲ್ಲೂ ಮರುಕಳಿಸದ ಉಡುಗೆ ತೊಡುಗೆ, ಮೇಕಪ್... ವಾಣಿಶ್ರೀ ಅವರ ಯಶಸ್ಸಿನ ಗುಟ್ಟುಗಳು.

`ದೇವರು ನನಗೆ ಸೌಂದರ್ಯ ಕೊಟ್ಟಿದ್ದಾನೆ. ಒಳ್ಳೆ ಕಲರ್ ಇದೆ. ಕೂದಲೂ ಚೆನ್ನಾಗಿದೆ. ಹಾಗಾಗಿ ಮೇಕಪ್ ಕೂಡ ಕಷ್ಟ ಅನಿಸುವುದಿಲ್ಲ. ಸೆಟ್‌ನಲ್ಲಿ ಮೇಕಪ್‌ಮನ್ ಇರ‌್ತಾರೆ. ಆರಂಭದಲ್ಲಿ ಅವರಿಂದಲೇ ಮೇಕಪ್ ಮಾಡಿಸಿಕೊಳ್ಳುತ್ತಿದ್ದೆ. ಆಮೇಲೆ ನಾನೇ ಯಾಕೆ ಮಾಡಿಕೊಳ್ಳಬಾರದು ಅಂತ ಪ್ರಯತ್ನಿಸುತ್ತಾ ಹೋದೆ. ಈಗಲೂ ಮನೆಯಲ್ಲಿ ಮೇಕಪ್ ಮಾಡಿಕೊಂಡೇ ಹೋಗ್ತೀನೆ. ಆದರೆ ಸೆಟ್‌ನಲ್ಲಿ ನಿರ್ದೇಶಕರನ್ನು ಕೇಳ್ತೀನಿ. ಅಂದಿನ ಶಾಟ್‌ಗೆ ನನ್ನ ಮೇಕಪ್ ಹೊಂದುತ್ತದೆಯೇ ಎಂದು ವಿಚಾರಿಸಿ ಅಗತ್ಯ ಬದಲಾವಣೆ ಮಾಡ್ಕೋತೀನಿ.

ಈಗ ನಾನು ಎರಡು ಚಾನೆಲ್‌ನ ಧಾರಾವಾಹಿಗೆ ಕೆಲಸ ಮಾಡುತ್ತಿರುವುದರಿಂದ ಬೇಸಿಕ್ ಕೋಟ್‌ನಲ್ಲೂ ವ್ಯತ್ಯಾಸವಿರುವಂತೆ, ಲಿಪ್‌ಸ್ಟಿಕ್ಕೂ ರಿಪೀಟ್ ಆಗದಂತೆ ಎಚ್ಚರವಹಿಸುತ್ತೇನೆ. ಕಾಸ್ಮೆಟಿಕ್ಸ್ ದುಬಾರಿ ಅನ್ನೋದು ನಿಜ. ಆದರೆ ವೀಕ್ಷಕರಿಗೆ ಮನಮುಟ್ಟುವಂತೆ, ಮನಮೆಚ್ಚುವಂತೆ ಪಾತ್ರವನ್ನು ಪ್ರಸ್ತುತಪಡಿಸಿಕೊಳ್ಳಬೇಕಾದರೆ ದುಡ್ಡಿನ ಬಗ್ಗೆ ಯೋಚಿಸುತ್ತಾ ಕೂರುವುದಕ್ಕಾಗುವುದಿಲ್ಲ. ನನ್ನಲ್ಲಿ ಮೇಕಪ್ ಕಿಟ್‌ಗಳಿವೆ.

ನೆಗೆಟಿವ್ ರೋಲ್‌ಗಳು ಮೇಕಪ್ ಪ್ಲಸ್ ಪಾಯಿಂಟ್. ಸ್ಕ್ರೀನ್‌ನಲ್ಲಿ ಚಂದ ಕಾಣಬೇಕಾದರೆ ಮೇಕಪ್ ಜತೆಗೆ ಸೌಂದರ್ಯ ಕಾಪಾಡಿಕೊಳ್ಳುವುದೂ ಮುಖ್ಯ. ಮೇಕಪ್ ಮಾಡಿಕೊಳ್ಳುವಷ್ಟೇ ಶ್ರದ್ಧೆ, ತಾಳ್ಮೆ ಅದನ್ನು ತೆಗೆಯಲೂ ಇರಬೇಕು. ಶೂಟಿಂಗ್ ಇರುವಾಗ ಮಾತ್ರ ನಾನು ಮೇಕಪ್ ಮಾಡೋದು.

ಮನೇಲಿರುವಾಗ ಮಾಯಿಶ್ಚರೈಸರ್, ಹೊರಗೆ ಹೋಗಬೇಕಾದರೆ ಸನ್‌ಸ್ಕ್ರೀನ್ ಲೋಷನ್ ಬಳಸುತ್ತೇನೆ. ವಾರಕ್ಕೊಮ್ಮೆ ಮುಲ್ತಾನಿ ಮಿಟ್ಟಿ ಪ್ಯಾಕ್ ಹಾಕ್ಕೋತೀನಿ. ತಲೆಗೆ ಮೊಸರು ಮತ್ತು ರುಬ್ಬಿದ ಮೆಂತ್ಯ ಹಚ್ಕೋತೀನಿ. ಒಟ್ಟಿನಲ್ಲಿ ನಾವು ಚೆನ್ನಾಗಿ ಕಂಡರೆ ಪಾತ್ರವೂ ಜನರನ್ನು ತಲುಪುತ್ತದೆ ಅಲ್ವಾ? ಅದಕ್ಕೆ ಒಂದಷ್ಟು ಪರಿಶ್ರಮವೂ ಬೇಕು.

ಹೇಮಾ ಚೌಧರಿ

ಚಿತ್ರರಂಗದಲ್ಲಿ ಹೆಮ್ಮಾರಿ ಅತ್ತೆ, ಜಮೀನ್ದಾರ ಕುಟುಂಬದ ಒಡತಿ, ಗಂಡುಬೀರಿ ಹೆಂಡತಿಯಂತಹ ಬಿಡುಬೀಸಾದ ಪಾತ್ರಗಳನ್ನೇ ನಿರ್ವಹಿಸಿ, ನೆಗೆಟಿವ್ ಪಾತ್ರಗಳ ಗೆಟಪ್ಪಿಗೇ ಸೈ ಅಂತನ್ನಿಸಿಕೊಂಡ ಕೃಷ್ಣ ಸುಂದರಿ ಹೇಮಾ ಚೌಧರಿ ಕಿರುತೆರೆ ಪ್ರವೇಶ ಮಾಡಿದ್ದು `ಅಮೃತವರ್ಷಿಣಿ' ಮೂಲಕ.

ADVERTISEMENT

ಮತ್ತದೇ ಜಮೀನ್ದಾರ ಕುಟುಂಬದ ಯಜಮಾನಿ. ತಾನು `ಜೀ' ಅನ್ನದೆ ಹುಲ್ಲುಕಡ್ಡಿಯೂ ಮಿಸುಕಾಡುವಂತಿಲ್ಲ. ಗತ್ತು, ಅಹಂ, ಸಿರಿವಂತಿಕೆ, ಯಜಮಾನಿಕೆ ಇವೆಲ್ಲವನ್ನೂ ಬಾಹ್ಯನೋಟದಲ್ಲೇ ಪ್ರದರ್ಶಿಸುವ ಅನಿವಾರ್ಯತೆ...

`ಅಮೃತವರ್ಷಿಣಿಯಲ್ಲಿ ನನ್ನದು ತಾಯಿಗಿಂತಲೂ ಅತ್ತೆಯಾಗಿ ಗಮನಸೆಳೆಯುವ ಪಾತ್ರ. ಜಮೀನ್ದಾರರ, ಕೂಡುಕುಟುಂಬದ ಯಜಮಾನಿ ಈ ಶಕುಂತಳಾದೇವಿ. ಭರ್ಜರಿ ಸೀರೆ, ಭಾರೀ ಒಡವೆಗಳನ್ನು ಧರಿಸಿಕೊಂಡಿದ್ದರೂ ಮೇಕಪ್ ಇಲ್ಲದೆ ಪಾತ್ರವನ್ನು ಪ್ರಸ್ತುತಪಡಿಸಿಕೊಳ್ಳಲು ಸಾಧ್ಯವೇ ಇಲ್ಲ. ಹಾಗಾಗಿ ನನ್ನ ಮೇಕಪ್ ಕಲೆ ಇಲ್ಲಿ ಪ್ರತಿ ಶಾಟ್‌ನಲ್ಲೂ ಉಪಯೋಗವಾಗುತ್ತಿದೆ. ನಾನು ಬಹಳ ವರ್ಷಗಳಿಂದ ಮೇಕಪ್ ಕಿಟ್ ಇಟ್ಕೊಂಡಿದ್ದೀನಿ. ಚಿತ್ರರಂಗಕ್ಕೆ ಬಂದು ನಾಲ್ಕು ದಶಕ ಕಳೀತು. ಪಾತ್ರಕ್ಕೆ ಹೊಂದುವಂತಹ ಮೇಕಪ್ ಮಾಡಿಕೊಳ್ಳುವುದು ಆಗಲೇ ರೂಢಿಯಾಯಿತು.

ನಿಜ, ಕಾಸ್ಮೆಟಿಕ್ಸ್ ಈಗ ಬಹಳ ದುಬಾರಿ. ಬೇಸಿಗೆಯಲ್ಲಿ ಬಳಸಿದ ಕಾಸ್ಮೆಟಿಕ್ಸ್ ಚಳಿಗಾಲಕ್ಕೆ ಹೊಂದುವುದಿಲ್ಲ. ಹಾಗಾಗಿ ಋತುಗಳನ್ನೂ ಗಮನದಲ್ಲಿಟ್ಟುಕೊಂಡು ಮೇಕಪ್ ಮಾಡಿಕೊಳ್ಳುತ್ತೇನೆ. ಕ್ರೈಲಾನ್ ನನ್ನ ಬ್ರಾಂಡ್. `ಮ್ಯಾಕ್' ನನ್ನ ತ್ವಚೆಗೆ ಆಗುವುದಿಲ್ಲ. ಕ್ರೈಲಾನ್ ಬಹಳ ದುಬಾರಿ.

ವರ್ಷಕ್ಕೊಂದು ಬಾರಿಯಾದರೂ ಅಮೆರಿಕಕ್ಕೆ ಹೋಗ್ತೀನಲ್ಲ ಅಲ್ಲಿಂದಲೇ ತರ‌್ತೀನಿ. ಮತ್ತೆ, ಕಾಸ್ಮೆಟಿಕ್ಸ್‌ಗೆ ದುಡ್ಡು ಸುರಿದರೂ ಅದು ಕನಿಷ್ಠ ಮೂರು ವರ್ಷ ಬಳಕೆಗೆ ಬರುತ್ತೆ ನೋಡಿ. ಹಾಗಾಗಿ ವರ್ಕೌಟ್ ಆಗುತ್ತೆ. ಮೊದಲಿಂದಲೂ ನಾನು ಶೃಂಗಾರಪ್ರಿಯೆ. ಖುಷಿಯಿಂದ ಬಾಳಬೇಕು ಅನ್ನೋ ಪಾಲಿಸಿ ನಂದು.

ಶ್ರೀಮತಿ

ಚಂದನ ವಾಹಿನಿಯಲ್ಲಿ ವಾರ್ತಾ ವಾಚಕಿ, ನಿರೂಪಕಿಯಾಗಿ ಕಿರುತೆರೆಗೆ ಕಾಲಿಟ್ಟ ಶ್ರೀಮತಿ ಎಲ್ಲಾ ಬಗೆಯ ಪಾತ್ರಗಳಲ್ಲೂ ಸೈ ಎನಿಸಿಕೊಂಡವರು. ಅಭಿನಯದ ಜತೆಗೆ ಆಕರ್ಷಕವಾಗಿ ಕಾಣಿಸಿಕೊಳ್ಳುವುದೂ ಧಾರಾವಾಹಿಯ ಗೆಲುವಿಗೆ ಕಾರಣವಾಗುತ್ತದೆ ಎಂಬುದು ಅವರ ಅನುಭವದ ಮಾತು.

`ಕಿರುತೆರೆಯಲ್ಲಿ ಈಗ ಬಹಳ ಮಂದಿ ಸ್ವತಃ ಮೇಕಪ್ ಮಾಡಿಕೊಳ್ಳುವುದನ್ನು ರೂಢಿಸಿಕೊಂಡಿದ್ದಾರೆ. ನಾನು ಆರಂಭದಲ್ಲಿ ಮೇಕಪ್‌ಮನ್ ಮೊರೆ ಹೋಗುತ್ತಿದ್ದೆ. ಸೆಟ್‌ಗೆ ಹೋಗಿ ತಯಾರಾಗುವುದು ಅಂದ್ರೆ ಒಂದಷ್ಟು ಸಮಯ ವ್ಯರ್ಥವಾಗುತ್ತದೆ. ಮನೆಯಲ್ಲೇ ಒಂದು ಗಂಟೆ ಅದಕ್ಕಾಗಿ ವ್ಯಯಿಸಿದರೆ ನಮಗೆ ಬೇಕಾದಂತೆ ಮೇಕಪ್ ಮಾಡಿಕೊಳ್ಳಬಹುದಲ್ವಾ ಅಂತ ಯೋಚಿಸಿ ಮನೆಯಲ್ಲಿ ಟ್ರಯಲ್ ಅಂಡ್ ಎರರ್ ಮಾಡಿದೆ.

ಪ್ರತಿ ಬಾರಿಯೂ ತಿದ್ದುವುದು ಇದ್ದೇ ಇತ್ತು. ಈಗಲೂ ಸೆಟ್‌ಗೆ ಹೋದ ತಕ್ಷಣ ಮೇಕಪ್‌ಮನ್ ಮತ್ತು ನಿರ್ದೇಶಕರನ್ನು ವಿಚಾರಿಸಿ ಮೇಕಪ್‌ಗೆ ಏನಾದರೂ ಟಚ್‌ಅಪ್ ಬೇಕಿದ್ದರೆ ಮಾಡಿಕೊಳ್ಳುತ್ತೇನೆ. ಕ್ರೈಲಾನ್ ಮತ್ತು ಮ್ಯಾಕ್ ನನಗೆ ಹೊಂದುತ್ತದೆ. ನಾನು ಬ್ಯಾಂಕಾಕ್‌ನಿಂದ ಕ್ರೈಲಾನ್ ಉತ್ಪನ್ನಗಳನ್ನು ತರಿಸಿಕೊಳ್ಳುತ್ತೇನೆ. ವಿದೇಶಗಳಿಗೆ ಹೋದಾಗಲೂ ನನ್ನ ಶಾಪಿಂಗ್‌ನಲ್ಲಿ ಕಾಸ್ಮೆಟಿಕ್ಸ್‌ಗೆ ಮೊದಲ ಆದ್ಯತೆ.

ಇದು ಒನ್ ಟೈಮ್ ಇನ್ವೆಸ್ಟ್‌ಮೆಂಟ್‌ನ ಪ್ರಶ್ನೆ. ಖರೀದಿಸುವಾಗ ದುಬಾರಿ ಅನಿಸಿದರೂ ಅದರ ಬಾಳಿಕೆ ಮತ್ತು ಮೇಕಪ್‌ನಲ್ಲಿನ ಸಹಜತೆಯನ್ನು ದೃಷ್ಟಿಯಲ್ಲಿಟ್ಟುಕೊಂಡಾಗ ದುಬಾರಿ ಅನಿಸುವುದಿಲ್ಲ. ಮೇಕಪ್ ಮಾತ್ರವಲ್ಲ, ಉಡುಗೆ ತೊಡುಗೆಗೂ ನಾನು ಪ್ರಾಮುಖ್ಯ ಕೊಡುತ್ತೇನೆ.

ಪಾತ್ರದ ಪೋಷಣೆಗೆ ನಮ್ಮ ಗೆಟಪ್ ತುಂಬಾ ಸಹಕಾರಿ. `ಸಾಧನಾ'ದಲ್ಲಿ ಗೃಹಿಣಿಯ ಪಾತ್ರ. ಅದಕ್ಕೆ ಭಾರೀ ಮೇಕಪ್ ಅಗತ್ಯವಿಲ್ಲ. `ಚಿತ್ರಲೇಖ'ದಲ್ಲಿ ಉಡುಗೆ ತೊಡುಗೆ ಮತ್ತು ಮೇಕಪ್ ಜೋರಾಗಿರಬೇಕು. ಪಾತ್ರಕ್ಕೆ ತಕ್ಕಂತೆ ತಯಾರಾಗುವುದು ಅಗತ್ಯ. ನನಗೆ ಅದು ಇಷ್ಟವಾದ್ದರಿಂದ ಹಣದ ಬಗ್ಗೆ ಯೋಚಿಸುವುದಿಲ್ಲ'.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.