ADVERTISEMENT

ಕುಂಚದಲ್ಲಿ ಚಿನ್ಮಯ ನಿಸರ್ಗ ಲೋಕ

ಕಲಾಪ

​ಪ್ರಜಾವಾಣಿ ವಾರ್ತೆ
Published 9 ಜನವರಿ 2014, 19:30 IST
Last Updated 9 ಜನವರಿ 2014, 19:30 IST
ಕುಂಚದಲ್ಲಿ ಚಿನ್ಮಯ ನಿಸರ್ಗ ಲೋಕ
ಕುಂಚದಲ್ಲಿ ಚಿನ್ಮಯ ನಿಸರ್ಗ ಲೋಕ   

ನಿಸರ್ಗದ ಸೊಬಗೇ ಅಂಥದ್ದು. ಯಾರನ್ನಾದರೂ ತನ್ನ ಮೋಹದ ಬಲೆಗೆ ಬೀಳಿಸುವಂಥ ರಮ್ಯತೆ ಅದರಲ್ಲಿ ಅಡಕವಾಗಿರುತ್ತದೆ. ದಟ್ಟ ಹಸಿರು ಕಾನನ, ಜುಳುಜುಳು ಹರಿಯುವ ಜರಿ, ಧುಮ್ಮಿಕ್ಕುವ ಜಲಪಾತ, ತೊನೆದಾಡುವ ಬೆಳೆಗಳು, ಸ್ವಚ್ಛಂದ ವಿಹರಿಸುವ ಪ್ರಾಣಿ ಪಕ್ಷಿಗಳು... ಇಂತಹ ರಮ್ಯಲೋಕವನ್ನು ಕ್ಯಾನ್ವಾಸ್‌ ಮೇಲೆ ಮೂಡಿಸುವ ಪ್ರಯತ್ನ ಕಲಾವಿದ ಡಾ. ಬಿ.ಆರ್‌. ಚಿನ್ಮಯ ಅವರದ್ದು.

ಶುಕ್ರವಾರ (ಜ. 10)ದಿಂದ ಆರಂಭವಾಗುತ್ತಿರುವ ‘ಎಂಟೈಸಿಂಗ್‌ ನೇಚರ್‌’ ಕಲಾಕೃತಿ ಪ್ರದರ್ಶನದಲ್ಲಿ ಪ್ರಕೃತಿ ಹಾಗೂ ಅದರೊಂದಿಗೆ ಬದುಕು ಸಾಗಿಸುವ ಜನರ ಬದುಕನ್ನು ಹಿಡಿದಿಡುವ ಪ್ರಯತ್ನ ಚಿನ್ಮಯ ಅವರು ಮಾಡಿದ್ದಾರೆ. ಏಕಲವ್ಯನಂತೆ ತನಗೆ ತಾನೇ ಗುರುವಾಗಿ ಕಲೆಯನ್ನು ಕರಗತ ಮಾಡಿಕೊಂಡ ಅವರು ಹುಟ್ಟಿದ್ದು ಚಿತ್ರದುರ್ಗದಲ್ಲಿ. ನಂತರ ಆಧುನಿಕ ಹಾಗೂ ಅತ್ಯಾಧುನಿಕ ಸಮಕಾಲೀನ ಕಲಾಪ್ರಕಾರವನ್ನು ಅಭ್ಯಾಸ ಮಾಡಿರುವ ಇವರ ಕಲಾಕೃತಿಗಳು ಪ್ರಾಚೀನ ವಸ್ತುಗಳನ್ನು ಆಧುನಿಕ ಶೈಲಿಯಲ್ಲಿ ಬಿಂಬಿಸುವ ಪ್ರಯತ್ನ ನಡೆಸಿದ್ದಾರೆ.

ಚಿತ್ರದುರ್ಗದ ಬಂಡೆಗಳ ಬೆಟ್ಟ ಹಾಗೂ ಅದರ ನಡುವಿನ ಕೆರೆಯ ರಮ್ಯ ನೋಟ. ನೀಲಾಕಾಶದಡಿ ಸೂರ್ಯನ ಬೆಳಕಿಗೆ ಮುಖ ಮಾಡಿದ ಸೂರ್ಯಕಾಂತಿಯ ಬಣ್ಣ, ಗೆಳತಿಯರ ನಡುವಿನ ಹರಟೆ, ಬುಟ್ಟಿ ಹೆಣೆಯುವ ವೃದ್ಧೆಯ ಶ್ರದ್ಧೆ, ನೀರಿಗಾಗಿ ಆಧುನಿಕ ಕೊಳವೆಬಾವಿಯ ಆಸರೆ ಇತ್ಯಾದಿ ಚಿನ್ಮಯ ಅವರ ಈ ಬಾರಿಯ ಸಂಗ್ರಹದಲ್ಲಿ ಅರಳಿವೆ. ಬಳಸಿರುವ ಗಾಢ ಬಣ್ಣಗಳಿಂದ ಕಲಾಕೃತಿ ಸೆಳೆಯುತ್ತದೆ.

ಈ ಹಿಂದೆ ಭೋಪಾಲ್‌ ದುರಂತದಲ್ಲಿ ಬಲಿಯಾದವರ ಕುರಿತು ಕಲಾಕೃತಿ ರಚಿಸಿದ್ದರು, ದಶಾವತಾರ, ಕುದುರೆ ಸರಣಿ ಚಿತ್ರ, ವ್ಯಕ್ತಿಚಿತ್ರ ಇತ್ಯಾದಿ ಸರಣಿ ಪ್ರದರ್ಶನಗಳನ್ನು ಚಿನ್ಮಯ ನೀಡಿದ್ದಾರೆ. ಏಕವ್ಯಕ್ತಿ ಹಾಗೂ ಸಮೂಹ ಪ್ರದರ್ಶನಗಳನ್ನು ನೀಡಿದ ಅನುಭವ ಅವರದ್ದು. ಜನವರಿ 16ರವರೆಗೂ ನಡೆಯುವ ಕಲಾಕೃತಿ ಪ್ರದರ್ಶನ ಸ್ಥಳ: ಯೂನಿಕ್‌ ಕಲಾ ಗ್ಯಾಲರಿ, ಚಿತ್ರಕಲಾ ಪರಿಷತ್ತಿನ ಎದುರು, ಕುಮಾರಕೃಪಾ ಪೂರ್ವ.

ಯೂನಿಕ್‌ ಆರ್ಟ್ಸ್‌ ಅಂಡ್‌ ಕ್ರಾಫ್ಟ್ಸ್‌, ಬೋಧಿ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಟ್ರಸ್ಟ್‌ ಆಶ್ರಯದಲ್ಲಿ ನಡೆಯುವ ಈ ಚಿತ್ರಕಲಾ ಪ್ರದರ್ಶನದ ಉದ್ಘಾಟನೆ– ಹಿರಿಯ ಕಲಾವಿದ ಎಂ.ಬಿ. ಪಾಟೀಲ್‌. ಅತಿಥಿ– ‘ಸುಧಾ’ ವಾರಪತ್ರಿಕೆಯ ಸುದ್ದಿ ಸಂಪಾದಕ ಗುಡಿಹಳ್ಳಿ ನಾಗರಾಜ್‌. ಸಂಜೆ 5.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT