ದೋಣಿಯ ಮುಂಬದಿಯಲ್ಲಿ ಕುಳಿತು ಹುಟ್ಟು ಹಾಕುವ ಅಂಬಿಗನ ಹುಟ್ಟು ಸೃಷ್ಟಿಸುವ ನಿನಾದ, ಪಳಪಳನೆ ಸಪ್ಪಳ ಮಾಡುತ್ತಾ ಮರದ ಎಲೆಗಳಿಂದ ಜಾರುವ ಮಳೆ ಹನಿಗಳು, ಹಸಿರು ಹೊದ್ದ ಕಾಡಿನ ನಡುವೆ ಆನೆಯ ಘೀಳು, ಬೀಸುವ ಗಾಳಿಗೆ ಬಿಮ್ಮನೆ ಮೈಕೊಟ್ಟು ತಲೆದೂಗುವ ತೆಂಗಿನ ಗರಿಗಳು... ಹೀಗೆ ಪ್ರಕೃತಿಯಲ್ಲಿರುವ ಪ್ರತಿಯೊಂದು ಅಂಶಕ್ಕೂ ಸಂಗೀತ ಸೃಷ್ಟಿಸುವ ಶಕ್ತಿ ಇದೆ.
ಪ್ರಕೃತಿಯ ಸಹಜ ಸಂಗೀತವನ್ನು ಕಿವಿಗೊಟ್ಟು ಆಲಿಸಿದಾಗ ಮೈ ಮನಸ್ಸು ಅರಳುತ್ತದೆ. ಸಂಗೀತಕ್ಕೆ ಭಾಷೆಯ ಹಂಗಿಲ್ಲ. ಕೇರಳದ ಪ್ರಕೃತಿಗೆ ಇಂಥ ಸಂಗೀತ ಹೊಮ್ಮಿಸುವ ದೊಡ್ಡ ಗುಣವಿದೆ.
ಎರಡು ತಿಂಗಳಿನಿಂದ ಭರ್ಜರಿ ಮದುವೆಗಳು ನಡೆದಿವೆ. ಬೆಂಗಳೂರಿನಲ್ಲಿ ಸುಮಾರು 5 ಸಾವಿರಕ್ಕೂ ಅಧಿಕ ಜನರು ವಿವಾಹ ಬಂಧನಕ್ಕೆ ಒಳಪಟ್ಟಿದ್ದಾರೆ. ಹೊಸ ಬಾಳಿಗೆ ಕಾಲಿರಿಸಿರುವ ಜೋಡಿಗಳೆಲ್ಲವೂ ಈಗ ನವಪಲ್ಲವಿ ಹಾಡುತ್ತಿವೆ. ಹಾಗೆಯೇ ಶಾಲಾ ಮಕ್ಕಳಿಗೆ ಪರೀಕ್ಷೆ ಇನ್ನೇನು ಮುಗಿಯಲಿದೆ. ಹಾಗಾಗಿ ಹಲವರು ಎರಡು ತಿಂಗಳ ರಜೆಯನ್ನು ಹೇಗೆ ಕಳೆಯಬೇಕು ಎಂದು ಲೆಕ್ಕಾಚಾರ ಮಾಡುತ್ತಿದ್ದಾರೆ.
ಮಧುಚಂದ್ರ ಹಾಗೂ ಕುಟುಂಬ ಸಮೇತರಾಗಿ ಕಾಲ ಕಳೆಯಲು ಕೇರಳ ಪ್ರಶಸ್ತ ಸ್ಥಳ. `ಯುವರ್ ಮೊಮೆಂಟ್ ಈಸ್ ವೇಟಿಂಗ್~ ಎಂಬ ಗಮನ ಸೆಳೆಯುವ `ಟ್ಯಾಗ್ ಲೈನ್~ನೊಂದಿಗೆ `ನಮ್ಮಲ್ಲಿಗೆ ಬನ್ನಿ~ ಎಂದು ಕರೆಯುತ್ತಿದೆ ಕೇರಳ ಪ್ರವಾಸೋದ್ಯಮ ಇಲಾಖೆ.
ಮಧುಚಂದ್ರ ಹಾಗೂ ಪ್ರವಾಸಕ್ಕೆ ಕೇರಳಕ್ಕೆ ಬನ್ನಿ ಎಂದು ಕರೆಯಲು ಕೇರಳ ಪ್ರವಾಸೋದ್ಯಮ ಇಲಾಖೆ ನಗರದ ತಾಜ್ ವಿವಂತಾದಲ್ಲಿ ಕಾರ್ಯಕ್ರಮ ಆಯೋಜಿಸಿತ್ತು. ಇದೊಂದು ಟ್ರೇಡ್ ಪಾರ್ಟ್‌ನರ್‌ಶಿಪ್ ಮೀಟ್. ಇಲ್ಲಿ ಕೇರಳದ ಐಷಾರಾಮಿ ಹೋಟೆಲ್‌ಗಳು, ರೆಸಾರ್ಟ್‌ಗಳು, ಟ್ರಾವೆಲ್ ಏಜೆನ್ಸಿಗಳು ಕೂಡ ಭಾಗವಹಿಸಿದ್ದವು.
ಪ್ರವಾಸಿ ಮಾಹಿತಿ ಜತೆಗೆ ಕೇರಳಕ್ಕೆ ಬಂದರೆ ಉಳಿಯಲು ವ್ಯವಸ್ಥೆ ಎಲ್ಲಿ ಚೆನ್ನಾಗಿದೆ ಎಂಬುದನ್ನು ವಿವರಿಸುತ್ತಿದ್ದವು. ಇದಕ್ಕೂ ಮುನ್ನ ಕೇರಳದ ಸಾಂಪ್ರದಾಯಿಕ ಕಲೆಯನ್ನು ಇಲ್ಲಿನವರಿಗೆ ಪರಿಚಯಿಸುವ ಸಲುವಾಗಿ ಸಾಂಸ್ಕೃತಿಕ ಕಾರ್ಯಕ್ರಮವೊಂದನ್ನು ಏರ್ಪಡಿಸಿತ್ತು ಇಲಾಖೆ. ಮೋಹಿನಿ ಅಟ್ಟಂ, ಕಥಕ್ಕಳಿ, ಕಳರಿಪಯಟ್ಟು ಹಾಗೂ ಒಪ್ಪನ ನೃತ್ಯ ಎಲ್ಲರ ಮನಸೂರೆಗೊಂಡವು.
ಮೋಹಿನಿ ಅಟ್ಟಂ ಕೇರಳದ ಸಾಂಪ್ರದಾಯಿಕ ನೃತ್ಯ. ಥಳ ಥಳ ಹೊಳೆವ ಚಿನ್ನದ ಜರತಾರಿಯಿಂದ ಅಲಂಕೃತಗೊಂಡಿದ್ದ ಸೀರೆ ಅಂಚು ಬಿಳಿಸೀರೆಗೊಂದು ಅದ್ಭುತ ಮೆರುಗು ತಂದು ಕೊಟ್ಟಿತ್ತು. ನಮ್ಮಲ್ಲಿ ಭರತನಾಟ್ಯ ಮಾಡುವಾಗ ಉಡುವ ಮಾದರಿಯಲ್ಲಿ ಅವರು ಸೀರೆ ಉಟ್ಟಿದ್ದರು.
ಸರ್ವಾಲಂಕಾರಗೊಂಡಿದ್ದ ಐದು ಜನ ಕೃಷ್ಣ ಸುಂದರಿಯರು ಮಹಾಗಣಪತೇ ಹಾಡಿಗೆ ಮಾಡಿದ ಮೋಹಿನಿ ಅಟ್ಟಂ ನೃತ್ಯ ಮನಸೆಳೆಯಿತು. ನೃತ್ಯ ಮಾಡುವಾಗ ಈ ಕಲಾವಿದರ ದೇಹ ಟ್ಯೂನ್ ಮಾಡಿದಂತೆ ಬಳುಕಿ ಬಾಗುತ್ತಿತ್ತು. ಅವರ ದೇಹದ ಪ್ರತಿ ಅಂಗದಲ್ಲೂ ನೃತ್ಯದ ಲಾಲಿತ್ಯ ಒಸರುತ್ತಿತ್ತು.
ಮೋಹಿನಿಅಟ್ಟಂನಲ್ಲಿ ಗಮನ ಸೆಳೆಯುವುದು ಆಂಗಿಕ ಅಭಿನಯ. ಆ ಹುಡುಗಿಯರು ತಮ್ಮ ಅಂಗೈ ಹಾಗೂ ಗುಲಾಬಿ ಬಣ್ಣದ ಬೆರಳುಗಳನ್ನು ಭಾವಕ್ಕೆ ಅನುಗುಣವಾಗಿ ಬೆಸೆಯುತ್ತಿದ್ದ ರೀತಿ ಆಕರ್ಷಕವಾಗಿತ್ತು. ಮುಖವನ್ನು ಲಜ್ಜೆಯ ಮುದ್ದೆಯಾಗಿಸಿಕೊಂಡು ಬಿಂಕದಿಂದ ನೃತ್ಯ ಮಾಡಿದ ಮೋಹಿನಿ ಅಟ್ಟಂ ಸೊಗಸಾಗಿತ್ತು.
ಯಕ್ಷಗಾನ ನೋಡಿದಂತೆಯೇ ಭಾಸವಾಗುವ ಕಥಕ್ಕಳಿ ಕೂಡ ಕೇರಳದ ಜನಪ್ರಿಯ ನೃತ್ಯ. ಇಲ್ಲೂ ಸಹ ಆಂಗಿಕ ಅಭಿನಯಕ್ಕೆ ಹೆಚ್ಚು ಪ್ರಾಶಸ್ತ್ಯ. ಕಲಾವಿದರು ನವರಸಗಳನ್ನು ಮುಖದ ಮುಖೇನವೇ ಹೊರಹಾಕಬೇಕು. ಕಲಾವಿದರು ಮಹಾಭಾರತದ ಒಂದು ಎಳೆಯನ್ನು ಇಲ್ಲಿ ಪ್ರದರ್ಶಿಸಿದರು. ಅದು ಕುಂತಿ ಹಾಗೂ ಕರ್ಣ ಇಬ್ಬರೂ ಪ್ರಥಮ ಬಾರಿಗೆ ಮುಖಾ ಮುಖಿಯಾಗಿ ಸಂಭಾಷಣೆ ಮಾಡುವ ಸಂದರ್ಭ. ಕಥಕ್ಕಳಿಯಲ್ಲಿ ಕರುಣಾ ಹಾಗೂ ರೌದ್ರರಸ ಝರಿಯಾಗಿ ಹರಿಯಿತು.
ಕಳರಿಪಯಟ್ಟು ಎಲ್ಲ ಬಗೆಯ ಮಾರ್ಷಲ್ ಆರ್ಟ್‌ಗೆ ತಾಯಿ ಇದ್ದಂತೆ. ಇದಕ್ಕೆ ಮೂರು ಸಾವಿರ ವರ್ಷಗಳ ಸುದೀರ್ಘ ಇತಿಹಾಸವಿದೆ. ಕಳರಿಪಯಟ್ಟು ಕಲಿತಿರುವವರ ದೇಹ ಹಾವಿನಂತೆ ಸುತ್ತು ಸುತ್ತಾಗಿ ಬಳುಕುತ್ತದೆ.
ಎದುರಾಳಿಯನ್ನು ಹೊಂಚಿ ನೋಡುವ ಕಣ್ಣುಗಳು, ಹಣೆಯ ಮೇಲಿರುವ ಕೆಂಪು ನಾಮ, ಕಚ್ಚೆ ಪಂಚೆ, ಬರೀ ಮೈನಲ್ಲಿ ಕತ್ತಿ ಹಾಗೂ ಗುರಾಣಿಯನ್ನು ಹಿಡಿದು ಹೋರಾಡುವ ಪರಿ ನೋಡುಗರ ಹೃದಯಬಡಿತ ಹೆಚ್ಚಿಸುತ್ತದೆ. ವೇದಿಕೆ ಮೇಲೆ ಬಂದ ಇಬ್ಬರು ಕಳರಿಪಯಟ್ಟು ಪಟುಗಳು ಖಡ್ಗ ಜಳಪಿಸುತ್ತಿದ್ದ ರೀತಿ ಹಾಗೂ ಅವುಗಳಿಂದ ಹೊರಡಿಸುತ್ತಿದ್ದ ಶಬ್ದಕ್ಕೆ ಅನೇಕರು ಭಯಭೀತರಾದರು. ರೋಮಾಂಚನಗೊಂಡರು.
ಒಪ್ಪನ ಎಂಬುದು ಕೇರಳದ ಮಾಪಿಲ್ಲ ಸಮುದಾಯದ ನೃತ್ಯ. ಕೇರಳದ ಉತ್ತರದ ಜಿಲ್ಲೆ ಮಲಪ್ಪುರಂನಲ್ಲಿ ಇದು ಜನಪ್ರಿಯ. ತಮಿಳಿನಲ್ಲಿ ಒಪ್ಪನೈ ಎಂದರೇ ಮೇಕಪ್ ಎಂದರ್ಥವಿದೆ. ತಮಿಳುನಾಡಿನಲ್ಲಿ ಮುಸ್ಲಿಂ ಸಮುದಾಯದ ಮದುವೆ ಸಮಾರಂಭದಲ್ಲಿ ಈ ನೃತ್ಯ ಹೆಚ್ಚು ಚಾಲ್ತಿಯಲ್ಲಿದೆ. ಆದರೆ ಕೇರಳದಲ್ಲಿ ಈ ನೃತ್ಯ ಅತಿ ಹೆಚ್ಚು ಜನಪ್ರಿಯತೆ ಗಳಿಸಿದ್ದು ಯುವ ಜನರಿಂದ.
ಮಾಪಿಲ್ಲ ಸಮುದಾಯದ ಹೆಣ್ಣು ಮಕ್ಕಳು ಪ್ರಸ್ತುತ ಪಡಿಸುವ ಒಪ್ಪನಾ ಸಮೂಹ ನೃತ್ಯ. 15ಕ್ಕೂ ಅಧಿಕ ಹೆಣ್ಣು ಮಕ್ಕಳು ವೇದಿಕೆ ಮೇಲೆ ಏಕಕಾಲದಲ್ಲಿ ನೃತ್ಯ ಪ್ರದರ್ಶನಮಾಡುತ್ತಾರೆ. ಕೇರಳಿಗರು ಮದುವೆ ಸಮಾರಂಭದಲ್ಲಿ ಕೂಡ ಈ ನೃತ್ಯ ಏರ್ಪಡಿಸುತ್ತಾರೆ. ಮದುವೆ ಹೆಣ್ಣಿನಂತೆ ಕಲಾವಿದರೂ ಆಡಂಬರದ ವಸ್ತ್ರಗಳನ್ನು ಧರಿಸಿ, ಮೈತುಂಬಾ ಆಭರಣ ತೊಟ್ಟು ಅಲಂಕರಿಸಿಕೊಂಡಿರುತ್ತಾರೆ.
ಕೈಕಾಲುಗಳಲ್ಲಿ ಢಾಳಾಗಿ ಕಾಣುವ ಗೋರಂಟಿ ಅವರ ಅಂದಕ್ಕೆ ಮತ್ತಷ್ಟು ಮೆರಗು ತುಂಬುತ್ತದೆ. ವೇಗವಾಗಿ ನರ್ತಿಸುವುದು ಒಪ್ಪನ ನೃತ್ಯದ ವಿಶೇಷತೆ. ಕಸೂತಿ ಮಾಡಿದ ಹಸಿರು ಲಂಗ ದಾವಣಿ ತೊಟ್ಟ ಕೇರಳ ಯುವತಿಯರು ಮಾಡಿದ ಒಪ್ಪನ ನೃತ್ಯ ಮನಸೆಳೆಯಿತು.
ಘಟ್ಟದ ಮಗ್ಗುಲಲ್ಲಿ ಸುರಿವ ಮುಸಲಧಾರೆ, ಮುಗಿಲು ಚುಂಬಿಸುವ ಗಿಡ ಮರಗಳು, ದಿಟ್ಟಿಸಿದಷ್ಟೂ ಕಣ್ಣಿಗೆ ಕಾಣುವ ಕಡಲು, ಕಡಲ ಕಿನಾರೆಯಲ್ಲಿರುವ ರೆಸಾರ್ಟ್‌ಗಳು, ಆಯುರ್ವೇದ ಸ್ಪಾ ಸೆಂಟರ್‌ಗಳು... ವಾವ್! ಇದಕ್ಕೇ ಇರಬೇಕು ಕೇರಳವನ್ನು `ಗಾಡ್ಸ್ ಓನ್ ಕಂಟ್ರಿ~ ಎಂದು ಕರೆಯುವುದು.
ಕೇರಳದ ಪ್ರಾಕೃತಿಕ ಸೊಬಗಿನಷ್ಟೇ ಅಲ್ಲಿನ ಕಲೆಗಳೂ ಕೂಡ ಮುದ ನೀಡುತ್ತವೆ. ಅದಾಗಲೇ ಹೊಸ ಜೋಡಿಗಳು ಕೇರಳದಲ್ಲಿ ವಿಹರಿಸುತ್ತಿದ್ದಾರೆ. ಇನ್ನೇನು ರಜೆ ಸಮೀಸುತ್ತಿದೆ. ಮತ್ಯಾಕೆ ತಡ ರಜೆಯನ್ನು ಕೇರಳದಲ್ಲಿ ಕಳೆಯಲು ಸಿದ್ಧರಾಗಿ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.