ADVERTISEMENT

ಕೊಳದಲಿ ಕುಣಿತ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2013, 19:59 IST
Last Updated 16 ಸೆಪ್ಟೆಂಬರ್ 2013, 19:59 IST
ಕೊಳದಲಿ ಕುಣಿತ
ಕೊಳದಲಿ ಕುಣಿತ   

ಜಗತ್ತಿನ ಅನೇಕ ನೃತ್ಯಾಭಿಮಾನಿಗಳ ಹುಚ್ಚೆಬ್ಬಿಸಿ ‘ಓಪನ್‌ ಗಂಗ್ನಂ ಸ್ಟೈಲ್‌’ ನೃತ್ಯ ಸಿಕ್ಕಾಪಟ್ಟೆ ಜನಪ್ರಿಯವಾಗಿತ್ತು. ಡಾನ್ಸ್‌ಪ್ರಿಯರೆಲ್ಲಾ ಕುದುರೆಗಳಂತೆ ಕೆನೆಯುತ್ತಾ ಸಮೂಹ ಸನ್ನಿಗೊಳಗಾದವರಂತೆ ಈ ಹಾಡಿಗೆ ಸ್ಟೆಪ್‌ ಹಾಕುತ್ತಿದ್ದುದು ಈಗ ಹಳೆಯ ವಿಷಯ. ಹೊಸ ಸಂಗತಿ ಏನಪ್ಪಾ ಅಂದರೆ, ಡಾನ್ಸ್‌ಪ್ರಿಯರಿಗೆ ಸಖತ್‌ ಮಜಾ ಕೊಡುವ ‘ಆಕ್ವಾ ಡಾನ್ಸ್’  ನಗರಕ್ಕೆ ಕಾಲಿಟ್ಟಿರುವುದು. ಈಜುಕೊಳದ ಒಳಕ್ಕೆ ಇಳಿದು ಸಂಗೀತದ ಲಯಕ್ಕೆ ಅನುಗುಣವಾಗಿ ಹೆಜ್ಜೆಹಾಕುವ ಇಂಥದ್ದೊಂದು ಹೊಸ ಬಗೆಯ ನೃತ್ಯ ಪ್ರಕಾರದ ಗುಂಗಿಹುಳ ಬಿಟ್ಟಿರುವುದು ಖ್ಯಾತ ನೃತ್ಯ ಸಂಯೋಜಕ ಶ್ಯಾಮಕ್ ಡಾವರ್. ನೃತ್ಯ ಕ್ಷೇತ್ರಕ್ಕೊಂದು ಹೊಸ ಆಯಾಮ ಕೊಟ್ಟಿರುವ ಆಕ್ವಾ ಡಾನ್ಸನ್ನು ಫೀಲ್ಡ್‌ ಡಾನ್ಸ್ ಎಂದೂ ಕರೆಯುತ್ತಾರೆ.

ಆವತ್ತು ಭಾನುವಾರ. ಸೇಂಟ್‌ ಜೋಸೆಫ್ಸ್ ಹೈಸ್ಕೂಲ್‌ ಮೈದಾನದಲ್ಲಿದ್ದ ಈಜುಕೊಳದ ನೀಲಿ ಬಣ್ಣದ ನೀರಿನ ಸುತ್ತ ಬಿಕಿನಿ ತೊಟ್ಟ ಯುವತಿಯರು ಹಾಗೂ ಚೆಡ್ಡಿ ತೊಟ್ಟು ಅರೆನಗ್ನರಾಗಿದ್ದ ಹುಡುಗರ ದೊಡ್ಡ ಗುಂಪು ಸೇರಿತ್ತು. ಹೂವಿನ ಚೆಡ್ಡಿ, ಬಿಳಿ ಬನಿಯನ್‌ ತೊಟ್ಟಿದ್ದ ಶ್ಯಾಮಕ್ ಡಾವರ್ ಕೈಯಲ್ಲಿ ಮೈಕ್‌ ಇತ್ತು. ಹೊಸ ಬಗೆಯ ನೃತ್ಯಕ್ಕೆ ಹೆಜ್ಜೆ ಹಾಕಲು ಸಜ್ಜಾಗಿದ್ದ ನೃತ್ಯಪ್ರಿಯರ ಮನಸ್ಸೆಲ್ಲಾ ‘ಆಕ್ವಾ ಡಾನ್ಸ್’ ಹೇಗಿರಬಹುದು ಎಂಬ ಪ್ರಶ್ನೆಯನ್ನಿಟ್ಟುಕೊಂಡು ಕಾತರಿಸುತ್ತಿತ್ತು.

ಪೂಲ್‌ನ ಒಳಭಾಗದಲ್ಲಿ ಒಂದರಿಂದ ಐದರವರೆಗೆ ಸಂಖ್ಯೆಗಳನ್ನು ಅಂಟಿಸಲಾಗಿತ್ತು. ಡಾನ್ಸ್‌ಪ್ರಿಯರ ಕಾತರವನ್ನು ಅರಿತ ಶ್ಯಾಮಕ್ ಎಲ್ಲರಿಗೂ ಸಾಲಾಗಿ ನೀರಿಗಿಳಿಯುವಂತೆ ಆದೇಶಿಸಿದರು. ಆನಂತರ, ಪೂಲ್‌ನ ಮೇಲೆ ನಿಂತುಕೊಂಡು ಆಕ್ವಾ ಡಾನ್ಸ್‌ ಹೇಗೆ ಮಾಡಬೇಕು ಎಂಬುದನ್ನು ತೋರಿಸುತ್ತಾ ನೀರಿನೊಳಗಿದ್ದವರನ್ನು ತಮ್ಮಂತೆ ಮಾಡಲು ಸೂಚಿಸಿದರು. ನೀರಿನೊಳಗಿದ್ದ ಯುವಕ ಯುವತಿಯರೆಲ್ಲಾ ಶ್ಯಾಮಕ್ ತೋರಿದ ಭಂಗಿಯನ್ನು ಅನುಸರಿಸುತ್ತಾ ನೀರೊಳಗಿನ ನೃತ್ಯವಾಡುತ್ತಾ ಖುಷಿಪಟ್ಟರು. ಅಂದಹಾಗೆ, ಆಕ್ವಾ ಡಾನ್ಸ್‌ ಗುರುತ್ವಾಕರ್ಷಣೆಗೆ ವಿರುದ್ಧವಾಗಿ ಕೆಲಸ ಮಾಡುತ್ತದಂತೆ. ಶ್ಯಾಮಕ್ ಇಂಥದ್ದೊಂದು ಹೊಸಬಗೆಯ ನೃತ್ಯ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದವರಿಗೆ ನೀರೊಳಗೆ ನಿಂತು ನೃತ್ಯ ಮಾಡುವ ಬಗೆಬಗೆಯ ಸ್ಟೆಪ್‌ಗಳನ್ನು ಹೇಳಿಕೊಟ್ಟರು. 

ಪುಣೆ, ಹೈದರಾಬಾದ್‌ನಲ್ಲಿ ಪ್ರದರ್ಶಿಸಿದ ಆಕ್ವಾ ಡಾನ್ಸ್‌ಗೆ ಅಭೂತ ಪ್ರತಿಕ್ರಿಯೆ ದೊರೆತಿತ್ತು. ಆ ಯಶಸ್ಸಿನಿಂದ ಹುಮ್ಮಸ್ಸು ಪಡೆದು ಬೆಂಗಳೂರಿಗೆ ಬಂದಿದ್ದ ಶ್ಯಾಮಕ್ ಅವರಿಗೆ ನಗರದಲ್ಲೂ ಭರ್ಜರಿ ಪ್ರತಿಕ್ರಿಯೆ ಸಿಕ್ಕಿತು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.