ADVERTISEMENT

ಕೊಳೆಗೇರಿ ಹುಡುಗರ ಫುಟ್‌ಬಾಲ್ ಪ್ರೀತಿ

ಕೆ.ಓಂಕಾರ ಮೂರ್ತಿ
Published 26 ಮಾರ್ಚ್ 2012, 19:30 IST
Last Updated 26 ಮಾರ್ಚ್ 2012, 19:30 IST
ಕೊಳೆಗೇರಿ ಹುಡುಗರ ಫುಟ್‌ಬಾಲ್ ಪ್ರೀತಿ
ಕೊಳೆಗೇರಿ ಹುಡುಗರ ಫುಟ್‌ಬಾಲ್ ಪ್ರೀತಿ   

ಇಲ್ಲಿನ ಪ್ರತಿ ಮನೆಯ್ಲ್ಲಲ್ಲೂ ಒಬ್ಬ ಫುಟ್‌ಬಾಲ್ ಆಟಗಾರನಿದ್ದಾನೆ. ಈ ಆಟದ ಪ್ರೀತಿ ಇಲ್ಲದ ಹೃದಯಗಳೇ ಇಲ್ಲಿಲ್ಲ. ಆದರೆ ಇವರೆಲ್ಲಾ ಇರುವುದು ಕೊಳೆಗೇರಿಗಳಲ್ಲಿ. ಹೆಚ್ಚಿನವರಿಗೆ ಒಪ್ಪೊತ್ತಿನ ಊಟಕ್ಕೂ ಕಷ್ಟ.

ಇಲ್ಲಿನ ಅನೇಕ ಮಂದಿ ಕೂಲಿ ಮಾಡಿ ಬದುಕುತ್ತಿದ್ದಾರೆ. ಗ್ಯಾರೇಜ್, ಪೇಟಿಂಗ್, ಗಾರೆಕೆಲಸ, ಮನೆಗೆಲಸ, ರಸ್ತೆ ಬದಿ ವ್ಯಾಪಾರ, ಬಾಡಿಗೆ ಆಟೊ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಶಾಲೆಯನ್ನು ಅರ್ಧಕ್ಕೆ ಬಿಟ್ಟವರೇ ಹೆಚ್ಚು. ಇನ್ನು ಕೆಲವರು ಕಾರ್ಪೊರೇಷನ್ ಶಾಲೆಗಳಲ್ಲಿ ಓದುತ್ತಿದ್ದಾರೆ. ಆದರೆ ಫುಟ್‌ಬಾಲ್‌ನಲ್ಲಿ ಇವರದ್ದೇ ಮೇಲುಗೈ.

`ಬಡತನದಿಂದಾಗಿ ನಾನು ಊಟ ಮಾಡದ ದಿನಗಳು ಅನೇಕ. ಆದರೆ ಫುಟ್‌ಬಾಲ್ ಆಡದ ಸಂಜೆಗಳು ಮಾತ್ರ ಇಲ್ಲವೇ ಇಲ್ಲ ಎನ್ನಬಹುದು. ಕೇವಲ ಒಂದು ಹೊತ್ತು ಊಟ ಮಾಡಿ ಉಳಿಸಿದ ಹಣದಿಂದ ಶೂ ಹಾಗೂ ಫುಟ್‌ಬಾಲ್ ಕೊಂಡುಕೊಂಡಿದ್ದೆ. ಆಟದ ಮೇಲಿನ ಅದೇ ಪ್ರೀತಿ ನನ್ನನ್ನು ಈ ಮಟ್ಟಕ್ಕೆ ತಂದುನಿಲ್ಲಿಸಿದೆ~. ರಾಷ್ಟ್ರೀಯ ಐ-ಲೀಗ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಪುಣೆ ಫುಟ್‌ಬಾಲ್ ಕ್ಲಬ್ ಪ್ರತಿನಿಧಿಸುತ್ತಿರುವ ಆಸ್ಟಿನ್ ಟೌನ್‌ನ ಕೊಳೆಗೇರಿಯೊಂದರ ಹುಡುಗ ನಿರ್ಮಲ್ ಕುಮಾರ್ ಪ್ರೀತಿಯಿಂದ ಹೇಳುವ ಮಾತಿದು.

ಈ ಪ್ರದೇಶದ ಹೆಚ್ಚಿನ ಮನೆಗಳು ಇರುವುದು ಗಬ್ಬು ನಾರುವ ಮೋರಿ ಬದಿಯಲ್ಲಿ. ಕೆಲವರ ಮನೆಗೆ ಹೋಗಲು ಸರಿಯಾದ ದಾರಿಯೂ ಇಲ್ಲ. ಅದೇ ಮೋರಿ ಬದಿಯ ಅಲ್ಪ ಜಾಗದಲ್ಲಿ ಮೂಗುಮುಚ್ಚಿ ಹೋಗಬೇಕಾದ ಪರಿಸ್ಥಿತಿ. ಆದರೆ ಇಲ್ಲಿನ ಹುಡುಗರು ಸದಾ ಉಸಿರಾಡುವುದು ಮಾತ್ರ ಫುಟ್‌ಬಾಲ್. ಅದೊಂಥರ ಹುಚ್ಚು ಪ್ರೀತಿ ಎನ್ನಬಹುದು.

ಒಂದೇ ಮನೆಯ್ಲ್ಲಲಿ ನಾಲ್ಕೈದು ಮಂದಿ ಆಟಗಾರರಿದ್ದಾರೆ! ರಾಜ್ಯದ ಲೀಗ್ ಟೂರ್ನಿಗಳಿಂದ ಹಿಡಿದು ಒಲಿಂಪಿಕ್ಸ್‌ವರೆಗೆ ಆಡಿದ ಆಟಗಾರರು ಇದೇ ಕೊಳೆಗೇರಿಯವರು. ಅದಕ್ಕೆ ಉದಾಹರಣೆ ಎಸ್.ರಾಮನ್ ಹಾಗೂ ಬಶೀರ್. ಇವರು 1948ರ ಒಲಿಂಪಿಕ್ಸ್‌ನಲ್ಲಿ ಆಡ್ದ್ದಿದರು.

ಇಲ್ಲಿ ಆರು ವರ್ಷದ ಮಕ್ಕಳಿಂದ ಹಿಡಿದು 60 ವರ್ಷದ ಮುದುಕರವರೆಗೆ ಫುಟ್‌ಬಾಲ್ ಆಡುತ್ತಾರೆ. ಇವರಿಗೆ ಕ್ರಿಕೆಟ್ ಅಂದರೆ ಮಾತ್ರ ಅಲರ್ಜಿ. ಹಲಸೂರಿನ ಗೌತಮಪುರ, ಆಸ್ಟಿನ್ ಟೌನ್, ಫ್ರೇಜರ್ ಟೌನ್, ಮರ್ಫಿಟೌನ್, ಪಿಳ್ಳಣ್ಣ ಗಾರ್ಡನ್, ಜೋಗ್‌ಪಾಳ್ಯ, ಶ್ರೀರಾಂಪುರದ ಹುಡುಗರೇ ಅದಕ್ಕೆ ಸಾಕ್ಷಿ. ಫುಟ್‌ಬಾಲ್‌ನಲ್ಲಿ ಈ ಪ್ರದೇಶಗಳ ಹುಡುಗರನ್ನು ಮೀರಿಸುವವರು ವಿರಳ.
 
ಕರ್ನಾಟಕ ಹಾಗೂ ರಾಷ್ಟ್ರ ತಂಡವನ್ನು ಪ್ರತಿನಿಧಿಸಿದ ಶೇ.90ಕ್ಕೂ ಹೆಚ್ಚು ಆಟಗಾರರು ಈ ಪ್ರದೇಶದವರು. ಆದರೆ ಸರ್ಕಾರವಾಗಲೀ, ಕಾರ್ಪೊರೇಟ್ ಸಂಸ್ಥೆಗಳಾಗಲಿ ಈ ಹುಡುಗರ ನೆರವಿಗೆ ಬಂದಿಲ್ಲ. ಹಾಗಾಗಿ ಈಗಲೂ ಅದೇ ಕೊಳೆಗೇರಿಯಲ್ಲಿ ಕಿತ್ತು ತಿನ್ನುವ ಬಡತನದ ಮಧ್ಯೆಯೇ ಬದುಕು ಸವೆಸುತ್ತಿದ್ದಾರೆ.
             * * *
ಈ ಹುಡುಗರ ಹೆಸರು ಮಣಿ ಮಾರನ್ ಹಾಗೂ ಸಂತೋಷ್ ಕುಮಾರ್. ಇವರು ಆಸ್ಟಿನ್ ಟೌನ್‌ನ ಕೊಳೆಗೇರಿಯೊಂದರಲ್ಲಿ ಕಿತ್ತು ತಿನ್ನುವ ಬಡತನದಲ್ಲಿ ಬೆಳೆದವರು. ತಮ್ಮ ಕನಸು ನನಸಾಗಿಸಿಕೊಳ್ಳುವ ಉತ್ಸಾಹಕ್ಕೆ ಅದೇನೂ ಕೊರತೆಯಾಗಲಿಲ್ಲ.

ಕೊಳೆಗೇರಿಯ ಈ ನರಕದಲ್ಲೇ ಬೆಳೆದ ಮಣಿ ಮಾರನ್ ತನ್ನ ಆರನೇ ವಯಸ್ಸಿನ್ಲ್ಲಲಿ ತಾಯಿಯನ್ನು ಕಳೆದುಕೊಂಡ. ಕೂಲಿ ಕೆಲಸ ಮಾಡುತ್ತಿದ್ದ ಅಪ್ಪ ಕೂಡ ಇತ್ತೀಚೆಗೆ ಸಾವನ್ನಪ್ಪಿದರು.

ಹಾಗಾಗಿ ಮಣಿ ಕೂಡ ಕೂಲಿ ಕೆಲಸಕ್ಕೆ ಹೋಗುವ ಪರಿಸ್ಥಿತಿ. 14ರ ಹರೆಯದ ಈ ಹುಡುಗನ ಫುಟ್‌ಬಾಲ್ ಪ್ರತಿಭೆ ಅದನ್ನು ತಪ್ಪಿಸಿತು. ಭಾರತ ಕ್ರೀಡಾ ಪ್ರಾಧಿಕಾರವು ಆಸ್ಟಿನ್ ಟೌನ್‌ನಲ್ಲಿ ಫುಟ್‌ಬಾಲ್ ಶಿಬಿರ ಹಮ್ಮಿಕೊಂಡಿದ್ದಾಗ ಈ ಹುಡುಗ ಪಾಲ್ಗೊಂಡಿದ್ದ.
 
ಅದರಲ್ಲಿ ಆಯ್ಕೆ ಆಗಿದ್ದು ಈತನ ಜೀವನದ ಪ್ರಮುಖ ತಿರುವಿಗೆ ಕಾರಣವಾಯಿತು. ಮಣಿ ಮಾರನ್ ಸ್ಕಾಟ್ಲೆಂಡ್‌ನ ಕ್ಲಬ್‌ವೊಂದರಲ್ಲಿ ತರಬೇತಿ ಪಡೆಯಲು ಆಯ್ಕೆ ಆಗಿದ್ದ. ಕಳೆದ ವರ್ಷ ಲಂಡನ್‌ನಲ್ಲಿ ನಡೆದ `ಲಂಡನ್ ಫುಟ್‌ಬಾಲ್ ಉತ್ಸವ~ದಲ್ಲಿ ಪಾಲ್ಗೊಂಡಿದ್ದ.
 
14 ವರ್ಷ ವಯಸ್ಸಿನೊಳಗಿ ನವರ ರಾಷ್ಟ್ರೀಯ ಶಾಲಾ ಟೂರ್ನಿಯಲ್ಲಿ ಈತ ಮಿಂಚಿದ್ದು ಅದಕ್ಕೆ ಕಾರಣ. `ನನಗೆ ಫುಟ್‌ಬಾಲ್ ಮೇಲೆ ಆಸಕ್ತಿ ಬೆಳೆಯಲು ಕಾರಣ ನನ್ನ ಕುಟುಂಬ. ನನ್ನ ಅಜ್ಜ, ಅಪ್ಪ ಹಾಗೂ ಸಹೋದರ ಕೂಡ ಫುಟ್‌ಬಾಲ್ ಆಡುತ್ತಿದ್ದರು~ ಎನ್ನುತ್ತಾನೆ ಮಣಿ ಮಾರನ್. ಈತನ ಅಣ್ಣ ಮಣಿವಣ್ಣನ್ ಕೂಡ ಫುಟ್‌ಬಾಲ್ ಆಟಗಾರ. ಕಳೆದ ವರ್ಷ ಆತ ಆರ್ಸೆನಲ್ ಫುಟ್‌ಬಾಲ್ ಅಕಾಡೆಮಿಗೆ ಆಯ್ಕೆ ಆಗಿದ್ದ.

ಸಂತೋಷ್‌ನ ಅಪ್ಪ ಆಟೊ ಡ್ರೈವರ್. ಆದರೆ ಅವರ ಆರ್ಥಿಕ ಸಂಕಷ್ಟ ಈ ಹುಡುಗನ ಫುಟ್‌ಬಾಲ್ ಪ್ರೀತಿಯನ್ನು ಕಿತ್ತುಕೊಳ್ಳಲಿಲ್ಲ. ಇವನು ಕೂಡ ಲಂಡನ್‌ನಲ್ಲಿ ಆಡಿಬಂದ. `ಬಸ್ಸಿನಲ್ಲಿ ಪ್ರಯಾಣ ಮಾಡಲು ಕಾಸು ಇಲ್ಲದೆ ಕಷ್ಟ ಪಟ್ಟವರು ನಾವು. ಆದರೆ ಈಗ ಲಂಡನ್‌ಗೆ ವಿಮಾನದಲ್ಲಿ ಹೋಗಿಬಂದೆವು~ ಎಂದು ಸಂತೋಷ್ ಖುಷಿಯಿಂದ ನುಡಿಯುತ್ತಾನೆ.

`ನಾನು 15 ವರ್ಷಗಳಿಂದ ಆಟೊ ಚಾಲಕನಾಗಿದ್ದೇನೆ. ಆದರೆ ಆ ಹಣ ನನ್ನ ಕುಟುಂಬ ನಿರ್ವಹಣೆಗೆ ಸಾಕಾಗುವುದಿಲ್ಲ~ ಎನ್ನುತ್ತಾರೆ ಸಂತೋಷ್ ಅಪ್ಪ ಕಣ್ಣನ್. ಈಗಲೂ ಈ ಹುಡುಗರ ಜೀವನದಲ್ಲಿ ಯಾವುದೇ ಬದಲಾವಣೆ ಆಗಿಲ್ಲ...!
          * * *
ಇವರ ಹೆಸರು ನಿರ್ಮಲ್ ಕುಮಾರ್... 22 ವರ್ಷ ವಯಸ್ಸಿನ ಈ ಹುಡುಗ ಆಸ್ಟಿನ್ ಟೌನ್‌ನ ರುದ್ರಪ್ಪ ಗಾರ್ಡನ್‌ನ ಕೊಳೆಗೇರಿ ನಿವಾಸಿ. ಇವರ ಅಜ್ಜ ಎಸ್.ರಾಮನ್ 1948ರ ಒಲಿಂಪಿಕ್ಸ್‌ನಲ್ಲಿ ಭಾರತ ತಂಡ ಪ್ರತಿನಿಧಿಸಿದ್ದವರು. ಫುಟ್‌ಬಾಲ್ ಅಂಗಳಕ್ಕೆ ಇಳಿಯಲು ಈ ಹುಡುಗನಿಗೆ ಅಜ್ಜನೇ ಸ್ಫೂರ್ತಿ. ನಿರ್ಮಲ್ ಪುಣೆ ಫುಟ್‌ಬಾಲ್ ಕ್ಲಬ್ ಪ್ರತಿನಿಧಿಸುತ್ತಿದ್ದಾರೆ. ಕಳೆದ ವರ್ಷ ಸಂತೋಷ್ ಟ್ರೋಫಿ  ಟೂರ್ನಿಯಲ್ಲಿ ರಾಜ್ಯ ತಂಡದಲ್ಲಿ ಆಡಿದ್ದರು.

`ಪೋಷಕರು ಕೂಲಿ ಕೆಲಸ ಮಾಡಿ ನಮ್ಮನ್ನು ಸಾಕಿದ್ದಾರೆ. ಅವರನ್ನು ಈಗ ನಾವು ಸಾಕಬೇಕು. ನಮಗೆ ಊಟ ನೀಡುತ್ತಿರುವುದು ಫುಟ್‌ಬಾಲ್~ ಎನ್ನುತ್ತಾರೆ. ತಂದೆ ಮನೋಹರ್ ಕೂಡ ಫುಟ್‌ಬಾಲ್ ಆಟಗಾರರಾಗಿದ್ದರು. ನಿರ್ಮಲ್ ಸಹೋದರರಾದ ಪ್ರವೀಣ್ ಕುಮಾರ್ ಬಿಡಬ್ಲ್ಯುಎಸ್‌ಎಸ್‌ಬಿ ತಂಡ,  ದೀಪಕ್ ಕುಮಾರ್ ಧರ್ಮರಾಜ್ ಯೂನಿಯನ್ ತಂಡದಲ್ಲಿದ್ದಾರೆ. ಇವರೂ ಕೂಲಿ ಮಾಡುತ್ತಿದ್ದಾರೆ.
         * * *
ಇದು ಮಿನಿ ಬ್ರೆಜಿಲ್
ಹಲಸೂರಿನ ಲಿಡೊ ಮಾಲ್‌ನಿಂದ ಒಂದಿಷ್ಟು ಮುಂದೆ ಹೋದರೆ ನಿಮಗೆ ಎದುರಾಗುವುದೇ ಫುಟ್‌ಬಾಲ್ ದಂತಕತೆ ಪೀಲೆ ಪ್ರತಿಮೆ. ಇದಕ್ಕೆ ಇಲ್ಲಿನವರು ಪೂಜೆ ಸಲ್ಲಿಸುತ್ತಾರೆ. ಈ ಪ್ರದೇಶದ ಫುಟ್‌ಬಾಲ್ ಪ್ರೀತಿ ಎಷ್ಟರ ಮಟ್ಟಿಗಿದೆ ಎಂಬುದಕ್ಕೆ ಇದೇ ಸಾಕ್ಷಿ. ಇಲ್ಲಿನ ಹೆಚ್ಚಿನವರು ಕೂಲಿ ಕೆಲಸ ಮಾಡಿ ಬದುಕುತ್ತಿದ್ದಾರೆ. ಆದರೆ ಫುಟ್‌ಬಾಲ್ ಇಲ್ಲದ ಮನೆ ಇಲ್ಲಿಲ್ಲ. ಹಾಗಾಗಿಯೇ ಗೌತಮಪುರವನ್ನು `ಮಿನಿ ಬ್ರೆಜಿಲ್~ ಎಂದು ಕರೆಯುತ್ತಾರೆ.

ಇಲ್ಲಿ ಸುಮಾರು ಮೂರು ಸಾವಿರ ಮನೆಗಳಿವೆ. ಲೀಗ್, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಆಡಿರುವ 300ಕ್ಕೂ ಹೆಚ್ಚು ಮಂದಿ ವೃತ್ತಿಪರ ಆಟಗಾರರಿದ್ದಾರೆ.

ಫುಟ್‌ಬಾಲ್‌ನಿಂದಾಗಿಯೇ ಈ ಪ್ರದೇಶದ 165 ಮಂದಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಉದ್ಯೋಗ ಲಭಿಸಿದೆ. ಇಲ್ಲಿಯೇ 4 ಫುಟ್‌ಬಾಲ್ ಕ್ಲಬ್‌ಗಳಿವೆ.

ಕಳೆದ ವಾರ ಆಡುತ್ತಲೇ ಮೃತಪಟ್ಟ ಡಿ.ವೆಂಕಟೇಶ್ ಇದೇ ಪ್ರದೇಶದ ಹುಡುಗ. ಆದರೆ ಅವತ್ತು ಮೃತ ವೆಂಕಟೇಶನಿಗೆ ಶ್ರದ್ಧಾಂಜಲಿ ಸಲ್ಲಿಸಲು ಇಡೀ ಬೆಂಗಳೂರಿನ ಫುಟ್‌ಬಾಲ್ ಆಟಗಾರರು ಸೇರಿದ್ದರು.

ಗೌತಮಪುರದ ಜನರೇ ಕೆಲವು ಮಕ್ಕಳಿಗೆ ಬಟ್ಟೆ ಹಾಗೂ ಶೂ ಖರೀದಿಸಿಕೊಡುತ್ತಾರೆ. ಇವರೇ ಸೇರಿ ಒಂದು ಕ್ರೀಡಾಂಗಣ ಮಾಡಿಕೊಂಡಿದ್ದಾರೆ. ಅಲ್ಲಿ ಸದಾ ಒಬ್ಬರಲ್ಲ ಒಬ್ಬರು ಫುಟ್‌ಬಾಲ್ ಆಡುತ್ತಿರುತ್ತಾರೆ. ಕೊಳೆಗೇರಿ ಹುಡುಗರ ಈ ಫುಟ್‌ಬಾಲ್ ಪ್ರೀತಿಗೆ ಏನೆಂದು ಹೆಸರಿಡಬಹುದು ಹೇಳಿ? 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.