ADVERTISEMENT

ಕ್ಯಾಂಪಸ್ ಖುಷಿ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2012, 19:30 IST
Last Updated 11 ಏಪ್ರಿಲ್ 2012, 19:30 IST

ಆ ದಿನ ಕ್ಯಾಂಪಸ್ ತುಂಬಾ ವಿದ್ಯಾರ್ಥಿಗಳದ್ದೇ ಕಾರುಬಾರು. ಎಲ್ಲೆಂದರಲ್ಲಿ ಅವರ ಹರಟೆ ಎಗ್ಗಿಲ್ಲದೆ ಸಾಗಿತ್ತು. ಒಂದೆಡೆ ಪದವಿ ಮುಗಿಸಿದ ಸಂಭ್ರಮವಿದ್ದರೆ ಇನ್ನೊಂದೆಡೆ ಕಾಲೇಜು ಬಿಡಬೇಕಾದ ಬೇಸರ.

ಇತ್ತೀಚೆಗಷ್ಟೆ ನಗರದ ಎಂ.ಎಸ್.ರಾಮಯ್ಯ ಕಾಲೇಜ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್ 2008-2012ರ ಸಾಲಿನ ಪದವೀಧರರ ದಿನವನ್ನು ಹಮ್ಮಿಕೊಂಡಿದ್ದ ಸಂದರ್ಭ ಅದು. ಮುಂದಿನ ಭವಿಷ್ಯ ಶುಭಕರವಾಗಿರಲೆಂದು ವಿದ್ಯಾರ್ಥಿಗಳು ತಮ್ಮ ಸ್ನೇಹಿತರ ಶ್ವೇತ ವರ್ಣದ ಅಂಗಿಯ ಮೇಲೆ ಕಪ್ಪು ಮಾರ್ಕರ್ ಪೆನ್ನಿನಿಂದ ನೆನಪಿನ ಸಹಿ ಹಾಕುತ್ತಿದ್ದದ್ದು ಗಮನ ಸೆಳೆಯಿತು.

`ಇಲ್ಲಿನ ವಿದ್ಯಾರ್ಥಿಗಳೆಲ್ಲರೂ ನಮ್ಮ ಕಾಲೇಜಿನ ಪ್ರತಿನಿಧಿಗಳಿದ್ದಂತೆ~ ಎಂಬ ಪ್ರಾಂಶುಪಾಲ ಮ್ಯಾಥ್ಯೂ ಅವರ ನುಡಿಗೆ ವಿದ್ಯಾರ್ಥಿಗಳ ಕಡೆಯಿಂದ ಹರ್ಷೋದ್ಗಾರ.
ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ `ಪದವೀಧರರ ದಿನ~ ಕ್ಕೆ ಹಲವು ಅತಿಥಿಗಳೂ ಆಗಮಿಸಿದ್ದರು.

ತಾಜ್ ಗೇಟ್‌ವೇ ವ್ಯವಸ್ಥಾಪಕ ಆಲ್ಬರ್ಟ್ ರೆಬೆಲೊ, ಗೋಕುಲ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯದರ್ಶಿ ಡಿ.ವಿ.ಗುರುಪ್ರಸಾದ್, ಮುಖ್ಯ ಹಣಕಾಸು ಅಧಿಕಾರಿ ವೇಣುಗೋಪಾಲ ಶಾಸ್ತ್ರಿ, ಎಂ.ಎಸ್.ರಾಮಯ್ಯ ಮೆಮೊರಿಯಲ್ ಆಸ್ಪತ್ರೆ ಅಧ್ಯಕ್ಷ ಡಾ.ಶ್ರೀನಾಥ್ ಮುಂತಾದವರು ಅತಿಥಿಗಳಾಗಿ ಆಗಮಿಸಿದ್ದರು.

ಉತ್ತಮ ವೃತ್ತಿಪರರಾಗಬೇಕೆಂದರೆ ಉತ್ತಮ ನಾಗರಿಕರೆನಿಸಿಕೊಳ್ಳಬೇಕಾದದೂ ಅಷ್ಟೇ ಅವಶ್ಯಕ. ಈ ರೀತಿ ಇದ್ದರೆ ಮಾತ್ರ ಸಮಾಜದಲ್ಲಿ ನಮ್ಮನ್ನು ನಾವು ಗುರುತಿಸಿಕೊಳ್ಳುವುದು ಸಾಧ್ಯ ಎಂದು ರೆಬೆಲೊ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಹಾಜರಾತಿ, ಅಂಕ, ತಾಂತ್ರಿಕ ಕೌಶಲ್ಯ ಮುಂತಾದ ವಿಷಯಗಳನ್ನು ಆಧರಿಸಿ ಬಹುಮಾನಗಳನ್ನು ನೀಡಲಾಯಿತು.ವಿದ್ಯಾರ್ಥಿನಿ ರಿಯಾ ಮುಖರ್ಜಿಗೆ `ಬೆಸ್ಟ್ ಔಟ್ ಗೋಯಿಂಗ್ ಸ್ಟೂಡೆಂಟ್~ ಬಿರುದು ಲಭಿಸಿತು. 2011ನೇ ಸಾಲಿನಲ್ಲಿ ರ‌್ಯಾಂಕ್ ಪಡೆದ ಕೀರ್ತನಾ ಗಣೇಶ್ ಮತ್ತು ವಿದ್ಯಾಲಕ್ಷ್ಮಿ ಇವರನ್ನೂ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳ ಸ್ವಯಂ ರಚಿತ ಸಂಗೀತ ಕಾರ್ಯಕ್ರಮದ ಮೂಲಕ ಕಾರ್ಯಕ್ರಮಕ್ಕೆ ತೆರೆಬಿತ್ತು.                              

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.