ADVERTISEMENT

ಕ್ಷಿತಿಜದಂಚಿನಲ್ಲಿ ಜೀವಜಾಲ!

ಸಾಕ್ಷಿ
Published 18 ಅಕ್ಟೋಬರ್ 2012, 19:30 IST
Last Updated 18 ಅಕ್ಟೋಬರ್ 2012, 19:30 IST

ಬೆಟ್ಟದ ನೆತ್ತಿಯಲ್ಲೋ, ಕಣಿವೆಯ ಕೊರಕಲಲ್ಲೋ ನಿಂತು, ಬಾಯಿ ಬಿರಿದುಹೋಗುವಷ್ಟು ಗಟ್ಟಿಯಾಗಿ ಕೂಗುವವರನ್ನು ಸಿನಿಮಾಗಳಲ್ಲಾದರೂ ನೋಡಿರುತ್ತೀರಿ. ಗೆಳೆಯರ ಗುಂಪಿನೊಡನೆ ಪ್ರವಾಸ ಹೋದಾಗ `ಓಹೋ ಓಯ್~ ಎಂದು ನೀವೇ ಕೂಗಿರಬಹುದು.
 
ಪ್ರತಿಧ್ವನಿಯ ಅನುರಣನಕ್ಕೆ ಮೈಮರೆತಿರಬಹುದು. ಆದರೆ, `ಕ್ಷಿತಿಜದೆಡೆಗೆ...~ ಬ್ಲಾಗಿಗನದು ಮೌನ ಸಂವಾದ. `ಪ್ರಕೃತಿಯೊಂದಿಗೆ ಮೌನದಲ್ಲಿ ಮಾತನಾಡಲು ಹೊರಟಿದ್ದೇನೆ...~ ಎಂದಾತ ಷರಾ ಬರೆದಿರುವುದರಿಂದ ಇಲ್ಲಿ ಸಪ್ಪಳ ಸಲ್ಲದು. ಪಿಸುಮಾತು ಅಡ್ಡಿಯಿಲ್ಲ. ಮೆಲುದನಿಯಲ್ಲೇ ಈ ಬ್ಲಾಗಿನಲ್ಲಿ ಏನೇನಿದೆ, ನೋಡಿಬರೋಣ...

`ಜಟಿಲ ಕಾನನದ ಕುಟಿಲ ಪಥಗಳಲಿ ಹರಿವ ತೊರೆಯು ನಾನು~ ಎನ್ನುವುದು ಬ್ಲಾಗಿಗ ತನ್ನನ್ನು ಪರಿಚಯಿಸಿಕೊಳ್ಳುವ ಪರಿ. ಕಾಡಿನಲ್ಲಿನ ಅಸಂಖ್ಯ ಮರಗಳಿಗೇನು ಹೆಸರು ಇರುತ್ತದೆಯೇ? ಹಾಗೆಂದು ಆ ಮರಗಳ ಮಹತ್ವವೇನೂ ಕಡಿಮೆ ಆಗುವುದಿಲ್ಲ. ಹಾಗೆಯೇ, ಈ ಪರಿಸರ ಪ್ರೇಮಿ ತನ್ನ ಹೆಸರಿನ ಹಂಗಿಲ್ಲದೆಯೇ ಬ್ಲಾಗು ಬರಹಗಳನು ಸಹೃದಯರು ಸವಿಯಲಿ ಎಂದು ಭಾವಿಸಿರಬಹುದು. ಇರಲಿ, ಆತನನ್ನು `ಪರಿಸರ ಪ್ರೇಮಿ~ ಎಂದೇ ಕರೆಯೋಣ.

`ಕ್ಷಿತಿಜದೆಡೆಗೆ~ (speaktonature.blogspot.in) ತುಡಿಯುವ ಈ ಪರಿಸರ ಪ್ರೇಮಿ ಪರಿಸರದ ಅನೇಕ ಕಥೆಗಳನ್ನು ಕೂಡಿಹಾಕಿದ್ದಾರೆ. ಪ್ರಾಣಿಪಕ್ಷಿಗಳ ಕಥೆಗಳ ಜೊತೆಗೆ ನೀರು, ಹಸಿರು, ಬೆಟ್ಟಗುಡ್ಡದ ಕುರಿತೂ ಬರಹಗಳಿವೆ. ಷೆರ್ಪಾಗಳಿಗೂ ಇಲ್ಲಿ ತಾಣವಿದೆ. ಇಲ್ಲಿನ ಅನೇಕ ಕಥನಗಳು ಸ್ವಗತಗಳಾಗಿರುವುದು ವಿಶೇಷ. ಕಿರುತೆರೆಯಲ್ಲಿ ಮಕ್ಕಳಿಗೆ ಪರಿಚಿತವಾದ `ನೀಮೋ~ ಎನ್ನುವ ಮೀನು ತನ್ನ ಕಥೆ ಹೇಳಿಕೊಳ್ಳುತ್ತದೆ.

ರಿಯಾ ಎನ್ನುವ ಉಷ್ಟ್ರಪಕ್ಷಿ ತನ್ನ ಗೋಳನ್ನು ತೋಡಿಕೊಳ್ಳುತ್ತದೆ. ಆ ಅಳಲಿನ ಒಂದು ಎಳೆ ಕೇಳಿ: ರಿಯಾ ಮನೆ ಎಂದರೆ ಇದೇನೆ. ಬನ್ನಿ. ಈಗ ಒಳಗೆ ಬರಬಹುದು. ಮೂರು ತಿಂಗಳುಗಳ ಕೆಳಗೆ ಬಂದಿದ್ದರೆ, ಗೊತ್ತಿಲ್ಲ, ಬಹುಶಃ ಕೊಂದುಬಿಡುತ್ತಿದ್ದೆ. ಪುಣ್ಯ, ಈಗ ಬಂದಿದ್ದೀರಿ. ಬನ್ನಿ.
ಮೂರು ತಿಂಗಳುಗಳ ಕೆಳಗೆ ನೀವೇ ಏನು, ನನ್ನ ಹೆಂಡತಿ ಬಂದಿದ್ದರೂ ನಾನು ಕೊಂದು ಬಿಡುತ್ತಿದ್ದೆ.

ಮೊಟ್ಟೆಯನ್ನು ಕಾಯುವುದೆಂದರೇನು ಸಾಮಾನ್ಯವಾದ ವಿಷಯವೇ? ಕಳೆದ ಬಾರಿ ಹೀಗೇ, ಯಾರೋ ಒಂದಷ್ಟು ಜನ ಬಂದಿದ್ದರು. ಚಳಿಗಾಲ ಮುಗಿದಿತ್ತು. ನಾನು ಒಂಟಿಯಾಗಿರಬೇಕಾದ ಸಮಯ. ನನ್ನ ಹೆಂಡತಿಯರು ಮೊಟ್ಟೆಗಳನ್ನಿಟ್ಟಿದ್ದರು.
 
ಸುಮಾರು ನಲವತ್ತೈದು ಮೊಟ್ಟೆಗಳಿದ್ದವು ನಮ್ಮ ಮನೆಯಲ್ಲಿ. ಮೊಟ್ಟೆಯಿಟ್ಟು ಮನೆಯಲ್ಲಿರದೆ ಕಾಡು ಮೇಡು ತಿರುಗಲು ಹೋಗಿದ್ದರು! ಅದು ಅವರುಗಳ ಹವ್ಯಾಸ. ಮೊಟ್ಟೆಗಳಿಗೆ ಕಾವು ಕೊಡುವುದು ಹೆಣ್ಣಿನ ಕೆಲಸವೇನಲ್ಲ, ಅದು ನನ್ನ ಕೆಲಸ ತಾನೆ?

ನಾನೇನೋ ನನ್ನ ಕೆಲಸವನ್ನು ಮಾಡುತ್ತಲೇ ಇದ್ದೆ, ಆದರೆ, ಬಂದಿದ್ದರಲ್ಲ ಯಾರೋ ಒಂದಷ್ಟು ಜನ, ನಾನು ಒಂಟಿಯಾಗಿ ಮೊಟ್ಟೆಯನ್ನೇ ನೋಡುತ್ತ ಕನಸು ಕಾಣುತ್ತಿದ್ದಾಗ, ಬಂದೂಕ ತೋರಿಸಿ ನನ್ನನ್ನು ಕೊಲ್ಲಲು ಸಿದ್ಧರಾಗಿದ್ದರು! ಹೇಗೋ ನಾನು ತಪ್ಪಿಸಿಕೊಂಡೆ, ಆ ಕಥೆ ಈಗ ಯಾಕೆ. ಆದರೆ ನನ್ನ ಮುದ್ದಿನ ಕನಸುಗಳು ಮಾತ್ರ ಆ ಜನಗಳ ಪಾಲಾಗಿ ಹೋಯಿತು. ನಮ್ಮ ಮೊಟ್ಟೆಗಳು ಅಷ್ಟು ರುಚಿಯಂತೆ, ನನ್ನನ್ನು ಕೊಂದಾದರೂ ತಿನ್ನುವಷ್ಟು!
ಚಳಿಗಾಲದಲ್ಲಿ ಬಂದಿದ್ದರೆ ನಾನು ಮನೆಯಲ್ಲಿ ಎಲ್ಲಿರುತ್ತಿದ್ದೆ? ಜಿಂಕೆಗಳ ನಡುವೆಯೋ ಕಡವೆಗಳ ಗುಂಪಿನಲ್ಲೋ ಹುಡುಕಬೇಕಿತ್ತು. ಹುಡುಕುತ್ತಿದ್ದರೇನೋ, ಚರ್ಮ ಸಿಗುತ್ತೆ ಅಂತ!...”

ರಿಯಾ ಕಥೆ ಮುಂದುವರಿಯುತ್ತದೆ. ಕಥೆ ಕೇಳುವ ನಾವು, `ನಾಗರಹಾವು~ ಸಿನಿಮಾದಲ್ಲಿ `ಕಥೆ ಹೇಳುವೆ ನನ್ನ ಕಥೆ ಹೇಳುವೆ..~ ಎಂದು ಹಾಡುವ ಅಲಮೇಲುವಿನ ಬಾಯಿಯನ್ನು ರಾಮಾಚಾರಿ ಮುಚ್ಚುತ್ತಾನಲ್ಲ, ಹಾಗೆ ರಿಯಾಳ ಬಾಯಿ ಮುಚ್ಚಬೇಕು. ಪಾಪ, ರಿಯಾ! ಇದೊಂದರದ್ದೇ ಅಲ್ಲ, ಯಾವುದೇ ಪ್ರಾಣಿಯನ್ನು ಪಕ್ಷಿಯನ್ನು ಮಾತನಾಡಿಸಿ- ಅಲ್ಲೊಂದು ನೋವಿನ ಕಥೆ ಪಿಸುಗುಡುತ್ತದೆ.

ಆರೋಪಿ ಸ್ಥಾನದಲ್ಲಿ ಮನುಷ್ಯರೇ ನಿಂತಿರುತ್ತಾರೆ. ಹಕ್ಕಿಯೊಂದು ಹುಲ್ಲಿನ ಎಳೆಗಳನ್ನು ಎಲ್ಲೆಲ್ಲಿಂದಲೋ ಹೊತ್ತುತಂದು ಗೂಡು ಕಟ್ಟುವಂತೆ `ಪರಿಸರ ಪ್ರೇಮಿ~ ಎಲ್ಲೆಲ್ಲಿನ ಕಥನಗಳನ್ನೋ ಹೆಕ್ಕಿ ಬ್ಲಾಗಿಲು ರೂಪಿಸಿದ್ದಾರೆ. ಹಾವು, ಸಲಗ, ಸಿಂಹ, ಮೀನು, ಮೊಸಳೆ- ಹೀಗೆ `ಕ್ಷಿತಿಜದೆಡೆಗೆ~ ಬ್ಲಾಗು ಸಣ್ಣದೊಂದು ಜೀವಲೋಕವೇ ಆಗಿಹೋಗಿದೆ. ಅಪರೂಪದ ಚಿತ್ರಗಳಿವೆ. ಅಲ್ಲಲ್ಲಿ, ವಿಡಿಯೊ ಕೊಂಡಿಗಳೂ ಇವೆ.

`ಪರಿಸರ ಪ್ರೇಮಿ~ ಬರಹಗಳ ಕುರಿತು ಬ್ಲಾಗಿನಲ್ಲಿ ಸ್ವಾರಸ್ಯಕರ ಚರ್ಚೆಯೂ ನಡೆದಿದೆ. ಕೆಲವರು ಈ ಬರಹಗಳನ್ನು ವೈಜ್ಞಾನಿಕ ಬರಹಗಳೆಂದು ಒಪ್ಪಲು ಸಿದ್ಧರಿಲ್ಲ. ಕೆಲವರಿಗೆ ಆಕರಗಳ ಚಿಂತೆ. ಈ ಚರ್ಚೆಯೆಲ್ಲ ವೃಥಾ ಸಪ್ಪಳದಂತೆ ತೋರುತ್ತದೆ. ಈ ಎಲ್ಲ ತಕರಾರುಗಳನ್ನು ಹಂಗಿಲ್ಲದೆ `ಪರಿಸರ ಪ್ರೇಮಿ~ಯ ಕಥನಗಳನ್ನು ಸವಿಯಬಹುದು. ಮಕ್ಕಳಿಗೂ ಓದಿ ಹೇಳಬಹುದು.

ಈ ಪರಿಸರ ಪ್ರೇಮಿಯದು ಇನ್ನೊಂದು ಬ್ಲಾಗಿದೆ. ಅದರ ಹೆಸರು `ಕ್ಷಿತಿಜಾನಿಸಿಕೆ~ (parisarapremi.blogspot.in).ಇದು ಅಂತರಂಗದ ಲೋಕ. ತನ್ನ ಪಾಡಿಗೆ ತಾನು ಬ್ಲಾಗಿನ ಹಾಡಿಕೊಂಡಿರುವಂತಹ ಗದ್ಯ-ಪದ್ಯದ ಸಂಕಲನ ಇದು. ಅಲ್ಲೂ ಒಮ್ಮೆ ಇಣುಕಿ ಮುಂದೆ ಸಾಗಲಿಕ್ಕೆ ಅಡ್ಡಿಯಿಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.