ADVERTISEMENT

ಖಾಕಿ ಕೊಟ್ಟ ಆತ್ಮವಿಶ್ವಾಸ

ಲತಾ ಕೃಷ್ಣ
Published 17 ಸೆಪ್ಟೆಂಬರ್ 2013, 19:59 IST
Last Updated 17 ಸೆಪ್ಟೆಂಬರ್ 2013, 19:59 IST
ಖಾಕಿ ಕೊಟ್ಟ ಆತ್ಮವಿಶ್ವಾಸ
ಖಾಕಿ ಕೊಟ್ಟ ಆತ್ಮವಿಶ್ವಾಸ   

ನಾನು ಅಬಕಾರಿ ಇಲಾಖೆಯಲ್ಲಿ ಇನ್‌ಸ್ಪೆಕ್ಟರ್. ನನ್ನ ಬಸ್ ಪ್ರಯಾಣದ ಸವಿನೆನಪೊಂದನ್ನು ಮೆಟ್ರೊದೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. 

ಆ ದಿನ ನನ್ನನ್ನು ಎಲೆಕ್ಷನ್ ಪೋಲಿಂಗ್ ಅಧಿಕಾರಿಯಾಗಿ ನಿಯೋಜಿಸಲಾಗಿತ್ತು. ನಮ್ಮಲ್ಲಿ ಕೆಲವರನ್ನು ಕಾಯ್ದಿರಿಸಿ ರಾತ್ರಿ ೮.೩೦ರ ಸುಮಾರಿಗೆ ಚುನಾವಣಾ ಕರ್ತವ್ಯದಿಂದ ಬಿಡುಗಡೆಗೊಳಿಸಿದರು. ಅಂದು ನನ್ನ ಪುಟ್ಟ ಕಂದನಿಗೆ ಜ್ವರವಿದ್ದುದರಿಂದ, ನನ್ನ ಪತಿ ಅವನನ್ನು ವೈದ್ಯರ ಬಳಿ ಕರೆದೊಯ್ದಿದ್ದ ಕಾರಣ ನನ್ನನ್ನು ಕರೆದೊಯ್ಯಲು ಬರಲಿಲ್ಲ. ಅದೇ ಹೊತ್ತಿಗೆ ಜೋರು ಮಳೆ, ತುಂಬಾ ಬೇಸರದಲ್ಲೇ ಬಿ.ಇ.ಎಲ್. ಸರ್ಕಲ್ ಹತ್ತಿರ ಬಸ್ ಹತ್ತಿದೆ.

ಖಾಲಿ ಇದ್ದ ಮೊದಲ ಸೀಟಿನಲ್ಲಿ ಕುಳಿತೆ. ಹಿಂದಿನಿಂದ ಟಿಕೆಟ್ ಹಂಚುತ್ತಾ ಬಂದ ಮಹಿಳಾ ಕಂಡಕ್ಟರ್ ನನಗೂ ಟಿಕೆಟ್ ಕೊಟ್ಟು, ಒಂದು ರೂಪಾಯಿ ಚಿಲ್ಲರೆ ಆಮೇಲೆ ಕೊಡುವೆ ಎಂದು ಹೇಳಿ ನನ್ನ ಪಕ್ಕದಲ್ಲಿ ಕುಳಿತಳು. ಅಣ್ಣಾ.. ಲಗ್ಗೆರೆಗೆ ಎಷ್ಟೊತ್ತಿಗೆ ಬರ್ತೀವಿ ಎಂದು ಕೇಳಿದಳು. ೯.೪೫ ಸುಮಾರಿಗೆ ಎಂದು ಆತ ಹೇಳಿದ. ದಿನಾಲೂ ಇಷ್ಟು ಹೊತ್ತು ಆಗುತ್ತಾ ಅಂತ ನಾನು ಕೇಳಿದೆ. ಹೌದು ಮೇಡಂ ಅಂದ್ಲು. ಮನೆ ಎಲ್ಲಿ ಎಂದೆ. ಲಗ್ಗೆರೆಯಿಂದ ಒಳಗೆ, ಅಪ್ಪ ಬಂದು ಕರೆದುಕೊಂಡು ಹೋಗ್ತಾರೆ ಎಂದಳು. ಬೆಳಿಗ್ಗೆ ಎಷ್ಟು ಗಂಟೆಗೆ ಬರಬೇಕು ಎಂದು ಕೇಳಿದೆ. ಈಗ ಇಳಿದರೆ ನಾಳೆ ಮಧ್ಯಾಹ್ನ ಡ್ಯೂಟಿಗೆ ಹಾಜರ್ ಎಂದಳು. ಹಾಗಾದ್ರೆ ಪರವಾಗಿಲ್ಲ ಮಧ್ಯಾಹ್ನದವರೆಗೂ ಫ್ರೀ.. ಆದ್ರೂ ಕಷ್ಟ ಅಲ್ವಾ ಎಂದೆ.

ಮೇಡಂ ಇಲ್ಲಿ ಬರೋವ್ರು ಒಬ್ಬೊಬ್ಬರು ಒಂದು ಥರ.. ಮೈಮೇಲೇ ಬೀಳೋ ಗಂಡಸರು, ಚಿಲ್ಲರೆಗಾಗಿ ಕಿರಿ ಕಿರಿ.. ಸಾಕಾಗೋಗುತ್ತೆ ಮೇಡಂ ಎಂದಳು.
ನಂತರ ನೀವು ಯಾವ ಕೆಲಸದಲ್ಲಿದ್ದೀರಿ ಎಂದು ಕೇಳಿದಳು. ಅಬಕಾರಿ ಇಲಾಖೆಯಲ್ಲಿ ಇನ್‌ಸ್ಪೆಕ್ಟರ್ ಎಂದದ್ದಕ್ಕೆ, ಮೇಡಂ ನನಗೂ ಪೋಲೀಸ್ ಆಗಬೇಕು, ಖಾಕಿ ತೊಡಬೇಕು ಅಂತ ಆಸೆ ಇತ್ತು. ಅದು ಈಡೇರಲಿಲ್ಲ, ಆದ್ರೆ ಇದೂ ಖಾಕಿನೇ ಅಲ್ವಾ ಅಂತ ಸಮಾಧಾನ ಎಂದು ಹೇಳಿ ತನ್ನ ಖಾಕಿ ಕೋಟ್ ತೋರಿಸಿ ನಕ್ಕಳು.

ಎರಡು ರೂಪಾಯಿಯ ಕಾಯಿನ್ ಕೈಗಿಟ್ಟಳು. ಇಲ್ಲ ಒಂದು ರೂಪಾಯಿ ಕೊಡಬೇಕಾಗಿರುವುದು ಎಂದಾಗ ಪರವಾಗಿಲ್ಲ ಬಿಡಿ ಮೇಡಂ ನಿಮಗೆ ಲಾಸ್ ಬೇಡ ಎಂದು ನಗುತ್ತಾ ಮೇಲೆದ್ದಳು. ಅಷ್ಟರಲ್ಲಿ ನನ್ನ ಸ್ಟಾಪ್ ಬಂದಿತ್ತು, ಬೇಸರವೂ ಮಾಯವಾಗಿತ್ತು.

ಮನೆಗೆ ಹಿಂದಿರುಗಿದರೂ ಪುಟ್ಟಗೌರಿಯಂತಿದ್ದ ಆ ಮುದ್ದು ಕಂಡಕ್ಟರ್‌ನ ಹಸನ್ಮುಖ, ಆತ್ಮವಿಶ್ವಾಸ ನನ್ನ ಹಿಂಬಾಲಿಸಿತ್ತು. ನಮಗೆ ಕಷ್ಟ ಬಂದಾಗ, ಬೇಸರವಾದಾಗ ನಮಗಿಂತ ಕಷ್ಟದಲ್ಲಿದ್ದು ಬೇಸರಿಸದೇ ಜೀವನಬಂಡಿ ಎಳೆಯುವ ಇಂಥವರು ಮಾದರಿಯಾಗುತ್ತಾರೆ.

ನಿಮ್ಮ ‘ಬಸ್ ಕತೆ’ ಬರೆಯಿರಿ
ನಗರ ಸಾರಿಗೆ ಬಸ್‌ನಲ್ಲಿ ಪ್ರಯಾಣಿಸದವರು ವಿರಳ. ಪ್ರಯಾಣದ ವೇಳೆ ಏನಾದರೊಂದು ಸಿಹಿ ಅನುಭವ ಸಹಪ್ರಯಾಣಿಕರಿಂದಲೋ, ಬಸ್ ಚಾಲಕ/ನಿರ್ವಾಹಕನಿಂದಲೋ ಆಗಿರಬಹುದು. ಅಂಥ ಸವಿನೆನಪುಗಳನ್ನು ‘ಮೆಟ್ರೊ’ದೊಂದಿಗೆ ಹಂಚಿಕೊಳ್ಳಿ. ಮಾನವೀಯ ಮೌಲ್ಯ ಇರುವ ಕತೆಗಳನ್ನಷ್ಟೇ ಬಸ್ ಕತೆ ಅಂಕಣದಲ್ಲಿ ಪ್ರಕಟಿಸಲಾಗುವುದು. ಮೊಬೈಲ್ ಕಳ್ಳತನ, ನಿರ್ವಾಹಕರ ಕೋಪದ ವರ್ತನೆ ಮೊದಲಾದ ಸಮಸ್ಯೆಗಳು ಬೇಡ. ನಿಮ್ಮ ಬರಹ 300 ಪದಗಳಿಗೆ ಮೀರದಂತಿರಲಿ. ನುಡಿ ಅಥವಾ ಬರಹ ತಂತ್ರಾಂಶ ರೂಪದಲ್ಲಿರಲಿ. ನಿಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಸ್ಪಷ್ಟವಾಗಿರಲಿ.

ಇ-ಮೇಲ್: metropv@prajavani.co.in.
ಅಂಚೆ ವಿಳಾಸ: ‘ಮೆಟ್ರೊ’, ಪ್ರಜಾವಾಣಿ, ನಂ.75, ಎಂ.ಜಿ.ರಸ್ತೆ, ಬೆಂಗಳೂರು–1.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.