ADVERTISEMENT

ಗಾಂಧೀಜಿ ಹುಡುಕಾಟ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2017, 19:30 IST
Last Updated 15 ಅಕ್ಟೋಬರ್ 2017, 19:30 IST
‘ಇನ್‌ ಸರ್ಚ್‌ ಆಫ್‌ ಬಾಪು’ ಕಿರುಚಿತ್ರ ತಂಡ
‘ಇನ್‌ ಸರ್ಚ್‌ ಆಫ್‌ ಬಾಪು’ ಕಿರುಚಿತ್ರ ತಂಡ   

ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ಏಳು ದಶಕ ಉರುಳಿದರೂ ಮಹಾತ್ಮ ಗಾಂಧೀಜಿ ಕಂಡ ಕನಸು ಈಡೇರಿಲ್ಲ. ಅವರ ಮೌಲ್ಯಗಳು ಸಾಕಾರಗೊಂಡಿಲ್ಲ. ಗ್ರಾಮ ಸ್ವರಾಜ್ಯದ ಕನಸು ನನಸಾಗಿಲ್ಲ. ಇಂಥಹ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಸಿನಿಮಾ ಬಗ್ಗೆ ಒಲವು ಇರುವ ಸಮಾನ ಮನಸ್ಕರು 23 ನಿಮಿಷದ ‘ಇನ್ ಸರ್ಚ್ ಆಫ್ ಬಾಪು’ ಎಂಬ ಕಿರುಚಿತ್ರ ನಿರ್ಮಿಸಿದ್ದಾರೆ.

ಕಥೆಯಲ್ಲಿ ಮೋಹನ ಎಂಬಾತ ಬಾಲ್ಯದಿಂದಲೂ ಅಪ್ಪನ ಬೋಧನೆಯಂತೆ ಗಾಂಧೀಜಿ ಅವರ ತತ್ವ ಹಾಗೂ ಮೌಲ್ಯಗಳನ್ನು ಮೈಗೂಡಿಸಿಕೊಂಡಿರುತ್ತಾನೆ. ದೊಡ್ಡವನಾದ ನಂತರವೂ ಅದೇ ಮನಸ್ಥಿತಿ ಹೊಂದಿರುತ್ತಾನೆ. ಆತ ಸಮಾಜ ತಿದ್ದುವ ಕೆಲಸಕ್ಕೆ ಮುಂದಾದಾಗ ಎಲ್ಲರಿಂದಲೂ ಅಪಹಾಸ್ಯಕ್ಕೆ ಗುರಿಯಾಗುತ್ತಾನೆ.

ಇನ್ನೊಂದೆಡೆ ಪ್ರೀತಿಸಿದ ಗೆಳತಿಯು ಅವನ ವರ್ತನೆ ಕಂಡು ದೂರವಾಗುತ್ತಾಳೆ. ಕೊನೆಗೆ, ಸಿದ್ಧಾಂತಗಳು ತನಗೆ ಒಪ್ಪುವುದಿಲ್ಲ ಎಂದು ಬದಲಾಗುತ್ತಾನೆ. ಆತ ಎಲ್ಲಿಯೂ ಹೋಗದೆ ಯಾರನ್ನು ಮಾತನಾಡಿಸದೆ ಏಕಾಂಗಿಯಾಗಿ ಕೊಠಡಿಯಲ್ಲಿ ಕಾಲ ಕಳೆಯುತ್ತಾನೆ ಎಂದು ತೋರಿಸುವುದರೊಂದಿಗೆ ಕಿರುಚಿತ್ರ ಮುಕ್ತಾಯವಾಗುತ್ತದೆ. 

ADVERTISEMENT

ತರಕಾರಿ ವ್ಯಾಪಾರ ಹಾಗೂ ಹಣಕಾಸು ವ್ಯವಹಾರ ನಡೆಸುತ್ತಿರುವ ಸುಮನ್‍ ಶೆಟ್ಟಿ ಈ ಚಿತ್ರದ ನಾಯಕ. ಅವರೇ ಕಿರುಚಿತ್ರಕ್ಕಾಗಿ ಒಂದೂವರೆ ಲಕ್ಷ ಹಣ ವ್ಯಯಿಸಿದ್ದಾರೆ. ನಾಯಕಿಯಾಗಿ ಪಲ್ಲವಿ ಶೆಟ್ಟಿ ಅಭಿನಯಿಸಿದ್ದಾರೆ. ಅರವಿಂದ್‍ ರಾಜ್, ರಂಜಿತ್, ಅರ್ಜುನ್‍ ಕೃಷ್ಣ, ಸಂತೋಷ್ ತಾರಾಬಳಗದಲ್ಲಿದ್ದಾರೆ.

ಕಥೆ, ಚಿತ್ರಕಥೆ ಮತ್ತು ನಿರ್ದೇಶನ ಆರ್ಯನ್‍ ಶಿವಕುಮಾರ್ ಅವರದ್ದು. ಸೋಮು ಗಂಗಣ್ಣ ಛಾಯಾಗ್ರಹಣ ಮತ್ತು ವಿಜೇತ್‍ಚಂದ್ರ ಅವರ ಹಿನ್ನೆಲೆ ಸಂಗೀತ ಈ ಕಿರುಚಿತ್ರಕ್ಕಿದೆ.

‘ಮೊದಲು ಈ ಕಥೆ ಆಧರಿಸಿ ಸಿನಿಮಾ ಮಾಡಲು ನಿರ್ಮಾಪಕರಿಗೆ ಕೋರಿಕೊಂಡೆ. ಅನುಭವ ಇಲ್ಲದೆ ಹೆಚ್ಚಿನ ಹೊರೆ ತೆಗೆದುಕೊಳ್ಳುವುದು ಬೇಡ. ಮೊದಲು ಕಿರುಚಿತ್ರ ಮಾಡಿ. ಬಳಿಕ ಸಿನಿಮಾ ಮಾಡಿ ಎಂದು ಸಲಹೆ ನೀಡಿದರು. ಹಾಗಾಗಿ, ಗಾಂಧೀಜಿ ಕುರಿತು ಕಿರುಚಿತ್ರ ನಿರ್ಮಿಸಿದ್ದೇನೆ’ ಎಂದರು ಸುಮನ್‍ ಶೆಟ್ಟಿ.

ಚಿತ್ರ ವೀಕ್ಷಿಸಿದ ಬಿಗ್‍ಬಾಸ್ ಖ್ಯಾತಿಯ ಪ್ರಥಮ್, ‘ನಾನು ಜೀವನದಲ್ಲಿ ಗಾಂಧೀಜಿ ಅವರ ತತ್ವ ಪಾಲಿಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.