ಹಿಂದೂಸ್ತಾನಿ ಸಂಗೀತ ಸಂಸ್ಥೆಗಳಲ್ಲಿ ಪ್ರಮುಖವಾದ `ಸುರ್ ಸಾಗರ್~ನ 31ನೆಯ ವಾರ್ಷಿಕೋತ್ಸವವನ್ನು ಎರಡು ಶ್ರೀಮಂತ ಗಾಯನ ಕಛೇರಿಗಳ ಆಯೋಜನೆಯ ಮೂಲಕ ಚೌಡಯ್ಯ ಸ್ಮಾರಕ ಭವನದಲ್ಲಿ ಆಚರಿಸಲಾಯಿತು.
ಭರತನಾಟ್ಯ ಪ್ರವೀಣೆ ಮತ್ತು ಉತ್ತಮ ಹಿಂದೂಸ್ತಾನಿ ಗಾಯಕಿಯಾಗಿರುವ ಸುಶೀಲಾ ಮೆಹ್ತಾ ಅವರ ನೇತೃತ್ವದಲ್ಲಿ ಇದೀಗ ಸುರ್ ಸಾಗರ್ ಸಂಸ್ಥೆಯು ತನ್ನ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುತ್ತಿದ್ದು ವಾರ್ಷಿಕೋತ್ಸವ ಸಂದರ್ಭದಲ್ಲಿ ಸುಂದರ ಸ್ಮರಣ ಸಂಚಿಕೆಯೊಂದನ್ನು ಹೊರತರಲಾಯಿತು.
ಅಂದು ನಡೆದ ಎರಡೂ ಗಾಯನ ಕಛೇರಿಗಳಲ್ಲಿ ಅಪ್ಪಟ ಹಿಂದೂಸ್ತಾನಿ ಸಂಗೀತ ಸುಧೆ ಪ್ರಭಾವಕಾರಿಯಾಗಿ ಪ್ರವಹಿಸಿತು.
ಮೊದಲ ಕಛೇರಿಯನ್ನು ಮಾಡಿದ ನುರಿತ ಗಾಯಕ ಪಂಡಿತ್ ಎಂ.ವೆಂಕಟೇಶ್ ಕುಮಾರ್ ಕಿರಾಣಾ ಮತ್ತು ಗ್ವಾಲಿಯರ್ ಘರಾಣೆಯ ಈಗಿನ ಪ್ರತಿನಿಧಿಗಳಲ್ಲಿ ಪ್ರಮುಖರಾಗಿದ್ದಾರೆ. ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪುರಸ್ಕಾರವನ್ನು ಇತ್ತೀಚೆಗಷ್ಟೇ ಪಡೆದವರು.
ತಮ್ಮ ಪ್ರಖರ ಗಾಯನದಿಂದ ಸಂಗೀತ ಪ್ರೇಮಿಗಳನ್ನು ಆಕರ್ಷಿಸುತ್ತಾ ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿ ವಿಶೇಷ ಸ್ಥಾನಮಾನಗಳಿಗೆ ಪಾತ್ರರಾದವರು. ಅವರ ಗಮನಾರ್ಹವಾದ ನಿರರ್ಗಳ ಸುಲಲಿತ ಗಾಯನದಲ್ಲಿ ಪುಷ್ಕಳವಾದ ಸಂಗೀತ ಮೈತಳೆಯಿತು. ಅವರ ಕಛೇರಿಯ ಸಂವಿಧಾನ ಸುವ್ಯವಸ್ಥಿತವಾಗಿತ್ತು. ಮೌಲಿಕವಾದ ತಂತ್ರ ಮತ್ತು ಶೃತಿ ಶುದ್ಧ ಸಿರಿಕಂಠದಲ್ಲಿ ಹೊರ ಹೊಮ್ಮಿದ ಅಸಂಖ್ಯ ಸಂಚಾರಗಳು ಸಾಗರ ಗಾಂಭೀರ್ಯ ಹೊಂದಿದ್ದವು. ಆದ್ದರಿಂದ ಬಿಗಿಯಾದ ವಸ್ತು ವಿನ್ಯಾಸ ಏರ್ಪಟ್ಟಿತು.
ಅಲೆಗಳಂತೆ ಮೇಲೆದ್ದು ಲೀನವಾಗುತ್ತಿದ್ದ ನಾದವು ಅವರ ಸುಸ್ಪಷ್ಟ ಸಂಗೀತ ಕಲ್ಪನೆ ಮತ್ತು ಅದು ಚಾಚಿಕೊಳ್ಳುತ್ತಿದ ವಿವಿಧ ಆಯಾಮಗಳನ್ನು ಗುರುತಿಸುವಂತಿತ್ತು. ತಮ್ಮ ಸಿರಿಕಂಠವನ್ನು ವಿಪುಲವಾದ ಮನೋಧರ್ಮ ಕ್ರಿಯೆಗೆ ಹೇಗೆ ದುಡಿಸಿಕೊಳ್ಳಬಹುದು ಎಂಬುದಕ್ಕೆ ಅವರ ಗಾಯನ ಸ್ಪಷ್ಟ ನಿದರ್ಶನವಾಗಿದೆ. ಇವೆಲ್ಲಕ್ಕೂ ಕಿರೀಟಪ್ರಾಯವಾಗಿದ್ದುದು ಅವರ ವಿನಯಶೀಲತೆ, ಸರಳತೆ ಹಾಗೂ ಅಭಿವ್ಯಕ್ತಿಯ ಪ್ರಾಮಾಣಿಕತೆ. ಸಭಾಸದರ ಬಗೆಗೆ ಅವರು ತೋರಿದ ಗೌರವ ಅನನ್ಯವಾದುದು.
ನಿರೀಕ್ಷೆಯಂತೆ ಯಮನ್ ರಾಗದ ನಿರ್ವಹಣೆ ಆಕರ್ಷಿಸಿತು. ಸಾರಗರ್ಭಿತ ಆಲಾಪನೆಯ ಹಿನ್ನೆಲೆಯಲ್ಲಿ `ಪಥ್ ತೋರೆ~ (ವಿಳಂಬಿತ್ ಏಕತಾಳ್) ಮತ್ತು `ಅವಗುಣನ ಕೀಜಿಯೆ~ (ಮಧ್ಯಲಯ ತೀನ್‌ತಾಳ್) ರಚನೆಗಳು ತಾನ್, ಬೋಲ್‌ತಾನ್, ಸರಿಗಮ್ ಮುಂತಾದ ಸೂಕ್ತವಾದ ಅಲಂಕರಣಗಳಿಂದ ಶೋಭಿಸಿದವು. ಅವು ಗಂಭೀರವಾದ ಶಾಸ್ತ್ರೀಯ ಆಶಯಗಳನ್ನು ಒಳಗೊಂಡಿದ್ದವು.
ಹಾಗೆಯೇ ರಾಮದಾಸೀ ಮಲ್ಹಾರ್ ರಾಗದಲ್ಲಿ ಮೂಡಿಬಂದ `ಪ್ರಭು ಮಾನ್ ಲೇ~ ಮತ್ತು `ಬಾದರವಾ ಗಹರ್ ಆವೇ~ ಅಂತ್ಯಗಾಣದ ಸಂಚಾರಗಳಿಂದ ತುಂಬಿಕೊಂಡವು. ಅವರ ಖಚಿತ ಗಾಯನದಿಂದ ಉಂಟಾದ ಕೇಳುಗರ ಪರವಶತೆ ವರ್ಣನಾತೀತವಾದುದು. ಅವರ ಕಛೇರಿಯಲ್ಲಿ ಭಾವ ಗಾಂಭೀರ್ಯ ಮತ್ತು ನಾದ ವಿಲಾಸಗಳು ಮೇಳೈಸಿದವು.
ತಮ್ಮ ಗುರುಗಳಾದ ಡಾ. ಪುಟ್ಟರಾಜ ಗವಾಯಿಗಳ ನಿಷ್ಠಾವಂತ ಶಿಷ್ಯನಾಗಿ ಅವರ ಸಂಪ್ರದಾಯವನ್ನು ಗಾಯಕರು ಪಾಲಿಸಿದುದು ಪ್ರಶಂಸಾರ್ಹ. ಹಾಗಾಗಿ ಅವರು ಹಾಡಿದ `ನಾಮ್ ಜಪನಾ ಕ್ಯೂಂ ಛೋಡ್ ದಿಯಾ ಭಜನ್~ ಮತ್ತು ಬಸವೇಶ್ವರರ ವಚನ `ಒಲೆ ಹೊತ್ತಿ ಉರಿದರೆ~ ಹೃದಯಂಗಮವಾಗಿದ್ದವು.
ಪ್ರಶಂಸಾರ್ಹ ಗಾಯನ
ಎರಡನೆಯ ಕಾರ್ಯಕ್ರಮದಲ್ಲಿ ಎಂಬತ್ತನಾಲ್ಕು ವರ್ಷದ ಹಿರಿಯ ಗಾಯಕಿ ಹಾಗೂ ಠುಮ್ರಿಗಳ ರಾಣಿ ಎಂದೇ ಸುಪ್ರಸಿದ್ಧರಾಗಿರುವ ವಿದುಷಿ ಗಿರಿಜಾ ದೇವಿಯವರು ತಮ್ಮ ವಯಸ್ಸನ್ನು ಮರೆಮಾಚುವ ರೀತಿಯಲ್ಲಿ ಹಾಡಿ ರೋಮಾಂಚನಗೊಳಿಸಿದರು.
ಅವರ ಕಛೇರಿಯ ಶಿಲ್ಪ (structure) ಮತ್ತು ಬಂಧ (texture) ಪೂರಕವಾಗಿತ್ತು. ಬನಾರಸ್ ಮತ್ತು ಸೇನಿಯಾ ಘರಾಣೆಯ ಪೂರಬ್ ಅಂಗ ಗಾಯಕಿ ಶೈಲಿಯ ಜೀವಂತ ದಂತಕಥೆಯಾಗಿರುವ ಅವರು ತಮ್ಮ ಪ್ರಬುದ್ಧ ಗಾಯನದಿಂದ ಮೆರೆದರು.
ತುಂಬಿ ತುಳುಕಾಡಿದ ಸಭೆಯೊಡನೆ ಅವರ ಅನುವರ್ತನೆ ಆತ್ಮೀಯವಾಗಿತ್ತು. ಆಧ್ಯಾತ್ಮಿಕತೆಯ ಗಂಧವನ್ನೂ ಸೂಸಿದ ಅವರ ಮಾತುಗಳು ಪ್ರಿಯವೆನಿಸಿದವು. ಮೊದಲು ಕಛೇರಿಯನ್ನು ನೀಡಿದ ಗಾಯಕರನ್ನು ಅಭಿನಂದಿಸಿ ಆಶೀರ್ವದಿಸಿ ಮಾತೃವಾತ್ಸಲ್ಯದ ಹಿರಿತನವನ್ನು ತೋರುತ್ತಾ ಎಲ್ಲ ಯುವ ಕಲಾವಿದರೂ ಧೈರ್ಯದಿಂದ ಮುನ್ನಡೆಯಬೇಕೆಂದೂ ಪ್ರಾಮಾಣಿಕವಾಗಿ ಕಷ್ಟಪಟ್ಟು ಸಾಧನೆಯನ್ನು ಮಾಡಿ ಕಲೆಯನ್ನು ಕರಗತಮಾಡಿಕೊಳ್ಳಬೇಕೆಂದೂ ಹೇಳಿದ ಮಾತುಗಳು ಪ್ರೇರಕವಾಗಿದ್ದವು.
ನನಗೆ ವಯಸ್ಸಾಗಿದೆ. ಆದರೆ ಸಂಗೀತಕ್ಕೆ ಮುಪ್ಪೆಂಬುದು ಇಲ್ಲ. ಕಾಲ ಕಳೆದಂತೆ ಅದು ಪಕ್ವವಾಗುತ್ತಾ ಹೋಗುತ್ತದೆ. ಬೆಂಗಳೂರಿನಲ್ಲಿ ಹಾಡುವುದು ನನಗೆ ಬಹಳ ಇಷ್ಟ. ಇಂದಿನ ಕಛೇರಿಯಲ್ಲಿ ವೈವಿಧ್ಯಮಯವಾದ ರಚನೆಗಳನ್ನು ತಮಗಾಗಿ ಹಾಡಬೇಕೆಂದಿದ್ದೇನೆ. ಮುಂದೇನಾಗುವುದೋ ಗೊತ್ತಿಲ್ಲ~ ಎಂದ ಜ್ಞಾನ ವೃದ್ಧೆ, ವಯೋವೃದ್ಧೆ ಗಿರಿಜಾ ದೇವಿಯವರು ತಮ್ಮ ಮಾತಿನಂತೆ ರಸಿಕರನ್ನು ಹಸನಾದ ಭಾವಲೋಕಕ್ಕೆ ಕೊಂಡೊಯ್ದರು. ಯುವ ಕಲಾವಿದರನ್ನೂ ನಾಚಿಸುವಂತಹ ಅವರ ಅಪರಿಮಿತ ಉತ್ಸಾಹ ಮತ್ತು ಗಾನ ಕ್ರಿಯೆ ಅನುಪಮವಾಗಿತ್ತು.
ಬಾಲ ಪ್ರತಿಭೆಯಾದ ಅವರು ಪಂಡಿತ್ ಸರಜೂ ಪ್ರಸಾದ್ ಮಿಶ್ರ ಮತ್ತು ಶ್ರೀಚಂದ್ರ ಮಿಶ್ರ ಅವರ ಶಿಷ್ಯೆಯಾಗಿ ತರಬೇತಿಯನ್ನು ಹೊಂದಿ ಹಿಂದೂಸ್ತಾನಿ ಪದ್ಧತಿಯ ಖಯಾಲ್, ಠುಮ್ರಿ, ದಾದ್ರ, ಟಪ್ಪ, ಕಜ್ರಿ, ಹೋರಿ, ಚೈತಿ ಮತ್ತು ಭಜನ್ ಪ್ರಕಾರಗಳಲ್ಲಿ ಪರಿಣತಿಯನ್ನು ಸಾಧಿಸಿದ್ದಾರೆ. ಆರು ದಶಕಗಳಿಂದಲೂ ಸಕ್ರಿಯರಾಗಿರುವ ಅವರು ಶ್ರೇಷ್ಠ ಗಾಯಕಿ ಹಾಗೂ ಆದರ್ಶ ಬೋಧಕಿಯಾಗಿಯೂ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ತುಂಬು ಕಂಠದ ಗಾಯಕಿಯ ಸುಮಧುರ ಗಾಯನದಲ್ಲಿ ಮೂರೂವರೆ ಸಪ್ತಕ (ಸ್ಥಾಯಿ)ಗಳ ಲೀಲಾಜಾಲ ಪ್ರಸ್ತುತಿ ಇದ್ದದ್ದು ಬೆರಗುಗೊಳಿಸಿದ ಸಂಗತಿ. ತಂಬೂರಿ ಶೃತಿಯನ್ನು ಒದಗಿಸಿದ ಅವರ ಯುವ ಗಾಯಕಿ-ಶಿಷ್ಯರಿಗಿಂತಲೂ ಅವರ ಕಂಠ ಶ್ರೀಮಂತವಾಗಿದ್ದುದು ವಿಶಿಷ್ಟವೇ ಸರಿ. ಠುಮ್ರಿ ಗಾಯನದಲ್ಲಿ ತಮ್ಮ ಹಿಡಿತ ಎಂಥದೆಂಬುದನ್ನು ಸಾಬೀತುಪಡಿಸಿದರು.
`ಮೋರ ಸಯ್ಯೊ ಬುಲಾವೆ ಆಧಿ ರಾತ್~ (ದೇಶ್ ರಾಗ) ಮತ್ತು `ಜಾವೋ ಜೀ ಜಾವೋ~ (ಮಾಂಡ್) ಬಂಧಗಳನ್ನು ರಚನೆಗಳ ಗಾಯನದಲ್ಲಿ ಅವರ ಕೌಶಲ ಮತ್ತು ಅಭಿವ್ಯಕ್ತಿ ವಿಧಾನ ಮರೆಯುವಂತಿಲ್ಲ. ಗಾಯನದ ಮಧ್ಯೆ ಹಾಸ್ಯಭರಿತ ಟಿಪ್ಪಣಿಗಳನ್ನೂ ಹೇಳುವ ಮೂಲಕ ಅವರು ಕೇಳುಗರ ಮನಗೆದ್ದರು. ಮಧ್ಯಮದಲ್ಲಿ ಹಾಡುತ್ತಾ ಕಜ್ರಿ ಮತ್ತು ಝೂಲವನ್ನು ಕಲಾವಿದೆ ನಿರೂಪಿಸಿದ ಪರಿ ಅಪೂರ್ವವಾಗಿತ್ತು. `ಸಿಯಾ ಸಂಗ್ ಝೂಲೆ ಬಗಿಯಾ ಮೆ ರಾಮ್ ಲಲನಾ~ ಆಧ್ಯಾತ್ಮಿಕ, ಮಾಧುರ್ಯ, ಕಲಾತ್ಮಕ ಮತ್ತು ಸಾಹಿತ್ಯಕ ಮೌಲ್ಯಗಳಿಂದ ಗಮನ ಸೆಳೆಯಿತು.
ಮೊದಲ ಬಂಧದ `ಆಧಿರಾತ್ ಬುಲಾವೆ~ ಪದಗಳು ಹಾಗೂ ಕೊನೆಯಲ್ಲಿ ಉಲ್ಲೇಖಿಸಿದ ರಚನೆಯ `ರಾಮ ಸಿಯಾ ಝೂಲೆ, ಲಖನ ಝುಲಾವೆ~ ಸಾಲನ್ನು ಅಸಂಖ್ಯ ಮಾದರಿಗಳಲ್ಲಿ ಹಾಡಿ ತಮ್ಮ ಶ್ರೇಷ್ಠತೆಯನ್ನು ಅವರು ಪ್ರಕಟಗೊಳಿಸಿದರು. ಅವರ ಕಲೆಗಾರಿಕೆ ಮತ್ತು ಪ್ರದರ್ಶನ ಸಹಜ ಗತಿಯಲ್ಲಿ ಭಾವ ಸಾಂದ್ರತೆಯ ಹೊಳಹುಗಳನ್ನು ನೀಡಿತು. ವಸ್ತು ನಿರ್ವಹಣೆಯಲ್ಲಿ ಎಲ್ಲಿಯೂ ಜಟಿಲತೆ ಇರಲಿಲ್ಲ. ಅಂದಿನ ಕಛೇರಿಗೆ `ಬಾಬುಲ್ ಮೋರ ನೈಹರ್~ (ಭೈರವಿ)ಯ ಮಧುರ ಸಮಾಪ್ತಿ ದೊರಕಿತು. ಎರಡೂ ಕಛೇರಿಗಳಲ್ಲಿ ವ್ಯಾಸಮೂರ್ತಿಕಟ್ಟಿ (ಹಾರ್ಮೋನಿಯಂ) ಮತ್ತು ರವೀಂದ್ರ ಯಾವಗಲ್ (ತಬಲಾ) ಅವರ ಸಾಥ್ ಪರಿಣಾಮಕಾರಿಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.