ADVERTISEMENT

ಗುಲ್‌ಮೊಹರ್ ಕೆಂಪು

ಆಗಸದ ನೀಲಿ

ಪವಿತ್ರ ಶೆಟ್ಟಿ
Published 18 ಜನವರಿ 2013, 19:59 IST
Last Updated 18 ಜನವರಿ 2013, 19:59 IST
ಗುಲ್‌ಮೊಹರ್ ಕೆಂಪು
ಗುಲ್‌ಮೊಹರ್ ಕೆಂಪು   

ಕಲಾವಿದನ ಕೈಯಲ್ಲಿ ಕುಂಚವಿದ್ದರೆ ಅವನ ಮನಸ್ಸಿನ ಪುಟದಲ್ಲಿ ಸಾವಿರ ಆಲೋಚನೆ, ಭಾವಗಳು ಗರಿಗೆದರುತ್ತವೆ. ತನ್ನೆಲ್ಲಾ ಕಲ್ಪನೆಗಳಿಗೆ ರೆಕ್ಕೆಕಟ್ಟಿ ಹಾರಿಸಬೇಕೆಂಬ ತುಡಿತ ಅಲ್ಲಿ ಜೀವ ತಳೆಯುತ್ತದೆ. ಕಲಾವಿದನ ಕನಸುಗಳಿಗೆ ಯಾವುದೇ ಮಿತಿಯಿಲ್ಲ .ಇದಕ್ಕೆ ಸಾಕ್ಷಿಯೆಂಬಂತೆ ಚಿತ್ರಕಲಾ ಪರಿಷತ್ತಿನಲ್ಲಿ ಬಿ.ಆರ್. ಕೊರ್ತಿ ಅವರ ಕಲೆಯು ಬಂದವರನ್ನು ತನ್ನತ್ತ ಸೆಳೆಯುತ್ತಿವೆ.

ಕಲೆಯ ಬಗ್ಗೆ ತಮ್ಮ ಅಭಿಮಾನ, ಸ್ಫೂರ್ತಿಯನ್ನು ಬಿಚ್ಚಿಡುತ್ತಾ ಕೊರ್ತಿ ಅವರು ಶಾಲಾ ದಿನಗಳನ್ನು ನೆನಪಿಸಿಕೊಂಡರು. ಮಧ್ಯವಯಸ್ಸಿಗೆ ಬಂದಾಗ ನಾನು ಕುಂಚ ಹಿಡಿದದ್ದು ಅಲ್ಲ. ಕಲೆಯೆಂಬುದು ನಾನು ಕಣ್ಣುಬಿಟ್ಟಾಗ ನನ್ನ ಅಂಗೈಯಲ್ಲಿ ಚಿತ್ತಾರ ಮೂಡಿಸಿತ್ತು. ನನ್ನ ತವರೂರು ಕಲೆಯ ಬೀಡು ಎಂದು ಮಾತಿಗಿಳಿದರು.

`ಹುಟ್ಟಿದ್ದು ಬಿಜಾಪುರದ ಚಿತ್ರಕಾರ ಗಲ್ಲಿಯಲ್ಲಿ. ಅಲ್ಲಿಯ ಪರಿಸರದಿಂದ ನನಗೆ ಕಲೆಯತ್ತ ಒಲವು ಮೂಡಿತ್ತು. ಸ್ಮಾರಕ, ಪ್ರಕೃತಿಯನ್ನು ನೋಡುತ್ತಾ ನಾನು ಕಲಿತದ್ದು, ಅದು ನನಗೆ ಕಲಿಸಿದ್ದು ಬಹಳಷ್ಟಿದೆ. ಹಾಗಾಗಿ ಕಲೆಯ ನಂಟು ಇಂದಿನದಲ್ಲ' ಎಂದು ನಸುನಗುತ್ತಾರೆ.
ನಾನು ಯಾವುದೇ ಕಲಾ ತರಗತಿಗೆ ಹೋಗದೆ ಮೊದಲು ಬಿಡಿಸಿದ್ದು ಗಣಪತಿಯ ಚಿತ್ರ. ಯಾಕೆ ಎಂಬ ಪ್ರಶ್ನೆಗೆ ಗಣಪತಿ ನನಗೆ ಇಷ್ಟ ಎಂಬ ಉತ್ತರ ಮಾತ್ರ ಕೊಡಬಲ್ಲೆ. ಆಮೇಲೆ ಹೈಸ್ಕೂಲ್‌ನಲ್ಲಿ ಚಿತ್ರಕಲೆಗೆ ಎಂದು ಹೊಸ ಮೇಷ್ಟ್ರ ನೇಮಕವಾಯಿತು. ಅವರ ಕೈಯಲ್ಲಿ ಸ್ವಲ್ಪ ಪಳಗಿದೆ.

ನನಗೆ ಸ್ಫೂರ್ತಿ ನೀಡಿದ್ದು ನೆರಳು ಬೆಳಕಿನಾಟದ ಚಿತ್ರಕಲೆ. ಅಂದು  ಕಲೆಯ ಮೇಲಿನ ಆಸಕ್ತಿಯಿಂದ ಒಂದು ಚಿತ್ರಕಲಾ ಪ್ರದರ್ಶನಕ್ಕೆ ಹೋಗಿದ್ದೆ. ಅಲ್ಲಿ  ಬಿಜಾಪುರದ ಸ್ಮಾರಕಗಳು, ಮುಂಜಾವು, ಮುಸ್ಸಂಜೆಗಳ ಚಿತ್ತಾರದ ರಂಗನ್ನು ಕಲಾವಿದರೊಬ್ಬರು ಅದ್ಭುತವಾಗಿ ಚಿತ್ರಿಸಿದ್ದರು. “ನನ್ನಲ್ಲೂ ಅಂತಹ ಶಕ್ತಿ ಇದೆ. ನಾನ್ಯಾಕೆ ಮಾಡಬಾರದು ಎಂದು ಅಲ್ಲಿಯೇ ತೀರ್ಮಾನಿಸಿದೆ. ಅಂದಿನ ತೀರ್ಮಾನ ನನ್ನನ್ನು ಇಂದು ಒಬ್ಬ ಕಲಾವಿದನನ್ನಾಗಿ ಮಾಡಿದೆ. ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಡಿಪ್ಲೊಮಾ ಇನ್ ಪೇಂಟಿಂಗ್ ಮುಗಿಸಿದೆ.

ಕಲೆಯ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸಬೇಕೆಂಬ ಉದ್ದೇಶದಿಂದ ಉಪನ್ಯಾಸಕ ಹುದ್ದೆಯತ್ತ ಮನಸ್ಸು ತಿರುಗಿಸಿದೆ. ದಾವಣಗೆರೆಯಲ್ಲಿ `ಸ್ಕೂಲ್ ಆಫ್ ಆರ್ಟ್ ಅಂಡ್ ಕ್ರಾಫ್ಟ್' ಕಾಲೇಜಿನಲ್ಲಿ ಕೆಲಸ ಮಾಡಿದೆ. 25 ವರ್ಷ ಉಪನ್ಯಾಸಕನಾಗಿ ವಿದ್ಯಾರ್ಥಿಗಳ ಕೈಯಲ್ಲಿ ರಂಗಿನ ಚಿತ್ತಾರ ಬಿಡಿಸಲು ಪ್ರಯತ್ನಿಸಿದೆ. ಕಲಿಸುವಲ್ಲಿ ಸಿಗುವ ಆನಂದ ಬೇರೆಲ್ಲೂ ಸಿಗಲ್ಲ.

ವಿದ್ಯಾರ್ಥಿಗಳ ಕುತೂಹಲದ ಪ್ರಶ್ನೆ ಅದಕ್ಕೆ ಪ್ರಯೋಗಾತ್ಮಕ ರೀತಿಯಲ್ಲಿ ಉತ್ತರ ನೀಡುವ ನನ್ನ ಬಯಕೆ, ಈಗ ನೆನೆದರೆ ಎಲ್ಲವೂ ಮಧುರ ನೆನಪುಗಳು. ಕಲೆಯ ಬಗ್ಗೆ ಇಂದಿಗೂ ನಿರ್ದಿಷ್ಟವಾದ ವ್ಯಾಖ್ಯಾನವಿಲ್ಲ. ಅದು ಕಲಾವಿದನೊಬ್ಬನ ಭಾವನೆ, ಆಲೋಚನೆಗಳನ್ನು ಅವಲಂಬಿಸಿರುತ್ತದೆ. ಕಲೆಯೆಂದರೆ ನನ್ನ ಪ್ರಕಾರ ಮನಸ್ಸಿಗೆ ನೆಮ್ಮದಿ ನೀಡುವ ಕಾಯಕ” ಎನ್ನುತ್ತಾರೆ ಅವರು.

“ಒಬ್ಬ ಉಪನ್ಯಾಸಕನಾಗಿ ಎಲ್ಲಾ ರೀತಿಯ ಮಾಧ್ಯಮಗಳಲ್ಲೂ ನಾನು ಕೈಯಾಡಿಸಿದ್ದೇನೆ. ಅದರಲ್ಲಿ ಜಲವರ್ಣವೆಂದರೆ ನನಗೆ ಅಚ್ಚುಮೆಚ್ಚು.  ಮೇ ತಿಂಗಳಲ್ಲಿ ಗುಲ್‌ಮೊಹರ್ ಕಾಲ. ಆಗ ನನ್ನ ಕುಂಚ ಕೆಂಪು ರಂಗಿನಲ್ಲಿ ಸಂಭ್ರಮಿಸುತ್ತದೆ. ಹೀಗೆ ಋತುಮಾನಕ್ಕೆ ತಕ್ಕಂತೆ ನನ್ನ ಕಲೆಯೂ ಬದಲಾಗುತ್ತಾ ಇರುತ್ತದೆ. ಈ ಬಾರಿಯ ವಿಶೇಷವೇನೆಂದರೆ `ಇನ್‌ಫಿನಿಟಿ ಆಫ್ ಬ್ಲೂ ಹೆವನ್'. ನೀಲಿ ಬಣ್ಣಗಳದೇ ಇಲ್ಲಿ ಮುಖ್ಯ ಪಾತ್ರ.

ನೀಲಿ ಬಣ್ಣವೆಂದರೆ ವಿಶಾಲತೆಯ ಸಂಕೇತ. ಇವುಗಳನ್ನು ನೋಡಿದರೆ ಮನಸ್ಸು ಮುದಗೊಳ್ಳುತ್ತದೆ. ಕುಂಚ ಹಿಡಿದ ಕಲಾವಿದ ಮಾತ್ರ ರಂಗಿನಲ್ಲಿ ಸಂಭ್ರಮಿಸುವುದಿಲ್ಲ. ಸಾಮಾನ್ಯ ಕೂಡ ಈ ಬಣ್ಣಗಳನ್ನು ನೋಡುವುದರ ಮೂಲಕ ಖುಷಿ ಪಡುತ್ತಾನೆ. ಮೇಲುಗಡೆ ನೀಲಿ ಹೊದಿಕೆ ಹೊದ್ದು ಮಲಗಿದ್ದಂತಿರುವ ಆಕಾಶ,  ಅದನ್ನೇ ನೋಡುತ್ತಾ ಮಲಗಿದರೆ ಮನಸ್ಸಿನ ದುಗುಡವೆಲ್ಲಾ ಆವಿಯಾಗಿ ಆ ರಂಗಿನೊಂದಿಗೆ ಬೆರತ ಅನುಭವವಾಗುತ್ತದೆ.

ADVERTISEMENT

ಬಣ್ಣಕ್ಕಿರುವ ಶಕ್ತಿಯೇ ಅಂಥದ್ದು. ಇಂದು ಯುವಜನಾಂಗದಲ್ಲಿ ಕಲೆಯತ್ತ ಆಸಕ್ತಿ ಬೆಳೆದಿದೆ. ಹಸಿ ಮಣ್ಣಿನಂತಿರುವ ಅವರ ಮನಸ್ಸಿನ ಮೇಲೆ ಬಣ್ಣದ ಚಿತ್ತಾರ ಮೂಡಿಸುವ ಕೈಗಳು ಪಕ್ವವಾಗಿರಬೇಕು. ಶಾಲೆ, ಅಧ್ಯಾಪಕರ ಪಾತ್ರ ಇದರಲ್ಲಿ ಮುಖ್ಯ” ಎಂದು ಅವರು ಮಾತಿಗೆ ವಿರಾಮ ನೀಡುತ್ತಾರೆ. ಕಣ್ಮನ ತಣಿಸುವ ಬಿ.ಆರ್. ಕೊರ್ತಿ ಅವರ 41 ಕಲಾಕೃತಿಗಳನ್ನು ಚಿತ್ರಕಲಾ ಪರಿಷತ್ತಿನಲ್ಲಿ  ಜ. 20ರವರೆಗೆ ಪ್ರದರ್ಶನಕ್ಕಿಡಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.