ADVERTISEMENT

ಚಂದನ ಆಹಾರ ಸೂತ್ರ

ಎಚ್.ಎಸ್.ರೋಹಿಣಿ
Published 15 ಏಪ್ರಿಲ್ 2013, 19:59 IST
Last Updated 15 ಏಪ್ರಿಲ್ 2013, 19:59 IST

`ಪಾನಿಪುರಿ ತಿನ್ನಲು ತೊಡಗಿದರೆ.... ಒಂದು, ಎರಡು, ಮೂರು ಪ್ಲೇಟು ನನಗೆ ಸಾಕಾಗಲ್ಲ. ಮೂರನೇ ಪ್ಲೇಟಿಗಿಂತ ಜಾಸ್ತಿ ಕೇಳಿದರೆ, ಸುತ್ತಮುತ್ತ ಇರುವವರು ಒಂಥರಾ ನೋಡುತ್ತಾರೆ. ಅದಕ್ಕೇ ಮನೆಯಲ್ಲಿ ಅಮ್ಮನ ಕೈಲಿ ಮಾಡಿಸಿಕೊಂಡು ಸಾಕು ಎನ್ನುವವರೆಗೆ ತಿನ್ನುವುದು ನನಗೆ ರೂಢಿ. ಆದರೆ ಅದನ್ನು ಸಂಪೂರ್ಣವಾಗಿ ತ್ಯಜಿಸಬೇಕಾದ ಸ್ಥಿತಿ ಬಂದಿದೆ' ಎಂದರು ನಟಿ ಚಂದನ.

ಸಿನಿಮಾ ನಟಿಯಾಗಬೇಕೆಂಬ ಕನಸು ಹೊತ್ತಿರುವ ಅವರಿಗೆ ದೇಹ ಸೌಂದರ್ಯ ಕಾಯ್ದುಕೊಳ್ಳುವುದು ಅಗತ್ಯ ಎನಿಸಿದೆ. ಅದಕ್ಕೇ ಬಾಯಿರುಚಿಯನ್ನು ಹದ್ದುಬಸ್ತಿನಲ್ಲಿಡಬೇಕಾಗಿದೆ. ಅದನ್ನು ಬೇಸರದಿಂದ ಹೇಳಿಕೊಳ್ಳುವ ಅವರು ಇಷ್ಟದ ಬೆಣ್ಣೆ, ಚೀಸ್‌ಗಳ ಮೇಲೂ ನಿಷೇಧ ಹಾಕಿಕೊಂಡಿರುವುದಾಗಿ ಅರುಹುತ್ತಾರೆ.

ಕಿರುತೆರೆಯಿಂದ ಬೆಳ್ಳಿತೆರೆಯತ್ತ ಕಾಲಿಟ್ಟಿರುವ ಚಂದನ `ರಂಗನ್ ಲವ್‌ಸ್ಟೋರಿ' ಚಿತ್ರದ ನಾಯಕಿ. ಸಿನಿಮಾ ನಟಿಯಾದ ಮೇಲೆ ದೇಹ ನಿರ್ವಹಣೆಯ ಅಗತ್ಯ ಕಂಡುಕೊಂಡಿರುವ ಅವರು ತಮ್ಮ ದಿನಚರಿಯನ್ನು ಬದಲಿಸಿಕೊಂಡಿದ್ದಾರೆ. ನಿಧಾನವಾಗಿ ತಮ್ಮ ಸೋಮಾರಿ ಮನೋವೃತ್ತಿಯನ್ನು ತ್ಯಜಿಸಿ ಚಟುವಟಿಕೆಯ ಜೀವನಕ್ಕೆ ಒಗ್ಗಿಕೊಳ್ಳುತ್ತಿದ್ದಾರಂತೆ.

`ನಮ್ಮದು ಸಸ್ಯಾಹಾರಿ ಕುಟುಂಬ. ಆದರೆ ನನ್ನ ಫಿಟ್‌ನೆಸ್ ಗುರು ಕೃಷ್ಣ ಮೊಟ್ಟೆ ತಿನ್ನಲು ಹೇಳಿದ್ದಾರೆ. ಮನೆಯಲ್ಲಿ ಅದನ್ನು ಬೇಯಿಸುವುದು ತುಂಬಾ ಬೇಸರದ ಕೆಲಸ. ಅಡುಗೆಮನೆಯಲ್ಲಿ ನಾನು ಮೊಟ್ಟೆ ಬೇಯಿಸುವಾಗ ಅಮ್ಮ 20 ನಿಮಿಷ ಹೊರಗಿರುತ್ತಾರೆ.

ಅವರಿಗೆ ಆ ವಾಸನೆ ಕಂಡರೆ ಆಗುವುದಿಲ್ಲ. ನಾನು ಮೊಟ್ಟೆ ತಿಂದು ಮುಗಿಸಿದ ನಂತರವೇ ಅವರು ಒಳಗೆ ಬರುವುದು. ಸಿನಿಮಾ ಅವಕಾಶಗಳು ಬರುತ್ತಿವೆ. ಇಂಥ ಸಮಯದಲ್ಲಿ ಅನಿವಾರ್ಯಕ್ಕೆ ಕಟ್ಟುಬಿದ್ದು ನಾನು ಅದನ್ನು ಅನುಸರಿಸುತ್ತಿರುವೆ. ಪ್ರತಿದಿನ ಬೆಳಿಗ್ಗೆ ಎರಡು, ರಾತ್ರಿ ಎರಡು ಮೊಟ್ಟೆ ತಿನ್ನುವುದನ್ನು ರೂಢಿ ಮಾಡಿಕೊಂಡಿರುವೆ' ಎಂದು ತಮ್ಮ ಬದಲಾದ ದಿನಚರಿಯ ಮೊದಲ ಪುಟ ತಿರುವುತ್ತಾರೆ.

`ದೇಹದಲ್ಲಿ ಉಷ್ಣತೆ ಜಾಸ್ತಿಯಾದರೆ ಮೊಡವೆಗಳು ಬರುತ್ತವೆ. ಅವುಗಳನ್ನು ತಡೆಯಲು ಪ್ರತಿದಿನ ಎಳೆನೀರು ಕುಡಿಯಲು ಹೇಳಿದ್ದಾರೆ. ಬೆಳಿಗ್ಗೆ ಸಂಜೆ ಒಂದೊಂದು ಪಚ್ಚಬಾಳೆ ಹಣ್ಣು ತಿನ್ನುವೆ. ಮಧ್ಯಾಹ್ನ ಊಟವಾದ ಮೇಲೆ ಒಂದು ಕ್ಯಾರೆಟ್, ರಾತ್ರಿ ಮಲಗುವ ಮುಂಚೆ ಇನ್ನೊಂದು ಕ್ಯಾರೆಟ್ ಮತ್ತು ಸೌತೆಕಾಯಿ ಸೇವಿಸುತ್ತೇನೆ. ಜೊತೆಗೆ ಬೆಳಿಗ್ಗೆ ಮತ್ತು ರಾತ್ರಿ ಒಂದೊಂದು ಲೋಟ ಹಾಲು ಕುಡಿಯುತ್ತೇನೆ' ಎಂದು ಎರಡನೇ ಪುಟ ಮಗುಚುತ್ತಾರೆ.

ಊಟದಲ್ಲಿ ಹೆಚ್ಚಾಗಿ ಚಪಾತಿ ತಿನ್ನುವ ಚಂದನ ಕೊಂಚ ಮೊಸರು ಸೇವಿಸುತ್ತಾರಂತೆ. ಅತಿ ಸಣ್ಣಗಾಗಬಾರದು ಎಂಬ ಎಚ್ಚರಿಕೆಯೂ ಅವರಿಗಿದೆ.

ಯಶವಂತಪುರದಲ್ಲಿ ಇರುವ `ಫಿಟ್ ಅಂಡ್ ಶೈನ್' ನಡೆಸುತ್ತಿರುವ ಕೃಷ್ಣ ಚಂದನ ಅವರ ಫಿಟ್‌ನೆಸ್ ಗುರು. ಇತ್ತೀಚೆಗಷ್ಟೇ ಅವರ ಜಿಮ್‌ನಲ್ಲಿ ವರ್ಕ್‌ಔಟ್ ಆರಂಭಿಸಿರುವ ಚಂದನ ಎರಡು ಗಂಟೆ ವರ್ಕ್‌ಔಟ್ ಮಾಡಿದ ನಂತರ 45 ನಿಮಿಷ ವಿಶ್ರಾಂತಿ ಪಡೆದುಕೊಂಡು ಮತ್ತೆ ಒಂದೂಕಾಲು ಗಂಟೆ ಬೆವರು ಸುರಿಸುತ್ತಾರಂತೆ. ಒಟ್ಟು ಮೂರುಕಾಲು ಗಂಟೆ ವರ್ಕ್‌ಔಟ್ ಮಾಡುವ ಅವರ ವ್ಯಾಯಾಮಗಳ ಪಟ್ಟಿಯಲ್ಲಿ ಭುಜ ಅಗಲ ಮಾಡುವ ಲಾರ್ಜ್ ಮತ್ತು ಚೆಸ್ಟ್ ವ್ಯಾಯಾಮ, ಸೈಕ್ಲಿಂಗ್, ಡಂಬಲ್ಸ್ ಎತ್ತುವುದು, ವಾರ್ಮ್ ಅಪ್ ಸೇರಿವೆ.

`ಇದೀಗ ವರ್ಕ್‌ಔಟ್ ಆರಂಭಿಸಿರುವುದರಿಂದ ಆರಂಭಿಕ ಹಂತದ ವ್ಯಾಯಾಮ (ವಾರ್ಮ್‌ಅಪ್) ಹೆಚ್ಚಾಗಿ ಬೇಕಾಗುತ್ತದೆ. ಯಾಕೆಂದರೆ ಶಾಲಾ ದಿನಗಳಲ್ಲಿ ವಾಲಿಬಾಲ್, ಥ್ರೋಬಾಲ್ ಆಡುತ್ತ್ದ್ದಿದ ನಾನು ಕಾಲೇಜಿಗೆ ಬಂದ ತಕ್ಷಣ ಅವುಗಳಿಂದ ದೂರವಾದೆ. ಅದರಿಂದ ದೇಹ ಹೇಳಿದಂತೆ ಕೇಳುತ್ತಿರಲಿಲ್ಲ. ಈಗ ದೇಹವನ್ನು ಹಗುರ ಮಾಡಿಕೊಳ್ಳಬೇಕಿದೆ' ಎನ್ನುವ ಚಂದನ ಅವರಿಗೆ ಬದಲಾದ ತಮ್ಮ ದಿನಚರಿಯಿಂದ ನಿದ್ರೆ ಸಾಕಾಗುತ್ತಿಲ್ಲ ಎಂಬ ಬೇಸರವೂ ಇದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.