ಇದೇ ಬನ್ನೇರುಘಟ್ಟ ಕಾಡಿನ ಮಧ್ಯೆ ಆನೆಗಳ ಚಿತ್ರ ಸೆರೆಹಿಡಿಯಲು ಹೋಗಿ ಪ್ರಾಣ ಕಳೆದುಕೊಂಡ ಸೂರಪ್ಪ ರಮೇಶ್ ನೆನಪಿನ್ನೂ ಮಾಸಿಲ್ಲ. ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನ 14 ವಿದ್ಯಾರ್ಥಿಗಳ ತಂಡದಲೊಬ್ಬನಾಗಿದ್ದ ನವೀನ್ ಸಕಲೇಶಪುರದ ಸಮೀಪದ ಕಬ್ಬಿನಾಲೆ ರಕ್ಷಿತಾರಣ್ಯ ಪ್ರದೇಶದ ನದಿಯಲ್ಲಿ ಮುಳುಗಿ ಸತ್ತಿದ್ದೂ ಸ್ಮೃತಿಪಟಲದಲ್ಲಿ ಹಸಿಹಸಿಯಾಗಿದೆ.
ಅಷ್ಟರಲ್ಲೇ ಮತ್ತೊಂದು ಸುದ್ದಿ. 24ರ ಹರೆಯದ ಟೆಕ್ಕಿ ಸಾತ್ವಿಕ್, ಗೆಳೆಯರೊಂದಿಗೆ ಚಾರಣಕ್ಕೆ ತೆರಳಿ ಎರಡು ದಿನಗಳ ಬಳಿಕ ಹೆಣವಾಗಿ ಹಿಂದಿರುಗಿದ್ದಾನೆ. ಕಳೆದ ಆರು ತಿಂಗಳಿನಲ್ಲಿ ನಗರದ ಮೂರು ಮಂದಿ `ಟ್ರೆಕ್ಕಿಂಗ್~ ಹವ್ಯಾಸದ ನೆಪದಲ್ಲಿ ಜೀವ ತೆತ್ತಿದ್ದಾರೆ.
ಒಮ್ಮೆ ನಡೆದ ತಪ್ಪು ಏಕೆ ಪುನರಾವರ್ತನೆ ಆಗುತ್ತಿದೆ? ಅಷ್ಟೆಲ್ಲಾ ಮಾಹಿತಿ ನೀಡಿದ್ದರೂ ಈ ದುರ್ಘಟನೆ ಏಕೆ ಸಂಭವಿಸಿತು? ಸಾಹಸ ಹವ್ಯಾಸದ ಸೆಳೆತ ಪ್ರಾಣಕ್ಕೆ ಕುತ್ತು ತರುತ್ತಿದೆಯೇ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ...
`ನಿಮ್ಮ ಹಾಬಿ ಏನು?~ ಎಂಬ ಪಟ್ಟಿಯಲ್ಲಿ ಇಂದು ಅನೇಕರು ಬರೆದುಕೊಳ್ಳಲು ಇಷ್ಟಪಡುವ ಹವ್ಯಾಸಗಳಲ್ಲಿ `ಟ್ರೆಕ್ಕಿಂಗ್~ ಕೂಡ ಒಂದು. ಹಲವರಿಗೆ ಇದು ಪಟ್ಟಣದ ಗಿಜಿಗಿಜಿ ಬದುಕಿನಿಂದ ವಿರಾಮ ಪಡೆದುಕೊಂಡು ಮನೋಲ್ಲಾಸ ಪಡೆಯುವ ದಾರಿ. ಮತ್ತೆ ಕೆಲವರಿಗೆ ಹೊಸ ಜಾಗ ನೋಡುವ ಕುತೂಹಲ, ಸಾಹಸ.
`ಸ್ನೇಹಿತರು ಹೋಗಿದ್ದಾರೆ, ನಾವೂ ಹೋಗಬೇಕು~ ಎಂಬ ಧೋರಣೆ ಮತ್ತೆ ಕೆಲವರದ್ದು. ಫೇಸ್‌ಬುಕ್‌ನಲ್ಲಿ ಫೋಟೊ ಅಪ್‌ಲೋಡ್ ಮಾಡಿ ಅತಿ ಹೆಚ್ಚು ಕಾಮೆಂಟ್ಸ್ ಪಡೆಯುವ ಹುಚ್ಚು ಇರುವವರೂ ಇದ್ದಾರೆ.
ಈ ಎಲ್ಲಾ ಆಧುನಿಕ ಬದುಕಿನ ಧಾವಂತಗಳ ಮಧ್ಯೆ ಅತಿ ಮುಖ್ಯವಾದ ಟ್ರೆಕ್ಕಿಂಗ್ ಸೂತ್ರಗಳನ್ನು ಗಾಳಿಗೆ ತೂರುವವರೇ ಹೆಚ್ಚು. ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ಕಾಡನ್ನು ಪ್ರವೇಶಿಸಬಾರದು ಎಂಬುದು ಚಾರಣಕ್ಕೆ ಹೊರಡುವ ಕೆಲವರಿಗೆ ತಿಳಿದಿರುವುದಿಲ್ಲ.
ಆನೆ ದಾರಿಯಲ್ಲಿ...
`ಇದೇ ಕಾರಣಕ್ಕೆ ಹೆಚ್ಚು ಅನಾಹುತಗಳು ವರದಿಯಾಗುತ್ತಿವೆ. ಮೊದಲ ಬಾರಿ ಟ್ರೆಕ್ಕಿಂಗ್‌ಗೆ ಹೊರಡುವ ಕೆಲವರಿಗೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಅರಿವು ಇರುವುದಿಲ್ಲ. ಗೆಳೆಯರೊಂದಿಗೆ ಸೇರಿ ತಂಡವಾಗಿ ಹೊರಟುಬಿಡುತ್ತಾರೆ. ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ಕಾಡಿಗೆ ಕಾಲಿಡುವುದು ಮೊದಲನೇ ತಪ್ಪು.
ಅದೂ ಆನೆಗಳು ವಾಸಿಸುವ ಪ್ರದೇಶಗಳಲ್ಲಿ ಟ್ರೆಕ್ಕಿಂಗ್ ಹೋಗುವುದು ಮೂರ್ಖತನ. ಬನ್ನೇರುಘಟ್ಟದಲ್ಲಿ ಅರಣ್ಯಜಾಗದ ಅತಿಕ್ರಮಣ ಹೆಚ್ಚಾಗಿದೆ. ಪರಿಣಾಮ ಪ್ರಾಣಿಗಳಿಗೆ ಮೀಸಲಿಟ್ಟ ಸ್ಥಳ ಮತ್ತಷ್ಟು ಕಡಿಮೆಯಾಗಿದೆ. ಇತರೆ ಪ್ರದೇಶಗಳಿಗೆ ಹೋಲಿಸಿದರೆ ಇಲ್ಲಿನ ಆನೆಗಳದ್ದು ಆಕ್ರಮಣಕಾರಿ ಮನೋಭಾವ.
ಅವುಗಳ ವಾಸಸ್ಥಳದ ವಿಸ್ತೀರ್ಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವುದೂ ಇದಕ್ಕೊಂದು ಕಾರಣವಿರಬಹುದು. ಇಲ್ಲಿ ಪ್ರಾಣಿ ಮತ್ತು ಮನುಷ್ಯರ ನಡುವಿನ ಸಂಘರ್ಷ ಹೆಚ್ಚುತ್ತಿರುವುದು ಕಳವಳಕಾರಿ~ ಎನ್ನುತ್ತಾರೆ ಯುವ ಚಾರಣಿಗ ಅಮೋಘವರ್ಷ. ಚಾರಣ ಇವರಿಗೆ ವೃತ್ತಿಪರ ಹವ್ಯಾಸ.
`ಪ್ರಾಣಿಗಳ ಭಾಷೆ ಗೊತ್ತಿರುವ ಗಾರ್ಡ್ ಜತೆಗಿದ್ದರೆ ಅಪಾಯದ ಸಾಧ್ಯತೆ ಕಡಿಮೆ. ಸುಮ್ಮನೆ ಸಂತೋಷಕ್ಕಾಗಿ ಚಾರಣ ಹೋಗುವವರೂ ಮೊದಲು ತಾವು ಹೋಗಲಿರುವ ಸ್ಥಳದ ಬಗ್ಗೆ ಒಂದಷ್ಟು ಮಾಹಿತಿ ಕಲೆಹಾಕುವುದು ಒಳಿತು. ಇದರಿಂದ ಸ್ಥೂಲವಾಗಿ ಸ್ಥಳದ ಪರಿಚಯವೂ ಆಗುತ್ತದೆ. ಟ್ರೆಕ್ಕಿಂಗ್ ಮೂಲಮಂತ್ರ ತಿಳಿಯದೇ ಹೋದರೆ ಇಂತಹ ಅನಾಹುತಗಳಾಗುತ್ತವೆ.
ಎಷ್ಟೇ ಪರಿಚಯ ಇರುವ ಕಾಡುಗಳಾದರೂ ಕೆಲವೊಮ್ಮೆ ಮೋಸ ಹೋಗುತ್ತೇವೆ. ದಾರಿ ತಪ್ಪಿ ಇನ್ನೆಲ್ಲಿಗೋ ಹೋಗುವ ಅನಿರೀಕ್ಷಿತ ಸಂದರ್ಭ ಕಾಡಿನಲ್ಲಿ ಸೃಷ್ಟಿಯಾಗಬಹುದು. ಅನುಭವಿ ಇಲ್ಲವೇ ವೃತ್ತಿಪರ ಚಾರಣಿಗರಿಗೆ ಇಂತಹ ಅನುಭವವಾಗುವುದು ಕಡಿಮೆ~ ಎಂಬುದು ಅವರ ಅನುಭವದ ಮಾತು.
`ಟೆಕ್ಕಿಗಳಿಗೆ ವಾರಕ್ಕೆ ಐದು ದಿನ ಕೆಲಸವಾದರೂ ಅಲ್ಲಿರುವ ಒತ್ತಡ ಹೆಚ್ಚು. ಕಂಪೆನಿಗಳಲ್ಲಿ ಪ್ರಾಜೆಕ್ಟ್, ಡೆಲಿವರಿ, ಡೆಡ್‌ಲೈನ್ ಮಧ್ಯೆ ಕಳೆದು ಹೋಗಿರುತ್ತಾರೆ. ಸಿಗುವ ಎರಡು ದಿನ ರಜೆಯಲ್ಲಿ ಪಟ್ಟಣದ ಕಿರಿಕಿರಿ ಬಿಟ್ಟು ಪ್ರಶಾಂತ ಸ್ಥಳಕ್ಕೆ ಹೋಗುವ ಮನಸ್ಸಾಗುವುದು ಸಹಜ. ಆ ಕಾರಣಕ್ಕೆ ಮುನ್ನೆಚ್ಚರಿಕಾ ಕ್ರಮಗಳತ್ತ ಗಮನ ಹರಿಸದೆ ಏಕಾಏಕಿ ಬೈಕ್ ಹತ್ತಿ ಪ್ರವಾಸಕ್ಕೆ ತೆರಳುವುದೂ ತಪ್ಪು.
ಹೊರಟ ತಂಡ ಯಾವುದೇ ಕಾರಣಕ್ಕೂ ಪ್ರತ್ಯೇಕವಾಗಬಾರದು. ಸಾತ್ವಿಕ್ ಘಟನೆಯಲ್ಲೂ ಅಷ್ಟೇ. ಮೂರು ಮಂದಿ ಜತೆಯಲ್ಲಿದ್ದರೆ ದೊಡ್ಡ ಸದ್ದು ಮಾಡಿ ಆನೆಗಳನ್ನು ಹಿಮ್ಮೆಟ್ಟಿಸಬಹುದಿತ್ತೇನೋ~ ಎನ್ನುತ್ತಾರೆ ಮೂವತ್ತು ವರ್ಷಗಳಿಂದ ಚಾರಣ ಮಾಡುತ್ತಿರುವ ರಾಜು.
ಇಂದು ಚಾರಣಕ್ಕೆ ಹೊರಡುವ ಬಹುತೇಕರಿಗೆ ಮಾಹಿತಿ ನೀಡಲೆಂದೇ `ಅಡ್ವೆಂಚರ್ ಟೂರ್ ಆಪರೇಟರ್ಸ್ ಆಫ್ ಕರ್ನಾಟಕ~ ಎಂಬ ಹೊಸ ಸಂಸ್ಥೆ ರೂಪುತಳೆದಿದೆ.
ಕಳೆದ ತಿಂಗಳಷ್ಟೇ ಅದು ನೋಂದಾಯಿತವಾಗಿದ್ದು, ಚಾರಣ ಕುರಿತ ಪ್ರಾಥಮಿಕ ಮಾಹಿತಿ, ತಕ್ಷಣಕ್ಕೆ ಕಾಡು ಪಾಣಿಗಳು ಕಂಡರೆ ಅವುಗಳನ್ನು ಎದುರಿಸುವ ವಿಧಾನಗಳು, ಪ್ರಥಮ ಚಿಕಿತ್ಸೆ ಮೊದಲಾದ ಮೂಲ ಸಂಗತಿಗಳ ಬಗ್ಗೆ ಚಾರಣಿಗರಿಗೆ ಮಾಹಿತಿ ನೀಡುವುದು ಸಂಸ್ಥೆಯ ಉದ್ದೇಶ. ಚಾರಣದೊಂದಿಗೆ ವಾಟರ್ ಸ್ಪೋರ್ಟ್ಸ್, ಸರ್ಫಿಂಗ್, ಏರೋ ಸ್ಪೋರ್ಟ್ಸ್ ಆಸಕ್ತರೂ ಇಲ್ಲಿ ತರಬೇತಿ ಪಡೆಯಬಹುದು.
ಸರ್ಕಾರಿ ಸಂಸ್ಥೆಯೂ ಇದೆ
`ಜನರಲ್ ತಿಮ್ಮಯ್ಯ ನ್ಯಾಷನಲ್ ಅಕಾಡೆಮಿ ಆಫ್ ಅಡ್ವೆಂಚರ್~ ಸರ್ಕಾರದ ಅಂಗಸಂಸ್ಥೆ. ಸಾಹಸಿಗರಿಗೆ ತರಬೇತಿ ನೀಡುವುದು, ಚಾರಣಕ್ಕೆ ಕರೆದೊಯ್ಯುವುದು ಈ ಸಂಸ್ಥೆ ಜಾರಿಗೆ ಬಂದ ಉದ್ದೇಶ. 1999-2000ರ ಬಳಿಕ ಇದರ ಎಲ್ಲಾ ಚಟುವಟಿಕೆಗಳು ಸ್ಥಗಿತಗೊಂಡಿದ್ದವು.
ನಾಮಕಾವಸ್ಥೆ ಎಂಬಂತಿದ್ದ ಈ ಸಂಸ್ಥೆಗೆ ಈ ವರ್ಷ ಹೊಸ ರೂಪು ನೀಡಲಾಗಿದೆ. ಇಲ್ಲಿ ಟ್ರೆಕ್ಕಿಂಗ್, ರಾಕ್ ಕ್ಲೈಂಬಿಂಗ್, ಪ್ಯಾರಾ ಸೈಲಿಂಗ್, ಕನೂಯಿಂಗ್, ಕಯಾಕಿಂಗ್, ವೈಟ್ ವಾಟರ್ ರಾಫ್ಟಿಂಗ್ ಮೊದಲಾದ ಸಾಹಸಗಳ ಬಗ್ಗೆ ತರಬೇತಿ ನೀಡಲಾಗುತ್ತದೆ.
`ನಕ್ಸಲೈಟ್ ಸಮಸ್ಯೆ ರಾಜ್ಯದಲ್ಲಿ ಕಾಣಿಸಿಕೊಂಡ ಬಳಿಕ ಚಾರಣಕ್ಕೆ ಹೋಗುವವರ ಸಂಖ್ಯೆ ಇಳಿಮುಖವಾಯಿತು. ಪ್ರತಿವರ್ಷ ರಾಕ್ ಕ್ಲೈಂಬಿಂಗ್, ಏರೋ ಸ್ಪೇಸ್ ಸ್ಪೋರ್ಟ್ಸ್ ಆಯೋಜಿಸುತ್ತಿದ್ದೆವಷ್ಟೇ. ಈ ಬಾರಿ 20 ಜನರ ತಂಡವನ್ನು ರಚಿಸಿ ಚಾರಣಕ್ಕೆ ತೆರಳುವ ಯೋಜನೆಯಿದೆ. ತಂಡ ರಚಿಸುವುದೂ ನಮಗೆ ಸವಾಲಿನ ಕೆಲಸ.
ಒಂದೆರಡು ಬಾರಿ ನಮ್ಮಂದಿಗೆ ಬಂದವರು ತಮಗೆ ದಾರಿ ಗೊತ್ತು ಎಂದುಕೊಂಡು ತಾವೇ ಸ್ವತಂತ್ರವಾಗಿ ಹೋಗಲು ಮುಂದಾಗುತ್ತಾರೆ. ಹೀಗಾದಾಗ ತಂಡದ ಒಗ್ಗಟ್ಟು ಉಳಿಸಿಕೊಳ್ಳುವುದು ಕಷ್ಟವಾಗುತ್ತದೆ~ ಎನ್ನುತ್ತಾರೆ ವಿಭಾಗದ ಮುಖ್ಯಸ್ಥ ಉಮಾಶಂಕರ್.
ಸಾಹಸ ಕ್ರೀಡೆಗಳಾಗಲೀ ಚಾರಣವಾಗಲೀ ಸದೃಢವಾಗಿದ್ದವರೆಲ್ಲರಿಗೂ ಸಲೀಸು ಅಂತ ಅಲ್ಲ. ದೇಹದಾರ್ಢ್ಯದ ಜೊತೆಗೆ ಅಗತ್ಯ ಸಂಗತಿಗಳ ಅರಿವಿರಬೇಕಾದದ್ದು ತುಂಬಾ ಮುಖ್ಯ. ಸುಮ್ಮನೆ ಯಾವುದೋ ದೇವಸ್ಥಾನದ ಬೆಟ್ಟ ಹತ್ತುವ ರೀತಿಯಲ್ಲಿ ಕಾಡಿಗೆ ನುಗ್ಗಿ ಚಾರಣದ ಸಾಹಸಕ್ಕೆ ಮುಖಾಮುಖಿಯಾಗುವವರು ಯೋಚಿಸಲೇಬೇಕು. ಇಲ್ಲವಾದರೆ ಜೀವಕ್ಕೇ ಕಂಟಕವಾಗಬಲ್ಲದು.
ಮುನ್ನೆಚ್ಚರಿಕೆಗಳೇನು?
* ನೀವು ಹೋಗುವ ಪ್ರವಾಸಿ ಸ್ಥಳದ ಬಗ್ಗೆ ಒಮ್ಮೆ ಗೂಗಲ್‌ನಲ್ಲಿ ಕಣ್ಣಾಯಿಸಿ.
* ಈವರೆಗೆ ಚಾರಣದ ಯಾವುದೇ ತರಬೇತಿ ಪಡೆದುಕೊಂಡಿಲ್ಲ ಎಂದಾದರೆ ಈ ಮೊದಲು ಹೋದವರೊಂದಿಗೆ ಅನುಭವ ಹಂಚಿಕೊಳ್ಳಿ.
* ಹೋಗಲಿರುವ ಪ್ರದೇಶದ ಸಮೀಪದ ಪೊಲೀಸ್ ಇಲಾಖೆಗೂ ಪತ್ರ ಬರೆಯಿರಿ. ಅರಣ್ಯ ಇಲಾಖೆ ಅನುಮತಿ ಪತ್ರ ಕಡ್ಡಾಯ.
* ಪ್ರವಾಸಿ ಸ್ಥಳ ನಕ್ಸಲ್ ಪೀಡಿತ ಪ್ರದೇಶವಾಗಿದ್ದರೆ ಅಲ್ಲಿರುವ ನಕ್ಸಲ್ ನಿಗ್ರಹ ಪಡೆಗೂ ಪತ್ರ ಬರೆದು ನಿಮ್ಮ ಚಾರಣದ ಬಗ್ಗೆ ತಿಳಿಸಿ.
* ಪ್ರಾಥಮಿಕ ಚಿಕಿತ್ಸೆಯ ಕಿಟ್ ಸದಾ ಜತೆಗಿರಲಿ.
* ಧರಿಸುವ ಶೂ ಹಾಗೂ ವಸ್ತ್ರದ ಮೇಲೂ ಗಮನವಿರಲಿ. ಒಂದು ದಿನದ ಚಾರಣವಾದರೂ ಮೂರು ದಿನಕ್ಕಾಗುವಷ್ಟು ಆಹಾರ ಪದಾರ್ಥ ಜತೆಗಿರಲಿ.
* ಮೊದಲ ಬಾರಿ ತೆರಳುವವರಾದರೆ ಮಾರ್ಗ ನಕ್ಷೆಯೂ ಇರಲಿ.
ಇಂಥವರ ಬಗ್ಗೆ ಕರುಣೆ ಬೇಡ
ವಿದ್ಯಾವಂತರೇ ಕಾನೂನು ಮೀರಿ ಹೋದರೆ ಹೊಣೆ ಮಾಡುವುದಾದರೂ ಯಾರನ್ನು? ಯೌವನದ ಉತ್ಸಾಹದಲ್ಲಿ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಸುಖಿಸುತ್ತೇವೆ ಎಂಬ ಮನೋಭಾವವಿದ್ದಾಗಲೇ ಇಂತಹ ಅವಘಡಗಳು ಸಂಭವಿಸುವುದು.
ಕೈತುಂಬಾ ಸಂಬಳ ಬರುತ್ತೆ, ಕುಡಿದು ಮಜಾ ಮಾಡೋಕೆ ಸ್ಥಳ ಹುಡುಕಿ ಹೋಗುತ್ತಾರಷ್ಟೆ. ಅವಿದ್ಯಾವಂತ ಹಳ್ಳಿಗರೇ ಇವರಿಗಿಂತ ಮೇಲು. ಇಂತಹವರ ಸಾವಿನ ಬಗ್ಗೆ ಕರುಣೆ ತೋರುವುದೂ ತಪ್ಪು.
ಭೂ ಅತಿಕ್ರಮಣ ಮಾಡಿಕೊಳ್ಳುವ ಮಂದಿ ಅರಣ್ಯ ಪ್ರದೇಶದ ಗಡಿಭಾಗವನ್ನು ವಶಪಡಿಸಿಕೊಳ್ಳಬಾರದು ಎಂಬ ನಿಯಮವಿದೆ. ಕಂದಾಯ ಇಲಾಖೆಯವರೂ ಈ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದರಿಂದ ಅತಿಕ್ರಮಣ ಮುಂದುವರೆಯುತ್ತಲೇ ಇದೆ.
ಬನ್ನೇರುಘಟ್ಟದಲ್ಲಿ ಚಾರಣಕ್ಕೆಂದೇ ಗುರುತಿಸಲಾದ ಕೆಲವು ಸ್ಪಾಟ್‌ಗಳಿವೆ. ಅವುಗಳ ಹೊರತಾಗಿ ಇತರೆಡೆಗಳಿಗೆ ಚಾರಣಿಗರಿಗೆ ಪ್ರವೇಶವಿಲ್ಲ. ಪ್ರವೇಶ ದ್ವಾರದ ಬಳಿಯಿಂದ ಆರಂಭಿಸಿ ಸೂಕ್ಷ್ಮ ಪ್ರದೇಶಗಳಲ್ಲೆಲ್ಲಾ ಎಚ್ಚರಿಕೆಯ ಬೋರ್ಡ್‌ಗಳು ರಾರಾಜಿಸುತ್ತಿವೆ.
`ಏನು ಮಾಡಬಾರದು~, `ಹೇಗೆ ವರ್ತಿಸಬೇಕು~ ಎಂಬ ಹತ್ತಾರು ಪತ್ರಗಳು ನೋಟಿಸ್ ಬೋರ್ಡ್‌ನಲ್ಲೂ ಇವೆ. ಅದನ್ನು ಓದುವ ಮನಸ್ಸು ಮಾತ್ರ ಪ್ರವಾಸಿಗರಿಗಿಲ್ಲ.
ಆನೆಗಳು ಅವುಗಳ ದಾರಿಗೆ ಅಡ್ಡ ಬರುವವರ ಮೇಲೆ ದಾಳಿ ಮಾಡುತ್ತವೆಯೇ ಹೊರತು ಅವಾಗಿಯೇ ಸುಮ್ಮನೆ ಜನರನ್ನು ಹುಡುಕಿಕೊಂಡು ಹೋಗಿ ದಾಳಿ ಮಾಡುವುದಿಲ್ಲ. ಈ ಬಂಡೆಗಲ್ಲಿನ ಸಮೀಪದ ನದಿಗೆ ಪ್ರತಿನಿತ್ಯ ಆನೆ ನೀರುಕುಡಿಯಲು ಬರುತ್ತದೆ.
ಆ ಸಮಯಕ್ಕೆ ಸಾತ್ವಿಕ್ ಎದುರು ಸಿಕ್ಕಿರಬೇಕು. ಕಳೆದ ಜನವರಿಯಲ್ಲಿ ನಡೆದ ಘಟನೆಯಲ್ಲೂ ಅಷ್ಟೇ, ಅತಿ ಸಮೀಪಕ್ಕೆ ಹೋಗಿ ಫ್ಲಾಶ್ ಮೋಡ್‌ನಲ್ಲಿ ಫೋಟೊ ಕ್ಲಿಕ್ಕಿಸಿದ ಕಾರಣಕ್ಕೆ ಸುರೇಶ್‌ನನ್ನು ಆನೆ ಸಾಯಿಸಿತ್ತು.
-ಎಂ.ದೇವರಾಜ್
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಉಪ ಅರಣ್ಯ ಸಂರಕ್ಷಣಾಧಿಕಾರಿ
ಕಾಡಿಗೆ ಕಾಂಪೌಂಡ್ ಇಲ್ಲ
ಕಾಡು ಅನ್ನುವ ಜೈವಿಕ ವ್ಯವಸ್ಥೆಯನ್ನು ಅರ್ಥೈಸಿಕೊಳ್ಳುವುದು ತುಸು ಕಠಿಣವೇ. ಟೀವಿ ನೋಡಿಕೊಂಡು ಚಾರಣ ಹೊರಟರೆ ಇಂತಹ ಅನಾಹುತ ಸಂಭವಿಸುತ್ತದೆ. 15-30 ಕಿಮಿ ಕಾಡಲ್ಲಿ ನಡೆದಾಕ್ಷಣ ಅದು ಚಾರಣ ಎನಿಸಿಕೊಳ್ಳುವುದಿಲ್ಲ. ಅಲ್ಲಿನ ಜೀವವ್ಯವಸ್ಥೆ ಅರಿತುಕೊಳ್ಳುವುದೂ ಮುಖ್ಯ. ಇಲ್ಲವಾದಲ್ಲಿ ಚಾರಣವೆಂಬುದು ಪೋಷಕರಿಗೆ ನೋವು ಕೊಡುವ ಸಂಗತಿಯಾಗಿ ಉಳಿದುಬಿಡುತ್ತದೆ.
ಈ ದುರ್ಘಟನೆಗೆ ಪೊಲೀಸ್ ಇಲಾಖೆ, ಮುಗ್ಧ ಪ್ರಾಣಿಗಳು ಜವಾಬ್ದಾರರಲ್ಲ. ಕಾಡಿನ ವಿಸ್ತೀರ್ಣ ದೊಡ್ಡದು. ಅದಕ್ಕೆ ಬೇಲಿ ಹಾಕಿ ಕಾಯುವುದು ಅಸಾಧ್ಯ. ಗಂಡಾನೆಯೊಂದು ವರ್ಷಕ್ಕೆ 1500 ಚದರ ಕಿ.ಮೀ. ನಡೆಯುತ್ತದೆ. ಬನ್ನೇರುಘಟ್ಟ ಅಷ್ಟು ದೊಡ್ಡ ಕಾಡಲ್ಲ.
30-40 ವರ್ಷಗಳ ಹಿಂದೆ ಅದು ಕನಕಪುರದಿಂದ ಕೃಷ್ಣಗಿರಿ ಜಿಲ್ಲೆಯವರೆಗೂ ಹಬ್ಬಿತ್ತು. ಈಗ ಮಧ್ಯೆ ಹಳ್ಳಿಗಳು ಹುಟ್ಟಿಕೊಂಡು, ಕಾಡನ್ನು ಸಂಕುಚಿತಗೊಳಿಸಿದೆ. ಎರಡು-ಮೂರು ಕಿ.ಮೀ. ಅಂತರದಲ್ಲಿ ಇನ್ನೊಂದು ಕಾಡಿದ್ದರೆ ಅದನ್ನು ಹುಡುಕಿ ಹೋಗುವುದು ಆನೆಗಳ ಸಾಮಾನ್ಯ ಲಕ್ಷಣವೂ ಹೌದು.
ಇನ್ನು ಬನ್ನೇರುಘಟ್ಟದ ಕಾಡಿನ ಮರಗಳ ಹತ್ತರಿಂದ ಹದಿನೈದು ಅಡಿ ಎತ್ತರದವು. ಐದಡಿ ಮುಂದಕ್ಕೆ ಏನಿದೆ ಎಂಬುದೂ ಕಾಣಿಸದು. ಅನುಭವಿ ಚಾರಣಿಗರಾದರೆ 100 ಮೀಟರ್ ದೂರದಲ್ಲಿ ಆನೆಗಳು ಕಿವಿ ಬಡಿದುಕೊಳ್ಳುತ್ತಿರುವ ಸದ್ದು ಗುರುತಿಸಬಲ್ಲರು. ಗಾಳಿ ನಮ್ಮೆಡೆಯಿಂದ ಆನೆಗಳ ಕಡೆ ಬೀಸುತ್ತಿದ್ದರೆ ಮನುಷ್ಯನ ವಾಸನೆ ಸಿಕ್ಕಿ ಅವುಗಳೇ ದೂರ ಸರಿಯುತ್ತವೆ.
ಮರಿಗಳ ಜತೆಯಲ್ಲಿದ್ದಾಗ ಅವುಗಳ ರಕ್ಷಣೆಗೆಂದು ಎದುರಿಗೆ ಬಂದ ಕಾಡುನಾಯಿಯನ್ನೂ ಹೆದರಿಸಿ ಓಡಿಸುತ್ತದೆ. ಹೀಗೆ ಬರುತ್ತಿರುವಾಗ ಈ ಹುಡುಗ ಕಂಡಿರಬೇಕು. ಹೆದರಿಸಿ ಓಡಿಸಲೆಂದು ಮುನ್ನುಗ್ಗಿರಬೇಕು. ಬೆದರಿದ ಹುಡುಗ ಓಡುವ ಬದಲು ಆನೆಗಳ ಕಾಲಿಗೆ ಸಿಕ್ಕಿಹಾಕಿಕೊಂಡಿದ್ದಾನೆ.
ಚಾರಣ ಇಂದು ಪ್ಯಾಶನ್ ಆಗಿದೆ. ವಾರಾಂತ್ಯ ಕಳೆಯುವ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಚಾರಣಕ್ಕೆ ಹೋಗುವಾಗ ಅಲ್ಲಿನ ಪ್ರಾಣಿಗಳ ಚಲನವಲನದ ಬಗ್ಗೆ ಎಚ್ಚರಿಕೆ ವಹಿಸಬೇಕು, ಕಣ್ಣು ಕಿವಿ ಸೂಕ್ಷ್ಮವಾಗಿ ತೆರೆದಿಟ್ಟಿರಬೇಕು. ಅದರ ಬದಲಾಗಿ ಇಯರ್ ಫೋನ್ ಸಿಕ್ಕಿಸಿಕೊಂಡು ಹೋದರೆ ಆ ಸದ್ದುಗಳು ಕೇಳುವುದಾದರೂ ಹೇಗೆ?
-ಕೃಪಾಕರ, ಖ್ಯಾತ ವನ್ಯಜೀವಿ ಸಾಕ್ಷ್ಯಚಿತ್ರ ತಯಾರಕರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.