
`ನಾನು ವಸ್ತ್ರ ವಿನ್ಯಾಸಕಿಯಾಗುವೆ, `ಫೇಯ್...~ ಒಂದೆರಡು ವರ್ಷಗಳಲ್ಲಿ ಹೀಗೆ ಬೆಳೆಯಬಹುದು ಎಂದು ಅಂದುಕೊಂಡೇ ಇರ್ಲಿಲ್ಲ...~ಟ್ವಿಂಕಲ್ ಜೋಸ್ ಅಚ್ಚರಿ ವ್ಯಕ್ತ ಪಡಿಸುತ್ತಿದ್ದುದು ಅವರ ಆನ್‌ಲೈನ್ ಫೇಯ್ ಮಳಿಗೆಯ ಬಗ್ಗೆ.
ಇದು ಕೇವಲ ಹುಡುಗಿಯರ ಉಡುಗೆಗಾಗಿಯೇ ಇರುವ ಮಳಿಗೆ. 6 ತಿಂಗಳಿಂದ 10 ವರ್ಷ ವಯಸ್ಸಿನ ಬಾಲೆಯರಿಗಾಗಿಯೇ ಇರುವ ಚಂದದ ಉಡುಗೆಗಳ ಅಂಗಡಿ ಇದು.
ಓದಿದ್ದು ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ. ಕೆಲಸ ಮಾಡಿದ್ದು ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ. ಆದರೆ ಮದುವೆಯಾಗಿ ಮಕ್ಕಳಾದ ಮೇಲೆ ಕೆಲಸದ ಗೊಡವೆಗೆ ಹೋಗಲಿಲ್ಲ. ಮೊದಲ ಮಗಳ ಲಾಲನೆ ಪಾಲನೆಯಲ್ಲಿಯೇ ದಿನಗಳೆದವು. ಮಗುವಿಗೆ 6 ತಿಂಗಳು ತುಂಬುತ್ತಿದ್ದಂತೆಯೇ ಅವಳ ಉಡುಗೆಗಾಗಿ ಹುಡುಕಾಟ ಆರಂಭವಾಯಿತು.
ಆಗಲೇ ಮಕ್ಕಳ ಉಡುಗೆಗಳ ಬಗ್ಗೆ ಹೆಚ್ಚು ಆಸಕ್ತಿ ಮೂಡಿತು. ಮಾರುಕಟ್ಟೆಯಲ್ಲಿ ದೊರೆಯುವ ಉಡುಗೆಗಳು ಆರಾಮದಾಯಕವಾಗಿರಲಿಲ್ಲ.ವಿನ್ಯಾಸ ಚಂದವಾಗಿದ್ದರೆ, ಹಾಕಲು ತೆಗೆಯಲು ಕಷ್ಟಕರವಾಗಿತ್ತು. ಒಂಚೂರು ಸೊಗಸಾದ ಅಂಗಿ ಬೇಕು ಅಂದ್ರೆ ಕೇವಲ ಮಿನುಗು-ಮಿಂಚು, ಬಣ್ಣಬಣ್ಣದ ಹೊಳೆಯುವ ಅಂಗಿಗಳೇ ದೊರೆಯುತ್ತಿದ್ದವು. ಅವನ್ನು ಹಾಕಿದರೆ ಕೈಕಾಲುಗಳಿಗೆಲ್ಲ ತರಚುಗಾಯ ಆಗುವಷ್ಟು ಒರಟಾಗಿರುತ್ತಿದ್ದವು. ಕೆಲವೊಮ್ಮೆ ತಬ್ಬಿಕೊಂಡು ಮಲಗಿದರೆ ಚುಚ್ಚುತ್ತಿದ್ದವು.
ಮೃದುವಾದ ಅಂಗಿಗಳಿದ್ದರೂ ಅವುಗಳ ಕುತ್ತಿಗೆ ಭಾಗದ ವಿನ್ಯಾಸ ಸರಿಯಿರುತ್ತಿರಲಿಲ್ಲ. ಗುಂಡನೆಯ ಕೊರಳಿನ ಅಂಗಿ ಹಾಕುವುದೇ ಕಷ್ಟವಾಗುತ್ತಿತ್ತು.ಇದಕ್ಕೆಲ್ಲ ಬೇಸತ್ತು ತಾವೇ ಹಲವು ಬಗೆಯ ಬಟ್ಟೆಗಳನ್ನು ಕೊಂಡು ತಂದರು. ಅಂಗಿಯ ಒಳಭಾಗಕ್ಕೆ ಅಪ್ಪಟ ಹತ್ತಿ ವಸ್ತ್ರವನ್ನು ಬಳಸಿದರು. ಮೃದುವಾದ ವೆಲ್ವೆಟ್, ಸ್ಯಾಟಿನ್ ಮೆಷ್, ರಾ ಸಿಲ್ಕ್, ಟಫೆಟ್ಟಾ ಮುಂತಾದ ವಸ್ತ್ರಗಳಲ್ಲಿ ತಾವೇ ವಿನ್ಯಾಸಗೊಳಿಸಿದರು.
ಮಗುವಿಗೆ ಅಗಲವಾದ ಕೊರಳಿರುವ ಅಂಗಿಗಳು, ಟೀಶರ್ಟ್ ಲೆಂತ್‌ನಿಂದ ಮೊಣಕಾಲಿನಿಂದ ಕೆಳಗಿಳಿಯುವವರೆಗೂ ವಿವಿಧ ಉದ್ದಳತೆಯ ಅಂಗಿಗಳನ್ನು ಸಿದ್ಧಪಡಿಸಿದರು.
ಅಮ್ಮನಾಗಿದ್ದರಿಂದ ಪ್ರತಿಯೊಂದು ಸಣ್ಣ ಅಗತ್ಯಗಳ ಬಗ್ಗೆಯೂ ಗಮನವಿರಿಸಿದ್ದರು. ಯಾವುದೇ ಹೊಲಿಗೆಗಳೂ ಒಳ ಮೈಗೆ ತಾಕದಂತೆ ನೋಡಿಕೊಂಡರು. ಕಂಕುಳಲ್ಲಿ ಮಗುವಿಗೆ ಚುಚ್ಚದಂತೆ, ಮಿನುಗು, ಮಿಂಚು, ಮಿಣುಕುಳಿರದೇ ಚಂದದ ಉಡುಗೆ ಸಿದ್ಧ ಪಡಿಸಿದರು.
ಇವರ ಮಕ್ಕಳ ವಸ್ತ್ರಗಳನ್ನು ಕಂಡು ಹಲವರು ಬೇಡಿಕೆ ಇರಿಸಿದಾಗ ತಾವೇ ಅದಕ್ಕೆ ಒಪ್ಪಿಕೊಂಡರು. ಹೀಗೆಯೇ ಮಗುವಿನೊಂದಿಗೆ ಬೇಡಿಕೆಗಳೂ ಹೆಚ್ಚುತ್ತಾ ಬಂದವು. ಮನೆಯಲ್ಲಿಯೇ ಮಕ್ಕಳ ವಸ್ತ್ರಗಳನ್ನು ಸಿದ್ಧಪಡಿಸಿ ನೀಡತೊಡಗಿದರು.
ಇದಕ್ಕೆ ಪತಿ ಜೋಸ್ ಬೆಂಬಲವೂ ಇತ್ತು. ಜೋಸ್ ಐಬಿಎಂ ಉದ್ಯೋಗಿ. ಹಲವು ಸ್ನೇಹಿತರು ವಿದೇಶದಲ್ಲಿದ್ದಾರೆ. ಹಾಗಾಗಿ ಕೆಲವು ವಸ್ತ್ರಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳುವುದು ಸುಲಭವಾಯಿತು. ತಮ್ಮ ಸ್ನೇಹಿತರಿಗಾಗಿಯೇ ಹೊಸ ಸಂಗ್ರಹಗಳನ್ನು ಆನ್‌ಲೈನ್‌ಗೆ ಅಪ್‌ಲೋಡ್ ಮಾಡತೊಡಗಿದರು. ಕ್ರಮೇಣ ಒಂದು ವೆಬ್‌ಸೈಟನ್ನೂ ಆರಂಭಿಸಿದರು.
ಯಾವುದೇ ಜಾಹೀರಾತಿಲ್ಲದೆ ಬಾಯಿಂದ ಬಾಯಿಗೆ ಪ್ರಚಾರ ನಡೆಯಿತು. ಹಾಗೆಯೇ `ಫೇಯ್~ ಉಡುಪು ತೊಟ್ಟ ಪುಟ್ಟ ಹುಡುಗಿಯರೇ ಅದರ ಪ್ರಚಾರ ರಾಯಭಾರಿಗಳಾದರು.
ಆಗ ಫೇಯ್‌ಗಾಗಿಯೇ ವಿಶೇಷ ವೆಬ್‌ತಾಣವನ್ನು ರೂಪಿಸಲಾಯಿತು. `ಬ್ಲೂ ಅಂಡ್ ಪಿಂಕ್~ ಹಾಗೂ `ಆಪಲ್‌ಆಫ್‌ಮೈ~ ಮಳಿಗೆಯವರು ಟ್ವಿಂಕಲ್ ಅವರ ಸಂಗ್ರಹದ ಮಾರಾಟಕ್ಕೆ ಅನುಮತಿ ಪಡೆದರು.
ಈ ಮಳಿಗೆಗಳನ್ನು ಹೊರತುಪಡಿಸಿದರೆ ಆನ್‌ಲೈನ್ ಮಳಿಗೆಯ ಮೂಲಕವೇ ಟ್ವಿಂಕಲ್ ಜೋಸ್ ವಿಶ್ವದ ಹಲವೆಡೆ ತಾವು ಸಿದ್ಧ ಪಡಿಸಿದ ಉಡುಪುಗಳನ್ನು ಮಾರಾಟ ಮಾಡಿದ್ದಾರೆ. ಮಕ್ಕಳಿಗೆ ಅಚ್ಚುಮೆಚ್ಚಿನ ರಂಗುಗಳಾದ ಕಡುಕೆಂಪು, ಬಿಳಿ, ನವಿಲಿನ ವರ್ಣ, ಗುಲಾಬಿ, ಕಡುಗುಲಾಬಿ, ನೀಲಿ ವರ್ಣಗಳಲ್ಲಿ ಉಡುಗೆಗಳನ್ನು ತಯಾರಿಸುತ್ತಾರೆ.
ಇನ್ನೊಂದು ವಿಶೇಷವೆಂದರೆ ಹುಡುಗಿಯರಿಗೆ ಯಾವತ್ತಿಗೂ ಚಂದದ ಉಡುಗೆ ಎಂದರೆ ನೆನಪಾಗುವುದೇ ಬಾರ್ಬಿಯಂಥ ಬೊಂಬೆಯ ಉಡುಗೆಗಳು. ಸ್ನೋವೈಟ್ ರಾಜಕುಮಾರಿ, ಸಿಂಡ್ರೆಲ್ಲಾಳ ಗೌನುಗಳು- ಇವನ್ನೇ ಹೋಲುವಂಥ ಅಂಗಿ ಹಾಗೂ ಉಡುಗೆಗಳನ್ನು ಸಿದ್ಧಪಡಿಸುತ್ತಾರೆ. ಪೋಲ್ಕಾ ವಿನ್ಯಾಸದಿಂದ ಉದ್ದನೆಯ ನಿಲುವಂಗಿಯವರೆಗೂ ಹಲವು ವರ್ಣ ವಿನ್ಯಾಸಗಳಲ್ಲಿ ಫೇಯ್ ಉಡುಗೆಗಳು ಲಭ್ಯ. ಬೆಲೆ 600ರಿಂದ 2500 ರೂಪಾಯಿಗಳವರೆಗೆ.
ಹೆಚ್ಚಿನ ಮಾಹಿತಿಗೆ www.faye.in ಲಾಗ್ ಆನ್ ಆಗಬಹುದು. 080-23238167ಗೂ ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.