ADVERTISEMENT

ಚಿಣ್ಣರ ಭಾವನೆಗಳಿಗೆ ಕಲೆಯ ಅಭಿವ್ಯಕ್ತಿ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2017, 19:30 IST
Last Updated 15 ಡಿಸೆಂಬರ್ 2017, 19:30 IST
ಶಾಲೆಯಲ್ಲಿ ನಡೆದ ಕಲಾ ಸ್ಪರ್ಧೆಯ ನೋಟ
ಶಾಲೆಯಲ್ಲಿ ನಡೆದ ಕಲಾ ಸ್ಪರ್ಧೆಯ ನೋಟ   

ಧರ್ಮ ಹಾಗೂ ಮಾನವೀಯತೆಗಿರುವ ಸಂಬಂಧ, ಶಾಂತಿಯ ಮಹತ್ವ, ನನ್ನ ಸರ್ಕಾರದೊಂದಿಗೆ ನಾನು...

- ಹೀಗೆ ಪ್ರಚಲಿತ ವಿದ್ಯಮಾನಗಳು ಹಾಗೂ ಬಾಲ್ಯದ ಸುಂದರ ಕನಸುಗಳ ಕುರಿತು ಚಿಣ್ಣರ ಮನಸಿನಲ್ಲಿರುವ ಮುಗ್ಧ ಭಾವನೆಗಳಿಗೆ ಕಲೆಯ ಅಭಿವ್ಯಕ್ತಿ ನೀಡಲು ಲಲಿತಕಲಾ ಸೆಂಟರ್ ಫಾರ್ ವಿಷುಯುಲ್ ಆರ್ಟ್ಸ್‌ ಮುಂದಾಗಿದೆ. ಮಕ್ಕಳಲ್ಲಿರುವ ಸೃಜನಶೀಲತೆಯನ್ನು ಪ್ರೋತ್ಸಾಹಿಸುವ ಜೊತೆಗೆ ಪ್ರಚಲಿತ ಘಟನೆಗಳ ಕುರಿತು ಅವರು ಹೊಂದಿರುವ ಅಭಿಪ್ರಾಯಗಳಿಗೆ ದನಿಯಾಗುವ ಸಲುವಾಗಿ ರಾಷ್ಟ್ರೀಯ ಮಟ್ಟದ ಕಲಾ ಪ್ರದರ್ಶನ ಆಯೋಜಿಸಿದೆ.

ಡಿ. 16ರಂದು (ಶನಿವಾರ) ಕಬ್ಬನ್ ಉದ್ಯಾನದಲ್ಲಿನ ಬಾಲಭವನ ಚಿಣ್ಣರ ಕಲರವಕ್ಕೆ ಸಾಕ್ಷಿಯಾಗಲಿದೆ. ಈ ಕಲಾ ಪ್ರದರ್ಶನದಲ್ಲಿ ಅಸ್ಸಾಂ, ಉತ್ತರ ಪ್ರದೇಶ, ಕೇರಳ, ಆಂಧ್ರಪ್ರದೇಶ, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಸಂಸ್ಥೆಯು ಜೂನ್ ತಿಂಗಳಿನಿಂದಲೇ ದೇಶದ ಆಯ್ದ ಶಾಲೆಗಳಿಗೆ ತೆರಳಿ 4 ರಿಂದ 12 ವರ್ಷದೊಳಗಿನ ಮಕ್ಕಳಿಗೆ ಹೆಚ್ಚು ಪ್ರಸ್ತುತವೆನಿಸುವ ಹಾಗೂ ಮಕ್ಕಳ ಮನಸ್ಥಿತಿಗೆ ಆಪ್ತವಾದ 15 ವಿಷಯಗಳನ್ನು ನೀಡಿ ಅದರಲ್ಲಿ ಯಾವುದಾದರೂ ಒಂದು ವಿಷಯ ಆಯ್ದುಕೊಂಡು ಕಲಾಕೃತಿ ರಚಿಸುವ ಅವಕಾಶ ನೀಡಿತ್ತು. ಅವುಗಳಲ್ಲಿ ಆಯ್ದ ಕಲಾಕೃತಿಗಳನ್ನು ಕಲಾ ಉತ್ಸವದಲ್ಲಿ ಪ್ರದರ್ಶಿಸಲಾಗುತ್ತದೆ.

ADVERTISEMENT

‘ಈಗಾಗಲೇ 12,000 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಉತ್ತಮ ಕಲಾಕೃತಿ ರಚಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮೊದಲ ಪ್ರಶಸ್ತಿಯಾಗಿ ಚಿನ್ನದ ಪದಕ ದ್ವಿತೀಯ ಮತ್ತು ತೃತೀಯ ಪ್ರಶಸ್ತಿಯಾಗಿ ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ನೀಡಲಾಗುತ್ತದೆ. 35 ವಿದ್ಯಾರ್ಥಿಗಳಿಗೆ ₹ 1,000 ನಗದು ಬಹುಮಾನ ನೀಡಲಾಗುತ್ತದೆ. ಕಲಾ ಪ್ರದರ್ಶನ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆವರೆಗೆ ಇರಲಿದೆ’ ಎಂದು ಸಂಸ್ಥೆಯ ಅಧ್ಯಕ್ಷ ಎಸ್‌. ಜಯವಿನುಕುಮಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.