ADVERTISEMENT

ಚಿಣ್ಣರ ಲೋಕದಲ್ಲಿ ರಂಗದ ಗುಂಗು

​ಪ್ರಜಾವಾಣಿ ವಾರ್ತೆ
Published 15 ಜೂನ್ 2012, 19:30 IST
Last Updated 15 ಜೂನ್ 2012, 19:30 IST
ಚಿಣ್ಣರ ಲೋಕದಲ್ಲಿ ರಂಗದ ಗುಂಗು
ಚಿಣ್ಣರ ಲೋಕದಲ್ಲಿ ರಂಗದ ಗುಂಗು   

`ಇವತ್ತು ಕ್ರಿಕೆಟ್ ಮ್ಯಾಚ್ ನೋಡದೇ ಇರೋದು ಹೇಗೆ...~, ` ಹ್ಹೆ! ಅಲ್ನೋಡೋ ಚಂದ್ರ ಹುಟ್ಟುತ್ತಿದಾನೆ... ಎಷ್ಟು ಚಂದ ಕಾಣಿಸ್ತಿದಾನೆ ಅಲ್ವಾ...~, `ಕೋಕ ಕೋಲ, ಪೆಪ್ಸಿ ಕುಡುದ್ರೆ ಏನ್ ತಪ್ಪು~, `ಮಳೆ ಅಂದ್ರೆ ನಮಗೆ ಭಯ. ಮಳೆ ಅಂದ್ರೆ ಭೀಕರವಾಗಿರುತ್ತೆ. ಮಳೇಲಿ ನೆನೀಬಾರ‌್ದು ಅಂತ ನಮ್ ಅಪ್ಪ ಅಮ್ಮ ಹೇಳ್ಕೊಟ್ಟಿದಾರೆ~, `ಮರಗಳನ್ನು ನಾವು ಯಾಕೆ ಪೂಜಿಸಬೇಕು?~...

ಇಂಥ ಮಾತುಗಳು ಸಾಂದರ್ಭಿಕವಾಗಿ, ಸಂಭಾಷಣೆ ರೂಪದಲ್ಲಿ ಮಕ್ಕಳ ಬಾಯಿಂದ ಹೊರಬರುತ್ತಿದ್ದಂತೆ ಪ್ರೇಕ್ಷಕರು ಚಪ್ಪಾಳೆಯ ಮೂಲಕ ಪ್ರಶಂಸೆ ವ್ಯಕ್ತಪಡಿಸಿದರು. ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡ ಮಕ್ಕಳ ನಾಟಕ `ಚಿಣ್ಣರ ಲೋಕ~ದ ತುಣುಕುಗಳಿವು.

ನಗರದ ಮಕ್ಕಳು ಸಂಸ್ಕೃತಿಯ ಮೌಲ್ಯವನ್ನು ಕಳೆದುಕೊಂಡು ಬೆಳೆಯುತ್ತಿರುವುದು, ಅದರಿಂದ ಆಗುತ್ತಿರುವ ಪರಿಣಾಮ, ಇಷ್ಟಕ್ಕೂ ನಮ್ಮ ಸಂಸ್ಕೃತಿ ಅಂದರೆ ಏನು ಎಂಬಂತಹ ಸಮಾಜಮುಖಿ ವಸ್ತುವನ್ನೊಳಗೊಂಡ ಈ ನಾಟಕ ಮಕ್ಕಳಲ್ಲಿ ಹೊಸ ಚಿಂತನೆಗೂ ಎಡೆಮಾಡಿಕೊಟ್ಟಿತ್ತು.

ಎಂ. ನರಸಿಂಹ ಮೂರ್ತಿ ಅವರು ಈ ನಾಟಕ ರಚಿಸಿದ್ದು, ಕಟ್ಟೆ ರಾಮಚಂದ್ರ ನಿರ್ದೇಶಿಸಿದ್ದಾರೆ.

ತಿಂಗಳಿಡೀ ಪಡೆದ ತರಬೇತಿ, ತಮ್ಮ ಅಭಿನಯ ಸಾಮರ್ಥ್ಯವನ್ನು ತಂದೆ ತಾಯಿ ಇನ್ನಿತರರಿಗೆ ತೋರಿಸಿ ಬೀಗುವ ಸಮಯ ಹತ್ತಿರ ಬಂದಿದ್ದರಿಂದ ಬೆಳಿಗ್ಗೆಯಿಂದಲೇ ಮಕ್ಕಳು ಸಂಭ್ರಮದಿಂದ ನಲಿದಾಡುತ್ತಿದ್ದರು. ಬಣ್ಣ ಹಚ್ಚಿ ರಂಗದ ಮೇಲೆ ನಟಿಸುವಾಗ ಪ್ರೇಕ್ಷಕರಿಂದ ಆಗಾಗ ಬರುತ್ತಿದ್ದ ನಗು ಬೆರೆತ ಚಪ್ಪಾಳೆಯ ಬಹುಮಾನದಿಂದ ಇನ್ನಷ್ಟು ಉಲ್ಲಸಿತರಾಗುತ್ತಿದ್ದರು. ನಾಟಕ ಮುಗಿದ ನಂತರ, ಮೇಷ್ಟ್ರು ಹೇಳಿಕೊಟ್ಟಿದ್ದನ್ನು ಚಾಚೂ ತಪ್ಪದೆ ಮಾಡಿದ್ದೆವ್ಲ್ಲಲ ಎನ್ನುವ ಸ್ವ-ವಿಮರ್ಶೆ ಮಕ್ಕಳ ನಡುವೆಯೇ ಸಾಗಿತ್ತು.

`ಬೆನಕ~ ಮಕ್ಕಳ ನಾಟಕ ಕೇಂದ್ರ ಈ ನಾಟಕದ ರೂವಾರಿಯಾಗಿತ್ತು. ಪ್ರತಿವರ್ಷದಂತೆ ಈ ಬಾರಿಯೂ ಮಕ್ಕಳಿಗೆ ರಂಗ ತರಬೇತಿ ಶಿಬಿರ ಹಮ್ಮಿಕೊಂಡು ಇನ್ನಷ್ಟು ಮಕ್ಕಳಿಗೆ ನಾಟಕದ ಅಭಿರುಚಿ ಹತ್ತಿಸಿದ ಸಾರ್ಥಕತೆ ಆಯೋಜಕರಲ್ಲಿ ಕಾಣುತ್ತಿತ್ತು.

ಮೂವತ್ತು ವರ್ಷಗಳ ಹಿಂದೆ ಈ ಸಂಸ್ಥೆಯ ತರಬೇತಿಯಲ್ಲಿ ಬಣ್ಣ ಹಚ್ಚಿ ಮೊದಲ ಬಾರಿಗೆ ನಾಟಕವಾಡಿದ ಹಲವರು ಇಂದು ಮಕ್ಕಳ ನಾಟಕವನ್ನು ವೀಕ್ಷಿಸಿ ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿಕೊಂಡರು. ಅಂಥವರಲ್ಲಿ ಭವಾನಿ ರಾಮನಾಥ್ (ಅಂದು ರಾಣಿಯ ಪಾತ್ರ ಅಭಿನಯಿಸಿದವರು), ಎಂ. ಸಿ. ಆನಂದ (ಹುಲಿಯ ಪಾತ್ರ), ಮನೋಹರ್ ಪ್ರಮುಖರು.

ಪ್ರತಿವರ್ಷವೂ ನಗರದ ಶಾಲೆಯೊಂದನ್ನು ಆಯ್ದುಕೊಡು ಬೇಸಿಗೆ ರಜೆಯಲ್ಲಿ ಆಸಕ್ತ ಮಕ್ಕಳಿಗೆ ರಂಗ ತರಬೇತಿಯನ್ನು ಕೊಡುವ ಕಾರ್ಯವನ್ನು ಕಳೆದ 34 ವರ್ಷದಿಂದ ಈ ಸಂಸ್ಥೆ ಮಾಡುತ್ತಾ ಬಂದಿದೆ. ಈ ಬಾರಿ ಬಿ. ಟಿ. ಎಲ್. ವಿದ್ಯಾವಾಹಿನಿ ಸಂಸ್ಥೆಯ ಮಕ್ಕಳೂ ಜೊತೆಯಾಗಿ ರಂಗ ತರಬೇತಿಯಲ್ಲಿ ಪಾಲ್ಗೊಂಡಿದ್ದರು.    

 `ಮಕ್ಕಳಿಗೆ ಸಿನಿಮಾ, ಟಿವಿ ನೋಡುವ ಗೀಳನ್ನು ಕಡಿಮೆ ಮಾಡಿ, ರಂಗತರಬೇತಿಯಲ್ಲಿ ತೊಡಗಿಸಿಕೊಳ್ಳಬೇಕೆಂಬ ಉದ್ದೇಶದಿಂದ ಈ ಕಾರ್ಯವನ್ನು ಮಾಡಿತ್ತಿದ್ದೇವೆ. ತಮ್ಮ ಮಕ್ಕಳ ಅಭಿನಯವನ್ನು ನೋಡಿದ ತಂದೆ ತಾಯಿಗಳು ನಮ್ಮ ಮಕ್ಕಳು ಇವರೇನಾ ಎಂದು ಆಶ್ಚರ್ಯ ಪಡುತ್ತಾರೆ. ಪಕ್ಕದ ಬೀದಿಗೆ ಒಬ್ಬನೆ ಹೋಗಲು ಹೆದರುತ್ತಿದ್ದವನು ಇಂದು ವೇದಿಕೆ ಮೇಲೆ ನಾಟಕ ಪ್ರದರ್ಶಿಸುವಂತೆ ಮಾಡಿದಿರಿ ಎಂದು ಸಂತಸ ವ್ಯಕ್ತಪಡಿಸುತ್ತಾರಲ್ಲ; ಆ ಮಾತುಗಳೇ ನಮಗೆ ಸ್ಫೂರ್ತಿ~ ಎಂದು ಸಾರ್ಥಕತೆಯ ಮಾತುಗಳನ್ನಾಡಿದರು ಕಟ್ಟೆ ರಾಮಚಂದ್ರ. 

 `ರಂಗಶಿಬಿರ ಎಂದರೆ ಕೇವಲ ಕಲಿತು ಮರೆಯುವ ವಿದ್ಯೆಯಲ್ಲ. ಇಂದಿನ ಮಕ್ಕಳಲ್ಲಿ ರಂಗದ ಬಗ್ಗೆ ಅಭಿರುಚಿ ಬೆಳೆಸಬೇಕು. ಇದರಿಂದ ಮಕ್ಕಳಲ್ಲಿ ಜೀವನದ ಮೇಲೆ ಭರವಸೆ ಮೂಡುತ್ತದೆ. ಆತ್ಮವಿಶ್ವಾಸ ಹೆಚ್ಚಾಗುತ್ತದೆ. ದುರದೃಷ್ಟವೆಂದರೆ ಇಂದು ಮಕ್ಕಳು ಕನ್ನಡ, ಇಂಗ್ಲಿಷ್ ಎರಡೂ ಸರಿಯಾಗಿ ಕಲಿತಿರುವುದಿಲ್ಲ. ಯಾವುದನ್ನೂ ಸರಿಯಾಗಿ ಕಲಿಯದೆ ಒದ್ದಾಡುತ್ತಿದ್ದಾರೆ. ಅದರಲ್ಲಿ ಪೋಷಕರ ಪಾತ್ರವೂ ಬಹಳಷ್ಟಿದೆ. ಮಕ್ಕಳಿಗೆ ಪಠ್ಯದಿಂದಲೇ ಜೀವನದ ಪಾಠ ಕಲಿಯಲು ಸಾಧ್ಯವಿಲ್ಲ. ಮಕ್ಕಳ ಪಠ್ಯೇತರ ಚಟುವಟಿಕೆಗಳಿಗೆ ಪೋಷಕರೂ ಕೈಜೋಡಿಸಬೇಕು~ ಎನ್ನುತ್ತಾ ಮಕ್ಕಳ ಬಗೆಗಿರುವ ತಲ್ಲಣ ಕಾಳಜಿಯನ್ನು ಹೊರಹಾಕಿದರು. 

ಮಕ್ಕಳಲ್ಲಿ ಪರಿಸರ ಪ್ರಜ್ಞೆ ಬೆಳೆಸಬೇಕೆಂಬ ಉದ್ದೇಶದಿಂದ ಬಿ. ಟಿ. ಎಲ್. ವಿದ್ಯಾವಾಹಿನಿ ಶಾಲೆಯ ಆವರಣದಲ್ಲಿ ಇತ್ತೀಚೆಗೆ ಟಿ. ಪಿ. ಕೈಲಾಸಂ, ಬಿ. ಎಸ್. ನಾರಾಯಣರಾವ್, ಪರ್ವತವಾಣಿ, ಬಿ. ವಿ. ಕಾರಂತ ಇನ್ನಿತರ ಪ್ರಮುಖ ಸಾಹಿತಿಗಳ ಹೆಸರಿನಲ್ಲಿ ಗಿಡಗಳನ್ನೂ ನೆಡಲಾಗಿದೆ ಎಂದು ಸಂಘಟಕರು ಮಾಹಿತಿ ನೀಡಿದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.