ADVERTISEMENT

ಚುನಾವಣೆ ಕಾಲದ ಹಿಟ್‌ ಚಿತ್ರ

ಪಂಚರಂಗಿ

​ಪ್ರಜಾವಾಣಿ ವಾರ್ತೆ
Published 5 ಮೇ 2014, 19:30 IST
Last Updated 5 ಮೇ 2014, 19:30 IST
ನರ ರೋಹಿತ್‌
ನರ ರೋಹಿತ್‌   

ಎರಡು ಕೋಟಿ ಬಜೆಟ್‌ನಲ್ಲಿ ತಯಾರಾದ ತೆಲುಗು ಚಿತ್ರ ‘ಪ್ರತಿನಿಧಿ’ ಒಂದು ವಾರದಲ್ಲಿ ಏಳು ಕೋಟಿ ಕಲೆಕ್ಷನ್‌ ಮಾಡುವ ಮೂಲಕ ಸಿನಿ ಮಾರುಕಟ್ಟೆ ವಿಶ್ಲೇಷಕರಲ್ಲಿ ಅಚ್ಚರಿ ಮೂಡಿಸಿದೆ. ರಾಜಕೀಯ ಕಥಾ ಹಂದರವುಳ್ಳ ‘ಪ್ರತಿನಿಧಿ’ ಚಿತ್ರದ ನಾಯಕನಾಗಿ ನರ ರೋಹಿತ್‌ ಅಭಿನಯಿಸಿದ್ದರು. ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್‌ ಮಾಡುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದೆ.

‘ಪ್ರತಿನಿಧಿ’ ಚಿತ್ರ ಈ ಪರಿ ದುಡ್ಡು ಮಾಡುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಬಿಡುಗಡೆಯಾದ ದಿನವೇ ಈ ಚಿತ್ರದ ಗಳಿಕೆ ಎರಡು ಕೋಟಿ ರೂಪಾಯಿ ದಾಟಿತ್ತು. ದಿನದಿಂದ ದಿನಕ್ಕೆ ಕಲೆಕ್ಷನ್‌ ಉತ್ತಮಪಡಿಸಿಕೊಳ್ಳುತ್ತಿರುವ ಈ ಸಿನಿಮಾ ಮುಂದಿನ ಐದು ದಿನದಲ್ಲಿ ಐದು ಕೋಟಿ ರೂಪಾಯಿ ಹಣ ದೋಚಿ ವಾರಾಂತ್ಯಕ್ಕೆ ಏಳು ಕೋಟಿ ರೂಪಾಯಿ ಕಲೆಕ್ಷನ್‌ ಮಾಡಿದೆ’ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ ಮಾರುಕಟ್ಟೆ ವಿಶ್ಲೇಷಕ ತ್ರಿನಾಥ್‌.

ಈ ಚಿತ್ರವನ್ನು ಪ್ರಶಾಂತ್‌ ನಿರ್ದೇಶಿಸಿದ್ದರು. ಸಾಮಾನ್ಯ ವ್ಯಕ್ತಿಯೊಬ್ಬ ಮುಖ್ಯಮಂತ್ರಿಯನ್ನು ಅಪಹರಿಸುವುದು ಮತ್ತು ಅದರಿಂದ ಆತ ಎದುರಿಸುವ ಪರಿಣಾಮಗಳ ಸುತ್ತ ಕತೆ ಹೆಣೆಯಲಾಗಿದೆ. ಲೋಕಸಭೆ ಹಾಗೂ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ‘ಪ್ರತಿನಿಧಿ’ ಚಿತ್ರವನ್ನು ಬಿಡುಗಡೆಗೊಳಿಸಿರುವುದರಿಂದ ಈ ಚಿತ್ರ ಜನರನ್ನು ಆಕರ್ಷಿಸಿದೆ ಎಂದಿದ್ದಾರೆ ತ್ರಿನಾಥ್‌.

‘ಅದ್ಭುತ ಕತೆ ಇದೆ ಎಂದು ಈ ಚಿತ್ರ ಹಿಟ್‌ ಆಗಿಲ್ಲ. ಚುನಾವಣೆ ಸಂದರ್ಭದಲ್ಲಿ ಬಿಡುಗಡೆ ಮಾಡಿದ್ದು ಚಿತ್ರಕ್ಕೆ ವರದಾನವಾಯಿತು. ರಾಜಕೀಯ ಕತೆ ಇದ್ದಿದ್ದರಿಂದ ಜನ ಸ್ವೀಕರಿಸಿದರು. ಈ ಚಿತ್ರ ಅನೇಕ ಮಂದಿ ಮತದಾರರ ಮೇಲೂ ಪರಿಣಾಮ ಬೀರಿದೆ. ಈ ಚಿತ್ರವನ್ನು ನೋಡಿದ ಅನೇಕರು ತಮ್ಮ ನೇತಾರ ಹೇಗಿರಬೇಕು ಎಂದು ನಿರ್ಧರಿಸಿ ಮತದಾನ ಮಾಡಿದ್ದಾರೆ’ ಎಂದಿದ್ದಾರೆ ಅವರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.