ADVERTISEMENT

ಚೆಲುವೆಯ ಮೊಗಕೆ

ವಿ.ಆರ್.ನಂದಕುಮಾರ್
Published 24 ಫೆಬ್ರುವರಿ 2012, 19:30 IST
Last Updated 24 ಫೆಬ್ರುವರಿ 2012, 19:30 IST

`ಸುಮಾರು ಐದು ದಶಕಗಳ ಹಿಂದಿನ ಮಾತು. ನಾನಾಗ ಪ್ರಾಥಮಿಕ ಶಾಲೆಯ ಹುಡುಗ. ರಸ್ತೆಯಲ್ಲಿ ನಡೆದುಹೋಗುತ್ತಿದ್ದೆ. ದಾರಿಯಲ್ಲಿ ಎಡತಾಕಿದ ಹಿರಿಯರೊಬ್ಬರು ಏನನ್ನೋ ಕೇಳಿದರು. ಯಾವುದೋ ಗುಂಗಿನಲ್ಲಿ ಮುಳುಗಿದ್ದ ನಾನು, ಅವರ ಮಾತಿಗೆ ಗಮನ ಕೊಡದೆ ಮುಂದೆ ಸಾಗಿದೆ. ತಕ್ಷಣವೇ ಅವರು ನನ್ನನ್ನು ಕೂಗಿ ನಿಲ್ಲಿಸಿದರು. ಹತ್ತಿರಕ್ಕೆ ಬಂದ ಅವರು ನನ್ನ ನಡವಳಿಕೆಯನ್ನು ಆಕ್ಷೇಪಿಸಿದರು.
 
`ಶಾಲೆಯಲ್ಲಿ ನೀನು ಕಲಿತದ್ದು ಇದನ್ನೇ ಏನು~ ಎಂದು ತರಾಟೆಗೆ ತೆಗೆದುಕೊಂಡರು. `ದಾರಿಯಲ್ಲಿ ಹೋಗುವಾಗ ಹಿರಿಯರು ಏನನ್ನಾದರೂ ಕೇಳಿದರೆ, ನಿಂತು ಅವರಿಗೆ ಉತ್ತರ ನೀಡಬೇಕು. ಅದು ಸಂಸ್ಕಾರ~ ಎಂದು ತಿಳಿವಳಿಕೆ ಹೇಳಿದರು.

ಅವರ ಮಾತು ನನಗೆ ಸರಿಯೆನ್ನಿಸಿತು. ಈಗಲೂ ಅವರ ಮಾತು ನನ್ನ ಕಿವಿಯಲ್ಲಿ ಅನುರಣಿಸುತ್ತಿದೆ. ಆದರೆ, ಈಗ ದಾರಿಯಲ್ಲಿ ಎಡತಾಕುವ ಶಾಲಾ ಮಕ್ಕಳಿಗೆ ನಾನು ಬುದ್ಧಿ ಹೇಳಿದರೆ ಪ್ರತಿಕ್ರಿಯೆ ಹೇಗಿರುತ್ತದೆ? ಆ ಪ್ರತಿಕ್ರಿಯೆಯನ್ನು ಕಲ್ಪಿಸಿಕೊಂಡರೆ ಗಾಬರಿಯಾಗುತ್ತದೆ~.

ತಮ್ಮ ದ್ವಂದ್ವಗಳನ್ನು ತೋಡಿಕೊಂಡ ಹಿರಿಯ ನಾಗರಿಕರೊಬ್ಬರು ನಿಟ್ಟಿಸಿರುಬಿಟ್ಟರು. ಅವರು ತಮ್ಮ ಈ ಅನಿಸಿಕೆ ಹಂಚಿಕೊಂಡಿದ್ದು, ಈಚೆಗೆ ಬೆಂಗಳೂರಿನಲ್ಲಿ ನಡೆದ ಬಹುಭಾಷಾ ಸಾಹಿತ್ಯದ ಹಬ್ಬ `ಲೇಖನ~ದಲ್ಲಿನ ಗೋಷ್ಠಿಯೊಂದರಲ್ಲಿ.

ಹೌದು, ನಗರದ ಬದುಕು ಎಷ್ಟೊಂದು ಬದಲಾಗಿದೆಯಲ್ಲವೇ? ಸಜ್ಜನಿಕೆ ಎನ್ನುವುದರ ಅರ್ಥವೇ ಈಗ ಬದಲಾಗಿದೆ. ದಾರಿಯಲ್ಲಿ ಎಡತಾಕುವ ಅಪರಿಚಿತ ಹಿರಿಯರ ಮಾತಿಗೆ ಕಿವಿಗೊಡುವುದಿರಲಿ, ಹೆತ್ತವರ ಮಾತುಗಳಿಗೇ ಕಿವುಡರಂತೆ ವರ್ತಿಸುವ ಮಕ್ಕಳ ಸಂಖ್ಯೆ ಕಡಿಮೆಯೇನೂ ಇಲ್ಲ. `ಇದೇನಾ ಸಭ್ಯತೆ, ಇದೇನಾ ಸಂಸ್ಕೃತಿ~ ಎನ್ನುವ ಗೀತೆ ಈ ಕಾಲಕ್ಕೇ ಹೆಚ್ಚು ಪ್ರಸ್ತುತ ಎನ್ನಿಸುತ್ತದೆ.

ಸಂಸ್ಕೃತಿ, ಸಜ್ಜನಿಕೆ, ಆದರ್ಶ, ಮುಂತಾದವುಗಳ ಇಳಿಮುಖ ಕುರಿತಾದ ನಮ್ಮ ಹಳಹಳಿಕೆಗಳ ನಡುವೆಯೂ ಕೆಲವೊಮ್ಮೆ ತದ್ವಿರುದ್ಧದ ಪ್ರಸಂಗಗಳು ಅನುಭವಕ್ಕೆ ಬರುತ್ತವೆ. ಅಂಥದೊಂದು ಪ್ರಸಂಗ ಈಚೆಗೆ ನನಗೆದುರಾಯಿತು.

ಬಿರುಸು ನಡಿಗೆ ನನ್ನ ಜಾಯಮಾನಕ್ಕೆ ಅಂಟಿಕೊಂಡ ಅಭ್ಯಾಸ. ಜನಜಂಗುಳಿತ ಕೆಂಪೇಗೌಡ ರಸ್ತೆಯಾದರೂ ಸರಿ, ರಂಗುರಂಗಿನ ಮಹಾತ್ಮ ಗಾಂಧಿ ರಸ್ತೆಯಾದರೂ ಸರಿ, ಬಿರುಸಾಗಿ ನಡೆದರೇ ನನಗೆ ಸಮಾಧಾನ. ನಾನು ಬಸ್‌ನಲ್ಲಿಯೇ ಹೆಚ್ಚು ಪ್ರಯಾಣಿಸುವುದರಿಂದ, ನನ್ನ ವಾಸಸ್ಥಾನಕ್ಕೂ ಕಚೇರಿಗೂ ನಡುವಣ ದೂರ ಹೆಚ್ಚಿರುವುದರಿಂದ ಈ ಬಿರುಸು ನಡಿಗೆ ಅನಿವಾರ್ಯ ಕೂಡ.

ಈಚೆಗೆ, ಒಂದು ಸಂಜೆ, ಎಂದಿನಂತೆ ಕಚೇರಿ ಕೆಲಸ ಮುಗಿಸಿ ಶರವೇಗದಲ್ಲಿ ಬಸ್ ನಿಲ್ದಾಣದತ್ತ ಹೋಗುತ್ತಿದ್ದೆ.  ಇಂಥ ಸಮಯದಲ್ಲಿ ಸ್ನೇಹಿತರು ಎದುರಿಗೆ ಬಂದರೂ ಮುಗುಳುನಗೆಯೊಂದನ್ನು ಅವರತ್ತ ತೂರಿ ನಡೆಯುವುದು ನನ್ನ ರೂಢಿ.

ಅಕ್ಕಪಕ್ಕ ಎಡತಾಕುವವರನ್ನು ತಪ್ಪಿಸಿಕೊಂಡು, ಎದುರು ಬರುವವರಿಗೆ ಢಿಕ್ಕಿ ಹೊಡೆಯದಂತೆ ನಡೆಯುವುದು ಒಂದು ಕಲೆಯೇ ಸರಿ. (ನಡೆಯಲೋ ಬೇಡವೋ ಎಂಬಂತೆ ನಡೆಯುವ ಯುವಕ-ಯುವತಿಯರ ದಂಡು ನೋಡಿದರೆ ನನಗೆ ಮೈಸೂರು ದಸರಾ ನೆನಪಾಗುತ್ತದೆ). ಮನೆಯ ಯಾವುದೋ ಲೆಕ್ಕಾಚಾರಗಳನ್ನು ಯೋಚಿಸಿಕೊಂಡು ನಡೆಯುತ್ತಿದ್ದಾಗ ಕೊಂಚ ಮೈಮರೆತೆ ಅನ್ನಿಸುತ್ತದೆ...

ಪಾರ್ಕಿಂಗ್‌ನಿಂದ ರಸ್ತೆಗಿಳಿಯಲು ಬಂದ ಒಂದು ಐಷಾರಾಮಿ ಕಾರಿಗೆ ನಾನು ಅಡ್ಡ ಬಂದಿದ್ದೆ. ಗಕ್ಕನೆ ಬ್ರೇಕ್ ಹಾಕಿ ಕಾರು ನಿಂತಿತು. ಗಾಜು ಇಳಿದ ಕಿಟಕಿಯಿಂದ ಇಣುಕಿದ ಮುಖ ಸುಂದರ ತರುಣಿಯದು. ಆಕೆ ಕೋಪಿಸಿಕೊಳ್ಳುತ್ತಾಳೆ ಎನ್ನಿಸಿತು. ಆದರೆ, ನನ್ನ ಎಣಿಕೆ ತಪ್ಪುವಂತೆ- `ಸಾರಿ ಸರ್~ ಎಂದು ನಗುವಿನೊಂದಿಗೆ ಹೇಳಿದ ಆ ಹೆಣ್ಣುಮಗಳು ನನಗೆ ಮುಂದೆ ಹೋಗಲು ಅನುವು ಮಾಡಿಕೊಟ್ಟಳು. ಆಕೆಯ ಸೌಜನ್ಯ ನನಗೆ ಒಂದು ರೀತಿಯ ಇರುಸುಮುರುಸು ಉಂಟುಮಾಡಿತು. `ಪರವಾಗಿಲ್ಲ~ ಎಂದಷ್ಟೇ ಹೇಳಿ ನನ್ನ ದಾರಿ ಹಿಡಿದೆ.

ದಾರಿಯುದ್ದಕ್ಕೂ ಆ ನಗೆ ಮೊಗದ ಯುವತಿಯ ನಡವಳಿಕೆಯೇ ನನ್ನ ಮನಸ್ಸು ತುಂಬಿತ್ತು. ಅಂಥ ಸೌಜನ್ಯ ಎಲ್ಲ ತರುಣ ತರುಣಿಯರದೂ ಆದರೆ ನಗರದ ಸೌಂದರ್ಯ ಇನ್ನಷ್ಟು ವೃದ್ಧಿಸುವುದಲ್ಲವೇ? 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.