ADVERTISEMENT

ಜನರ ದನಿಯೂ ಮಾತೆಂಬ ಬೆಳಕೂ

ಮಾತ್ ಮಾತಲ್ಲಿ...!

ಪ್ರಜಾವಾಣಿ ವಿಶೇಷ
Published 11 ಮಾರ್ಚ್ 2013, 19:59 IST
Last Updated 11 ಮಾರ್ಚ್ 2013, 19:59 IST
ಜನರ ದನಿಯೂ ಮಾತೆಂಬ ಬೆಳಕೂ
ಜನರ ದನಿಯೂ ಮಾತೆಂಬ ಬೆಳಕೂ   

ಮೈಸೂರಿನ ಗಾಂಧಿನಗರದ ಮನೆಯೊಂದರಲ್ಲಿ ಹುಟ್ಟಿ, ಎಲ್ಲಾ ಮಕ್ಕಳಂತೆ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದ ನನ್ನ ಮೇಲೆ ಆ ದೇವರು ವಕ್ರದೃಷ್ಟಿ ಬೀರಿದ. ಅಲ್ಪಸ್ವಲ್ಪ ಕಾಣುತ್ತಿದ್ದ ಎರಡು ಕಣ್ಣುಗಳೂ ಪೂರ್ತಿ ಕುರುಡಾದವು. ಆಟವಾಡುವ ವಯಸ್ಸು ಅದು. ಭವಿಷ್ಯದಲ್ಲಿ ಬೆಟ್ಟದಷ್ಟು ಆಸೆ ಇಟ್ಟುಕೊಂಡಿದ್ದೆ. ಅದೆಲ್ಲವೂ ಫಲಿಸುವುದಿಲ್ಲ ಅಂದುಕೊಂಡೆ. ಆದರೆ ವಿಧಿ ಬರಹ ಬೇರೆಯೇ ಆಗಿತ್ತು.

ಪ್ರೌಢಶಾಲೆಗೆ ಹೋಗುವ ವೇಳೆಗಾಗಲೇ ಸಂಪೂರ್ಣ ಅಂಧನಾಗಿದ್ದ ನಾನು ಈಗ ಸಾವಿರಾರು ಮಂದಿ ಆಲಿಸುವ ಸಮುದಾಯ ರೇಡಿಯೊದಲ್ಲಿ ಸ್ವತಂತ್ರವಾಗಿ ಕಾರ್ಯಕ್ರಮ ನಿರೂಪಿಸುವ ಮಟ್ಟಕ್ಕೆ ಬೆಳೆದಿದ್ದೇನೆ.

ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಓದುತ್ತಿರುವಾಗ ವಿವಿಧ ಕಾರ್ಯಕ್ರಮಗಳಲ್ಲಿ ನಿರೂಪಣೆಯ ಜವಾಬ್ದಾರಿಯನ್ನು ನನಗೇ ವಹಿಸುತ್ತಿದ್ದರು. ಸಾವಿರಾರು ವಿದ್ಯಾರ್ಥಿಗಳ ಸಮ್ಮುಖದಲ್ಲಿ ನಿರೂಪಣೆ ಮಾಡುವುದೆಂದರೆ ಸವಾಲಿನ ಕೆಲಸ. ಆದರೂ ಆತ್ಮಸ್ಥೈರ್ಯದಿಂದ ಮುನ್ನುಗ್ಗಿದೆ. ಅಲ್ಲಿಂದ ನನ್ನ ಮಾತಿನ ಪಯಣ ಆರಂಭವಾಯಿತು. ಇದಕ್ಕೆ ಸ್ನೇಹಿತರು ಸಹಕಾರ ನೀಡುತ್ತಿದ್ದರು. ನಾನು ಮಾತು ಆರಂಭಿಸಿದರೆ ಸಾಕು ನಿಲ್ಲಿಸುತ್ತಲೇ ಇರಲಿಲ್ಲ. ಈ ಕಲೆಯನ್ನು ಕಂಡ ನನ್ನ ಸ್ನೇಹಿತರು `ನೀನು ಟೀವಿಯಲ್ಲೋ ರೇಡಿಯೊದಲ್ಲೋ ನಿರೂಪಕನಾಗು' ಎಂದು ಹುರಿದುಂಬಿಸುತ್ತಿದ್ದರು.

ಅಂದಿನಿಂದ ನನ್ನ ಮನದಲ್ಲಿ ನಿರೂಪಕ ಆಗಬೇಕೆಂಬ ಆಸೆ ಚಿಗುರೊಡೆಯಿತು. ಕನ್ನಡ ವಿಷಯದಲ್ಲಿ ಎಂ.ಎ ಮಾಡಿದೆ. ನಂತರ ಜೀವನಕ್ಕೆ ಒಂದು ದಾರಿ ಹುಡುಕಬೇಕಲ್ಲ, ಅದಕ್ಕಾಗಿ ನನ್ನ ಮಾತಿನ ಬಂಡವಾಳವನ್ನೇ ಇಟ್ಟುಕೊಂಡು ಒಮ್ಮೆ ಮೈಸೂರಿನಲ್ಲಿರುವ ಎಫ್‌ಎಂ ವಾಹಿನಿಯ ನಿರೂಪಕ ಹುದ್ದೆಗೆ ಅರ್ಜಿ ಹಾಕಿದೆ. ಆದರೆ ಅಲ್ಲಿ ತಿರಸ್ಕೃತನಾದೆ. ನಂತರ ಧೃತಿಗೆಡದೆ ಬೆಂಗಳೂರಿಗೆ ಬಂದೆ. ಮಿತ್ರಜ್ಯೋತಿ ಸಂಸ್ಥೆಯಲ್ಲಿ ಕಂಪ್ಯೂಟರ್ ತರಬೇತಿಗೆ ಸೇರಿಕೊಂಡೆ. ಅಲ್ಲಿ ಕಾರ್ಯಕ್ರಮವೊಂದರ ನಿರೂಪಣೆ ಮಾಡುವಾಗ `ರೇಡಿಯೊ ಆಕ್ಟೀವ್' ಸಮುದಾಯ ರೇಡಿಯೊದವರು ನನ್ನ ನಿರೂಪಣೆ ನೋಡಿ ಒಂದು ಅವಕಾಶ ನೀಡುವುದಾಗಿ ಹೇಳಿದರು. ಆಗ ನನಗಾದ ಸಂತೋಷಕ್ಕೆ ಪಾರವೇ ಇರಲಿಲ್ಲ. ಅದಕ್ಕಾಗಿ ನಿರೂಪಣೆಯ ತರಬೇತಿ ಪಡೆದೆ. ಮೂರು ತಿಂಗಳು ಕಾರಂತ ರಂಗ ತರಬೇತಿಯನ್ನೂ ಮಾಡಿದ ನನಗೆ ಮಾತನಾಡಲು ಭಯ ಅಥವಾ ಅಳಕು ಇರಲಿಲ್ಲ. ಮಿಮಿಕ್ರಿ ಮಾಡುವುದು, ಸ್ಕ್ರಿಪ್ಟ್ ಬರೆಯುವುದು ಅಭ್ಯಾಸವಾಗಿತ್ತು. ಹಾಗಾಗಿ ಈ ಕ್ಷೇತ್ರದಲ್ಲಿ ಯಶಸ್ವಿಯಾದೆ.

ಜೈನ್ ವಿಶ್ವವಿದ್ಯಾಲಯ ನಡೆಸುತ್ತಿರುವ `ರೇಡಿಯೊ ಆಕ್ಟೀವ್' ಸಮುದಾಯ ಬಾನುಲಿಯಲ್ಲಿ (90.3) ಅಂಗವಿಕಲರಿಗಾಗಿ `ಆಶಿತರು', ಸಾರ್ವಜನಿಕರಿಗಾಗಿ ಪ್ರತಿ ಮಂಗಳವಾರ ಮಕ್ಕಳ ಹಕ್ಕುಗಳ ಬಗ್ಗೆ ಕಾನೂನು ಅರಿವು ಮೂಡಿಸುವ `ಬಾಲ್ಯ ಅಮೂಲ್ಯ' (ಪ್ರತಿ ಮಂಗಳವಾರ ಬೆಳಿಗ್ಗೆ 11ರಿಂದ 12), ನಗರದ 22 ಶಾಲೆಗಳಲ್ಲಿ ಹೋಗಿ ಮಕ್ಕಳೊಂದಿಗೆ ಬೆರೆತು ಕತೆ ಹೇಳುವ ಹಾಗೂ ಅವರು ಹೇಳಿದ ಕತೆಗಳನ್ನು ರೆಕಾರ್ಡ್ ಮಾಡಿದ `ಒಂದಾನೊಂದು ಕಾಲದಲ್ಲಿ' (ಪ್ರತಿ ಶನಿವಾರ ಮಧ್ಯಾಹ್ನ 12ರಿಂದ 12.30), ವಾರಕೊಮ್ಮೆ ಬೆಂಗಳೂರಿಗೆ ಸಂಬಂಧಿಸಿದಂತೆ `ನಮ್ಮ ಕಸ ನಮ್ಮ ಹೊಣೆ', ಪರಿಣತ ಬಾಣಸಿಗರೊಂದಿಗೆ ನಡೆಸಿಕೊಡುವ ಶನಿವಾರದ `ಅಡುಗೆ ಅರಮನೆ' (ಶನಿವಾರ ಮಧ್ಯಾಹ್ನ 3.30 ರಿಂದ 4) ಕಾರ್ಯಕ್ರಮಗಳನ್ನು ನಿರೂಪಣೆ ಮಾಡುತ್ತೇನೆ.

ಅಂಗವಿಕಲರು, ಚಿಂದಿ ಆಯುವ ಮಕ್ಕಳು, ಲೈಂಗಿಕ ಕಾರ್ಯಕರ್ತರು, ಲೈಂಗಿಕ ಅಲ್ಪಸಂಖ್ಯಾತರು, ಭಿಕ್ಷುಕರು ಹಾಗೂ ಕೊಳೆಗೇರಿ ನಿವಾಸಿಗಳ ಸಮುದಾಯದವರ ಸಬಲೀಕರಣಕ್ಕಾಗಿ ಆರಂಭವಾದ ರೇಡಿಯೊ ಇದು. ಈ ರೇಡಿಯೊ ಆಕ್ಟೀವ್‌ನಲ್ಲಿ ನಿರೂಪಕನಾದಾಗಿನಿಂದ ನನ್ನಲ್ಲಿನ ನ್ಯೂನತೆ ಮರೆಯಾಗಿ ಜನರ ನೋವುಗಳಷ್ಟೇ ಕಣ್ಣುಮುಂದೆ ಬರುತ್ತಿವೆ. ಅವರೊಂದಿಗೆ ಬೆರೆತು, ಅವರಲ್ಲೊಬ್ಬನಾಗಿ ನನ್ನ ಅಂಧತ್ವದ ಕೀಳರಿಮೆ ಮರೆಯುತ್ತೇನೆ. ಗೊತ್ತಿಲ್ಲದ ವಿಷಯವನ್ನು ಇತರರೊಂದಿಗೆ ಚರ್ಚಿಸಿ ತಿಳಿದುಕೊಳ್ಳುತ್ತೇನೆ. ಮನೆಯಲ್ಲಿ ನಾನೇ ಅಡುಗೆ ಮಾಡಿಕೊಳ್ಳುತ್ತೇನೆ. ಅಣ್ಣ ಜೊತೆಗಿದ್ದಾನೆ.

ನಾವು ಏನು ಮಾತನಾಡುತ್ತಿದ್ದೇವೆ ಎಂಬುದನ್ನು ಅರಿತು ಮಾತನಾಡಬೇಕು. ಸಂದರ್ಭಕ್ಕೆ ತಕ್ಕಂತೆ, ಹಿತಮಿತವಾಗಿ ಮಾತನಾಡಿದರೇ ಸೊಗಸು. ಮಾತು ಹೇಗಿರಬೇಕು ಎಂಬ ಬಗ್ಗೆ ಅನೇಕ ಆದರ್ಶ ಪುರುಷರ ಸಲಹೆಗಳಿವೆ. ಅದರಂತೆ ನಡೆದುಕೊಂಡರೆ ಸಾಕು. ಅದನ್ನು ಬಿಟ್ಟು ಮಾತಿನಲ್ಲೇ ಅರಮನೆ ಕಟ್ಟುವ ಮೂಲಕ ಒಳಗೊಂದು ಹೊರಗೊಂದು ಮಾಡಬಾರದು. ವಾಸ್ತವ ಅರ್ಥಮಾಡಿಕೊಂಡು ಬದುಕಬೇಕು, ಅಷ್ಟೇ. ಮುಂದಿನ ದಿನಗಳಲ್ಲಿ ಸಮಾಜ ಸೇವೆ ಮಾಡುವ ಮೂಲಕ ವಿಶೇಷ ಸಮುದಾಯಗಳ ಸಮಸ್ಯೆಗಳಿಗೆ ಸ್ಪಂದಿಸಬೇಕು, ಈ ವಿಷಯದ ಮೇಲೆಯೇ ಪಿಎಚ್.ಡಿ ಮಾಡಬೇಕು ಎಂಬ ಕನಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.