ADVERTISEMENT

ಜಪಾನಿನಲ್ಲಿ ಭಾರತೀಯ ದೇವತೆ

ಕೆ.ಎನ್‌.ವೆಂಕಟೇಶ್‌
Published 4 ಏಪ್ರಿಲ್ 2016, 19:30 IST
Last Updated 4 ಏಪ್ರಿಲ್ 2016, 19:30 IST
ಜಪಾನಿನಲ್ಲಿ ಭಾರತೀಯ ದೇವತೆ
ಜಪಾನಿನಲ್ಲಿ ಭಾರತೀಯ ದೇವತೆ   

ಬೆಂಗಳೂರಿನ ಪ್ರಸಿದ್ಧ ಕಲಾ ಸಂಗ್ರಹಾಲಯವಾದ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್‌ನಲ್ಲಿ ಜಪಾನಿನಲ್ಲಿ ಪೂಜಿಸಲಾಗುವ ಭಾರತದ ದೇವತೆಯರ ಕುರಿತ ಕಲಾ ಪ್ರದರ್ಶನವಿತ್ತು.

ಇದೇ ಸಂದರ್ಭದಲ್ಲಿ ಬಿನಯ್ ಕೆ. ಬೆಹಲ್‌ ಅವರ ಛಾಯಾಚಿತ್ರ ಮತ್ತು ಒಂದು ಕಿರು ಚಲನಚಿತ್ರದ ಪ್ರದರ್ಶನವಿತ್ತು. ಬೆಹಲ್‌ ಅವರ ಅಜಂತಾದ ಭಿತ್ತಿಚಿತ್ರಗಳು ಈಗಾಗಲೇ ಇಂಗ್ಲೆಂಡಿನ ಪ್ರಕಾಶನದಿಂದ ಪ್ರಕಾಶಿತಗೊಂಡಿವೆ. ಈ ಪ್ರದರ್ಶನದಲ್ಲಿ ಅವರು ಜಪಾನಿನ ಸಂಸ್ಕೃತಿಯನ್ನು ಸೃಜನಶೀಲವಾಗಿ ಪರಿಶೀಲಿಸಿರುವುದು ವಿಶೇಷವಾಗಿ ಕಾಣುತ್ತದೆ.

ಭಾರತದ ತ್ರಿಭಂಗಿ ಮಹಾಪುರುಷರು, ದೇವಕನ್ಯೆಯರು ಹೇಗೆ ಜಪಾನಿನ ಸಂಸ್ಕೃತಿಗೆ ತಕ್ಕಂತೆ ಮಾರ್ಪಾಟುಗೊಂಡು, ಭಾರತದ ಸಂಸ್ಕೃತಿಯ ಮೂಲ ಸ್ವರೂಪವನ್ನು ಹಾಗೂ ಸಂಸ್ಕೃತ ಭಾಷೆಯನ್ನು ಉಳಿಸಿಕೊಂಡಿದೆ ಎಂಬ ಅಂಶ ಇಲ್ಲಿ ಆಶ್ಚರ್ಯವನ್ನುಂಟುಮಾಡುತ್ತದೆ.

ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ ಸಂಗ್ರಹಾಲಯದಲ್ಲಿ ಪ್ರದರ್ಶಿಸಿರುವ ದೇವರು, ದೇವತೆಯರ ಭಾವ ಚಿತ್ರಗಳು ಕಲಾಸಕ್ತರ ಮೈ ಮನ ಸೆಳೆಯುವಂತಿದ್ದವು. ಇಲ್ಲಿರುವ ಪ್ರತಿಯೊಂದು ಮೂರ್ತಿಯಲ್ಲಿಯೂ ಭಾರತೀಯ ಸೊಗಡಿರುವುದು ಎದ್ದು ಕಾಣುತ್ತಿತ್ತು. ಹರೀತಿ, ಅಗ್ನಿ, ಬ್ರಹ್ಮ ಮತ್ತು ಇಂದ್ರ ಕಲಾಕೃತಿಗಳು ವಿಶೇಷವಾಗಿತ್ತು.

ಭಾರತ ಸಂಸ್ಕೃತಿಯಲ್ಲಿ ಅಗ್ನಿಯನ್ನು ಬಹಳಷ್ಟು ಹೆಸರುಗಳಿಂದ ಕರೆಯಲಾಗುವುದು. ಅಭಿಮಾನ, ಅಬ್ಜಹಸ್ತ, ಅಗ್ನಿಜ್ವಾಲ, ಅಗ್ನಿಕಣ, ಅನಲ, ಚಗರಥ, ಧನಂಜಯ ಮುಂತಾದವು.

ಅಗ್ನಿ ರೂಪಿಯಾದ ದೈವತ್ವವನ್ನು ಸಾಮಾನ್ಯವಾಗಿ ಕೆಂಪು ಬಣ್ಣದಲ್ಲಿ ಚಿತ್ರಿಸಿರುತ್ತಾರೆ. ಈ ರೀತಿಯಾದ ಭಾರತದ ಅಗ್ನಿ ದೇವರು ಜಪಾನಿನ ಸಂಸ್ಕೃತಿಯಲ್ಲಿ ‘ಕಾತೆನ್’ ಎಂಬ ಮರುರೂಪವನ್ನು ಪಡೆದಿದೆ. ಆ ದೇಶದ ದೇವರುಗಳೂ, ದೃಢವಾದ ಮೈಕಟ್ಟು, ಆವೇಷವನ್ನು ಹೊಂದಿರುತ್ತಾರೆ. ಅಗ್ನಿ ದೇವರು ಬೆಹಲ್‌ ಅವರ ಛಾಯಾಚಿತ್ರದಲ್ಲಿ ಕೆಂಪುಬಣ್ಣದ ಜ್ವಾಲೆಯ ಮಧ್ಯದಲ್ಲಿ ಧ್ಯಾನ ಮುದ್ರೆಯ ದಾರಿಯಾಗಿ ಬರಿಗಾಲಿನಲ್ಲಿ ನಿಂತಿರುತ್ತಾರೆ.

ಇಲ್ಲಿಯ ಇಂದ್ರ ದೇವರು ಅಲ್ಲಿ ‘ತೈಷಾಕುಟೆನ್’ ಎಂದು ಕರೆಸಿಕೊಂಡಿರುತ್ತಾನೆ. ಇಲ್ಲಿ ಪ್ರದರ್ಶನಕ್ಕಿರುವ ಚಿತ್ರದಲ್ಲಿ ಇಂದ್ರ ತುಸು ಕುಪಿತಗೊಂಡವನಂತೆ ಕಾಣುತ್ತಾನೆ. ಇವನು ಆವೇಷದಲ್ಲಿ ಮಾಡುತ್ತಿರುವ ಮೈಕಟ್ಟಿನ ಚಲನಕ್ಕೆ, ಅವನುಟ್ಟಿರುವ ವೇಷಭೂಷಣವು ಗಾಳಿಯೊಡನೆ ಸರಸವಾಡುವಂತೆ ಹಿಂದೆ ಮುಂದೆ  ಹರಿದಾಡುತ್ತಿದೆ.

ಬ್ರಹ್ಮ ದೇವರು ಇಂದ್ರನಂತೆ ನೇರವಾಗಿ ಪ್ರೇಕ್ಷಕರ ಕಡೆ ನೋಡದೆ, ತನ್ನ ಮುಂದೂಡಿದ ಬಲಗಾಲಿನತ್ತ  ಕುಪಿತ ದೃಷ್ಟಿ ಎಸೆದಿದ್ದಾನೆ. ಎಡಗೈಯನ್ನು ಮೇಲೆತ್ತಿ ಮುಷ್ಟಿಯನ್ನು ಬಿಗಿಯಾಗಿ ಮುಚ್ಚಿ, ಮತ್ತೊಂದು ಕೈಯಿಂದ ತನ್ನ ದೃಷ್ಟಿಯ ಬಗೆಗಿನ ಹಿಡಿತವನ್ನು ಹೊಂದಿದ್ದಾನೆ.

ಹರಿತಿಯ ಚಿತ್ರವಂತೂ ವಿಶೇಷವಾಗಿದೆ. ಹರಿತಿಯ ವಿಗ್ರಹದ ಕೆತ್ತನೆ ನಮ್ಮ ಒಳಕ್ಕೆ ನುಗ್ಗಿ ತಾಯಿಯ ಮಮತೆ ಮತ್ತು ಕಾರುಣ್ಯವನ್ನು ತೋರುತ್ತದೆ. ಹರಿತಿಯು ತನ್ನ ಬಲವಾದ ಕಾಲುಗಳ ಮೇಲೆ ಆಕೆಯ ಮಗುವನ್ನು ಬೆಚ್ಚಗೆ ಕಾಪಾಡಿಕೊಳ್ಳುವಂತೆ ಯತ್ನಿಸುತ್ತಿರುವಂತೆ ಭಾಸವಾಗುತ್ತದೆ.

ಹೀಗೆಯೇ ಅವಳ ಮತ್ತೊಂದು ಕೈಯಲ್ಲಿ ಮಕ್ಕಳ ಆಟಿಕೆಯೊಂದು ಕಂಡುಬರುತ್ತದೆ. ಭಾರತದ ದೇವತೆಯರಲ್ಲಿ ಕಿರುಸ್ಥಾನ ಹೊಂದಿರುವ ಕುಬೇರನ ಪತ್ನಿ ಹರಿತಿಯು ಹೀಗೆ ಜಪಾನಿನ ಸಂಸ್ಕೃತಿಯ ಅವಶ್ಯಕತೆಗಳಿಗೆ ತಕ್ಕಂತೆ ಮಾರ್ಪಾಡುಗೊಂಡು ತಾಯ್ತನದ ಪ್ರತೀಕವಾಗಿ ನಮಗೆ ಮರು ಪ್ರದರ್ಶಿತವಾಗುತ್ತಾಳೆ. 

ಜಪಾನಿನ ಸಂಸ್ಕೃತಿಯ ಬಗೆಗಿನ ಒಂದು ಸ್ಥೂಲ ನೋಟ ಇಲ್ಲಿ ಪ್ರದರ್ಶನವಾಗಿರುವ ಛಾಯಾಚಿತ್ರಗಳಲ್ಲಿ ಸಮರ್ಥವಾಗಿ ಮೂಡಿಬಂದು ಕಲಾತ್ಮಕ ಬೆಳಕು ಚೆಲ್ಲುವಂತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.