ADVERTISEMENT

ಜಲದ ಕೊರತೆಯ ಮುನ್ನುಡಿ

ಸುಮಲತಾ ಎನ್, ಪದ್ಮನಾಭ ಭಟ್ಟ
Published 21 ಫೆಬ್ರುವರಿ 2013, 19:59 IST
Last Updated 21 ಫೆಬ್ರುವರಿ 2013, 19:59 IST
ಜಲದ ಕೊರತೆಯ ಮುನ್ನುಡಿ
ಜಲದ ಕೊರತೆಯ ಮುನ್ನುಡಿ   

ಈ ಬಾರಿ ನೀರಿನ ಕೊರತೆ ಹೆಚ್ಚಲಿದೆ ಎನ್ನುವ ಆತಂಕ ಹುಟ್ಟಿರುವ ಬೆನ್ನಲ್ಲೇ ಕಾವೇರಿ ನೀರಿನ 4ನೇ ಹಂತದ 2ನೇ ಘಟಕದಿಂದ ನಗರಕ್ಕೆ ಸಾಕಷ್ಟು ನೀರು ದೊರೆಯಲಿದೆ ಎಂಬ ಸಮಾಧಾನದ ಮಾತೂ ಕೇಳಿಬಂದಿದೆ. ಆದರೆ ತಮಿಳುನಾಡಿಗೆ ನೀರು ಬಿಡುವ ಆದೇಶ ಜಲಕ್ಷಾಮಕ್ಕೆ ಮುನ್ನುಡಿ ಬರೆಯಲಿದೆಯೇ ಎಂಬ ಆತಂಕವೂ ಹೆಚ್ಚಿದೆ.

ಒಬ್ಬ ವ್ಯಕ್ತಿಗೆ ದಿನವೊಂದಕ್ಕೆ 50 ರಿಂದ 70 ಲೀಟರ್ ನೀರಿನ ಅವಶ್ಯಕತೆ ಇದೆ. ನಗರದಲ್ಲಿ ದಿನಕ್ಕೆ 1,400 ದಶಲಕ್ಷ ಲೀಟರ್ ನೀರು ಬೇಕಿದೆ. ಕೋಟಿ ಮೀರಿದ ಜನಸಂಖ್ಯೆಯ ನಗರದಲ್ಲಿ ದಿನೇದಿನೇ ನೀರಿನ ಸಮಸ್ಯೆಯೂ ಹೆಚ್ಚಾಗುತ್ತಲೇ ಇದೆ. ಒಂದೊಂದು ಬೀದಿಯಲ್ಲೂ 10ರಿಂದ 15 ಕಡೆ ಕೊಳವೆಬಾವಿ ತೋಡಲಾಗುತ್ತಿತ್ತು, ಅವುಗಳಲ್ಲೂ ನೀರಿನ ಒರತೆ ಬತ್ತಿಹೋಗಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಟ್ಯಾಂಕರ್ ನೀರಿಗೂ ಬರ ಬಂದರೆ ಅಚ್ಚರಿಯೇನಿಲ್ಲ.

ಕಾವೇರಿ ನೀರು ಲಭ್ಯವಿಲ್ಲದವರು ಬೋರ್‌ವೆಲ್ ನೀರಿಗೆ ಮೊರೆಹೋಗಬೇಕಾದುದು ಅನಿವಾರ್ಯ. ಆದರೆ ಬೋರ್‌ವೆಲ್ ನೀರು ಆರೋಗ್ಯಕ್ಕೆ ಎಷ್ಟು ಉತ್ತಮ? ಎಂಬ ಪ್ರಶ್ನೆಯೂ ಎದುರಿಗಿದೆ. ಟ್ಯಾಂಕರ್ ನೀರಿನ ಬೆಲೆಯೂ ತುಟ್ಟಿ; ಲೋಡ್ ಒಂದಕ್ಕೆ ರೂ 450 ಆಗಿದೆ. ಟ್ಯಾಂಕರ್ ನೀರನ್ನು ಬಳಸಲು ಹಿಂದುಮುಂದು ನೋಡುವ ಜನ ಕುಡಿಯುವ ನೀರಿಗೆ ಆಶ್ರಯಿಸಿರುವುದು ಖಾಸಗಿ ಕುಡಿಯುವ ನೀರಿನ ಪೂರೈಕೆಯ ಕ್ಯಾನ್‌ಗಳನ್ನು.

ಇವೆಲ್ಲಾ ನೀರಿನ ಕೊರತೆಯನ್ನು ನೀಗುತ್ತವೆಯಾದರೂ ಇವುಗಳ ಶುದ್ಧತೆ ಬಗ್ಗೆ ಗೊಂದಲಗಳಿವೆ. ನೀರನ್ನು ಉಳಿಸುವ `ಮಳೆ ನೀರು ಕೊಯ್ಲು' ಮಾರ್ಗವನ್ನು ಹಲವರು ಅಳವಡಿಸಿಕೊಂಡರೂ ಅನೇಕರಿಗೆ ಅದು ಇನ್ನೂ ಹಾಳೆ ಮೇಲಷ್ಟೆ ಉಳಿದ ಸಂಗತಿ. ಮಳೆ ಬಂದರೆ ತಾನೇ ನೀರು ಉಳಿಸಲು ಸಾಧ್ಯ? ಅಕಾಲಕ್ಕೆ ಆಗುವ ಮಳೆಯಿಂದ ಎಂತಹ ಯೋಜನೆಗಳೂ ತಲೆಕೆಳಗು.

ಕೊರತೆ ಇಲ್ಲ: ಜಲಮಂಡಳಿ
ಇಷ್ಟೆಲ್ಲ ಸಮಸ್ಯೆಗಳು ಕಣ್ಣಿಗೆ ರಾಚುತ್ತಿದ್ದರೂ, ಸದ್ಯಕ್ಕೆ ನೀರಿನ ಪರಿಸ್ಥಿತಿ ತೀರಾ ಹದಗೆಟ್ಟಿಲ್ಲ ಎನ್ನುತ್ತಿದೆ ಜಲಮಂಡಳಿ!
ಈಗಾಗಲೇ ಶೇಖರಣೆಯಾಗಿರುವ ನೀರು ಮೇ ತಿಂಗಳವರೆಗೂ ಅಬಾಧಿತವಾಗಿ ಪೂರೈಸಲು ಸಾಕಾಗುತ್ತದೆ. ಆಗಾಗ್ಗೆ ಮಳೆ ಬಂದರಂತೂ ಇನ್ನೂ ಅನುಕೂಲ ಎನ್ನುವ ಜಲಮಂಡಳಿ ಅಧಿಕಾರಿಗಳು, ತಮಿಳುನಾಡಿಗೆ ನೀರು ಬಿಡುಗಡೆ ಮಾಡಿದರೂ ನಗರಕ್ಕೆ ಪೂರೈಕೆಯಾಗುವ ನೀರಿನಲ್ಲಿ ವ್ಯತ್ಯಯವಾಗುವುದಿಲ್ಲ ಎಂದು ಹೇಳುತ್ತಿದ್ದಾರೆ.

ನಾವು ಈಗ ಎದುರಿಸುತ್ತಿರುವ ನೀರಿನ ಅಭಾವಕ್ಕೆ ಜನರ ನಿರ್ಲಕ್ಷ್ಯವೇ ಕಾರಣ ಎಂಬುದು ಭೂವಿಜ್ಞಾನಿಯೊಬ್ಬರ ವಿಶ್ಲೇಷಣೆ. ನೀರಿನ ಬವಣೆ ನೀಗಿಸಲು ಜನರೂ ಸ್ವಯಂಪ್ರೇರಿತರಾಗಿ ಗಂಭೀರ ಪ್ರಯತ್ನ ಮಾಡಬೇಕು ಎಂಬ ಒತ್ತಾಯವೂ ಕೇಳಿಬರುತ್ತಿದೆ.

ADVERTISEMENT

ಮೀಟರ್ ಹಾಕಿಸಿಕೊಳ್ಳಲಿ
`ನೀರು ಕಡಿಮೆಯಾಯಿತು, ನೀರು ಬಿಡುತ್ತಿಲ್ಲ' ಎಂದು ಜನ ದೂರುತ್ತಾರೆ. ಆದರೆ ನೀರಿಗಾಗಿ ಅನಧಿಕೃತ ದಾರಿ ಹಿಡಿಯುತ್ತಾರೆ. ನೀರು ಬೇಕೆಂದವರು ಮೀಟರ್ ಹಾಕಿಸಿಕೊಳ್ಳಬೇಕಾದದ್ದು ಕಡ್ಡಾಯ. ಆದರೆ ಈ ನಿಯಮವನ್ನು ಪಾಲಿಸುತ್ತಿಲ್ಲ. ಜನರಿಗೆ ನೀರು ಬೇಕು, ದುಡ್ಡು ಕೊಡಲು ಮಾತ್ರ ಹಿಂದೇಟು ಹಾಕುತ್ತಾರೆ.

ಜಾಗದ ಅಳತೆಗೆ ತಕ್ಕಂತೆ ಚಾರ್ಜ್ ಮಾಡಲಾಗುತ್ತದೆ. ಇತ್ತೀಚೆಗಷ್ಟೆ ಹಲವೆಡೆ ಅನಧಿಕೃತ ನೀರು ಸಂಪರ್ಕ ಹೊಂದಿರುವುದನ್ನು ಕಡಿತಗೊಳಿಸಲಾಗಿದೆ. ವಿದ್ಯುತ್, ಪಂಪ್, ಇನ್ನೂ ಹಲವು ಖರ್ಚು ಸೇರಿದರೆ ತಿಂಗಳಿಗೆ ಜಲಮಂಡಳಿಗೆ ಲಕ್ಷಗಟ್ಟಲೆ ಹೊರೆ ಬೀಳುತ್ತದೆ. ಈ ಕುರಿತು ಜನರೂ ಚಿಂತಿಸಬೇಕು. ನೀರಿಲ್ಲ ಎಂದು ದೂರುವ ಬದಲು ಮೀಟರ್ ಹಾಕಿಸಿಕೊಳ್ಳಲಿ.
- ಟಿ. ವೆಂಕಟರಾಜು,
ಪ್ರಧಾನ ಎಂಜಿನಿಯರ್, ಜಲಮಂಡಳಿ


ಟ್ಯಾಂಕರ್ ನೀರನ್ನು ಪರೀಕ್ಷಿಸುತ್ತೇವೆ
ಇನ್ನೂ ಬೇಸಿಗೆ ಆರಂಭವಾಗಿಲ್ಲ. ಅದಾಗಲೇ ದಿನಕ್ಕೆ ಹಲವು ಲೋಡ್ ನೀರು ಹೋಗುತ್ತಿದೆ. ಆದರೆ ಕಾವೇರಿ ನೀರು ಪೂರೈಕೆಯಾಗದ ಕಡೆ, ಅಂದರೆ 8ನೇ ಮೈಲಿ, ಹೆಸರಘಟ್ಟ, ಪೀಣ್ಯ, ಹೆಗ್ಗನಹಳ್ಳಿ, ಆಂದ್ರಹಳ್ಳಿ ಮುಂತಾದೆಡೆ ಈಗಾಗಲೇ ನೀರಿನ ಬವಣೆ ಹೆಚ್ಚಾಗಿಬಿಟ್ಟಿದೆ. ಇನ್ನು ಏಪ್ರಿಲ್ ವೇಳೆಗೆ ದಿನವೊಂದರ ಬೇಡಿಕೆ 15 ಲೋಡ್ ದಾಟುತ್ತದೆ.

ಬೇಸಿಗೆ ಬಂದರೆ ನಾವೂ ಕೆಲವೊಮ್ಮೆ ನೀರಿನ ಕೊರತೆ ಎದುರಿಸುತ್ತೇವೆ. ಯಶವಂತಪುರ, ಪೀಣ್ಯ, ನಂದಿನಿ ಲೇಔಟ್ ಮುಂತಾದೆಡೆ ಬೋರ್‌ವೆಲ್ ನೀರಿನ ಮೂಲಗಳಿವೆ. ಆದರೆ ಅದನ್ನು ನಮ್ಮ ಮನಬಂದಂತೆ ತೆಗೆದು ಕೊಡಲು ಸಾಧ್ಯವಿಲ್ಲ. ಮಲ್ಲೇಶ್ವರದಲ್ಲಿ ಲ್ಯಾಬ್‌ನಿಂದ 6 ತಿಂಗಳಿಗೊಮ್ಮೆ ನೀರನ್ನು ಪರೀಕ್ಷೆಗೊಳಪಡಿಸುತ್ತೇವೆ. ಇಲ್ಲವೆಂದರೆ ಜನರಿಗೆ ನೀರಿನಿಂದ ತೊಂದರೆಯಾದರೆ ಅದು ನಮ್ಮ ಮೇಲೂ ಪರಿಣಾಮ ಬೀರುತ್ತದೆ. ಆದ್ದರಿಂದ ನೀರಿನ ವಿಷಯದಲ್ಲಿ ಹೆಚ್ಚು ಜಾಗರೂಕರಾಗಿರುತ್ತೇವೆ. 15 ವರ್ಷಗಳ ಹಿಂದಕ್ಕೆ ಹೋಲಿಸಿದರೆ ನೀರಿಗೆ ಈಗ ಬೇಡಿಕೆ ತುಂಬಾ ಹೆಚ್ಚಿದೆ. ಆಗಾಗ್ಗೆ ಕಾರ್ಪೊರೇಷನ್ ನೀರಿನಲ್ಲಿ ವ್ಯತ್ಯಯ ಉಂಟಾದಾಗ ಟ್ಯಾಂಕರ್‌ಗಳ ನೀರಿನ ಬಳಕೆಯೇ ಹೆಚ್ಚಾಗುತ್ತದೆ.
-ಸಿದ್ಧರಾಜು,
ಶ್ರೀ ವೆಂಕಟೇಶ್ವರ ಟ್ಯಾಂಕರ್ ಸರ್ವೀಸ್

ಕುಡಿಯುವ ನೀರಿನ ಬಗ್ಗೆ ನಿರ್ಲಕ್ಷ್ಯವಿಲ್ಲ
ಪ್ರತಿ ವರ್ಷವೂ ನೀರಿನ ಸಮಸ್ಯೆ ಇದ್ದದ್ದೇ. ಫೆಬ್ರುವರಿ ತಿಂಗಳು ಶುರುವಾಗುತ್ತಿದ್ದಂತೇ ನೀರಿಗೆ ಬೇಡಿಕೆ ಹೆಚ್ಚಾಗುತ್ತದೆ. ಅದರಲ್ಲೂ ಕುಡಿಯುವ ನೀರಿಗೆ ಹಾಹಾಕಾರ ಹೆಚ್ಚು. ನೀರಿನ ಸೌಲಭ್ಯ ಇರುವ ಕಡೆಗಳಲ್ಲಿ ಹೊರತು ಪಡಿಸಿ, ಕುಡಿಯುವ ಕ್ಯಾನ್ ನೀರನ್ನು ನಗರದ ಎಲ್ಲ ಕಡೆಯೂ ಬಳಸುತ್ತಾರೆ. ಕಾವೇರಿ ನೀರು ಇರದ ಕಡೆ ಕ್ಯಾನ್ ನೀರುಗಳೇ ಗಟ್ಟಿ.

ಟ್ಯಾಂಕರ್ ನೀರು ಕುಡಿಯಲು ಯೋಗ್ಯವಲ್ಲ ಎನ್ನುವ ಅಭಿಪ್ರಾಯ ಜನರದ್ದು. ಹಾಗಾಗಿ ನೀರಿನ ಕ್ಯಾನ್‌ಗಳನ್ನು ಖರೀದಿಸುತ್ತಾರೆ. ಕುಡಿಯುವ ನೀರು ಎಂದಾಕ್ಷಣ ಶುದ್ಧವಾಗಿದೆಯೇ ಇಲ್ಲವೇ ಎಂಬುದು ಎಲ್ಲರ ಆತಂಕ. ಆದ್ದರಿಂದ ಹಲವು ಹಂತಗಳಲ್ಲಿ ನೀರನ್ನು ಶುದ್ಧೀಕರಿಸಿದ ನಂತರವೇ ಪ್ಯಾಕ್ ಮಾಡುತ್ತೇವೆ.
-ವಿನಯ್,
ಕ್ವೆಂಚ್ ವಾಟರ್ ಡಿಸ್ಟ್ರಿಬ್ಯೂಟರ್ಸ್‌


ಅಂತರ್ಜಲ ಗಣಿಗಾರಿಕೆ
ನೀರು ಬ್ಯಾಂಕ್ ಖಾತೆಯಂತೆ. ಉಳಿಸಿದಷ್ಟೂ ಮುಂದಕ್ಕೆ ಉಪಯುಕ್ತ. ನೀರಿನ ವಿಷಯದಲ್ಲಿ ಸ್ವೇಚ್ಛೆಯಾಗಿ ವರ್ತಿಸುವವರೇ ಈಗ ಹೆಚ್ಚು. ಅಂತರ್ಜಲ ನಿರ್ಲಕ್ಷ್ಯದ ಬಗ್ಗೆ ಹೇಳುವಂತೆಯೇ ಇಲ್ಲ. ನೀರು ಮಿತವ್ಯಯದ ಬಗ್ಗೆ ಅವಶ್ಯ ಜಾಗೃತಿ ಮೂಡಿಸುವಲ್ಲಿ ಸರ್ಕಾರ ಯಶಸ್ವಿಯಾಗಿಲ್ಲ ಎಂದು ಹಲವರು ದೂರುತ್ತಾರೆ. ಆದರೆ ಇದು ಸರ್ಕಾರವೊಂದರ ಹೊಣೆಯಲ್ಲ.

ಅಭಾವ ತೀರಾ ಹೆಚ್ಚಾದಾಗ ಜನ ಸುಮ್ಮನೆ ಕೂಗಾಡುತ್ತಾರೆ. ಅದಕ್ಕೂ ಮುನ್ನ ಎಷ್ಟೇ ಎಚ್ಚರಿಕೆ ನೀಡಿದರೂ ಕಿವಿಗೊಡುವುದಿಲ್ಲ. ಈ ಸಂದರ್ಭದಲ್ಲಿ ಟ್ಯಾಂಕರ್ ನೀರಿಗೆ ಮೊರೆ ಹೋಗುತ್ತಾರೆ. ಟ್ಯಾಂಕರ್ ನೀರಿನ ಗುಣಮಟ್ಟವೂ ಎಷ್ಟು ಸುರಕ್ಷಿತ ಎಂಬುದನ್ನು ತಿಳಿಸುವ ಮಾನದಂಡವನ್ನು ಯಾರೂ ಅನುಸರಿಸುತ್ತಿಲ್ಲ. ಪ್ರತಿ ಟ್ಯಾಂಕರ್ ಮೇಲೂ ನೀರಿನ ಮೂಲ, ಗುಣಮಟ್ಟದ ಬಗ್ಗೆ ನಮೂದಿಸಬೇಕು. ಪ್ರತಿ ತಿಂಗಳೂ ನೀರಿನ ಪರೀಕ್ಷೆ ಕಡ್ಡಾಯಗೊಳಿಸಬೇಕು.

ಬೆಂಗಳೂರು ನಗರದಲ್ಲಿ ನೀರು ಸಿಗಲಿಲ್ಲವೆಂಬ ಕಾರಣಕ್ಕೆ ಎಲ್ಲೆಂದರಲ್ಲಿ  ಬೋರ್‌ವೆಲ್ ಅನಿಯಮಿತವಾಗಿ ಕೊರೆಸುತ್ತಿರುವುದು ಸಾಮಾನ್ಯವಾಗಿದೆ. ಇದನ್ನು ನಿಯಂತ್ರಿಸುವ ಅಗತ್ಯವಿದೆ. ನಗರೀಕೃತ ಜೀವನಶೈಲಿಯಿಂದಾಗಿ 1ಲೀಟರ್ ನೀರು ಬಳಸುತ್ತಿದ್ದ ಜಾಗದಲ್ಲಿ 4ಲೀಟರ್ ಬಳಸುತ್ತಾರೆ. ಕಾರು ತೊಳೆಯಲೆಂದೇ ಡ್ರಮ್‌ಗಟ್ಟಲೆ ನೀರು ಸುರಿಯುತ್ತಿದ್ದಾರೆ ಎಂದ ಮೇಲೆ ಕೊರತೆ ಬರದೆ ಇರಲು ಸಾಧ್ಯವೇ? ಸಹಸ್ರಾರು ವರ್ಷಗಳಿಂದ ಕೂಡಿಟ್ಟ ಜಲ ಸಂಪತ್ತು ಕೆಲವೇ ವರ್ಷಗಳ ಅವೈಜ್ಞಾನಿಕ ಬಳಕೆಯಿಂದ ವ್ಯರ್ಥವಾಗುತ್ತಿದೆ.

ಇನ್ನು ನೀರು ಸಂಗ್ರಹಣಾ ವ್ಯವಸ್ಥೆಯ ಮೂಲಭೂತ ಸೌಕರ್ಯದಲ್ಲೂ ಕೊರತೆಯಿದೆ ಎನ್ನಬಹುದು. ಇರುವ ನೀರನ್ನೇ ಶುದ್ಧೀಕರಿಸಿದರೂ ಶೇ 25ರಷ್ಟು ಅವಶ್ಯಕತೆ ನೀಗಿಸಬಹುದು. ನಗರಕ್ಕೆ ಎಲ್ಲಿಂದಲೋ ನೀರು ಸರಬರಾಜು ಮಾಡಲು ಕೋಟ್ಯಂತರ ಹಣ ವ್ಯಯ ಮಾಡುವ ಬದಲು ಇರುವ ನೀರನ್ನೇ ಸಮರ್ಪಕವಾಗಿ ಬಳಸಿಕೊಳ್ಳಬಹುದಲ್ಲವೇ?

ನೀರಿನ ಕೊರತೆ ನೀಗಲು ನೀರಿನ ದುರ್ಬಳಕೆ ತಡೆಯುವುದು, ಪ್ರಸಕ್ತ ಸನ್ನಿವೇಶದಲ್ಲಿ ಲಭ್ಯ ಜಲಸಂಪನ್ಮೂಲವನ್ನು ನ್ಯಾಯಬದ್ಧವಾಗಿ ಬಳಸುವುದು, ಕೊಳವೆ ಬಾವಿ ನಿಯಂತ್ರಣಕ್ಕೆ ಇನ್ನೂ ಕಠಿಣ ಕ್ರಮ ಅಗತ್ಯ. ನಿಯಮಾವಳಿಯನ್ನು ಸರ್ಕಾರ ನಿರ್ದಿಷ್ಟ ರೂಪದಲ್ಲಿ ಜಾರಿ ಮಾಡುವಲ್ಲಿ ತಮ್ಮ ಸಹಕಾರವೂ ಅಗತ್ಯ ಎಂಬ ಪ್ರಜ್ಞೆ ಜನರಿಗೆ ಇರಬೇಕು.
-ಜಿ.ವಿ. ಹೆಗ್ಡೆ, ಕಾರವಾರ. ಹಿರಿಯ ಭೂವಿಜ್ಞಾನಿ (ಅಂತರ್ಜಲ)

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.