ADVERTISEMENT

ಟ್ರಾಫಿಕ್ ಪಾಠಕ್ಕೊಂದು ಪಾರ್ಕ್

​ಪ್ರಜಾವಾಣಿ ವಾರ್ತೆ
Published 23 ಜುಲೈ 2012, 19:30 IST
Last Updated 23 ಜುಲೈ 2012, 19:30 IST
ಟ್ರಾಫಿಕ್ ಪಾಠಕ್ಕೊಂದು ಪಾರ್ಕ್
ಟ್ರಾಫಿಕ್ ಪಾಠಕ್ಕೊಂದು ಪಾರ್ಕ್   

ದಷ್ಟಪುಷ್ಟವಾದ ಮರಗಳು, ಅವುಗಳ ಕಾಲಬುಡದಲ್ಲಿ ಸಣಕಲು ಗಿಡಗಳು, ಆರ್ಕಿಡ್‌ನಂತಹ ಆಲಂಕಾರಿಕ ಸಸಿಗಳು, ರಸ್ತೆಯ ಕಸ ಬಾಚಿ ಬಳಲಿ ವಿರಮಿಸುವ ಪೌರಕಾರ್ಮಿಕರು, ಅಲ್ಲಲ್ಲಿ ವಾಯುವಿಹಾರಿಗಳು, ಮತ್ತೊಂದು ಮೂಲೆಯಲ್ಲಿರುವ ಗ್ರಂಥಾಲಯದಲ್ಲಿ ಅಕ್ಷರಪ್ರೇಮಿಗಳು... ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿರುವ ಆ ಉದ್ಯಾನ ಭಾನುವಾರದಿಂದ ಶುಕ್ರವಾರದವರೆಗೆ ಕಾಣಿಸಿಕೊಳ್ಳುವ ಪರಿಯಿದು; ನಗರದ ಸಾಮಾನ್ಯ ಉದ್ಯಾನದಂತೆ.

ಶನಿವಾರ 10 ಗಂಟೆಗೂ ಮೊದಲು ಆ ಉದ್ಯಾನಕ್ಕೆ ಸಮವಸ್ತ್ರಧಾರಿ ಮಕ್ಕಳ ದಂಡು ದೌಡಾಯಿಸುತ್ತದೆ. ಎಲ್ಲಿ ನೋಡಿದರೂ ಬಿಳಿ, ನೀಲಿ, ಕೆಂಪು, ಹಳದಿ, ಹಸಿರು ಸಮವಸ್ತ್ರಗಳು. ಅಲ್ಲಲ್ಲಿ ಸಂಚಾರ ಪೊಲೀಸರು... ಪ್ರವೇಶದ್ವಾರಕ್ಕೆ ಎದುರಾಗಿ ಟ್ರಾಫಿಕ್ ಸಿಗ್ನಲ್ ದೀಪಗಳನ್ನು ಹೊತ್ತ ಕಂಬಗಳು... ಉದ್ಯಾನದಲ್ಲಿ ಸಿಗ್ನಲ್ ದೀಪಗಳೇ?
ಹೌದು, ಅದು ಟ್ರಾಫಿಕ್ ಪಾರ್ಕ್.


ಅದೊಂದು ಉದ್ಯಾನವಾದರೂ ಬರಿಯ ಉದ್ಯಾನವಲ್ಲ. ಅದರೊಳಗಿರುವುದು ಬರಿಯ ಡಾಮರು ಕುಡಿದ ರಸ್ತೆಗಳಲ್ಲ, ನೇರ ಹೋಗಬೇಕೋ, ತಿರುವು ತೆಗೆದುಕೊಳ್ಳಬೇಕೋ ಎಂದು ಮಾರ್ಗದರ್ಶನ ಮಾಡುವ ಟ್ರಾಫಿಕ್ ಸಿಗ್ನಲ್‌ಗಳು ಅಲ್ಲಿವೆ. ಆ ತುದಿಯಲ್ಲಿ ಈ ಕಡೆ ಮುಖ ಮಾಡಿ ಸೈಕಲ್‌ನಲ್ಲಿ ಬಂದ ಬಾಲಕಿ ಒಮ್ಮೆ ತಡೆದು `ಇದು ಏಕಮುಖ ರಸ್ತೆ.

ನೇರ ಹೋಗಿ, ಆ ಮೂಲೆಯಲ್ಲಿ ಬಲಕ್ಕೆ ತೆಗೆದುಕೊಂಡು ಮತ್ತೆ ಈ ಕಡೆ ಬಾ~ ಅಂತ- `ಬಿ ಟ್ರ್ಯಾಕ್~ ರಸ್ತೆಗಳಂತೆ- ಸೂಚಿಸುವ ದಾರಿಸೂಚಕವನ್ನು ಪಾಲಿಸುತ್ತಾಳೆ. ಅಲ್ಲಿನ ಎಲ್ಲಾ ರಸ್ತೆಗಳಲ್ಲೂ `ದಾರಿಹೋಕ~ರ ಮೇಲೆ ಹದ್ದಿನ ಕಣ್ಣಿಡಲು ಸಂಚಾರ ಇನ್ಸ್‌ಪೆಕ್ಟರ್‌ಗಳು, ಪೊಲೀಸರೂ ಅಲ್ಲಿದ್ದಾರೆ...

ಹೌದು, ಹೆಸರೇ ಹೇಳುವಂತೆ ಅದು ಮಕ್ಕಳಿಗೆ ಸಂಚಾರ ನಿಯಮದ ಬಗ್ಗೆ ಪಾಠ ಮತ್ತು ಪ್ರಾತ್ಯಕ್ಷಿಕೆ ನೀಡಲೆಂದೇ ನಿರ್ಮಿಸಲಾಗಿರುವ ಪಾರ್ಕ್. ರೆಸಿಡೆನ್ಸಿ ರಸ್ತೆಯಿಂದ ಶಿವಾಜಿನಗರ ಕಡೆಗೆ ಹೊರಳಿ ಸೇಂಟ್ ಜೋಸೆಫ್ ಹೈಸ್ಕೂಲ್ ದಾಟಿದಾಗ ಸಿಗುವ ಸ್ಟೇಟ್‌ಬ್ಯಾಂಕ್ ವೃತ್ತಕ್ಕೆ ಅಭಿಮುಖವಾಗಿ ಈ ಉದ್ಯಾನವಿದೆ.

ಪೊಲೀಸ್ ಇಲಾಖೆ ನಿರ್ಮಿಸಿರುವ ಈ ಪಾರ್ಕ್‌ನ ನಿರ್ವಹಣೆಯ ಹೊಣೆ ಹೊತ್ತಿರುವುದು ವಾಸ್ವಾನಿ ಗ್ರೂಪ್. ದೇಶದಲ್ಲಿ ಪ್ರತಿ ರಾಜ್ಯದ ರಾಜಧಾನಿಯಲ್ಲೂ ಇರುವಂತೆ ನಮ್ಮ ರಾಜ್ಯದ ಏಕೈಕ ಟ್ರಾಫಿಕ್ ಪಾರ್ಕ್ ಇದಾಗಿದೆ. ಪ್ರತಿವರ್ಷ ಜುಲೈ ತಿಂಗಳಲ್ಲಿ ತರಬೇತಿ ಶುರುವಾದರೆ ಪರೀಕ್ಷಾ ಅವಧಿಗಳನ್ನು ಹೊರತುಪಡಿಸಿ ಪ್ರತಿ ಶನಿವಾರ ನಡೆಯುತ್ತದೆ.

ಜು. 21ರ ಶನಿವಾರವೂ ಉದ್ಯಾನದಲ್ಲಿ ತರಬೇತಿ, ಪ್ರಾತ್ಯಕ್ಷಿಕೆ ನಡೆದಿತ್ತು. ಅಂದಿನ ಫಲಾನುಭವಿಗಳಾಗಿದ್ದವರು ವಿಶ್ವಕಲಾನಿಕೇತನ ಆಂಗ್ಲ ಮಾಧ್ಯಮ ಶಾಲೆ, ವಿಲ್ಸನ್‌ಗಾರ್ಡನ್‌ನ ಔಟ್‌ರೀಚ್ ಶಾಲೆ, ಮಿಷನ್ ರಸ್ತೆಯ ಮಿತ್ರಾಲಯ ಬಾಲಕಿಯರ ಪ್ರೌಢಶಾಲೆ, ಸದಾಶಿವನಗರದ ನಾಗಸೇನಾ ವಿದ್ಯಾಲಯ, ಸೇಕ್ರೆಡ್ ಹಾರ್ಟ್ ಬಾಲಕರ ಪ್ರೌಢಶಾಲೆ ಹಾಗೂ ಸ್ಟೆಲ್ಲಾ ಮೆರೀಸ್ ಬಾಲಕಿಯರ ಶಾಲೆ ಮತ್ತು ಕಬ್ಬನ್‌ಪಾರ್ಕ್ ಬಳಿಯ ಸ್ಟ್ರೇಸಿ ಸ್ಮಾರಕ ಶಾಲೆಯ ಮಕ್ಕಳು.

ಮುಖ್ಯ ಟ್ರಾಫಿಕ್ ವಾರ್ಡನ್ ಎಂ.ಟಿ. ನಾಯಕ್, ಕೇಂದ್ರ ಸಂಚಾರ ವಲಯ ವ್ಯಾಪ್ತಿಯ ಈ. ಕಾವೇರಪ್ಪ, ಬಿ.ಎಸ್. ಆನಂದ್, ಟಿ.ಎಸ್. ನಾಗಭೂಷಣ್, ಎ. ಷಣ್ಮುಗಂ, ಸಂಚಾರ ತರಬೇತಿ ಸಂಸ್ಥೆಯ ಪ್ರಕಾಶ್ ಮುಂತಾದವರು ಪ್ರಾತ್ಯಕ್ಷಿಕೆ ನೀಡಿದರು.

`ಶಾಲೆಗಳಲ್ಲೂ ಆಗಾಗ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ. ನಂತರ ಆ ಮಕ್ಕಳನ್ನು ಶಾಲೆಗೆ ಸಮೀಪದ ರಸ್ತೆಯಲ್ಲಿ ನಮ್ಮಂದಿಗೆ ಸಂಚಾರ ನಿಯಮ ಪಾಲನೆಯ ಪ್ರಾತ್ಯಕ್ಷಿಕೆಯನ್ನು ಸ್ವತಃ ಮಾಡುತ್ತಾರೆ. ಆ ಸಂದರ್ಭದಲ್ಲಿ ಅವರು ತಮ್ಮ ಸಮವಸ್ತ್ರದೊಂದಿಗೆ ತೋಳಿನಲ್ಲಿ `ವಿದ್ಯಾರ್ಥಿಗಳ ರಸ್ತೆ ಸುರಕ್ಷತಾ ಸಂಘ~ (ಆರ್‌ಎಸ್‌ಎಎಸ್) ಎಂಬ ಬ್ಯಾಡ್ಜ್ ಧರಿಸಿರುತ್ತಾರೆ.

ಇದು ಅವರಲ್ಲಿ ಮನೋಸ್ಥೈರ್ಯ ಹೆಚ್ಚಿಸುತ್ತದೆ~ ಎಂದು ವಿವರಿಸುತ್ತಾರೆ ಎ. ಷಣ್ಮುಗಂ.
`ಟ್ರಾಫಿಕ್ ವಾರ್ಡನ್‌ಗಳ ಸಂಸ್ಥೆ ನಗರದ ಸಂಚಾರ ದಟ್ಟಣೆ ನಿಯಂತ್ರಿಸಲು ಉಚಿತ ಸೇವೆ ನೀಡುತ್ತಿರುವುದನ್ನು ಗಮನಿಸಿ ಕ್ರಿಕೆಟ್ ಪಟು ರಾಹುಲ್ ದ್ರಾವಿಡ್ ಅವರೂ ಭೇಷ್ ಅಂದಿದ್ದಾರೆ. ಇತ್ತೀಚೆಗಷ್ಟೇ ಅವರನ್ನು ಸರ್ಕಾರ `ಸ್ಪೆಷಲ್ ಟ್ರಾಫಿಕ್ ವಾರ್ಡನ್~ ಎಂಬ ಪ್ರಮಾಣಪತ್ರ ನೀಡಿ ನಿಯೋಜಿಸಿತ್ತು. ಸೇವಾ ಮನೋಭಾವದ ಇನ್ನಷ್ಟು ಮಂದಿಗೆ ಪ್ರೇರಣೆಯಾಗಲಿ ಎಂಬುದು ನಮ್ಮ ಆಶಯ~ ಎನ್ನುತ್ತಾರೆ ಮುಖ್ಯ ಟ್ರಾಫಿಕ್ ವಾರ್ಡನ್ ಎಂ. ಟಿ. ನಾಯಕ್.
 

ಮಕ್ಕಳ ಮೂಲಕ ಕುಟುಂಬಕ್ಕೆ ಶಿಕ್ಷಣ
`ಸಮಾಜದಿಂದ ನಮಗೆ ಬೇಕಾದ್ದನ್ನು ಪಡೆಯುವ ನಾವು ಅದನ್ನು ವಾಪಸ್ ಕೊಡುವ ಬಗ್ಗೆಯೂ ಚಿಂತಿಸಬೇಕಲ್ವಾ? ಅದಕ್ಕೆ ನಾನು ಆರಿಸಿಕೊಂಡದ್ದು ಟ್ರಾಫಿಕ್ ವಾರ್ಡನ್ ಕ್ಷೇತ್ರವನ್ನು. ಇದು ಉಚಿತ ಸೇವೆ. ಇಂದಿನ ಮಕ್ಕಳು ನಾಳಿನ ನಾಗರಿಕರು. ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳಿಗೆ ಸಾಮಾಜಿಕ ಕಳಕಳಿ ಇರುತ್ತದೆ. ಅವರಿಗೆ ಸಂಚಾರ ನಿಯಮದ ಪಾಠ ಹೇಳಿಕೊಟ್ಟರೆ ಒಂದು ಕುಟುಂಬಕ್ಕೆ ತಿಳಿವಳಿಕೆ ನೀಡಿದಂತೆ~ ಎನ್ನುತ್ತಾರೆ, ಟ್ರಾಫಿಕ್ ಪಾರ್ಕ್‌ನ ಉಸ್ತುವಾರಿ ಪಿ. ಆರ್. ರಾವ್.

ಕಳೆದ 17 ವರ್ಷಗಳಿಂದ ಉಚಿತ ಸೇವೆ ಸಲ್ಲಿಸುತ್ತಿರುವ ರಾವ್ ಅವರು ಟ್ರಾಫಿಕ್ ವಾರ್ಡನ್ ಸಂಸ್ಥೆಯಲ್ಲಿ ಡೆಪ್ಯೂಟಿ ಚೀಫ್ ಟ್ರಾಫಿಕ್ ವಾರ್ಡನ್ ಸಹ ಆಗಿದ್ದು, ಪ್ರತಿ ಶನಿವಾರ ವಿದ್ಯಾರ್ಥಿಗಳಿಗೆ ಸಂಚಾರ ನಿಯಮ ಪಾಲನೆಯ ಪಾಠ, ಪ್ರಾತ್ಯಕ್ಷಿಕೆ ನೀಡುತ್ತಾರೆ. `ಮಗ ಭಾರತೀಯ ಭೂಸೇನೆಯಲ್ಲಿ ಮೇಜರ್ ಆಗಿ ದೇಶ ಸೇವೆ ಮಾಡುತ್ತಿರುವಾಗ ನಾನೂ ಕಿಂಚಿತ್ತು ಮಾಡುತ್ತಿದ್ದೇನೆಂಬ ಖುಷಿ ನನಗೆ~ ಎಂದು ಹೆಮ್ಮೆಪಡುತ್ತಾರೆ.

`ಶೋಕಿಗೆ ಕಡಿವಾಣ~
`ಸಂಚಾರ ನಿಯಮಪಾಲನೆ ಕುರಿತ ಈ ವಾರಾಂತ್ಯದ ಕಾರ್ಯಕ್ರಮ ಶಾಲೆಗಳಲ್ಲಿ, ವಿದ್ಯಾರ್ಥಿವಲಯದಲ್ಲಿ ಹೊಸ ಸಂಚಲನ ಮೂಡಿಸಿದೆ. ಮೀಸೆ ಮೂಡುವುದಕ್ಕೂ ಮೊದಲು ಬೈಕ್, ಕಾರು ಓಡಿಸುವುದು ಮಕ್ಕಳಿಗೂ, ಪೋಷಕರಿಗೂ ಶೋಕಿ. ಮಕ್ಕಳಿಗೆ ಇಂತಹ ತರಬೇತಿ ನೀಡುವುದರಿಂದ ಅವಿವೇಕದ ವರ್ತನೆಗಳಿಗೆ ಕಡಿವಾಣ ಬೀಳುತ್ತದೆ~
- ವಿಜಯಾ ಎನ್.ಎಸ್. ಶಿಕ್ಷಕಿ, ಸದಾಶಿವನಗರದ ಸ್ಟೆಲ್ಲಾ ಮೆರೀಸ್ ಶಾಲೆ

`ವಿದ್ಯಾರ್ಥಿಗಳಿಗೆ ಶಿಸ್ತು ಕಲಿಸಿದೆ~

`ಮನಬಂದಂತೆ ರಸ್ತೆಯಲ್ಲಿ ಓಡಾಡುವ ಪರಿಪಾಠ ಮಕ್ಕಳಲ್ಲೂ ಹೆಚ್ಚು. ಈ ತರಬೇತಿಯಿಂದ ಅವರಲ್ಲಿ ಶಿಸ್ತು ಬರುತ್ತದೆ. ಕಳೆದೆರಡು ವರ್ಷದಿಂದ ನಮ್ಮ ಶಾಲಾ ಮಕ್ಕಳು ಇಲ್ಲಿ ಬರುತ್ತಿದ್ದಾರೆ. ಇವತ್ತೂ ಏಳನೆ ತರಗತಿಯ 40 ವಿದ್ಯಾರ್ಥಿನಿಯರನ್ನು ಕರೆತಂದಿದ್ದೇವೆ~
 ಶಾಂತಿ ಎಲ್.  ಪ್ರಭಾ
ಶಿಕ್ಷಕಿಯರು, ಮಿತ್ರಾಲಯ ಬಾಲಕಿಯರ ಪ್ರೌಢಶಾಲೆ, ಮಿಷನ್ ರಸ್ತೆ

`ಇಂತಹ ಶಿಕ್ಷಣವೇ ಪರಿಣಾಮಕಾರಿ~
`ಹಲವು ರಸ್ತೆಗಳನ್ನು ದಾಟಿ ಮಕ್ಕಳು ಶಾಲೆಗೆ ಬರುತ್ತಾರೆ. ಶಾಲೆಯಲ್ಲಿ ನಾವು ಸಂಚಾರ ನಿಯಮಗಳ ಬಗ್ಗೆ ಹೇಳುವುದಕ್ಕಿಂತ ಹೀಗೆ ಇಲಾಖೆಯ ವತಿಯಿಂದ ಪ್ರಾತ್ಯಕ್ಷಿಕೆ ಸಹಿತ ಹೇಳಿಕೊಡುವುದು ಅತ್ಯಂತ ಸೂಕ್ತ. ವಾರಾಂತ್ಯದಲ್ಲಿ ಮಕ್ಕಳಿಗೆ ಇದೊಂದು `ಔಟಿಂಗ್~ ಕೂಡಾ ಆಗುತ್ತದೆ~.
ಶ್ರೀನಿವಾಸ್, ಶಿಕ್ಷಕ, ಸದಾಶಿವನಗರದ ನಾಗಸೇನಾ ವಿದ್ಯಾಲಯ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.