ADVERTISEMENT

ಡಂ ಡಂ ಡೋಲು

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2012, 19:30 IST
Last Updated 11 ಏಪ್ರಿಲ್ 2012, 19:30 IST

ನಮ್ಮೂರಿನಲ್ಲಿ ಒಬ್ಬ ಹುಡುಗನಿದ್ದ. ಬೋರ್‌ವೆಲ್ ತೋಡುವ ಲಾರಿಗೆ ಕಬ್ಬಿಣದ ಪೈಪುಗಳನ್ನು ಎತ್ತಿಹಾಕುವುದು, ಕೆಳಗಿಳಿಸುವುದು, ಜೋಡಿಸಿಡುವುದು ಅವನ ಕೆಲಸ. ಊರ ದೇವಸ್ಥಾನದಲ್ಲಿ ಜಾತ್ರೆ ಶುರುವಾಯಿತು ಅಂದರೆ ಅದು ಮುಗಿಯುವ ಒಂಬತ್ತು ದಿನಗಳವರೆಗೂ ಸಂಜೆ ಏಳು ಗಂಟೆಗೆ ಅವನು ಡೋಲು ಹಿಡಿದುಕೊಂಡು ದೇವರ ಉತ್ಸವಕ್ಕೆ ಹಾಜರ್. 

ಹಗಲೆಲ್ಲಾ ಬೋರ್‌ವೆಲ್ ಲಾರಿಯಲ್ಲಿ ಓಡಾಡುವ ಕೆಲಸ. ಸಂಜೆ ಡೋಲು ಬಜಾಯಿಸುವ ಹವ್ಯಾಸ. ಒಂದು ಕೈಯಲ್ಲಿ ಕೋಲು, ಇನ್ನೊಂದು ಕೈ ಬೆರಳುಗಳಿಗೆ ಕವಚ ಹಾಕಿಕೊಂಡು ಡೋಲು ಹಿಡಿದು ಡೋಲಿನ ನಾದದ ಸ್ಥಾಯಿ, `ನಡೆ~ಗೆ ತಕ್ಕಂತೆ ತಲೆ ಅಲ್ಲಾಡಿಸುತ್ತಾ ಡೋಲು ಬಾರಿಸಿದ ಅಂದರೆ ನೆರೆದವರೆಲ್ಲಾ `ಪರಾಕ್ ಪರಾಕ್~ ಅನ್ನುತ್ತಿದ್ದರು. ಈ ಹರ್ಷೋದ್ಗಾರಕ್ಕೆ ಆತನ ಹುಮ್ಮಸ್ಸು ಇಮ್ಮಡಿಯಾಗುತ್ತಿತ್ತು. ಹೆಸರು ನಾರಾಯಣ. ಜಾತ್ರೆ ಮುಗಿದಾಗ ಆತ `ಡೋಲು ನಾರಾಯಣ~ ಆಗಿಬಿಟ್ಟಿದ್ದ.

ಡೋಲು ನಾದ ಆತನನ್ನು ಸೆಳೆದದ್ದು ಮಂಗಳೂರು ಸಮೀಪದ ಬಪ್ಪನಾಡು ಕ್ಷೇತ್ರಕ್ಕೆ ಹೋದಾಗ. ಅಲ್ಲಿನ ಬೃಹತ್ ಗಾತ್ರದ ಡೋಲು, ಅದರ ನಾದ, ಎರಡು ಮೂರು ಕಿಲೋ ಮೀಟರ್ ದೂರದವರೆಗೂ ಕೇಳುವ ಸುಮಧುರ ನಿನಾದ ಕೇಳಿ ವಾದ್ಯ ಕಲಿಯುವುದಾದರೆ ಡೋಲನ್ನೇ ಕಲಿಯಬೇಕು ಎಂದು ನಿರ್ಧರಿಸಿದ್ದ ನಾರಾಯಣ.

ಹಾಗೆಂದು ಹೇಗೆ ಬೇಕೊ ಹಾಗೆ ಡೋಲು ಬಜಾಯಿಸುವುದಲ್ಲ. ತಾಳಕ್ಕೆ ಸರಿಯಾಗಿ ಆತನ ಡೋಲು ಡಂ ಡಂ ಎನ್ನುತ್ತಿತ್ತು. ಕರ್ನಾಟಕ ಸಂಗೀತದ ಸುಳಾದಿ ಸಪ್ತತಾಳಗಳಲ್ಲಿ ಆದಿತಾಳ, ರೂಪಕ ತಾಳ, ತ್ರಿಪುಟ ತಾಳ, ಏಕತಾಳಗಳಲ್ಲದೆ ಕಷ್ಟಕರವಾದ ಛಾಪು ತಾಳಗಳು, ಅಟ್ಟತಾಳ, ಝಂಪೆ ತಾಳಗಳನ್ನೂ ಸಲೀಸು ಮಾಡಿಕೊಂಡಿದ್ದ.

ನಾಗಸ್ವರ ಕಛೇರಿಗಳಿಗೆ ನುಡಿಸುವ ಪ್ರಮುಖ ಮತ್ತು ಏಕೈಕ ಪಕ್ಕವಾದ್ಯ ಡೋಲು. ಮೊದ ಮೊದಲು ಇದನ್ನು ಶುಭ ಸಮಾರಂಭಗಳಲ್ಲಿ, ದೇವಾಲಯಗಳಲ್ಲಿ ಪೂಜೆಯ ವೇಳೆಗೆ ಮಾತ್ರ ನುಡಿಸುವುದು ರೂಢಿ ಇತ್ತು. ಆದರೆ ಇದೀಗ ನಾಗಸ್ವರ ಕಛೇರಿಗಳಲ್ಲಿ ಇದರ ಗಂಭೀರ ನಾದವನ್ನು, ವಿವಿಧ ಲಯಗಳನ್ನು ಆಸ್ವಾದಿಸಬಹುದು.

ಈ ವಾದ್ಯದ ಮಧ್ಯಭಾಗವನ್ನು ಮರದಿಂದ ಕೆತ್ತಲಾಗಿರುತ್ತದೆ. ಇದರ ಒಂದು ಭಾಗಕ್ಕೆ ಬಲಮುಚ್ಚುಗೆ ಮತ್ತು ಇನ್ನೊಂದು ಭಾಗಕ್ಕೆ ಎಡಮುಚ್ಚುಗೆಯನ್ನು ಕಬ್ಬಿಣದ ರೇಖುಗಳಿಂದ ಕಟ್ಟಿರುತ್ತಾರೆ. ಚರ್ಮದ ಹೊದಿಕೆಯನ್ನು ಮುಚ್ಚುಗೆಗೆ ಹಾಕುತ್ತಾರೆ. ಬಲಭಾಗದ ಡೋಲನ್ನು ನುಡಿಸುವಾಗ ಬೆರಳುಗಳಿಗೆ ಕವಚ ಹಾಗೂ ಎಡಭಾಗವನ್ನು ಕೋಲುಗಳಿಂದ ಬಾರಿಸುವುದು ಡೋಲು ನುಡಿಸುವ ಪದ್ಧತಿ.

ಮೇಲ್ನೋಟಕ್ಕೆ ಮೃದಂಗ ನಾದದಂತೆ ಕಂಡರೂ ಅದಕ್ಕಿಂತಲೂ ಜೋರಾದ ನಾದ ಡೋಲಿನದ್ದು. ಇದೊಂದು ಮಂಗಳವಾದ್ಯವಾಗಿ ಬಳಸುವಂಥ ವಾದ್ಯವಾಗಿದ್ದು, ಮದುವೆ ಸಮಾರಂಭಗಳಲ್ಲಿ ಹೆಚ್ಚಾಗಿ ದಕ್ಷಿಣ ಭಾರತದಲ್ಲಿ ಮಾತ್ರ ಬಳಕೆಯಲ್ಲಿರುವ ಬಹಳ ಪ್ರಾಚೀನವಾದ ವಾದ್ಯ ಪ್ರಕಾರ.

ಬೆಂಗಳೂರಿನ ವಿದ್ವಾನ್ ಶ್ರೀನಿವಾಸ್ ಉತ್ತಮ ಡೋಲು ವಾದಕರು. ಸುಮಾರು 50 ವರ್ಷಗಳಿಂದಲೂ ಡೋಲು ನುಡಿಸುತ್ತಾ ಬಂದಿರುವ ಇವರು ವಿದ್ವಾನ್ ಅರಳೇಪೇಟೆ ನಾರಾಯಣ ಸ್ವಾಮಿ ಅವರ ಶಿಷ್ಯರು. ಶಿಷ್ಯರಿಗೆ ಹೆಬ್ಬಾಳ ದಾಸರಹಳ್ಳಿಯಲ್ಲಿರುವ ತಮ್ಮ ಮನೆಯಲ್ಲಿ ಉಚಿತವಾಗಿ ಡೋಲು ಪಾಠ ಹೇಳಿಕೊಡುತ್ತಾರೆ.

ವಿದ್ವಾನ್ ಷಣ್ಮುಗ ಸುಂದರಂ ಪಿಳೈ, ಎ.ಆರ್. ಸುಬ್ರಹ್ಮಣ್ಯ, ದಕ್ಷಿಣಾಮೂರ್ತಿ, ಚಿನ್ನರಾಜು, ಡಾ.ಮುನಿರತ್ನ ಶ್ರೀನಿವಾಸ್, ರಾಜಗೋಪಾಲ್, ನಾರಾಯಣಸ್ವಾಮಿ. ಎ.ಕೆ. ಪಳನಿವೇಲು, ಮನ್ನಾರ್‌ಗುಡಿ ವಾಸುದೇವನ್ ಮುಂತಾದವರು ನಾಡಿನ ಉತ್ತಮ ಡೋಲು ವಾದಕರು.

ಸಾಮಾನ್ಯವಾಗಿ ಸಂಗೀತ ವಾದ್ಯ ಪ್ರಕಾರವನ್ನು ಕಲಿಯಬೇಕು ಎಂದು ಮನಸ್ಸು ಮಾಡಿರುವವರು ಡೋಲು ನುಡಿಸಲು ಹೋಗುವುದಿಲ್ಲ. ಆದರೂ ಕೌಟುಂಬಿಕ ಹಿನ್ನೆಲೆಯಲ್ಲಿ ಸಂಗೀತ ಮನೆತನದಿಂದ ಬಂದವರಾದರೆ ಇವರಲ್ಲಿ ಕೆಲವರು ಇದನ್ನು ನುಡಿಸುತ್ತಾರೆ. ಡೋಲು ವಾದ್ಯ, ಇದರ ವೈಶಿಷ್ಟ್ಯ, ಲಭ್ಯತೆ ಮತ್ತಿತರ ಮಾಹಿತಿಗೆ 080 65658635/9880297405.


ಪೂರಕ ಮಾಹಿತಿ: ಡೋಲು ಶ್ರೀನಿವಾಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT