ADVERTISEMENT

ಡಯಟ್ ದೂರ ಕಾಯ ಸಪೂರ!

ಎಚ್.ಎಸ್.ರೋಹಿಣಿ
Published 10 ಫೆಬ್ರುವರಿ 2013, 19:59 IST
Last Updated 10 ಫೆಬ್ರುವರಿ 2013, 19:59 IST

`ಸದ್ಯದಲ್ಲೇ ನನಗೆ ಸಿಕ್ಸ್‌ಪ್ಯಾಕ್ ತರಬೇತಿ ಆರಂಭವಾಗಲಿದೆ' ಎಂದರು ನಟ ಯೋಗೀಶ್. ಅವರು ಸಿಕ್ಸ್‌ಪ್ಯಾಕ್ ರೂಪಿಸಿ, ನಟಿಸಲಿರುವ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲವಂತೆ. ಮೊದಲ ಚಿತ್ರ `ದುನಿಯಾ'ದಲ್ಲಿ ಇದ್ದಂಥ ತೆಳು ದೇಹವನ್ನೇ ಇಂದಿಗೂ ಕಾಪಾಡಿಕೊಂಡು ಬಂದಿರುವ ಅವರು ಮಧ್ಯದಲ್ಲಿ `ಸಿದ್ಲಿಂಗು' ಚಿತ್ರಕ್ಕಾಗಿ ಕೊಂಚ ದಪ್ಪಗಾಗಿದ್ದರು. ತಮ್ಮ ತೆಳ್ಳನೆ ದೇಹದ ಗುಟ್ಟನ್ನು ಹೇಳಿಕೊಂಡ ಅವರಲ್ಲಿ ಆ ಬಗ್ಗೆ ಖುಷಿ ಇತ್ತು.

``ದುನಿಯಾ'ದಲ್ಲಿ ನಟಿಸಿದಾಗ ಈ ಯೋಗಿಯ ವಯಸ್ಸು 15. ಆಗ ನನ್ನ ಎತ್ತರ 5.8 ಅಡಿ, ದೇಹ ತೂಕ 60 ಕೆ.ಜಿ. ಇತ್ತಂತೆ. ಈಗ ಅವರಿಗೆ 22 ವರ್ಷ. 5.11 ಅಡಿ ಎತ್ತರ ಬೆಳೆದಿದ್ದೇನೆ. ತೂಕ 70 ಕೆ.ಜಿ....' ಹೀಗೆ ತಮ್ಮ ಬೆಳವಣಿಗೆಯ ವಿವರಣೆ ನೀಡಿದ ಯೋಗೀಶ್ ನಿಯಮಿತ ವ್ಯಾಯಾಮಕ್ಕೆ ಅಂಟಿಕೊಂಡವರು.

ಪ್ರತಿದಿನ 40 ನಿಮಿಷ ಮನೆಯಲ್ಲಿಯೇ ಕಾರ್ಡಿಯೋ ವ್ಯಾಯಾಮ ಮಾಡುತ್ತಾರೆ. 20 ನಿಮಿಷ ಕೀಲುಗಳನ್ನು ಸಡಿಲ ಮಾಡಿಕೊಳ್ಳಲು ವ್ಯಾಯಾಮ ಮಾಡುತ್ತಾರೆ. ಅಷ್ಟರಿಂದಲೇ ಸಪೂರ ದೇಹ ಕಾಯ್ದುಕೊಂಡಿರುವ ಅವರು ಡಯಟ್‌ನಿಂದ ದೂರ.

`ನಾನು ತಿನ್ನೋದೇ ಕಡಿಮೆ. ಅದರಿಂದ ಡಯಟ್ ಅನುಸರಿಸುವ ಅಗತ್ಯ ಇಲ್ಲ. ಅಮ್ಮ ಮಾಡುವ ಎಲ್ಲಾ ಅಡುಗೆಯನ್ನೂ ತಿನ್ನುತ್ತೇನೆ. ಆದರೆ ದಿನದಲ್ಲಿ ಐದು ಬಾರಿ ನಿಯಮಿತವಾಗಿ ಊಟ ಮಾಡುವುದನ್ನು ರೂಢಿಸಿಕೊಂಡಿರುವೆ. ಸಾಮಾನ್ಯವಾಗಿ ನನ್ನ ಊಟದಲ್ಲಿ ಅನ್ನ, ಸಾರು, ಚಿಕನ್ ಇರುತ್ತದೆ. ಚಿಕನ್‌ನಲ್ಲಿ ಪ್ರೊಟೀನ್ ಜಾಸ್ತಿ ಇರುತ್ತದೆ. ವ್ಯಾಯಾಮ ಮಾಡಲು ಶಕ್ತಿ ಬೇಕಿರುವುದರಿಂದ ಅದು ಅಗತ್ಯ' ಎನ್ನುವ ಅವರು ಅಮ್ಮ ಮಾಡುವ ರುಚಿಕಟ್ಟಾದ ಊಟದಲ್ಲಿ ಯಾವುದನ್ನೂ ಮಿಸ್ ಮಾಡಿಕೊಳ್ಳುವುದಿಲ್ಲವಂತೆ.

ಅದರಲ್ಲೂ ಅಮ್ಮ ಮಾಡುವ ಚಿತ್ರಾನ್ನ ಎಂದರೆ ಅವರಿಗೆ ಬಲು ಇಷ್ಟವಂತೆ. `ಹೆಚ್ಚು ತಿಂದುಬಿಟ್ಟರೆ ನನಗೆ ನಿದ್ದೆ ಬಂದುಬಿಡುತ್ತದೆ. ಅದಕ್ಕೇ ಜಾಸ್ತಿ ತಿನ್ನಲ್ಲ' ಎಂದು ಅವರು ನಗುತ್ತಾರೆ. “ಮೂರು ತಿಂಗಳು `ಸಿದ್ಲಿಂಗು' ಚಿತ್ರಿಕ್ಕಾಗಿ ಹೈಪೋಥಮಿ ಲೀನ್ ಮಸಲ್ ಮಾಡಿಕೊಂಡಿದ್ದೆ. ತೀರಾ ದಪ್ಪ ಆಗದಂತೆ ಮಾಡುವ ವರ್ಕ್‌ಔಟ್ ಅದು. `ಸಿದ್ಲಿಂಗು' ಚಿತ್ರೀಕರಣ ಮುಗಿದ ನಂತರ ಅದನ್ನು ಬಿಟ್ಟುಬಿಟ್ಟೆ” ಎಂದು ವಿವರಿಸುವ ಅವರು, ಸಮಯ ಸಿಕ್ಕಾಗ ವಾಲಿಬಾಲ್ ಆಡುತ್ತಾರಂತೆ. ಅದು ಕೂಡ ತಮ್ಮ ತೆಳು ವ್ಯಾಯಾಮಕ್ಕೆ ಕೊಡುಗೆ ನೀಡುತ್ತಿದೆ ಎಂಬ ನಂಬಿಕೆ ಅವರದು.

`ವಯಸ್ಸಾದ ಮೇಲೆ ಆರೋಗ್ಯ ಸಮಸ್ಯೆಗಳನ್ನು ಎದುರಿಸಬಾರದು ಎಂದಿದ್ದರೆ ಇಂದಿನಿಂದಲೇ ವ್ಯಾಯಾಮ ಮಾಡುವುದು ಒಳಿತು. ತೆರೆಯ ಮೇಲಷ್ಟೇ ಚೆಂದ ಕಾಣುವುದಕ್ಕಾಗಿ ವ್ಯಾಯಾಮ ಮಾಡಿದರೆ ಪ್ರಯೋಜನವಿಲ್ಲ. ಆರೋಗ್ಯವಾಗಿರಲು ವ್ಯಾಯಾಮದ ಅಗತ್ಯ ಇದೆ' ಎಂದು ನುಡಿಯುವ ಅವರು ಕೃತಕವಾಗಿ ಮಾತ್ರೆ, ಚುಚ್ಚುಮದ್ದು ತೆಗೆದುಕೊಂಡು ಸಿಕ್ಸ್‌ಪ್ಯಾಕ್ ಬರಿಸಿಕೊಳ್ಳುವುದನ್ನು ವಿರೋಧಿಸುತ್ತಾರೆ.

`ಎಷ್ಟೇ ಕಷ್ಟವಾದರೂ ಸೈ ದೇಹವನ್ನು ದಂಡಿಸಿ ಸಿಕ್ಸ್‌ಪ್ಯಾಕ್ ಬರಿಸಿಕೊಳ್ಳಬೇಕು. ಆಗ ಯಾವುದೇ ಅಡ್ಡಪರಿಣಾಮಗಳು ಇರುವುದಿಲ್ಲ. ಆರೋಗ್ಯವೂ ನಮ್ಮದಾಗುತ್ತದೆ' ಎನ್ನುತ್ತಾರೆ. ಇದೇ ವೇಳೆ `ಯಾರೇ ಕೂಗಾಡಲಿ' ಚಿತ್ರದ ನಿರ್ದೇಶಕ ಸಮುದ್ರ ಖಣಿ ಅವರ ಮುಂದಿನ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿರುವುದಾಗಿ ಹೇಳಿಕೊಂಡ ಯೋಗೀಶ್ ಆ ಖುಷಿಯನ್ನು ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.