ADVERTISEMENT

ಡ್ರ್ಯಾಗ್ ರೇಸ್ ಮಾಡುವಿರಾ ಹುಷಾರ್...!

ಎಂ.ನವೀನ್ ಕುಮಾರ್
Published 5 ಜನವರಿ 2012, 19:30 IST
Last Updated 5 ಜನವರಿ 2012, 19:30 IST
ಡ್ರ್ಯಾಗ್ ರೇಸ್ ಮಾಡುವಿರಾ ಹುಷಾರ್...!
ಡ್ರ್ಯಾಗ್ ರೇಸ್ ಮಾಡುವಿರಾ ಹುಷಾರ್...!   

ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುವ ಮುನ್ನ ಹತ್ತು ಬಾರಿ ಯೋಚಿಸಿ. ಸಿಕ್ಕಿಬಿದ್ದರೂ ನೂರು- ಐನೂರು ರೂಪಾಯಿ ದಂಡ ಕಟ್ಟಿ ಬಚಾವ್ ಆಗುತ್ತೇವೆ ಎಂಬ ಭಾವನೆ ಇದ್ದರೆ ಅದನ್ನು ಈಗಲೇ ದೂರ ಮಾಡಿಬಿಡಿ.

ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದರೆ ವಾಹನ ಚಾಲನಾ ಪರವಾನಗಿಯನ್ನೇ ಕಳೆದುಕೊಳ್ಳಬೇಕಾದೀತು. ಹೌದು, ನಿಯಮಗಳನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಿ ಸಿಲಿಕಾನ್ ಸಿಟಿ ವಾಹನ ಸವಾರರಿಗೆ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲು ನಿರ್ಧರಿಸಿರುವ ಪೊಲೀಸರು ನಿಯಮ ಉಲ್ಲಂಘನೆ ಮಾಡಿದ 34 ಮಂದಿ ವಾಹನ ಸವಾರರ ಚಾಲನಾ ಪರವಾನಗಿಯನ್ನು (ಡಿಎಲ್) ಈಗಾಗಲೇ ರದ್ದು ಮಾಡಿದ್ದಾರೆ.

ಡ್ರ್ಯಾಗ್ ರೇಸ್, ಪಾದಚಾರಿ ಮಾರ್ಗದಲ್ಲಿ ವಾಹನ ಚಾಲನೆ ಮಾಡಿದವರು ಇದರಲ್ಲಿ ಸೇರಿದ್ದಾರೆ. ಒಟ್ಟು 778 ಮಂದಿಯ `ಡಿಎಲ್~ ರದ್ದು ಮಾಡುವಂತೆ ಅವರು ನ್ಯಾಯಾಲಯಕ್ಕೆ ಶಿಫಾರಸು ಮಾಡಿದ್ದಾರೆ. ಹಂತ ಹಂತವಾಗಿ ಈ ಪ್ರಕ್ರಿಯೆ ನಡೆಯಲಿದೆ.

ಅಪಾಯಕಾರಿ ಚಾಲನೆ ಎಂದೇ ಪರಿಗಣಿಸುವ ಡ್ರ್ಯಾಗ್ ರೇಸುಗಾರರನ್ನು ಸಂಚಾರ ಪೊಲೀಸರು ಮೊದಲ ಟಾರ್ಗೆಟ್ ಮಾಡಿದ್ದಾರೆ. ಪಾದಚಾರಿ ಮಾರ್ಗದಲ್ಲಿ ವಾಹನ ಚಾಲನೆ ಮಾಡುವವರೂ ಪೊಲೀಸರ ಕೆಂಗಣ್ಣಿಗೆ ಗುರಿಯಾಗಬಹುದು.

ನೀವು ಮೊದಲ ಬಾರಿ ಸಿಕ್ಕಿಬಿದ್ದರೂ `ಡಿಎಲ್~ ಕಳೆದುಕೊಳ್ಳುವ ಅಪಾಯ ಇದೆ. ಪಾನಮತ್ತರಾಗಿ ಚಾಲನೆ ಮಾಡುವವರು ಸತತವಾಗಿ ಎರಡನೇ ಬಾರಿ ಸಿಕ್ಕಿಬಿದ್ದರೆ `ಡಿಎಲ್~ ರದ್ದು ಮಾಡುವಂತೆ ಪೊಲೀಸರು ನ್ಯಾಯಾಲಯಕ್ಕೆ ಕೋರುತ್ತಾರೆ. ಆರು ತಿಂಗಳು, ವರ್ಷದ ಅವಧಿಗೆ  `ಡಿಎಲ್~ ರದ್ದಾಗುತ್ತದೆ.

ಬರಿ ದಂಡ ಹಾಕುತ್ತಿದ್ದ ಪೊಲೀಸರುಏಕೆ `ಡಿಎಲ್~ ರದ್ದು ಮಾಡಲು ಆರಂಭಿಸಿದ್ದಾರೆ ಎಂದು ಕೇಳಬಹುದು. ಸುಮಾರು ನಲವತ್ತು ಲಕ್ಷ ವಾಹನಗಳಿರುವ ರಾಜಧಾನಿಯಲ್ಲಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡುವುದು ಸವಾಲಿನ ಕೆಲಸ.

ಕಿರಿದಾಗಿರುವ ರಸ್ತೆಗಳಲ್ಲಿ ಸಂಚಾರ ಎಂದರೆ ಸಾಹಸವೇ ಸರಿ. ಇದರ ಮಧ್ಯೆ ಅಡ್ಡಾದಿಡ್ಡಿ ವಾಹನ ಚಾಲನೆ ಮಾಡುವವರು ಸಮಸ್ಯೆಯಾಗಿದ್ದಾರೆ. ಸುರಕ್ಷಿತವಾಗಿ ವಾಹನ ಓಡಿಸುವವರಿಗೂ ಇವರು ಎರವಾಗುವ ಅಪಾಯ ಇರುತ್ತದೆ.

ನಿಯಮ ಉಲ್ಲಂಘಿಸುವವರ ಮೇಲೆ ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಲಾಗುತ್ತಿದೆ. ಆದರೆ ದಂಡದ ಪ್ರಮಾಣ ತೀರ ಕಡಿಮೆ ಇರುವುದರಿಂದ ವಾಹನ ಸವಾರರು ಪದೇ ಪದೇ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ.

2011ರಲ್ಲಿ ಪೊಲೀಸರು ಲಕ್ಷಾಂತರ ಪ್ರಕರಣಗಳನ್ನು ದಾಖಲಿಸಿದ್ದಾರೆ. ಆದರೂ ವಾಹನ ಸವಾರರು ಕಟ್ಟುನಿಟ್ಟಾಗಿ ನಿಯಮ ಪಾಲನೆ ಮಾಡುತ್ತಿಲ್ಲ. ಆದ್ದರಿಂದ ಪೊಲೀಸರು `ಡಿಎಲ್~ ರದ್ದು ಮಾಡಲು ಮುಂದಾಗಿದ್ದಾರೆ. ಹೀಗೆ ಮಾಡಿದರೆ ಪರಿಸ್ಥಿತಿ ಸುಧಾರಿಸಬಹುದು ಎಂಬ ನಂಬಿಕೆ ಪೊಲೀಸರದ್ದು.

`ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲು ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಆದರೆ ನಿಯಮ ಉಲ್ಲಂಘನೆ ಮಾಡುವವರ ವರ್ತನೆ ಇತರ ವಾಹನ ಸವಾರರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಹಲವು ಬಾರಿ ದಂಡ ವಿಧಿಸಿದರೂ ತಿದ್ದಿಕೊಳ್ಳದ ಕಾರಣ ಅನಿವಾರ್ಯವಾಗಿ ಡಿಲ್ ರದ್ದು ಮಾಡಲು ಕ್ರಮ ಕೈಗೊಳ್ಳಲಾಗಿದೆ.
 
ಆದ್ದರಿಂದ ವಾಹನ ಸವಾರರು ಸಂಚಾರ ನಿಯಮ ಪಾಲಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು~ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಡಾ.ಎಂ.ಎ. ಸಲೀಂ ಮನವಿ ಮಾಡಿದ್ದಾರೆ.

`ತಪ್ಪು ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ. `ಡಿಎಲ್~ ರದ್ದಾದರೆ ವಾಹನ ಸವಾರರು ತೊಂದರೆಗೆ ಸಿಲುಕಬೇಕಾಗುತ್ತದೆ. ಸುರಕ್ಷಿತವಾಗಿ ಚಾಲನೆ ಮಾಡುವ ಮೂಲಕ ವಾಹನ ಸವಾರರು ಸುರಕ್ಷಿತವಾಗಿರಬೇಕು.

ಅದೇ ರೀತಿ ನಿಯಮ ಪಾಲಿಸಿ ವಾಹನ ಚಾಲನೆ ಮಾಡುವವರಿಗೂ ತೊಂದರೆ ಆಗದಂತೆ ಎಚ್ಚರಿಕೆ ವಹಿಸಬೇಕು. ಇಲ್ಲವಾದರೆ ಕ್ರಮ ಅನಿವಾರ್ಯ~ ಎಂದು ಅವರು ಹೇಳುತ್ತಾರೆ.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.