ADVERTISEMENT

ತಂಬೂರಿ ಮೀಟಿದವ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2012, 19:30 IST
Last Updated 1 ಫೆಬ್ರುವರಿ 2012, 19:30 IST

ಹಾಡುಗಾರಿಕೆ ಒಂದು ಕಸರತ್ತು. ಇಲ್ಲಿ ಶೃತಿ, ಲಯ, ತಾಳ, ನಡೆ, ಗತಿ, ಸ್ಥಾಯಿ ಎಲ್ಲವೂ ಮುಖ್ಯವೇ. `ಶೃತಿ ಮಾತಾ ಲಯ ಪಿತಾ..~ ಎಂಬ ಮಾತಿದೆ. ಶೃತಿ ಲಯ ಎರಡೂ ಸೇರಿದರೆ ಮಾತ್ರ ಸಂಗೀತ ಸುಮಧುರ; ಶ್ರವಣಾನಂದಕರ!

ತತ ವಾದ್ಯ ಅಥವಾ ತಂತಿ ವಾದ್ಯಗಳ ಗುಂಪಿಗೆ ಸೇರಿದ ಅತ್ಯಂತ ಪ್ರಾಚೀನ ವಾದ್ಯ ತಂಬೂರಿ. ಕಂಠ ಸಂಗೀತಕ್ಕೆ ಅದರಲ್ಲೂ ಶೃತಿಗೆ ಅತೀ ಅವಶ್ಯಕವಾದ ಒಂದು ವಿಶಿಷ್ಟ ವಾದ್ಯವಿದು.


ತಂಬೂರ, ತಂಬೂರಿ, ತಾನ್ಪುರ ಎಂದು ವಿವಿಧ ಹೆಸರುಗಳಿಂದ ಕರೆಯುವ ಈ ತಂತಿವಾದ್ಯ ವಿವಿಧ ಗಾತ್ರ, ಆಕಾರಗಳಲ್ಲಿ ಸಿಗುತ್ತದೆ. ಇದು ಪ್ರಮುಖ ಸಾಥಿ ವಾದ್ಯವಾಗಿದ್ದು, ಒಬ್ಬ ಗಾಯಕ ತನ್ನ ಗಾಯನಕ್ಕೆ ಒಂದು ಅಥವಾ ಎರಡು ತಂಬೂರಗಳ ಸಹಕಾರ ಪಡೆಯಬಹುದು.
 
ತಂಬೂರಿಯಲ್ಲಿ ಸಾಮಾನ್ಯವಾಗಿ ನಾಲ್ಕು ಅಥವಾ ಐದು (ಅಪರೂಪಕ್ಕೆ ಆರು) ತಂತಿಗಳಿದ್ದು, ಉತ್ತಮ ಶೃತಿ ನಾದ ನೀಡುತ್ತದೆ.ಗಾಯಕ/ ಗಾಯಕಿಯರಿಗೆ ಬೇರೆ ಬೇರೆ ಶೃತಿಯ, ಆಕಾರದ ತಂಬೂರಗಳು ಸಿಗುತ್ತವೆ. ಸಣ್ಣ ಗಾತ್ರದ ತಂಬೂರವನ್ನು ಸಿತಾರ್, ಸರೋದ್ ವಾದಕರು ಶೃತಿಗೆ ಬಳಸಿಕೊಳ್ಳುವುದು ಇದೆ.

ಯಾವುದೇ ಸಂಗೀತ ಕಛೇರಿಯನ್ನು ನೀವು ನೋಡಿದಾಗ ಅಲ್ಲಿ ಶೃತಿಗೆ ಬಳಸುವ ಈ ತಂಬೂರಿ ಇರುತ್ತದೆ. ಇದರಲ್ಲಿ ಎರಡು ವಿಧ. ಒಂದು ಕೈಯ್ಯಲ್ಲಿ ಮೀಟುವಂಥದ್ದು. ಷಡ್ಜ ಮತ್ತು ಪಂಚಮ ಸ್ವರಗಳನ್ನು ಲಯಬದ್ಧವಾಗಿ ಮೀಟಿದಾಗ ನೀಡುವ ಶೃತಿ ಸಂಗೀತಕ್ಕೆ ಸೂಕ್ತ ಸಾಥಿ. ಈ ಶೃತಿವಾದ್ಯ ಇಲ್ಲದೆ ಶಾಸ್ತ್ರೀಯ ಸಂಗೀತ ಅಪೂರ್ಣ
.
ಇನ್ನೊಂದು ಎಲೆಕ್ಟ್ರಾನಿಕ್ ತಂಬೂರಿ. ಇದರಲ್ಲಿ ಧ್ವನಿಮುದ್ರಿತ ಶೃತಿ ಇರುತ್ತದೆ. ಸ್ವಿಚ್ ಅಮುಕಿದಾಗ ನಾವು ಶೃತಿಯನ್ನು ಪಡೆಯಬಹುದು. ಗಾಯಕನ ಧ್ವನಿಗೆ, ಶೃತಿಗೆ, ಸ್ಥಾಯಿಗೆ ಆಧರಿಸಿ ಇದರಲ್ಲಿ ಏರು, ಮಧ್ಯ ಶೃತಿಗಳು ಲಭ್ಯ. ಬೇರೆ ಬೇರೆ ಪಿಚ್‌ಗಳಲ್ಲಿ ಶೃತಿ ಧ್ವನಿಮುದ್ರಿಸಿರುತ್ತದೆ.

ಗಾಯಕನ ಕಂಠ ಸಾಮರ್ಥ್ಯಕ್ಕೆ ಅನುಗುಣವಾಗಿ ಇದನ್ನು ಹೊಂದಾಣಿಕೆ ಮಾಡಿಕೊಳ್ಳುವ ಅವಕಾಶವಿರುತ್ತದೆ. ಗಾಯಕ, ಗಾಯಕಿಯರಿಗೆ ಬೇರೆ ಬೇರೆ ಶೃತಿ ನೀಡುವ ತಂಬೂರಿ ಇದೆ.
 
ಎರಡು ಶೈಲಿಯ ತಂಬೂರಿ
ತಂಬೂರಿಯನ್ನು ಎರಡು ಶೈಲಿಗಳಲ್ಲಿ ಕಾಣಬಹುದು. ಮೀರಜ್ ಶೈಲಿ ಮತ್ತು ತಂಜಾವೂರು ಶೈಲಿ. ಕರ್ನಾಟಕ ಸಂಗೀತಕ್ಕೆ ತಂಜಾವೂರು ಶೈಲಿಯ ತಂಬೂರಿ; ಮೀರಜ್ ಶೈಲಿಯ ತಂಬೂರವನ್ನು ಹಿಂದೂಸ್ತಾನಿ ಸಂಗೀತ ಕಲಾವಿದರು ಬಳಸುವುದು ವಾಡಿಕೆ.

ಕರ್ನಾಟಕ ಸಂಗೀತ ಪದ್ಧತಿಯಲ್ಲಿ ಹಲಸಿನ ಮರದ ಬುರುಡೆಯಿಂದ ತಯಾರಿಸಿದ ತಂಜಾವೂರು ತಂಬೂರಿ ಬಳಕೆಯಲ್ಲಿದ್ದರೆ, ಹಿಂದೂಸ್ತಾನಿ ಸಂಗೀತದಲ್ಲಿ ಸೋರೆಕಾಯಿ ಬುರುಡೆಯಿಂದ ತಯಾರಿಸಿದ ಮೀರಜ್ ತಂಬೂರಿ ಬಳಸಲಾಗುತ್ತದೆ. ಶೃತಿ ಮಾಡುವ ವಿಧಾನ ಎರಡೂ ಪದ್ಧತಿಯಲ್ಲೂ ಒಂದೇ ಆಗಿರುತ್ತದೆ.

ಸಾಮಾನ್ಯವಾಗಿ ತಂಬೂರಿಯಲ್ಲಿ ಇರುವುದು ನಾಲ್ಕು ತಂತಿ. ಮೂರು ಉಕ್ಕಿನ ತಂತಿ ಮತ್ತು ಒಂದು ಹಿತ್ತಾಳೆ ತಂತಿ ಇದರಲ್ಲಿವೆ. ಈ ತಂತಿ ಕ್ರಮವಾಗಿ ಮಂದ್ರ ಸ್ಥಾಯಿ ಪಂಚಮ, ಮಧ್ಯ ಸ್ಥಾಯಿ ಷಡ್ಜ ಮತ್ತು ಮಂದ್ರ ಸ್ಥಾಯಿ ಷಡ್ಜದಿಂದ ಶೃತಿ ಮಾಡಲ್ಪಟ್ಟಿರುತ್ತದೆ.

ವಿಶೇಷವಾಗಿ ಇರುವ ತಂಬೂರಿಗಳಲ್ಲಿ 6 ತಂತಿಗಳೂ ಇರುತ್ತವೆ. ಸಾಮಾನ್ಯ ನಾಲ್ಕು ತಂತಿ ತಂಬೂರಗಳಲ್ಲಿ 2 ಷಡ್ಜ ಇದ್ದರೆ ವಿಶೇಷ ತಂಬೂರಿಗಳಲ್ಲಿ ನಾಲ್ಕು ಷಡ್ಜ ಇರುತ್ತವೆ. ಇನ್ನೂ ಕೆಲವು ತಂಬೂರಿಗಳಲ್ಲಿ ಐದು, ಆರು ತಂತಿಗಳಿಂದಲೂ ನಾದ ಬರುವಂತೆ ವಿನ್ಯಾಸ ಮಾಡಲಾಗಿದೆ.

ಮೈಸೂರು, ತಿರುವನಂತಪುರ, ಮೀರಜ್ ತಂಬೂರಿ ತಯಾರಿಕೆಯಲ್ಲಿ ಪ್ರಸಿದ್ಧವಾಗಿದ್ದು, ಉತ್ತಮ ಗುಣಮಟ್ಟದ ತಂಬೂರಿ ಇಲ್ಲಿ ಸಿಗುತ್ತದೆ. ಬೆಂಗಳೂರಿನಲ್ಲಿ ಬ್ರಿಗೇಡ್ ರಸ್ತೆ ಬಳಿಯ ಸೌಂಡ್‌ಗ್ಲಿಡ್ಜ್ ಮ್ಯೂಸಿಕ್ ಸ್ಟೋರ್ (080-66490858), ಆರ್‌ಟಿ ನಗರದಲ್ಲಿ ಶಿವ ಮ್ಯೂಸಿಕಲ್ಸ್ (080-66493293), ಕೋರಮಂಗಲದಲ್ಲಿ ಅರುಣಾ ಮ್ಯೂಸಿಕಲ್ಸ್ (080-66389263), ಅರುಣಾ ಮ್ಯೂಸಿಕಲ್ಸ್ ನ್ಯೂ (080-25502971)ಗಳಲ್ಲಿ ಉತ್ತಮ ಗುಣಮಟ್ಟದ ತಂಬೂರಿ ಸಿಗುತ್ತದೆ. ಬೆಲೆ ಅಂದಾಜು ಐದು ಸಾವಿರ ರೂಪಾಯಿಗಳಿಂದ ಆರಂಭ.

 

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.