ADVERTISEMENT

ತನುಷಾ ಕನಸು

ಪವಿತ್ರ ಶೆಟ್ಟಿ
Published 23 ಮೇ 2014, 5:02 IST
Last Updated 23 ಮೇ 2014, 5:02 IST
ತನುಷಾ ಕನಸು
ತನುಷಾ ಕನಸು   

ನಾಲ್ಕನೇ ಕ್ಲಾಸಿನಲ್ಲಿರುವಾಗ ನೃತ್ಯ ಕಾರ್ಯಕ್ರಮದಲ್ಲಿ ಹೆಜ್ಜೆ ಹಾಕಿದ್ದ ಹುಡುಗಿಗೆ ಸಿನಿಮಾದಲ್ಲಿ ಬಾಲನಟಿಯಾಗುವ ಅವಕಾಶ ಸಿಕ್ಕಿತು. ನಿರ್ದೇಶಕ ಗುರುದತ್ ಅವರ ಕಣ್ಣಿಗೆ ಬಿದ್ದ ಆ ಪುಟಾಣಿಯ ಹೆಸರು ತನುಷಾ. ಊರು ಮೈಸೂರು. ನೃತ್ಯ, ನಟನೆಗಾಗಿ ಬೆಂಗಳೂರನ್ನು ಆಶ್ರಯಿಸಿರುವ ಇವರು ನಟಿಸಿದ ಮೊದಲ ಚಿತ್ರ ‘ದತ್ತ’. ಮತ್ತೆ ಹಿಂದಿರುಗಿ ನೋಡದ ಈ ಚೆಲುವೆ ‘ಹಠವಾದಿ’, ‘ಕನ್ನಡದ ಕಂದ’, ‘ಕೋಡಗನ ಕೋಳಿ ನುಂಗಿತ್ತ’ ಸಿನಿಮಾದಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದಾರೆ.

ಈ ಬಾರಿ ಪಿಯುಸಿ ಪರೀಕ್ಷೆಯಲ್ಲಿ ಶೇ 90 ಅಂಕ ಪಡೆದ ಇವರಿಗೆ ಐ.ಎ.ಎಸ್‌ ಅಧಿಕಾರಿಯಾಗಬೇಕು ಎಂಬ ಆಸೆ! ಅಷ್ಟು ಚಿಕ್ಕ ವಯಸ್ಸಿನಲ್ಲಿ ಕ್ಯಾಮೆರಾ ಎದುರಿಸುವಾಗ ಭಯವಾಗಲಿಲ್ವಾ ಎಂದು ಕೇಳಿದರೆ ‘ನನಗೆ ಏನೂ ಗೊತ್ತಾಗಿಲ್ಲ. ಅವರು ಹೇಳಿಕೊಟ್ಟಿದ್ದನ್ನು ನಾನು ಹೇಳಿದೆ’ ಎಂದು ನಗುತ್ತಾರೆ. ಸಿನಿಮಾ ಕ್ಷೇತ್ರವನ್ನು ವೃತ್ತಿಯಾಗಿ ಪರಿಗಣಿಸದ ತನುಷಾ ನಟನೆ ಜತೆಗೆ ನೃತ್ಯ, ಯೋಗ, ಸಂಗೀತದಲ್ಲೂ ಬ್ಯುಸಿ.

ನಟನೆಯ ಕಥನ
ತನುಷಾ ನಟನಾ ಬದುಕಿಗೆ ಕಾಲಿಟ್ಟಾಗ ಮನೆಯಿಂದ ಅಷ್ಟೇನೂ ಒಳ್ಳೆಯ ಬೆಂಬಲ ಸಿಕ್ಕಿರಲಿಲ್ಲ. ಅಪ್ಪ ಅಮ್ಮ ಓಕೆ ಅಂದರೂ ಅಜ್ಜಿ–ತಾತ ಬಿಲ್‌ಕುಲ್‌ ಒಪ್ಪಿರಲಿಲ್ಲ. ಮೊದಲು ಓದು. ನಟನಾ ಕ್ಷೇತ್ರ ನಮ್ಮಂಥವರಿಗಲ್ಲ ಎಂದಿದ್ದರಂತೆ. ಎಲ್ಲರಿಗೂ ಇಷ್ಟವಾಗುವ ಪಾತ್ರ ಇದ್ದರೆ ಮಾತ್ರ ಒಪ್ಪಿಕೊಳ್ಳುತ್ತೇನೆ, ಓದಿನಲ್ಲೂ ಹಿಂದೆ ಬೀಳುವುದಿಲ್ಲ ಎಂಬಿತ್ಯಾದಿ ಭರವಸೆಯನ್ನು ತನುಷಾ ಕೊಟ್ಟ ಮೇಲೆ ಅರೆಮನಸ್ಸಿನಿಂದ ಒಪ್ಪಿಗೆ ಸಿಕ್ಕಿದ್ದು. ಈಗ ಇವರು ನಟಿಸುವ ಪಾತ್ರಕ್ಕೆ ಅಜ್ಜಿ–ತಾತನೂ ಮೆಚ್ಚುಗೆ ಸೂಚಿಸುತ್ತಾರೆ.

ನೃತ್ಯ– ಸಂಗೀತದ ಮೇಳದಲ್ಲಿ
‘ಕುಣಿಯೋಣು ಬಾರಾ’ ನೃತ್ಯ ಕಾರ್ಯಕ್ರಮದಲ್ಲಿ ಗೆದ್ದ ತನುಷಾಗೆ ಸಾಕಷ್ಟು ನೃತ್ಯ ಕಾರ್ಯಕ್ರಮದಲ್ಲಿ ಅವಕಾಶ ಕೂಡ ಸಿಕ್ಕಿದೆ. ಇತ್ತೀಚೆಗಷ್ಟೇ ಮುಗಿದ ಈಟೀವಿಯ ‘ಡಾನ್ಸಿಂಗ್‌ ಸ್ಟಾರ್‌’ ರಿಯಾಲಿಟಿ ಷೋನಲ್ಲಿ ಸ್ವಾಮೀಜಿ ರಿಷಿ ಕುಮಾರ್‌ ಜತೆ ಹೆಜ್ಜೆ ಹಾಕಿದ ತನುಷಾ ಸೆಮಿಫೈನಲ್‌ ತಲುಪಿದ್ದರು. ಸ್ವಾಮೀಜಿ ಜತೆ ನೃತ್ಯ ಮಾಡುವುದಕ್ಕೆ ತನುಷಾ ಅವರಿಗೆ ಮೊದಲು ಸ್ವಲ್ಪ ಭಯವಾಗಿತ್ತಂತೆ. ನೃತ್ಯದ ಬಗ್ಗೆ ರಿಷಿಕುಮಾರ್‌ ಅವರಿಗಿದ್ದ ಆಸಕ್ತಿ, ಅವರು ನಡೆಸುತ್ತಿದ್ದ ತಯಾರಿ ನೋಡಿ ಖುಷಿಯಿಂದ ಮುನ್ನಡೆದರು.

ಮೈಸೂರಿನಲ್ಲಿ ನೃತ್ಯ ತರಗತಿ ನಡೆಸುವ ತನುಷಾಗೆ ಅಮ್ಮ ಮತ್ತು ತಂಗಿಯ ಸಾಥ್ ಇದೆ. ಆರೇಳು ವರ್ಷದ ಮಕ್ಕಳಿಂದ ಹಿಡಿದು 24 ವರ್ಷದವರು ಇವರ ವಿದ್ಯಾರ್ಥಿಗಳು. ನೃತ್ಯದಿಂದ ದೇಹಕ್ಕೆ ಒಂದು ಲಾಲಿತ್ಯ ಸಿಗುತ್ತದೆ ಎನ್ನುವ ತನುಷಾ ಹಾಡಿಗೆ ತಕ್ಕ ಹೊಸ ಹೊಸ ಹೆಜ್ಜೆಗಳನ್ನು ಅನ್ವೇಷಿಸುವ ಮನಸ್ಸಿನವರು.

ಸಂಗೀತದಲ್ಲೂ ಆಸಕ್ತಿ ಇರುವ ಇವರು ಕರ್ನಾಟಕ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡುತ್ತಿದ್ದಾರೆ. ಬೇಸರವಾದಾಗಲೆಲ್ಲಾ ಹಾಡು ಹಾಡಿ ಮನಸ್ಸನ್ನು ಖುಷಿಯಾಗಿಟ್ಟುಕೊಳ್ಳುವುದು ಇವರ ನಗುವಿನ ಸೀಕ್ರೆಟ್‌.

ಓದು–ನಟನೆಯ ಮಧ್ಯೆ
ಧ್ರುವ ಸರ್ಜಾ ಮತ್ತು ರಾಧಿಕಾ ಪಂಡಿತ್‌ ಅಭಿನಯದ ‘ಬಹದ್ದೂರ್’ ಸಿನಿಮಾದಲ್ಲಿ ಪಾತ್ರವೊಂದನ್ನು ನಿಭಾಯಿಸುತ್ತಿರುವ ತನುಷಾಗೆ ಓದು ಮುಖ್ಯ. ನಾಣ್ಯ ಸಂಗ್ರಹ, ಅಂಚೆ ಚೀಟಿ ಸಂಗ್ರಹ ಮಾಡುವ ಹವ್ಯಾಸ ಕೂಡ ಇವರಿಗಿದೆ. ಬೆಲ್ಲಿ, ಸಾಲ್ಸಾ ನೃತ್ಯದಲ್ಲೂ ಪಳಗಿದ್ದಾರೆ ಈ ಚೆಲುವೆ.

ನಟನಾ ಕ್ಷೇತ್ರದಲ್ಲಿರುವ ಒಳಿತು ಕೆಡುಕುಗಳ ಬಗ್ಗೆ ಕೇಳಿದರೆ, ನಕ್ಕು ಸುಮ್ಮನಾಗುತ್ತಾರೆ. ‘ನಾವು ಸರಿಯಾಗಿದ್ದರೆ ಯಾರೂ ನಮ್ಮನ್ನು ಏನೂ ಮಾಡಲು ಆಗುವುದಿಲ್ಲ’ ಎನ್ನುವ ತನುಷಾಗೆ ಇಷ್ಟರವರೆಗೆ ಸಿಕ್ಕ ಪಾತ್ರಗಳಲ್ಲಿ ಖುಷಿ ಇದೆ. ಹತ್ತನೇ ತರಗತಿಯಲ್ಲಿರುವಾಗ ‘ಚಾರ್‌ಮಿನಾರ್‌’ ಸಿನಿಮಾದಲ್ಲಿ ಚಿಕ್ಕ ಪಾತ್ರವೊಂದನ್ನು ನಿರ್ವಹಿಸಿ ಪ್ರಶಸ್ತಿ ಕೂಡ ಗಿಟ್ಟಿಸಿಕೊಂಡಿದ್ದಾರೆ.

ಯೋಗಾಯೋಗ...
ದಿನಕ್ಕೆ ಒಂದು ಗಂಟೆ ಯೋಗಾಭ್ಯಾಸ ಮಾಡುವುದು ಇವರ ಫಿಟ್‌ನೆಸ್ ಗುಟ್ಟು. ಬೆಳಿಗ್ಗೆ 5ಕ್ಕೆ ಎದ್ದು ಯೋಗ ಮಾಡಿ ನಂತರ ಓದಿನಲ್ಲಿ ತೊಡಗಿಕೊಳ್ಳುತ್ತಾರೆ. ಯೋಗದಿಂದ ಫಿಟ್‌ ಆಗಿರುವುದರ ಜತೆಗೆ ಮಾನಸಿಕ ನೆಮ್ಮದಿ ಸಿಗುತ್ತದೆ ಎಂದು ಟಿಪ್ಸ್‌ ನೀಡುತ್ತಾರೆ. ನಟಿಯಾಗುವುದರ ಜತೆಗೆ ಐಎಎಸ್‌ ಅಧಿಕಾರಿಯಾಗಬೇಕು ಎಂಬ ಕನಸು ಇವರದ್ದು. ಹೀಗಾಗಿ ಈ ನಿಟ್ಟಿನಲ್ಲಿ ಈಗಾಗಲೇ ಸಾಕಷ್ಟು ತಯಾರಿ ಕೂಡ ಮಾಡಿಕೊಂಡಿದ್ದಾರೆ ತನುಷಾ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.